|
' ಅರೆ ಟೆಲಿಫೋನ್ ಬಿಲ್ ಇಷ್ಟು ಹೆಂಗೆ ಬಂತು' ರಘು ಬಿಲ್ ಮೊತ್ತವನ್ನು ನೋಡುತ್ತ ಉದ್ಗರಿಸಿದ. ಯಾವ ಬಿಲ್‌ನ ದುಡ್ಡು ಎಷ್ಟಿದೆ ಎಂದು ಸರಿಯಾಗಿ ಗಮನಿಸುವ ಗೋಜಿಗೂ ಹೋಗದೇ ಎಲ್ಲ ಬಿಲ್‌ಗಳನ್ನೂ ಒಟ್ಟಿಗೇ ಸೇರಿಸಿ ಈಸಿ ಬಿಲ್‌ಗೋ, ಚೆಕ್ಕನ್ನೋ ಕೊಡುವ ಅಥವಾ ತನಗೆ ಸಮಯವಿಲ್ಲವೆಂದು ಸೀಮಾನ ಕೈಗೋ ತುರುಕುವ ರಘು ತನ್ನದೇ ಓಟದಲ್ಲಿರುವವ. ಇವತ್ತು ಯಾರೊಂದಿಗೋ ಮೊಬೈಲ್‌ನಲ್ಲಿ ಮಾತಾಡುತ್ತಲೇ ನಿರಾಸಕ್ತಿಯಿಂದ ಅತ್ತ ಕಡೆಯ ಮಾತು ಕೇಳುತ್ತಿದ್ದವ ಕೈಯಲ್ಲಿದ್ದ ಬಿಲ್ಲನ್ನು ನೋಡುತ್ತ ಮಾತು ಮುಗಿಸುವಷ್ಟರಲ್ಲಿ ಬಿಲ್ ಮೊತ್ತ ಅಚಾನಕ್ ಮನಸ್ಸಲ್ಲಿ ನಿಂತು ಕೇಳಿದ.
ತುಸು ಮುಂಚೆ ಊಟ ಮುಗಿಸಿ, ಗಿಡಗಳನ್ನಿಟ್ಟಿದ್ದ ಚಿಕ್ಕ ಬಾಲ್ಕನಿಯಲ್ಲಿ ನಾಲ್ಕಾರು ಹೆಜ್ಜೆಯ ತಮ್ಮ ಪುಟ್ಟ ವಾಕನ್ನೂ ಮುಗಿಸಿ, ಬಾಗಿಲು ಮುಚ್ಚಿ ಬಂದ ಮೂರ್ತಿಯವರಿಗೆ ಮಗನ ಪ್ರಶ್ನೆ ತಮ್ಮನ್ನು ಉದ್ದೇಶಿಸಿದ್ದೇ ಎಂದು ತಿಳಿದು ಕಸಿವಿಸಿ. ಲ್ಯಾಂಡ್‌ಲೈನ್‌ನಿಂದ ಹೊರಗೆ ಕರೆಗಳನ್ನು ಮಾಡುವುದು ತಾನೊಬ್ಬನೇ.
ರಘು ಹಾಗೇ ಬಿಲ್ ಕೆಳಗಿನ ವಿವರಗಳನ್ನು ನೋಡುತ್ತಿದ್ದವ "ಏನಪ್ಪ ನೀನು...ಈ ನಂಬರ್ ರೋಮಿಂಗ್ ಇರೋ ಮೊಬೈಲ್.. ಇದಕ್ಕೆ ತುಂಬಾ ಸಲ ಫೋನ್ ಮಾಡಿದ್ದೀಯ.. ಮಾಡೋದು ಬೇಡ ಅಂತಲ್ಲ.. ರೋಮಿಂಗ್ ಇರೋದಕ್ಕೆ ದುಡ್ಡು ಜಾಸ್ತಿ ಆಗುತ್ತೆ, ನಿಂಗೆ ಅವೆಲ್ಲ ಗೊತ್ತೇ ಆಗಲ್ಲ.." ಆ ನಂಬರನ್ನೇ ನೋಡುತ್ತ ರಘು ಗದರುತ್ತಿದ್ದರೆ ಮೂರ್ತಿ ತಪ್ಪು ಮಾಡಿದ ಚಿಕ್ಕ ಹುಡುಗನಂತೆ ಸುಮ್ಮನೆ ನಿಂತರು. ಸೀಮಾ ಟೇಬಲ್ ಮೇಲಿನ ಅಡುಗೆ ಪದಾರ್ಥಗಳನ್ನು ಎತ್ತಿಡುತ್ತಿದ್ದಳು. ರಘು ಮತ್ತೇನೋ ಹೇಳಲು ಹೊರಟಿದ್ದ.
"ಇನ್ನು ಮೇಲೆ ಮಾಡಲ್ಲ ಬಿಡು" ವಿಷಣ್ಣ ಧ್ವನಿಯಲ್ಲಿ ಹೇಳಿದ ಮೂರ್ತಿ ಮೆತ್ತಗೆ ತಮ್ಮ ಕೊಠಡಿಯತ್ತ ನಡೆದರು.
"ಹಂಗಲ್ಲಪ್ಪ, ನಾನೇನೂ ಕಟ್ಟಕಾಗಲ್ಲ ಅಂತ ಹೇಳಿದ್ದಲ್ಲ" ರಘುವಿನ ಧ್ವನಿಯಲ್ಲಿ ಆಗೀಗ ಸುಳಿದಾಡುವ ಸಂಪಾದನೆಯ ಹಮ್ಮು.
"ಅವನೇ ತೀರಿಕೊಂಡನಲ್ಲ... ಇನ್ನು ಆ ನಂಬರ್‌ಗೆ ಮಾಡಲ್ಲ ಬಿಡು" ಹಾಲ್‌ನಿಂದ ಕೊಠಡಿಯೊಳಗೆ ತೂರಿಕೊಳ್ಳುವ ಮುಂಚೆ ಬಾಗಿಲಲ್ಲೇ ನಿಂತ ಮೂರ್ತಿ ಕಳೆದ ತಿಂಗಳು ತೀರಿಕೊಂಡ ಗೆಳೆಯನ ನೆನಪಿನಿಂದಲೋ ಏನೋ ಮತ್ತಷ್ಟು ವಿಷಣ್ಣರಾದರು.
ರಘುವಿಗೆ ತಟ್ಟನೆ ಅರಿವಾಯಿತು, ಓ ಇದು ಅಪ್ಪನ ಖಾಸಾ ಗೆಳೆಯನ ನಂಬರ್. ಛೇ ತನಗೆ ನೆನಪೇ ಆಗಲಿಲ್ಲ ಎಂದುಕೊಳ್ಳುವಷ್ಟರಲ್ಲಿ
"ದಿಸ್ ಈ ಸ್ ಟೂ ಮಚ್ ರಘು... ಅವರಿಗೆ ಅವರದ್ದೇ ಆದ ಸ್ಪೇಸ್ ಇರಬಾರದು ಅನ್ನೋ ಥರ ಆಡಬೇಡ" ಈ ವರೆಗೂ ಸುಮ್ಮನಿದ್ದ ಸೀಮಾ ಸಿಡುಕಿದಳು.
