|
ಕ್ರಿಕೆಟ್ ಮೈದಾನದ ಒಳಗಿನ ಹೋರಾಟ ಭಾರತೀಯರ ಹೃದಯಗಳಲ್ಲಿ ಸದಾ ರೋಮಾಂಚನದ ಅಲೆಯನ್ನು ಎಬ್ಬಿಸುತ್ತಲೇ ಇರುತ್ತದೆ. ಆದರೀಗ ಕ್ರಿಕೆಟ್‌ನದ್ದೇ ಆದ, ಮೈದಾನದ ಹೊರಗಿನ ವ್ಯಾವಹಾರಿಕ ಆಟಗಳು ಎಲ್ಲರನ್ನೂ ಬೆಚ್ಚಿ ಬೀಳಿಸಲಾರಂಭಿಸಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಾಕಲು ಹೊರಟಿರುವ ಚಿನ್ನದ ಮೊಟ್ಟೆಯಿಡುವ ಕೋಳಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ಇನ್ನೂ ಗರ್ಭ ಧರಿಸುವ ಮೊದಲೇ ಭರ್ಜರಿ ಹೆರಿಗೆ ಮಾಡಿಸಿಕೊಂಡಿದ್ದು ಚಿನ್ನದ ಮೊಟ್ಟೆಗಳ ಸುರಿಮಳೆ ಸುರಿಸಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಭಾರತೀಯ ಉದ್ಯಮ ಲೋಕ ಹಾಗೂ ಥಳುಕು-ಬಳುಕಿನ ಬಾಲಿವುಡ್ ಪ್ರಪಂಚ ಈಗ ಕ್ರಿಕೆಟ್ ಮೇಲೆ ತಮ್ಮ ಹಿಡಿತ ಸಾಧಿಸಲು ಮುಂದಾಗಿರುವುದು. ಈ ಮೂಲಕ ಭಾರತದಲ್ಲಿನ ಮೂರು ಶಕ್ತಿಗಳ ಸಂಗಮವಾದಂತಾಗಿದೆ.
ಭಾರತೀಯ ಉಪಖಂಡದಲ್ಲಿ ಜನಪ್ರಿಯತೆಯ ತುತ್ತ ತುದಿಯಲ್ಲಿ ಇರುವುದು ಬಾಲಿವುಡ್ ಮತ್ತು ಕ್ರಿಕೆಟ್. ಈ ಎರಡೂ ಜಾತಿ, ಧರ್ಮ, ಪಂಗಡ, ಭೌಗೋಳಿಕ ಮಿತಿ... ಎಲ್ಲವನ್ನೂ ಮೀರಿ ನಿಂತಿವೆ. ಕ್ರಿಕೆಟ್ ಮತ್ತು ಬಾಲಿವುಡ್ ರಾಷ್ಟ್ರೀಯ ಮಟ್ಟದಲ್ಲಿನ ಒಂದು ಭಾವೋದ್ರೇಕ. ಸಹಜವಾಗಿಯೇ ಅಂತಹ ಅವಕಾಶಗಳತ್ತ ಉದ್ಯಮ ಜಗತ್ತು ಸರಿದು ನಿಲ್ಲುತ್ತದೆ ಎನ್ನುತ್ತಾರೆ ಜೀ ನೆಟ್‌ವರ್ಕ್‌ನ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಆಶೀಶ್ ಕೌಲ್. ಇತ್ತೀಚೆಗೆ ನಡೆದ ಐಪಿಎಲ್ ಗುತ್ತಿಗೆ ಪ್ರಕ್ರಿಯೆ ಇದಕ್ಕೆ ಒಂದು ಜೀವಂತ ಉದಾಹರಣೆ. ಈ ಗುತ್ತಿಗೆ ಪ್ರಕ್ರಿಯೆಯಲ್ಲಿ ಬಾಲಿವುಡ್‌ನ ಬಾದ್‌ಶಾ ಶಾರುಖ್ ಖಾನ್ ಅವರಿಂದ ಹಿಡಿದು ಉದ್ಯಮ ಸಾಮ್ರಾಟ ಮುಖೇಶ್ ಅಂಬಾನಿ, ನಟಿ ಪ್ರೀತಿ ಜಿಂಟಾ, ಸೊಗಸುಗಾರ ಉದ್ಯಮಿ ವಿಜಯ್ ಮಲ್ಯ ಭಾಗವಹಿಸಿ ತಂಡವನ್ನು ಖರೀದಿಸಿದರು. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮತ್ತು ವಿರೇಂದ್ರ ಸೆಹ್ವಾಗ್ ಅವರಿರುವ ತಂಡದ ಒಡೆಯರಾಗಲು ಇವರೆಲ್ಲ ಹಣದ ಹೊಳೆಯನ್ನೇ ಹರಿಸಿದರು. ಮೈದಾನದ ಹೊರಗಿನ ಈ ಹೋರಾಟ ಬಾಲಿವುಡ್ ಮತ್ತು ಭಾರತೀಯ ಉದ್ಯಮ ಲೋಕದ ದಿಗ್ಗಜರ ನಡುವಿನ ಟ್ವೆಂಟಿ-20 ಕ್ರಿಕೆಟ್ ಪಂದ್ಯದಂತಿತ್ತು. ಈ ಗುತ್ತಿಗೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬ 'ಆಟಗಾರ'ನೂ ತಾನೆದುರಿಸಿದ ಪ್ರಥಮ ಎಸೆತದಲ್ಲಿಯೇ ಚೆಂಡನ್ನು ಬೌಂಡರಿ ಗೆರೆ ದಾಟಿಸಿ ಸಿಕ್ಸರ್‌ಗೆತ್ತುವ ಯತ್ನ ಮಾಡಿದರು. ಆ ಪೈಕಿ ಕೆಲವರು ಯಶಸ್ವಿಯಾದರೆ, ಹಲವರು ವಿಫಲರಾದರು. ಈ ನಡುವೆ ಬಿಸಿಸಿಐ ಹಣದ ಥೈಲಿ ಸುಮಾರು 700 ದಶಲಕ್ಷ ಡಾಲರ್‌ನಷ್ಟು ಉಬ್ಬಿತು. ಇದು ಕೇವಲ ತಂಡದ ಒಡೆತನಕ್ಕಾಗಿ ಸುರಿದ ಹಣ. ಇದರೊಂದಿಗೆ ಬಿಸಿಸಿಐ ೧0 ವರ್ಷಗಳ ಕಾಲ ಐಪಿಎಲ್ ಪಂದ್ಯಗಳನ್ನು ಪ್ರಸಾರ ಮಾಡುವ ಹಕ್ಕನ್ನು ಒಂದು ಬಿಲಿಯನ್ ಡಾಲರ್‌ಗೆ ಮೊದಲೇ ಮಾರಾಟ ಮಾಡಿಯಾಗಿದೆ. ಹೀಗೆ ಮೈದಾನದ ಒಳಗೆ-ಹೊರಗೆ, ಆಚೆ-ಈಚೆ... ಎಲ್ಲೆಡೆ ಐಪಿಎಲ್ ಎಂಬ ಕೋಳಿ ಚಿನ್ನದ ಮೊಟ್ಟೆಯ ಸುರಿಮಳೆ ಸುರಿಸಿದೆ. ಟ್ವೆಂಟಿ-20 ಕ್ರಿಕೆಟ್ ಮೂಲಕ ಈಗ ಕ್ರಿಕೆಟ್ ಜ್ವರ ಏರಿದೆ. ಆದರೂ, ಈ ಜ್ವರ ಏರಲು ಕಾರಣ ಅದು ತರುವ ಹಣದ ಹೊಳೆಯಿಂದ ಹೊರತು, ಕ್ರಿಕೆಟ್‌ನ ಅಭಿವೃದ್ಧಿಯ ದೃಷ್ಟಿಯಿಂದ ಅಲ್ಲ ಎಂದು ಖ್ಯಾತ ಕ್ರಿಕೆಟ್ ವೀಕ್ಷಕ ವಿವರಣೆಗಾರ ಜೆಫ್ರಿ ಬಾಯ್ಕಾಟ್ ಹೇಳುವ ಮಾತು ನೂರಕ್ಕೆ ನೂರರಷ್ಟು ಸತ್ಯ.