"ನಾನು ಹಂಗೆಲ್ಲಿ ಹೇಳ್ದೆ ಈಗ.. ಏನೊಂಚೂರು ಫೋನ್ ಬಿಲ್ ಯಾಕೆ ಇಷ್ಟು ಬಂದಿದೆ ಅಂತ್ಲೂ ವಿಚಾರಿಸಬಾರದ" ಮಾತಿನ ಕೊನೆಯಲ್ಲಿ ಅವನು ಹೇಳದೇ ಇದ್ದರೂ ಅವನ ಧ್ವನಿಯಲ್ಲಿ ಮನೆಯ ಯಜಮಾನನಾಗಿ ಎಂಬ ಭಾವ ಇದ್ದಂತೆ ಸೀಮಾಗೆ, ಮೂರ್ತಿಯವರಿಗೆ ಇಬ್ಬರಿಗೂ ತಟ್ಟಿತು. ಆ ಕ್ಷಣಕ್ಕೆ ಮೂರ್ತಿ ಮತ್ತು ಸೀಮಾ ಪಕ್ಕನೆ ಪರಸ್ಪರ ಒಬ್ಬರನ್ನೊಬ್ಬರು ನೋಡಿಕೊಂಡ ಆ ಅರೆಕ್ಷಣದಲ್ಲಿ ಇಂಥ ಭಾವ ಹೊಳೆಯಿಸಿದ ಒಂದು ಅರ್ಥೈಸಿಕೊಳ್ಳುವಿಕೆ ಇತ್ತು. ಮೂರ್ತಿಯವರಿಗೆ ನಿಜಕ್ಕೂ ಏನು ಪ್ರತಿಕ್ರಿಯಿಸಬೇಕೆಂದೇ ತಿಳಿಯದೇ ಮತ್ತೆ ಸುಮ್ಮನೆ ನಿಂತರು.
"ವಿಚಾರಿಸಬಾರದು ಅಂತಲ್ಲ.. ಆದರೆ ವಿಚಾರಿಸೋ ಧ್ವನಿ ಇದೆಯಲ್ಲ ..ಅದು.."
"ಏನು ಅದು.. ಅರ್ಧಂಬರ್ಧ ಮಾತಾಡಬೇಡ, ಪೂರ್ಣ ಹೇಳು.."
"ನೀನು ಇನ್ನೊಬ್ಬರ ಸ್ಪೇಸ್‌ನಲ್ಲಿ ಯಾವಾಗ್ಲೂ ತಲೆ ತೂರಿಸೋ ಹಕ್ಕು ನಿಂಗಿದೆ ಅಂದುಕೊಂಡು ಬಿಟ್ಟಿದ್ದೀಯ ಅಷ್ಟೆ" ಸೀಮಾ ರೇಗಿದರೂ ಧ್ವನಿ ಐಸ್ ಕ್ಯೂಬ್‌ನಷ್ಟು ತಣ್ಣಗೆ.
ವೈರ್‌ಲೆಸ್‌ಫೋನಿನ ಬಿಲ್ ಯಾವುದಕ್ಕೋ ತಂತಿ ಬಿಗಿಯುತ್ತಿದೆ. ಮೂರ್ತಿಯವರು ರೂಮಿಗೆ ಹೋಗಿಬಿಡಲೇ, ಅಥವಾ ಏನಾದ್ರೂ ಮಾತಾಡಲೇ ಅಂದುಕೊಳ್ಳುತ್ತ ಸುಮ್ಮನೆ ನಿಂತರು.
'ಬಿಲ್ ಮೊತ್ತಕ್ಕಿಂತ ಅಷ್ಟು ಬಿಲ್ ಬರುವಂತೆ ಅಪ್ಪ ಗೆಳೆಯನೊಂದಿಗೆ ಮಾತನಾಡಿದ್ದನ್ನು ತಾನು ಸಹಿಸದೇ ಹೇಳಿದೆನೇ... ಇದೇ ಅಪ್ಪ ತಾನು ಗೆಳೆಯರೊಂದಿಗೆ ಭಾನುವಾರ ಇಡೀ ದಿನ ಮಾತಾಡಲು, ಸುತ್ತಾಡಲು ಹೋಗಿದ್ದಕ್ಕೆ ಕಾಲೇಜಿಗೆ ಹೋಗುತ್ತಿರುವವನು ಎಂದೂ ಲೆಕ್ಕಿಸದೇ ಕೆಟ್ಟದಾಗಿ ಬೈದು, ಅಮ್ಮನಿಗೂ ನೀನೇ ಸಲಿಗೆ ಕೊಟ್ಟಿದ್ದು ಅಂತ ಬೈಯ್ದು... ಎಷ್ಟು ಸಲ ಆಗೆಲ್ಲ ಹಾಗೆ ಮಾಡಿಲ್ಲ ಇವರು... ಪ್ರತಿ ಬಾರಿ ಕಾಲೇಜಿನ ಫೀ ತುಂಬುವಾಗ ತಾನು ಎಷ್ಟು ಸಂಕೋಚದಿಂದ ಕೇಳುವಂತೆ ಅಪ್ಪನ ವರ್ತನೆ ಇರುತ್ತಿತ್ತಲ್ಲ, ಗೆಳೆಯರೊಂದಿಗೆ ಸಿನಿಮಾಗೋ, ಬೇರೆ ಯಾವುದೋ ಚಿಕ್ಕಪುಟ್ಟ ಖರ್ಚಿಗೂ ಕೈಒಡ್ಡುವಾಗ ಹೆಚ್ಚೇನೂ ಹೇಳದೇ ಕೊಟ್ಟರೂ ಪೈಸೆಪೈಸೆ ಲೆಕ್ಕ ಕೇಳುವ ಭಾವಭಂಗಿ ಇರುತ್ತಿತ್ತಲ್ಲ... ತನಗೆ ಮಾತ್ರವಲ್ಲ, ಅಮ್ಮ ಮನೆ ಖರ್ಚಿಗೆ ಹಣ ಕೇಳಿದರೂ ಅದ್ಯಾಕೆ ಇಷ್ಟಾಯ್ತು, ನೋಡಿ ಖರ್ಚುಮಾಡು ಎಂಬ ಮಾತಿಲ್ಲದೇ ಅಪ್ಪ ಕೊಟ್ಟಿದ್ದುಂಟೇ... ತಾನು ಅದರ ನೆನಪಲ್ಲಿ ಹೀಗೆ ಮಾಡ್ತಿಲ್ಲ ತಾನೆ...' ರಘುವಿನಲ್ಲಿ ಯೋಚನೆಯ ಎಳೆ ಹೀಗೆ ಹಾದುಹೋಗುತ್ತಿರುವಾಗ ಸೀಮಾ ಮೆತ್ತಗೆ ಹೇಳಿದಳು.
"ನಂಗೆ, ಮಾವಂಗೆ ನಮ್ಮದೇ ಆದ ಒಂದಿಷ್ಟು ಸ್ವಂತ ಭಾವನೆಗಳು ಇರುತ್ತೆ, ನೀನು ಅದನ್ನು ಅತಿಕ್ರಮಿಸಬಾರ್‍ದು ಅಂತ ನಿಂಗ್ಯಾಕೆ ಅರ್ಥವಾಗಲ್ಲ ಹೇಳು"
"ಯಾವುದನ್ನೋ ಯಾವುದಕ್ಕೋ ಕೊಂಡಿಯಾಗಿಸ್ತೀಯ ಸೀಮಾ... ನಂಗೆ ಅದು ತೀರಿಕೊಂಡ ಆ ಅಂಕಲ್‌ದು ಅಂತ ನೆನಪಾಗ್ಲಿಲ್ಲ ಅಷ್ಟೇ... ದಿಸ್ ಈಸ್ ಆಲ್ಸೋ ಟೂ ಮಚ್ ಯಾ.. " ಬಿಲ್ ಟೇಬಲ್ ಮೇಲೆ ಎಸೆದವನೇ ರಘು ಬೆಡ್‌ರೂಮಿಗೆ ನಡೆದ. ಅವನು ದಾಪುಗಾಲಿಟ್ಟು ನಡೆದಿದ್ದರಲ್ಲೇ ಅವರಿಬ್ಬರ ನಡುವೆ ಜಗಳ ಮತ್ತೆ ಮುಂದುವರೆಯುವ ಸೂಚನೆ ಇತ್ತು. ತಮ್ಮ ಕೊಠಡಿಗೆ ಹೋಗದೆ ಮೂರ್ತಿಯವರು ಸೀಮಾನೊಂದಿಗೆ ಸೇರಿ ಟೇಬಲ್ ಮೇಲಿದ್ದ ಅಡುಗೆ ಪಾತ್ರೆಗಳನ್ನು ಸಿಂಕ್‌ನಲ್ಲಿ, ಉಳಿದ ಅಡುಗೆಯನ್ನು ಫ್ರಿಜ್‌ನಲ್ಲಿ ಇಡತೊಡಗಿದರು. ಸೀಮಾ ಮಾತಾಡುವ ಲಹರಿಯಲ್ಲಿ ಇಲ್ಲವೆಂದು ಅವಳ ಧುಮುಗುಡುವ ಮುಖ ನೋಡಿಯೇ ಅರ್ಥವಾದ ಮೂರ್ತಿಯವರು ತಾವೂ ಮಾತನಾಡದೇ ಮೆತ್ತಗೆ ಕೊಠಡಿಗೆ ಜಾರಿಕೊಂಡರು.
ಆ ಕಡೆ ಕೊಠಡಿಯ ಬಾಗಿಲು ಮುಚ್ಚಿದ್ದರೂ ಮಾತು ತುಸು ಜೋರಾಗಿಯೇ ಅಸ್ಪಷ್ಟವಾಗಿ ಕೇಳುತ್ತಿತ್ತು. ಯಾಕೋ ಅವರಿಬ್ಬರ ನಡುವಿನ ಜಗಳಕ್ಕೆ ತಾನೂ ಒಂದು ಕಾರಣವಾಗ್ತ್ತಿದ್ದೀನ ಎಂದು ಮುಜುಗರಪಡುತ್ತ ನಿದ್ದೆ ಬಾರದಿದ್ದರೂ ಏನೂ ಓದಲೂ ಮನಸ್ಸಾಗದೇ ಲೈಟ್ ಆಫ್ ಮಾಡಿ ಮಲಗಿದರು.
ಅರ್ಧಗಂಟೆಯ ನಂತರ "ನಿದ್ದೆ ಮಾಡಿದ್ರಾ ಮಾವ" ಕೇಳುತ್ತಲೇ ಒಳಬಂದ ಸೀಮಾ
"ನಾನೊಂದು ಪುಸ್ತಕ ತಗೊಳ್ತೀನಿ" ಎಂದಳು.
"ಓದಕ್ಕಾ.. ಇನ್ನೂ ನಿದ್ದೆ ಬಂದಿಲ್ಲ್ಲವೇನಮ್ಮ"
"ಓದಕ್ಕಲ್ಲದೆ ಇನ್ನೇನು... ತಲೆ ಇಟ್ಟು ಮಲಗಕ್ಕಾ" ಚಿಕ್ಕ ಮಗುವಿನ ಹಠದಲ್ಲಿ ಕೆನ್ನೆಯುಬ್ಬಿಸಿದಳು. ಅವಳು ಲೈಟ್ ಹಾಕಿ, ಆ ಕಡೆ ತಿರುಗಿ ಅವರ ರ್‍ಯಾಕ್‌ನಲ್ಲಿ ಹುಡುಕ ತೊಡಗಿದಳು.
"ಸೀಮಾ... ನೀನಾದ್ರೂ ಯಾಕೆ ಇಷ್ಟು ಹಠ ಮಾಡ್ತೀಯಮ್ಮ" ಬಹುಮೆಲ್ಲಗೆ ಕೇಳಿದರು.
"ನಿಮಗರ್ಥವಾಗಲ್ಲ ಸುಮ್ನಿರಿ ಮಾವಾ..." ಸಲಿಗೆಯಿಂದ ತುಸು ರೇಗಿದಳು.
ಲೈಟ್ ಆಫ್ ಮಾಡಿ ಪುಸ್ತಕ ತೆಗೆದುಕೊಂಡು ಹೊರಟವಳು ಮತ್ತೆ ಬಂದು ಅವರ ಮಂಚದ ಮೇಲೆ ಕುಳಿತಳು.
"ಮಾವಾ.. ರಘೂನು ಯಾಕೆ ಇಷ್ಟು ಹಠ ಮಾಡಬೇಕು ನೀವೇ ಹೇಳಿ.. ನಂಗೂ ಮಕ್ಕಳು ಅಂದ್ರೆ ಆಸೇನೆ.. ನಾನು ಹೇಳಿದ್ದು ಈಗ ಬೇಡ, ನನ್ನ ಇದೊಂದು ಟ್ರೈನಿಂಗ್ ಪ್ರಾಜೆಕ್ಟ್ ಆಗಲಿ, ಆಮೇಲೆ ಮಾಡ್ಕೊಳ್ಳೋಣ, ಅಂತ ಅಂದೆ ಅಷ್ಟೇ, ಬೇಡವೇ ಬೇಡ ಅಂತೇನೂ ಹೇಳಿಲ್ಲವಲ್ಲ, ಬೇಕಂತ್ಲೇ ಪ್ಲಾನಿಂಗ್ ತಪ್ಪಿಸಿ.. ಈಗ .." ಮುಂದೆ ಹೇಳಲು ಸಂಕೋಚವಾಗಿ ಸುಮ್ಮನಾದಳು. ರಘು ಆದ್ರೂ ಯಾಕೆ ಇಷ್ಟು ಹಠ ಮಾಡಬೇಕು, ಯಾಕೆ ಅವನೂ ಚೂರು ಸೋಲಬಾರದು ಎಂಬ ಪ್ರಶ್ನೆಗೆ ಉತ್ತರವಿಲ್ಲದ ಮೂರ್ತಿ ಸುಮ್ಮನಾದರು.
"ಈಗ್ನೋಡಿ... ಅವನು ಎರಡು ತಿಂಗಳು ಸ್ಟೇಟ್ಸ್‌ಗೆ ಹೋಗ್ತಾನೆ, ಅದೂ ಇನ್ನು ಮೂರು ದಿನಗಳಲ್ಲಿ ಅವನು ಹೊರಡ್ತಿದಾನೆ, ಹಂಗಾದ್ರೆ ಇದರ ಬಗ್ಗೆ ಅಂವಂದೇನೂ ಜವಾಬ್ದಾರಿ ಇಲ್ವಾ ಮಾವ.. ಕೆರಿಯರ್ ಅವಂಗಷ್ಟೇ ಅಲ್ಲ ಮಾವ, ನಂಗೂ ಇದೆ. ನಂಗಿಂತ ಜಾಸ್ತಿ ಸಂಪಾದಿಸ್ತಾನೆ, ನಿಜ, ಆದರೆ ಕೆರಿಯರ್‌ನಲ್ಲಿ ಪ್ರೋಗ್ರೆಸ್ ಇಬ್ರಿಗೂ ಸಮ ಅಲ್ವಾ..."
ಒಂದು ವಾರದಿಂದ ಈ ದುಸುಮುಸು ಅವರಿಬ್ಬರಲ್ಲಿ ನಡೆದಿರೋದು ಮೂರ್ತಿಯವರಿಗೂ ಅರಿವಿಗೆ ಬಂದಿತ್ತು. ಒಂದೂವರೆ ತಿಂಗಳಾಯ್ತು ಅಂತ ಗಾಬರಿಯಾದ ಸೀಮಾ ಕನ್ಸೀವ್ ಆಗಿರೋದು ದೃಢವಾಗುತ್ತಲೇ ತಾನಿದನ್ನು ತೆಗೆಸೋದೆ ಅಂತ ಹಠ. 'ಆಗಿಬಿಟ್ಟಿದೆಯಲ್ಲ, ಯಾಕೆ ಸುಮ್ಮನೆ ತೆಗೆಸೋದು, ಮೂರು ವರ್ಷ ಕಾದಿದ್ದಾಯ್ತಲ್ಲ, ಇನ್ನೂ ಎಷ್ಟು ದಿನ ಅಂತ ಮುಂತಳ್ಳೋದು, ಅಲ್ದೆ ಆ ಎನ್‌ಜಿಒನಲ್ಲ್ಲಿ ಕೆಲಸ ಮಾಡ್ತಿರೋ ನೀನು ರಜೆ ತಗೊಂಡರೆ ಏನೀಗ, ಅದರಲ್ಲಿ ಏನಂತಹ ಮಹಾ ಕೆರಿಯರ್ ಪ್ರೋಗ್ರೆಸ್' ಅಂತ ರಘು ವಾದ. 'ನೀನೊಬ್ಬನೇ ಟೆಕ್ಕಿ ಗೈ, ಲಕ್ಷ ಲಕ್ಷ ಸಂಪಾದನೆ ಮಾಡ್ತೀನಿ ಅಂತ ಹಮ್ಮು ನಿಂಗೆ... ನಾಲ್ಕು ತಿಂಗಳು ನಾನು ಇರ್‍ಮಾಗೆ ರಿಸೋರ್ಸ್‌ಪರ್ಸ್‌ನ್ ಆಗಿ ಹೋಗಿ ಬಂದ ನಂತರ ಯೋಚಿಸೋಣ ಅಂತ ಹೇಳಿರಲಿಲ್ಲವಾ, ಪ್ಲಾನಿಂಗ್ ತಪ್ಪಿಸಿ ನೀನು ಹೀಗೆ ಮಾಡಿದ್ಯಲ್ಲ, ಇದು ಮೋಸ ಅಲ್ವಾ... ನಿಂಗೆ ಅಪ್ಪ ಆಗೋದು ಅಂದ್ರೆ ಸುಲಭ, ನೀನೇನೂ ಹೊತ್ತು ಹೆರಬೇಕಿಲ್ಲವಲ್ಲ, ಅದೆಲ್ಲ ನನ್ನ ತಲೆನೋವು ತಾನೆ" ಸೀಮಾನ ಮಾರುತ್ತರ.
"ಆಮೇಲೆ ರಿಸೋರ್ಸ್‌ಪರ್ಸನ್ ಆಗಿ ಹೋಗಕ್ಕೇ ಆಗಲ್ಲವಾ ... ದೊಡ್ಡ ರಿಸೋರ್ಸ್‌ಪರ್ಸನ್ ಪಟ್ಟ ನೋಡು" ರಘು ರೇಗಿದಷ್ಟೂ ಸೀಮಾನ ಹಠ ಹೆಚ್ಚುತ್ತಲೇ ಇತ್ತು. ಮೂರ್ತಿಯವರು ಯಾವುದರಲ್ಲೂ ತಲೆ ಹಾಕುವುದೇ ಬೇಡ, ಅವರಿಬ್ಬರೇ ಏನಾದ್ರೂ ನಿರ್ಧಾರ ತೆಗೆದುಕೊಳ್ಳಲಿ ಅಂತ ಸುಮ್ಮನೇನೋ ಇದ್ದರು. ಆದರೂ ಯಾಕೋ ಇವಳು ಎಲ್ಲಾದ್ರೂ ನಿಜಕ್ಕೂ ಡಾಕ್ಟರ್ ಹತ್ತಿರ ಹೋಗಿ ಗರ್ಭ ತೆಗೆಸಿಕೊಂಡು ಬಿಟ್ಟರೆ ಎಂಬ ಚಿಕ್ಕ ಕಂಪನವೂ ಇತ್ತು.
"ಬೆಳಿಗ್ಗೆ ಯೋಚಿಸೋಣ, ಈಗ ಮಲ್ಕೋ ಹೋಗಮ್ಮ. ಸುಸ್ತಾಗಿದ್ದೀಯ" ಮೂರ್ತಿ ತಲೆ ಸವರಿದರು. ಸೀಮಾ ಕಣ್ಣೊರೆಸಿಕೊಳ್ಳುತ್ತ ಎದ್ದು ಪುಸ್ತಕ ಹಿಡಿದು ಹೊರಟಳು. ಅಷ್ಟೆಲ್ಲ ಪ್ರೀತಿಸಿ ಮದುವೆಯಾದ ಇಬ್ಬರೂ ಈಗ ವೃತ್ತಿಯ ವಿಷಯಕ್ಕೆ ರಗಳೆ ಹಚ್ಚಿಕೊಂಡು ಹೀಗೆ ಪ್ರೀತಿ ಒಣಗಿಸಿಕೊಳ್ತಾರಲ್ಲ ಅಂತ ಮೂರ್ತಿಯವರಿಗೆ ಸಂಕಟ. ಬಾಗಿಲವರೆಗೆ ಹೋದವಳು ಮತ್ತೆ ಬಂದು ಮಂಚದ ಮೇಲೆ ಕುಳಿತಳು.
"ಮಾವ... ರಘು, ನಾನು ಎಷ್ಟು ಪ್ರೀತಿಸ್ತಾ ಇದ್ದೀವಿ ನಿಮಗ್ಗೊತ್ತಿದೆ... ಈ ಮೂರು ವರ್ಷಗಳಲ್ಲಿ ಅವನನ್ನ ಹೆಚ್ಚ್ಚು ಹೆಚ್ಚು ಅರ್ಥ ಮಾಡ್ಕೊಳ್ಳಕ್ಕೆ ಪ್ರಯತ್ನ ಮಾಡಿದೀನಿ. ಮೊದಲಿಂದ ಅಷ್ಟು ಸರಿಯಾಗಿ ಅರ್ಥಕ್ಕೆ ಸಿಗದ ಒಂದು ಭಾವನೆ ನನ್ನನ್ನ ಆಗೀಗ ಕಾಡ್ತಾ ಇತ್ತು ಮಾವಾ.. ಈಗ ನೀವು ನಮ್ಮ ಜತೆಗೆ ಇರೋಕೆ ಶುರು ಮಾಡಿದ ನಂತರ ಆ ಭಾವನೆ ಚೂರು ಗ್ರಹಿಕೆಗೆ ಸಿಗ್ತಾ ಇದೆ" ತೀರಾ ಮೆತ್ತಗೆ, ಆದರೆ ವಿಚಿತ್ರ ದೃಢತೆ ತುಂಬಿದ್ದ ಧ್ವನಿಯಲ್ಲಿ ಹೇಳಿದಳು.
'ದೇವ್ರೇ.. ಇವಳು ಹೇಳಲು ಹೊರಟಿದ್ದಾದರೂ ಏನು.. ತಾವು ಬಂದು ಜತೆಗೆ ಇರೋದು ಇವರಿಬ್ಬರಿಗೂ ಅವರ ಖಾಸಗಿ ದಿನಗಳಲ್ಲಿ ಯಾರದೋ ಉಸಿರಾಟ ಕೇಳುತ್ತಿರುವಂತೆ ಭಾಸವಾಗುತ್ತಿಲ್ಲ ತಾನೆ.. ತನ್ನಿಂದೇನಾದರೂ ಇವರ ಖಾಸಗಿತನಕ್ಕೆ ಧಕ್ಕೆಯಾಗುತ್ತಿದೆಯೇ...' ಮೂರ್ತಿಯವರಲ್ಲಿ ಏನೆಲ್ಲ ಊಹೆಗಳು ಹಾದುಹೋಗುತ್ತ ಸಂಕೋಚದಿಂದ ಹಿಡಿಯಾಗುವಂತೆ.