ಇಂಗ್ಲಿಷ್ ಪ್ರೀಮಿಯರ್ ಲೀಗ್ ಮಾದರಿಯಲ್ಲಿಯೇ ಬೆಳೆದು ನಿಲ್ಲುವ ತವಕ ಐಪಿಎಲ್‌ನದ್ದು. ಇಂಗ್ಲೆಂಡ್‌ನಲ್ಲಿ ಫುಟ್‌ಬಾಲ್ ಪುನರುತ್ಥಾನಕ್ಕೆ ಕಾರಣವಾದ ಇಂಗ್ಲಿಷ್ ಪ್ರೀಮಿಯರ್ ಲೀಗ್ ಜನಪ್ರಿಯತೆ ಮತ್ತು ವ್ಯಾವಹಾರಿಕ ದೃಷ್ಟಿಯಿಂದ ಜಗತ್ತಿನ ಅತ್ಯಂತ ಲಾಭದಾಯಕ ಟೂರ್ನಿ. ಆದರೆ, ಬ್ರಿಟಿಷ್ ಫುಟ್‌ಬಾಲ್ ರಂಗಕ್ಕೆ ಪ್ರೀಮಿಯರ್ ಲೀಗ್ ಮಾಡಿದಷ್ಟೇ ಒಳ್ಳೆಯದನ್ನು ಐಪಿಎಲ್ ಭಾರತೀಯ ಕ್ರಿಕೆಟ್ ಲೋಕಕ್ಕೆ ಮಾಡಲಿದೆ ಎನ್ನಲಾಗುವುದಿಲ್ಲ. ಇಂಗ್ಲೆಂಡ್‌ನಲ್ಲಿನ ವೃತ್ತಿಪರ ಫುಟ್‌ಬಾಲ್ ಲೋಕದ ದಿಕ್ಕನ್ನೇ ಬದಲಿಸಿದ ಕೀರ್ತಿ ಇಂಗ್ಲಿಷ್ ಪ್ರೀಮಿಯರ್ ಲೀಗ್‌ನದ್ದು. ಭಾರತದಲ್ಲಿ ಐಪಿಎಲ್ ಕೂಡ ಕ್ರಿಕೆಟ್ ಲೋಕವನ್ನು ವೃತ್ತಿಪರತೆಯ ಉತ್ತುಂಗಕ್ಕೆ ಕರೆದೊಯ್ಯಲಿದೆಯೇ?
ಇದುವರೆಗೆ ಐಪಿಎಲ್ ಯಶಸ್ಸಿನ ಹಾದಿಯಲ್ಲಿ ಮುನ್ನುಗ್ಗುತ್ತಿದೆ. ಐಪಿಎಲ್ ತಂಡಗಳಲ್ಲಿ ಅಂತರ್ ರಾಷ್ಟ್ರೀಯ ಮಟ್ಟದ ಖ್ಯಾತ ಕ್ರಿಕೆಟ್ ತಾರೆಗಳು ಇದ್ದಾರೆ. ನಿಮ್ಮ ತಂಡಗಳಲ್ಲಿ ಅತ್ಯುತ್ತಮ ಆಟಗಾರರು ಇದ್ದಲ್ಲಿ ಸಹಜವಾಗಿಯೇ ಕ್ರಿಕೆಟ್ ಪ್ರೇಮಿಗಳು ಈ ಟೂರ್ನಿಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುತ್ತಾರೆ. ಜನಪ್ರಿಯತೆ ಜಾಸ್ತಿಯಾದಂತೆ ಪ್ರಾಯೋಜಕರ ಸಂಖ್ಯೆ ಕೂಡ ಬೆಳೆಯುತ್ತಲೇ ಹೋಗುತ್ತದೆ ಎನ್ನುವುದು ಗ್ರೇ ವರ್ಲ್ಡ್‌ವೈಡ್ ಇಂಡಿಯಾದ ರಾಷ್ಟ್ರೀಯ ಯೋಜನಾ ವಿಭಾಗದ ಮುಖ್ಯಸ್ಥ ನರೇಶ್ ಗುಪ್ತ ಅವರ ಅಭಿಪ್ರಾಯ.