"ರಾತ್ರಿ ರಘು ವಿಚಾರಣೆ ಥರಾ ಮಾತಾಡಿದನಲ್ಲ... ಅವನ ಜಾಗದಲ್ಲಿ, ಆ ಸ್ಥಾನದಲ್ಲಿ ಇದ್ದ ಬೇರೇ ಯಾವ ಗಂಡಸೇ ಆದ್ರೂ ಹಂಗೇ ಮಾಡ್ತಿದ್ದ ಅನ್ನಿಸುತ್ತೆ. ಬಹುಶಃ ಅವನ ವಯಸ್ಸಲ್ಲಿ ನೀವೂ ಅತ್ತೆಯವರೊಂದಿಗೆ, ನಿಮ್ಮ ಅಪ್ಪನೊಂದಿಗೆ ಹಿಂಗೇ ವರ್ತಿಸಿರಬಹುದು. ಅಂದ್ರೆ.... ಹ್ಯಾಗೆ ಹೇಳೋದು ಗೊತ್ತಾಗ್ತಿಲ್ಲ ಮಾವ... ಇಷ್ಟು ದುಡಿಯುವ, ಇಷ್ಟೆಲ್ಲವನ್ನು ಸಂಭಾಳಿಸುವ, ಪ್ರತಿಯೊಂದರ ಹಣಕಾಸಿನ ಜವಾಬ್ದಾರಿಯನ್ನು ತೆಗೆದುಕೊಳ್ಳುವ ತನ್ನ ಮಾತನ್ನು ಮನೆಯಲ್ಲಿರೋ ಬೇರೆ ಎಲ್ಲ ಹೆಂಗಸರು, ಗಂಡಸರು ಕೇಳಬೇಕು ಅಂತನ್ನೋ ಒಂದು ಭಾವನೆ ಇರುತ್ತಾ ಅಂತ.. ಮೇಲ್ ಇಗೋ ಅಥವಾ ಮೇಲ್‌ಚ್ಯುವೆನಿಸಂ ಅಂತಲ್ಲ.. ಅದಕ್ಕೂ ಮೀರಿದ ಯಾವುದೋ ಒಂದು ಭಾವನೆ ದುಡಿಯುವ ಹಮ್ಮಿನ ಜತೆ ಸೇರಿರುತ್ತಾ ಅಂತ... ನಂಗೆ ಸರಿಯಾಗಿ ಗೊತ್ತಾಗ್ತಿಲ್ಲ.. ಜಸ್ಟ್ ಐ ಆಮ್ ಟ್ರೈಯಿಂಗ್ ಟು ಅಂಡರ್‌ಸ್ಟ್ಯಾಂಡ್" ಸೀಮಾ ಗಂಭೀರವಾಗಿ ಒಂದೊಂದೇ ವಾಕ್ಯವನ್ನು ನಿಧಾನಕ್ಕೆ ಹೇಳಿದಳು. ಮೂರ್ತಿಯವರ ಗ್ರಹಿಕೆಗೂ ಇಂಥದೊಂದು ಭಾವ ಅರೆಬರೆಯಾಗಿ ನಿಲುಕಿತ್ತು. ರಘು ಹಾಗೆ ವರ್ತಿಸಿದಾಗೆಲ್ಲ ಅವರಿಗೂ ಎಷ್ಟೋ ಬಾರಿ ಮೊದಲು ತನ್ನ ಕೈ ನಡೆಯುವಾಗ ತಾನು ಇದೇ, ಥೇಟ್ ಇದೇ ಭಾವಭಂಗಿಯಲ್ಲೇ ಆಗೆಲ್ಲ ಮನೆ ನಡೆಸ್ತಿದ್ದೆನಲ್ಲ, ಹೆಂಡತಿಯನ್ನು, ಶಾಲೆಗೆ ಹೋಗುವ ರಘುವನ್ನು, ವಯಸ್ಸಾಗಿದ್ದ ಅಪ್ಪನನ್ನು ಹೀಗೆಯೇ ನಡೆಸಿಕೊಳ್ಳುತ್ತಿದ್ದೆನಲ್ಲ ಎನ್ನುವ ತಮ್ಮ ಚಹರೆ ನೆನಪಿಗೆ ಬರುತ್ತಿತ್ತು. ಮೂರ್ತಿಯವರು ಮಾತಾಡಲಿಲ್ಲ. ಮತ್ತೆ ಅವಳೂ ಮಾತಾಡಲಿಲ್ಲ. ಅರೆಕ್ಷಣ ಹಾಗೆಯೇ ಕಿಟಕಿಯ ಪರದೆಯನ್ನೇ ದಿಟ್ಟಿಸುತ್ತ ಕುಳಿತವಳು ಮತ್ತೆ ಎದ್ದು ಮೆಲ್ಲನೆ ಬಾಗಿಲು ಕೊಂಚ ಮುಂದೆ ಮಾಡಿಕೊಂಡು ಹೋದಳು.
ಅವಳು ಹೋದ ನಂತರ ಎಷ್ಟೋ ಹೊತ್ತು ಏನೇನೋ ಯೋಚನೆಗಳು ಮೂರ್ತಿಯವರಿಗೆ. ಸೀಮಾ ಹೇಳಿದ್ದರಲ್ಲಿ ಏನೋ ಅಸ್ಪಷ್ಟವಾದ ಭಾವ ಇದೆ... ಅದು ತನಗೂ ಹೊಳೆದ ಭಾವ. ಮತ್ತೆ ತೀರಿಕೊಂಡ ಹೆಂಡತಿ, ಗೆಳೆಯ ಹೀಗೆ ಏನೇನೋ ನೆನಪುಗಳ ಮಧ್ಯೆ ನಿದ್ರೆ ಬಾರದೆ ಹೊರಳಾಡಿದರು. ಅವಳ ಸಾವು ತನ್ನನ್ನು ಹೀಗೆ ಇಷ್ಟು ಒಂಟಿಯಾಗಿ ಮಾಡುತ್ತದೆ ಎಂದುಕೊಂಡಿರಲಿಲ್ಲವಲ್ಲ... ಅವಳು ಹೋದಾಗಿನಿಂದ ಯಾರ ಪ್ರೀತಿಯ ಒಂದು ಜೀವಸ್ಪರ್ಶವೂ ಇಲ್ಲದೆ ಹೀಗೆ ಒಣಗಿದ ಕೊರಡಿನಂತೆ ಬದುಕುವುದು... ದೇವರೇ ಎಂಥ ಶಿಕ್ಷೆ ತಂದಿಟ್ಟೆಯೋ... ಕೊನೇ ಪಕ್ಷ ಮೊನ್ನೆ ಮೊನ್ನೆಯವರೆಗೆ ಸತ್ಯನಾದ್ರೂ ಇದ್ದ, ಅವನೊಂದಿಗೆ ಏನಾದ್ರೂ ಹೇಳಿಕೊಂಡು ಹಗುರಾಗಬಹುದಿತ್ತು. ಈಗ ಆತ್ಮದ ಭಾವನೆಗಳನ್ನು ಯಾರೆದುರಾದರೂ ಹರವಿಟ್ಟು, ಬಿಚ್ಚಿ ಹಗುರಾಗದೇ, ಎಲ್ಲ ಒಳಗೊಳಗೊಳಗೇ ಹುತ್ತಕಟ್ಟುತ್ತ... ಎಂದಿಲ್ಲದ ಯಾತನೆ.
ಬೆಳಿಗ್ಗೆ ಎದ್ದು ಎಂದಿನಂತೆ ಸೀಮಾಳಿಗೆ ಅಡುಗೆ ಕೆಲಸದಲ್ಲಿ ತುಸು ನೆರವಾಗುವಾಗ ಅವಳು ಸುಸ್ತಾದಂತೆ ಕಂಡಳು.
"ಯಾಕಮ್ಮಾ... ಸರಿಯಾಗಿ ನಿದ್ದೆ ಆಗಿಲ್ವಾ" ಮೂರ್ತಿಯವರು ಕೇಳಿದರೆ ಆಯ್ತಪ್ಪ ಎನ್ನುತ್ತಲೇ ಗಡಿಬಿಡಿಯಿಂದ ರಘುವಿಗೆ ಡಬ್ಬಿ ಪ್ಯಾಕ್ ಮಾಡಿದಳು. ಅವಳು ಬಾತ್‌ರೂಂನಲ್ಲಿದ್ದ ಸಮಯ ನೋಡಿದ ರಘು ಪೇಪರ್ ಹಿಡಿದಿದ್ದ ಮೂರ್ತಿಯವರ ಬಳಿ ಬಂದು "ನೀನಾದ್ರೂ ಅವಳಿಗೆ ಚೂರು ಬುದ್ಧಿ ಹೇಳಬಾರದ ಅಪ್ಪಾ.. ಏನೋ ಇತ್ತೀಚಿಗೆ ನೀವಿಬ್ಬರೂ ಅತಿಯಾಗಿ ಆಡ್ತಿದ್ದೀರಿ..." ಅಂತ ರೇಗಿದ.
ಮೂರ್ತಿಯವರು ಮಾತಾಡದೇ ಸುಮ್ಮನೇ ದಿಟ್ಟಿಸಿದರು. ವಾರದ ಹಿಂದೆ ಸೀಮಾನೂ ಹೀಗೆಯೇ ರೇಗಿದ್ದಳಲ್ಲ... "ಮಾವ.. ಮೊದ್ಲು ರಘು ಇಷ್ಟು ಹಠ ಮಾಡ್ತಿರಲಿಲ್ಲ, ನೀವು ಮೊಮ್ಮಗ ಬೇಕು ಅಂತ ಅವರ ತಲೆ ತುಂಬಿಸಿದೀರಿ ಕಾಣುತ್ತೆ, ನಿಮಗಿಬ್ಬರಿಗೂ ನಾನು ನಿಮ್ಮ ವಂಶೋದ್ಧಾರಕನನ್ನು ಹೆತ್ತುಕೊಡೋ ಯಂತ್ರದ ಥರಾ ಅಷ್ಟೇ... ನಂಗೂ ಎಲ್ರ ಹಾಗೆ ಮಗು ಬೇಕು ಅಂತ ಆಸೆಯಾಗುತ್ತೆ, ನಿಜ, ಆದ್ರೆ ಅದಕ್ಕೆ ನನ್ನ ಸಮಯ ಹೊಂದಿಸ್ಕೋಬೇಕಲ್ವಾ...ನನ್ನ ಕೆರಿಯರ್ ಸ್ಥಿತಿಗತಿ ಏನಿದೆ, ಯಾವಾಗ ರಜೆ ತಗೋಬಹುದು ಎಲ್ಲ ನೋಡ್ಕೊಂಡು ಮಗು ಬಗ್ಗೆ ಪ್ಲಾನ್ ಮಾಡೋದು, ಯಾವಾಗ ಬೇಕಾದ್ರೆ ಅವಾಗ ಮಗು ಮಾಡ್ಕೊಳೋಕೆ ಆಗಲ್ಲವಲ್ಲ"
"ಸೀಮಾ... ನಂಗೆ ಇತ್ತೀಚಿಗೆ ವಂಶಗಿಂಶ ಮುಂದುವರೀಬೇಕು ಅಂತೆಲ್ಲ ಯಾವ ಗೀಳೂ ಇಲ್ಲ ಕಣಮ್ಮ.. ನಿಮ್ಮತ್ತೆ ತೀರಿಕೊಂಡ ನಂತರ ಎಲ್ಲ ಸಂಬಂಧವೂ ಎಷ್ಟು ನಿಜವೋ ಅಷ್ಟೇ ಹುಸಿ ಕೂಡ ಅಂತನ್ನಿಸ್ತಿದೆ. ಅದ್ರಲ್ಲೂ ಹೋದ ತಿಂಗಳು ಸತ್ಯಾನ ಹೆಣ ಆ ಕ್ರಮೆಟೋರಿಯಂನ ಕೆಂಪು ಬಾಯೊಳಗೆ ಹೋಗೋದು ನೋಡಿದ ನಂತರ ನನ್ನ ಮನಸ್ಸು ತೀರಾ ಕೆಟ್ಟಿದೆಯಮ್ಮ.. ಒಂದು ಸಲ ಸತ್ತ ನಂತರ ಮುಗೀತಮ್ಮ, ಈ ವಂಶ, ಲೆಗಸಿ, ರಕ್ತಸಂಬಂಧ ಯಾವುದು ಜತೆಗೆ ಬರುತ್ತೆ ಹೇಳು... ಉಸಿರಿರೋವರೆಗೆ ಸುತ್ತಲಿನವರ ಪ್ರೀತಿಯನ್ನು ಅನುಭವಿಸೋದು, ನಾವೂ ನಿಷ್ಕಾರಣವಾಗಿ ಪ್ರೀತಿಸೋದು, ಈ ಎರಡಕ್ಕೆ ಚೂರು ಅರ್ಥ ಇರ್‍ಬಹುದು ಅಷ್ಟೇ" ಭಾರವಾದ ಸ್ವರದಲ್ಲಿ ಹೇಳಿ ಎದ್ದು ಒಳಗೆ ಹೋಗಿದ್ದರು. ತುಸು ಹೊತ್ತಿನಲ್ಲಿ ಒಳಬಂದ ಸೀಮಾ "ಸಾರಿ ಮಾವ.. ಯಾಕೋ ನನ್ನ ತಲೆ ಕೆಟ್ಟಿದೆ ಅಷ್ಟೇ" ಎಂದವಳೇ ಮತ್ತೆ ಸರಿದು ಹೋಗಿದ್ದಳು. ಅದೆಲ್ಲಾ ಈಗ ನೆನಪಾಗಿದ್ದೇ ಅವನಿಗೆ ಏನೂ ಹೇಳದೇ ಸುಮ್ಮನಾದರು.
ಅವನು ಹೋದ ನಂತರ 'ವಾಕರಿಕೆ ಬರ್‍ತಿದೆ, ಏನು ತಿನ್ನಕ್ಕೂ ಮನಸ್ಸಾಗಲ್ಲ, ಸಣ್ಣದಾಗಿ ತಲೆ ಸುತ್ತು ಬೇರೆ, ನಿಮ್ಮಗಂಗೆ ಅರ್ಥವಾದ್ರೆ ತಾನೆ, ಊಟ ಮಾಡಿದ್ಯಾ, ನೀನೀಗ ಸರಿಯಾಗಿ ತಿನ್ನಬೇಕು ಡಿಯರ್ ಅಂತ ಮೊಬೈಲ್‌ನಲ್ಲಿ ಮೆಸೇಜ್ ಬೇರೆ ಕಳಿಸೋದು, ಅದನ್ನೇ ಪ್ರೀತಿಯಿಂದ ಎದುರಿಗೆ ಹೇಳಕ್ಕೆ ಏನಂತೆ...' ಗೊಣಗುತ್ತಲೇ ಇದ್ದಳು. ಅವಳು ಹೋದ ನಂತರ ಇಡೀ ಮನೆ ಖಾಲಿ. ಈಗೀಗ ಮೂರ್ತಿ ತಾವೇ ಒಂದಿಷ್ಟು ಮನೆಗೆಲಸಗಳನ್ನು ಮಾಡುವುದನ್ನು ರೂಢಿ ಮಾಡಿಕೊಂಡಿದ್ದಾರೆ.