ಇನ್ನು ಒಂದು ಕುತೂಹಲಕಾರಿ ಪ್ರಶ್ನೆಯೆಂದರೆ ಬಾಲಿವುಡ್‌ನ ತಾರೆಯರು, ಉದ್ಯಮ ಲೋಕದ ಸಾಮ್ರಾಟರು ಐಪಿಎಲ್ ಬಗ್ಗೆ ಇಷ್ಟು ಆಕರ್ಷಿತರಾಗಿರುವುದು ಏಕೆ? ಭಾರತದ ಮಟ್ಟಿಗೆ ಹೇಳುವುದಾದರೆ ಕ್ರಿಕೆಟ್ ಭರವಸೆಯ ಪ್ರತೀಕ. ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡ ಟ್ವೆಂಟಿ-20 ವಿಶ್ವಕಪ್ ಗೆದ್ದ ಮೇಲಂತೂ ಆ ಭರವಸೆ ಎವರೆಸ್ಟ್‌ಗಿಂತ ಎತ್ತರಕ್ಕೇರಿ ನಿಂತಿದೆ. ಆ ಕಾರಣದಿಂದಲೇ ಬಾಲಿವುಡ್ ಮತ್ತು ಉದ್ಯಮ ಲೋಕ ಕ್ರಿಕೆಟ್ ಮೈದಾನದ ಮೇಲೆ ಲಗ್ಗೆ ಇಟ್ಟಿರುವುದು. ಐದು ದಿನ ನಡೆಯುವ ಟೆಸ್ಟ್ ಪಂದ್ಯ ಮತ್ತು ಎಂಟು ಗಂಟೆ ನಡೆಯುವ ಏಕದಿನ ಅಂತರ್ ರಾಷ್ಟ್ರೀಯ ಪಂದ್ಯಗಳೇ ಉಳಿದೆಲ್ಲ ಟೆಲಿವಿಷನ್ ಕಾರ್ಯಕ್ರಮಗಳನ್ನು ನುಂಗಿ ನೀರು ಕುಡಿಯುತ್ತಿವೆ. ಪ್ರೇಕ್ಷಕರನ್ನು ರೋಮಾಂಚನದ ಅಲೆಯ ಮೇಲೆ ತೇಲಿಸುವ ಕ್ರಿಕೆಟ್ ಭಾರತದಲ್ಲಿ ಅತ್ಯಂತ ಜನಪ್ರಿಯವಾದ ಟೆಲಿವಿಷನ್ 'ಕಾರ್ಯಕ್ರಮ.'
ಐಪಿಎಲ್‌ನಲ್ಲಿ ಭಾಗವಹಿಸಲಿರುವ ಎಂಟು ತಂಡಗಳ ಒಡೆಯರಿಗೆ ಮೂಲ ಆದಾಯ ಬರುವುದೇ ಟೆಲಿವಿಷನ್ ಪ್ರಸಾರದ ಮೂಲಕ ಬರುವ ಲಾಭದಿಂದ. ಐಪಿಎಲ್ ತಂಡಗಳ ಒಡೆಯರು ಮತ್ತು ಬಿಸಿಸಿಐ ನಡುವೆ ಈ ಲಾಭವನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಒಂದು ಒಪ್ಪಂದವಾಗಿದೆ. ಆ ಒಪ್ಪಂದದ ಪ್ರಕಾರ ಮೊದಲ ೫ ವರ್ಷಗಳ ಅವಧಿಯಲ್ಲಿ ತಂಡದ ಒಡೆಯರಿಗೆ ಈ ಮೊತ್ತದಲ್ಲಿ ಶೇಕಡಾ 80ರಷ್ಟು ಹಣ ನೀಡಲಾಗುವುದು. ಉಳಿದ ಐದು ವರ್ಷಗಳ ಅವಧಿಯಲ್ಲಿ ಆ ಮೊತ್ತ ಶೇಕಡಾ 60 ಆಗಿರುತ್ತದೆ. ಇಂಗ್ಲಿಷ್ ಪ್ರೀಮಿಯರ್ ಲೀಗ್ ತಂಡಗಳಿಗೆ ಶೇಕಡಾ 30ರಷ್ಟು ಆದಾಯ ಬರುವುದು ಪ್ರಾಯೋಜಕತ್ವ ಮತ್ತು ವ್ಯಾಪಾರ-ವಹಿವಾಟುಗಳಿಂದ. ಇದರ ಜೊತೆಗೆಬಾಲಿವುಡ್ ಮತ್ತು ಉದ್ಯಮ ಲೋಕದ ಸಂಸ್ಥೆಗಳ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಕ್ರಿಕೆಟ್ ಒಂದು ಸಾಧನವಾಗಬಹುದು. ಭಾರತದ ಮಟ್ಟಿಗೆ ಹೇಳುವುದಾದರೆ ಕ್ರಿಕೆಟ್ ಒಂದು ರಾಷ್ಟ್ರೀಯ ಪ್ರತಿಷ್ಠೆ ಎಂದು ಜೀ ನೆಟ್‌ವರ್ಕ್ ಆಶೀಶ್ ಹೇಳುತ್ತಾರೆ. ನಾನು ಭಾರತೀಯ, ನಮ್ಮ ಭಾರತೀಯ ಕಂಪನಿ ಅಥವಾ ಸಂಸ್ಥೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಸಮಯದಲ್ಲಿ ಕ್ರಿಕೆಟ್ ತಂಡವೊಂದರ ಒಡೆತನವೂ ಜೊತೆಯಲ್ಲಿದ್ದರೆ!? ಅದರೊಂದಿಗೆ ವಿವಿಧ ಉದ್ಯಮಗಳನ್ನು ನಡೆಸುತ್ತಿರುವ ಅಂಬಾನಿ-ಮಲ್ಯಾ ಅವರಿಗೆ ಸನಿಹದಲ್ಲಿಯೇ ಬೇಕಾದ ಬ್ರಾಂಡ್ ಅಂಬಾಸಡರ್‍ಸ್ ದೊರಕುತ್ತಾರೆ.
ಹಾಗಿದ್ದರೆ ಶಾರುಖ್, ಜೂಹಿ ಮತ್ತು ಪ್ರೀತಿ ಜಿಂಟಾಗೆ ಏನು ಲಾಭ? ಜಾಹೀರಾತು ಜಗತ್ತಿನ ಮೇಲೆ ರೂಪದರ್ಶಿಗಳಾಗಿ ಲಗ್ಗೆಯಿಟ್ಟು ಹಣ ದೋಚುತ್ತಿರುವ ಕ್ರಿಕೆಟ್ ಆಟಗಾರರ ಮೇಲೆ ಬಾಲಿವುಡ್ ತಾರೆಯರು ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆಯೇ? ಸ್ವಲ್ಪ ಮಟ್ಟಿಗೆ ಹೌದು! ಅದಕ್ಕಿಂತ ಹೆಚ್ಚಾಗಿ ಕ್ರಿಕೆಟ್ ಮನರಂಜನೆಯ ರೂಪ ತಳೆದು ನಿಂತಿರುವಾಗ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಮತ್ತು ಹಣಗಳಿಸಲು ಇದೊಂದು ಅವಕಾಶ ಎನ್ನುವುದನ್ನು ಆ ಮೂವರು ಅರ್ಥ ಮಾಡಿಕೊಂಡಿದ್ದಾರೆ. ಅಕಸ್ಮಾತ್ ಐಪಿಎಲ್ ಟೂರ್ನಿಯ ಪಂದ್ಯಕ್ಕೆ ಹೆಚ್ಚಿನ ಪ್ರೇಕ್ಷಕರನ್ನು ಆಕರ್ಷಿಸುವ ಸಲುವಾಗಿ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಶಾರುಖ್ ಖಾನ್ 'ದರ್ದ್-ಎ-ಡಿಸ್ಕೊ' ಹಾಡು ಹೇಳುತ್ತಾ ಕುಣಿದರೆ ಅಚ್ಚರಿ ಪಡಬೇಡಿ.
ಸುಭಾಷ್‌ಚಂದ್ರ ಕನಸಿನ ಕಥೆ?