ಹೆಂಡತಿ ತೀರಿಕೊಂಡ ನಂತರ "ಒಬ್ನೇ ಅಲ್ಲಿದ್ದು ಏನು ಮಾಡ್ತೀಯ, ಇಲ್ಲೇ ಬಂದುಬಿಡು, ತೋಟ ಯಾರಿಗಾದ್ರೂ ನೋಡ್ಕೊಳೋಕೆ ಕೊಟ್ಟರಾಯ್ತು, ಇಲ್ಲಿ ಬಂದು ಯಾರಿರ್‍ತಾರೆ, ಆಮೇಲಾದ್ರೂ ಮಾರೋದೆ ತಾನೆ, ನಿಂಗೆ ಹುಷಾರು ಗಿಷಾರು ಇಲ್ಲದಿದ್ದರೆ ಯಾರು ನೋಡೋರು, ಅಡುಗೆ ಗಿಡುಗೆಗೆ ಏನು ಮಾಡ್ತೀಯ, ನೋಡಿದವರು ಏನಂತಾರೆ, ಮಗ ಇಷ್ಟು ದೊಡ್ಡ ಕೆಲಸದಲ್ಲಿದ್ರೂ ಅಪ್ಪನ್ನ ಕರ್‍ಕೊಂಡು ಹೋಗಿ ಇಟ್ಕೊಂಡಿಲ್ಲ ಅಂತ.." ರಘು ವರಾತ ಹಚ್ಚಿದಾಗ ಅಂದ್ರೆ ಯಾರಾದ್ರೂ ಏನಾದ್ರೂ ಅಂತಾರೆ ಅಂತ ನನ್ನ ಕರ್‍ಕೊಂಡು ಹೋಗ್ತೀಯ, ನಿಂಗೆ ಕಾಳಜಿ ಇದೆ ಅಂತೇನು ಅಲ್ಲ ತಾನೆ ಅಂತ ರೇಗಬೇಕೆನ್ನಿಸಿದ್ರೂ ಯಾಕೋ ರೇಗಲಿಕ್ಕೂ ಮನಸ್ಸಾಗದೇ ಸುಮ್ಮನಾಗಿದ್ದರು. ಅಲ್ಲಿಯ ಯಾವ ಸಾಮಾನೂ ಬೇಡ ಎಂದೆಲ್ಲ ಅವನು ತುಸು ಹಾರಾಡಿದ್ದರೂ ಸೀಮಾ ಒಂದಿಷ್ಟು ಹಳೆ ಪಾತ್ರೆ ಪರಡಿ ಕಟ್ಟಿಕೊಂಡಿದ್ದಳು. ಅವನೇ ಪ್ರೀತಿಸಿ ಮದುವೆಯಾದ ಹುಡುಗಿ, ತಾವಿಬ್ಬರೂ ವಿರೋಧಿಸಿ ಅರ್ಥವಿಲ್ಲ ಅನ್ನಿಸಿ ಅವನಿಷ್ಟಪಟ್ಟ ಹಾಗೆ ಸರಳ ಮದುವೆ, ಒಂದು ಗ್ರ್ಯಾಂಡ್ ರಿಸೆಪ್ಷನ್‌ಗೆ ಒಪ್ಪಿಕೊಂಡಿದ್ದರು. ಆಗೀಗ ಊರಿಗೆ ಬಂದು ಹೋಗುತ್ತಿದ್ದರೂ ಸೊಸೆಯೊಂದಿಗೆ ಹೇಳಿಕೊಳ್ಳುವಂತಹ ಆಪ್ತತೆ ಹುಟ್ಟಿರಲಿಲ್ಲ. ಹೆಂಡತಿ ಹಾರ್ಟ್‌ಅಟ್ಯಾಕ್ ಆಗಿ ತೀರಿಕೊಂಡ ನಂತರ ಕಳೆದ ವರ್ಷವಷ್ಟೆ ಇಲ್ಲಿಗೆ ಬಂದಿದ್ದು.
ಮೊದಲ ಬಾರಿಗೆ ಸೀಮಾನ ಬಗ್ಗೆ ತುಸು ಗೌರವ ಅನ್ನಿಸಿದ್ದು ಮೂರು ಬೆಡ್ ರೂಂನ ಆ ಮನೆಯಲ್ಲಿ ಅವಳು ಇವರಿಗಾಗಿ ಕೊಠಡಿಯೊಂದನ್ನು ಸಜ್ಜುಗೊಳಿಸಿ ಇಟ್ಟಿದ್ದ ರೀತಿಗೆ. ಮೊದಮೊದಲು ಅವರಿಬ್ಬರ ದೈನಂದಿನಕ್ಕೆ ಹೊಂದಿಕೊಳ್ಳುವುದೇ ಮೂರ್ತಿಯವರಿಗೆ ಪ್ರಾಯಾಸವಾಗಿತ್ತು. ರಾತ್ರಿ ಅವನು ಬರೋದು ಒಂಬತ್ತೂವರೆ ಹತ್ತಕ್ಕೆ. ಸೀಮಾ ರಾತ್ರಿ ಏಳೂವರೆ ಎಂಟಕ್ಕೆ. ಮೂರ್ತಿಯವರು ಬರುವ ಮುನ್ನ ಮನೆಯಲ್ಲಿ ರಾತ್ರಿ ಅಡುಗೆ ಮಾಡಲೇಬೇಕಾದ ಕಡ್ಡಾಯವಿರಲಿಲ್ಲ. ಬರುವಾಗಲೇ ಅವಳಾಗಲೀ, ಅವನಾಗಲೀ ಪ್ಯಾಕ್ ಮಾಡಿಕೊಂಡು ಬಂದರೂ ಆಯ್ತು, ನ್ಯೂಡಲ್ಸ್‌ಗೀಡಲ್ಸ್ ಅಂತ ಏನೋ ಇನ್‌ಸ್ಟಂಟ್ ಫುಡ್ ಮಾಡಿದ್ರೂ ಆಯ್ತು, ಎಲ್ಲೋ ಪಾರ್ಟಿಗೀರ್ಟಿ ಅಂತ ಹೋಗಿಬಂದರೂ ಆಯ್ತು, ಈಗ ಹಾಗಿರಲಿಲ್ಲ. ಬೆಳಿಗ್ಗೆ ಕೂಡ ಮೂರ್ತಿಯವರು ಇದಾರೆ ಅಂತ ಸೀಮಾ ಪ್ರತಿದಿನ ಅಡುಗೆ ಮಾಡಬೇಕಾದ ಅನಿವಾರ್ಯ. ಸೀಮಾ ಎದುರಿಗೆ ಹೇಳದಿದ್ದರೂ ಕಿರಿಕಿರಿ ಅನ್ನಿಸುತ್ತಿದೆ ಅವಳಿಗೆ ಎಂದರ್ಥವಾದ ಮೂರ್ತಿಯವರು ನಿಧಾನಕ್ಕೆ ಅವಳಿಗೆ ಬೆಳಿಗ್ಗೆ ಅಡುಗೆ ಕೆಲಸದಲ್ಲಿ ತರಕಾರಿ ಹೆಚ್ಚುವುದು, ರವೆ ಹುರಿಯುವುದು, ಕೆಲಸದವಳು ಬಂದಾಗ ಪಾತ್ರೆ, ಬಟ್ಟೆ ಅವಳಿಗೆ ಕೊಡುವುದು, ಅವಳಿಗೆ ಹೇಳಿ ಕೆಲಸ ಮಾಡಿಸುವುದು, ಹೀಗೆ ಅದೂ ಇದೂ ಚಿಕ್ಕ ಪುಟ್ಟ ಕೆಲಸದಲ್ಲಿ ನೆರವಾಗತೊಡಗಿದರು. ಮನೆಗೆ ಸಾಮಾನು, ತರಕಾರಿ ತಾವೇ ಹೋಗಿ ತರತೊಡಗಿದರು. ಸಂಜೆಯೂ ಅವಳು ಬರುವ ವೇಳೆಗೆ ತರಕಾರಿ ಹೆಚ್ಚಿ ಸಣ್ಣಪುಟ್ಟ ಅಡುಗೆ ಸಿದ್ಧತೆ ಮಾಡಿಡುತ್ತಿದ್ದರು.