ಬಿಸಿಸಿಐ ಇಟ್ಟ ಲೆಕ್ಕಾಚಾರದ ಹೆಜ್ಜೆ ಐಪಿಎಲ್. ಆ ಮೂಲಕ ಜೀ ಟೆಲಿವಿಷನ್‌ನ ಮುಖ್ಯಸ್ಥ ಸುಭಾಷ್‌ಚಂದ್ರ ಅವರ ಕನಸಿನ ಕೂಸು ಇಂಡಿಯನ್ ಕ್ರಿಕೆಟ್ ಲೀಗ್ (ಐಸಿಎಲ್) ಕಥೆ ಮುಗಿದಂತೆ ಎಂದೆನ್ನಿಸುತ್ತಿದೆ. ಕಪಿಲ್ ದೇವ್ ಅವರನ್ನು ಮುಂದಿಟ್ಟುಕೊಂಡು ಸುಭಾಷ್‌ಚಂದ್ರ ಐಸಿಎಲ್ ಆರಂಭಿಸಿದ ಸಂದರ್ಭದಲ್ಲಿ ಎಲ್ಲವೂ ಸುಸೂತ್ರವಾಗಿಯೇ ಇತ್ತು. ಆದರೆ, ನಂತರ ಮೈದಾನದ ಹೊರಗೆ ನಡೆದ ಪಂದ್ಯದಲ್ಲಿ ಐಸಿಎಲ್ ಸೋತು ಸುಣ್ಣವಾಗಲಾರಂಭಿಸಿದೆ. ಮುಖ್ಯವಾಗಿ ಬಿಸಿಸಿಐ ಮತ್ತು ಐಸಿಸಿ ಒತ್ತಡದಿಂದಾಗಿ ಅಂತರ್ ರಾಷ್ಟ್ರೀಯ ಕ್ರಿಕೆಟ್ ತಾರೆಗಳು ಐಸಿಎಲ್ ಸೇರಲಿಲ್ಲ. ಆ ಪರಿಣಾಮವಾಗಿ ಐಸಿಎಲ್ ಟೂರ್ನಿ ಕಳೆಗುಂದಿತ್ತು. ಪ್ರೇಕ್ಷಕರು ಬರಲಿಲ್ಲ ಪ್ರಾಯೋಜಕರೂ ಇಲ್ಲ; ಹಣವೂ ಹರಿದು ಬರುವುದಿಲ್ಲ. ಈಗ ಐಸಿಎಲ್ ಬೆನ್ನ ಹಿಂದಿರುವುದು ರಶ್ಮಿ ಬಿಲ್ಡರ್ಸ್, ರಿಷಿ ಸಿಮೆಂಟ್ಸ್... ಮುಂತಾದ ಕಂಪನಿಗಳು. ಅಂಬಾನಿ, ಮಲ್ಯ, ಶಾರುಖ್ ಮುಂದೆ ಇವರ ಆಟ ನಡೆಯುತ್ತದೆಯೇ? ಈ ದೃಷ್ಟಿಯಲ್ಲಿ ನೋಡಿದಾಗ ಐಪಿಎಲ್ ಮತ್ತು ಐಸಿಎಲ್ ಯುದ್ಧದಲ್ಲಿ ಗೆಲುವು ಯಾರದು ಎನ್ನುವುದು ಸ್ಪಷ್ಟವಾಗಿದೆ. ಈ ಧನದಾಹಿ ಯುದ್ಧದ ನಡುವೆ ಕ್ರಿಕೆಟ್‌ನ ಅಭಿವೃದ್ಧಿಯ ಕನಸು ಮಾತ್ರ ಬಡವಾಗುತ್ತಿದೆ. ಪ್ರಭಾವಶಾಲಿ ಪವಾರ್ ಪವರ್ ಮೂಲಕ ಬಿಸಿಸಿಐ ಏಕಸ್ವಾಮ್ಯ ಹೀಗೆಯೇ ಮುಂದುವರಿಯಲಿದೆ. ಅದರ ನೇರ ಪರಿಣಾಮವಾಗುವುದು ಐಸಿಎಲ್ ಮೇಲೆ. ಆದರೂ, ಕ್ರಿಕೆಟ್ ಅನಿಶ್ಚಿತತೆಗಳ ಆಗರ! ಇಲ್ಲಿ ಯಾವ ಸಮಯದಲ್ಲಿ ಏನೂ ಆಗಬಹುದು. ಯಾವ ಕ್ಷಣದಲ್ಲಿ ಮೈದಾನದಲ್ಲಿನ ಪಿಚ್ ಯಾವ ತಂಡಕ್ಕೆ ವರವಾಗಿ ಪರಿಣಮಿಸುತ್ತದೋ ಯಾರಿಗೆ ಗೊತ್ತು? ಏನೇ ಆಗಲಿ ಕ್ರಿಕೆಟ್ ಮಾತ್ರ ಜೀವಂತವಾಗಿ ಉಳಿಯಲಿ.
ಟಿಎಸ್‌ಐ |