ಮೂರ್ತಿಯವರು ಹಾಗೆ ಕೆಲಸದಲ್ಲಿ ತೊಡಗಿಕೊಳ್ಳಲು ಶುರು ಮಾಡಿದಾಗಿನಿಂದ ಸೀಮಾ ಮತ್ತು ಅವರ ಮಧ್ಯೆ ನವಿರಾದ ಆಪ್ತತೆ ಹುಟ್ಟಿತ್ತು. ಈಗೀಗ ರಘುಗಿಂತ ಅವಳೊಂದಿಗೇ ಏನಾದ್ರೂ ಹೇಳಿಕೊಳ್ಳುವುದು ಸಾಧ್ಯವಾಗುತ್ತಿದೆ. ಹೆಂಡತಿ ಮಾಡುತ್ತಿದ್ದ ಅಡುಗೆ, ಹಬ್ಬ ಹರಿದಿನಗಳೆಂದರೆ ಅವಳ ಸಂಭ್ರಮ. ತಮ್ಮ ತೋಟದ ಆಗಿನ ಕಾರುಬಾರು, ರಘುವಿನ ಹುಡುಗಾಟ, ಊರಿನವರ ತರಲೆಗಳು, ಹೀಗೇ ಒಂದಿಷ್ಟು ಹಳೆಯ ನೆನಪುಗಳು ಸೀಮಾನ 'ಹೌದಾ.. ಆಮೇಲೆ.. ಓ ಗಾಡ್, ಸೋ ಸ್ವೀಟ್' ಉದ್ಗಾರಗಳ ನಡುವೆ ಇಬ್ಬರ ಮಧ್ಯೆ ಹಬ್ಬಿ ನಿಲ್ಲುತ್ತವೆ. ಸೀಮಾನ ಮದುವೆಗೆ ಮೊದಲೇ ಅಪ್ಪ, ಅಮ್ಮ ಇಬ್ಬರೂ ತೀರಿಕೊಂಡಿದ್ದಂತೆ, ಇದ್ದೊಬ್ಬ ಅಣ್ಣನೂ ಕೆಲಸದ ಮೇಲೆ ಹೊರಗೆ ಇದ್ದದ್ದು, ಆಗೀಗ ಸೀಮಾನೂ ತನ್ನ ಅಪ್ಪ, ಅಮ್ಮನ ವಿಷಯ, ಅವರಿಬ್ಬರ ಪ್ರೀತಿ, ಜಗಳ ಹೇಳಿಕೊಂಡು ನಗುತ್ತಿದ್ದಳು.
ಎರಡು ಮೂರು ತಿಂಗಳ ಹಿಂದಿನ ಘಟನೆ ನೆನಪಾಯಿತು ಅವರಿಗೆ. ಆ ದಿನ ಮೂರ್ತಿಯವರಿಗೂ ಯಾಕೋ ಸಣ್ಣಗೆ ಜ್ವರ ಬಂದ ಹಾಗನ್ನಿಸಿ, ಸಂಜೆಯ ಎಂದಿನ ತಮ್ಮ ಕೆಲಸಗಳನ್ನು ಮಾಡಲು ಬೇಜಾರಾಗಿ ಸುಮ್ಮನೆ ಮಲಗಿದ್ದರು. ಸೀಮಾ ಬಂದ ನಂತರವೇ ಎದ್ದು ಅವಳೊಂದಿಗೆ ಕೆಲಸದಲ್ಲಿ ಕೈಗೂಡಿಸಿದ್ದರು. ಊಟ ಮೊದಲು ಶುರು ಮಾಡಿದ ರಘು ಬಾಯಿಗೆ ತುತ್ತಿಟ್ಟುಕೊಂಡಿದ್ದೇ "ಏನಿಷ್ಟು ಉಪ್ಪು ಹಾಕಿದ್ದೀಯ ಸೀಮಾ, ಒಂದೊಂದು ಸಲ ಏನಾಗುತ್ತೆ ನಿಂಗೆ" ಇಡೀ ದಿನ ಆಫೀಸ್‌ನಲ್ಲಿ ಏನೇನೋ ಕಿರಿಕಿರಿಯಿಂದ ನೆಮ್ಮದಿಗೆಟ್ಟಿದ್ದ ರಘು ಜೋರಾಗಿಯೇ ರೇಗಿದ. ಸೀಮಾ ಉತ್ತರಿಸುವ ಮುಂಚೆ ಮೂರ್ತಿಯವರೇ "ಹೋಗ್ಲಿ ಬಿಡೋ, ಒಂದಿನ ಚೂರು ಹೆಚ್ಚು ಕಡಿಮೆ ತಿಂದ್ರೆ ಏನಾಗುತ್ತೆ, ಅವಳು ಪಾಪ ಏನೋ ಹೊಟ್ಟೆನೋವು ಅಂತಿದ್ದ ಹಾಗಿತ್ತು" ಎಂದರು. ಸುಸ್ತಾಗಿದ್ದ ಸೀಮಾ ರಘು ಜತೆಗೆ ಜಗಳಕ್ಕೆ ಸ್ವರ ಕೂಡಿಸುವ ಚೈತನ್ಯವೂ ಇಲ್ಲದವಳಂತೆ ಅವನನ್ನೊಮ್ಮೆ ದಿಟ್ಟಿಸಿ ನೋಡಿದವಳೇ ಮಜ್ಜಿಗೆ ಕುಡಿದು ಹೋಗಿ ಮಲಗೇಬಿಟ್ಟಳು. ಅವರಿಗೂ ಕೊಂಚ ಉಪ್ಪು ಹೆಚ್ಚಿದೆ ಎನ್ನಿಸಿದರೂ ಮೊಸರು ಸೇರಿಸಿಕೊಂಡು ತಿಂದು ಎದ್ದರು.
"ಈಗ ಇಷ್ಟೆಲ್ಲ ಅರ್ಥ ಮಾಡ್ಕೋತೀಯಲ್ಲ.. ಆವಾಗ ಅಮ್ಮಂಗೆ ಎಷ್ಟು ಗೋಳು ಹೊಯ್ಕೊತ್ತಿದ್ದೆ ನೆನಪಿದ್ಯಾ... ಅಮ್ಮ ಮುಟ್ಟಾಗಿ ಆಚೆ ಇದ್ದಾಗ ಹೊಟ್ಟೆನೋವು ಅಂತಿದ್ರೂ ಅಂಗಳ, ಕಟ್ಟೆ ಸಾರಿಸಕ್ಕೆ ಹೇಳ್ತಿದ್ರಿ, ಕೊಟ್ಟಿಗೆ ಕೆಲಸ ಅಮ್ಮನೇ ಮಾಡ್ತಿದ್ಲು... ಎಷ್ಟು ಕೆಲಸ ಮಾಡ್ತಿದ್ಲು.. ಆವಾಗ ಚೂರಾದ್ರೂ ಸಹಾಯ ಮಾಡ್ತಿದ್ಯಾ ನೀನು" ಮೂರ್ತಿಯವರು ಕೈ ತೊಳೆಯಲು ಹೋಗುವಾಗ ರಘು ಜೋರಾಗಿಯೇ ಗೊಣಗಿದ. ಸೀಮಾನ ಪೀರಿಯಡ್ಸ್ ನೋವು ತನಗಲ್ಲದೆ ಅಪ್ಪನಿಗೂ ಗೊತ್ತಾಯಿತು ಎಂಬ ಅಸಹನೆಯೋ, ಅಪ್ಪ ಅರ್ಥ ಮಾಡಿಕೊಳ್ಳುವಂತೆ ಸೀಮಾ ವರ್ತಿಸಿದಳು ಎಂಬ ಬೇಜಾರೋ, ಅಥವಾ ತನ್ನ ಹೆಂಡತಿಯ ಇಂಥದೊಂದು ಖಾಸಗಿ ವಿಚಾರ ತನಗಿಂತ ಅಪ್ಪನಿಗೆ ಚೆನ್ನಾಗಿ ಅರ್ಥವಾದ ಕಿರಿಕಿರಿಯೋ ಒಟ್ಟಾರೆ ಇಂಥದೆಂದು ಗೊತ್ತಾಗದ ಅಥವಾ ಇದೆಲ್ಲ ಸೇರಿದ ಭಾವ ಅವನ ಧ್ವನಿಯಲ್ಲಿತ್ತು.
"ನಿನ್ನಮ್ಮನ ಬಗ್ಗೆ ನಾನು ಮೊದಲೆಲ್ಲ ಒರಟಾಗಿ ನಡ್ಕೊಳ್ತಿದ್ದೆ, ನಿಜ ಕಣೋ, ಆಗಿನ ಕಾಲ, ನಮ್ಮಗಳ ಮನೋಧರ್ಮ ಎಲ್ಲ ಹಾಗಿತ್ತು, ಆದ್ರೆ ನಾಕು ವರ್ಷದ ಹಿಂದೆ ಮೊದ್ಲು ಒಂದ್ಸಲ ಅವಳಿಗೆ ಬಿಪಿ ಹೆಚ್ಚಾಗಿ ಆಸ್ಪತ್ರೆಗೆ ಸೇರಿಸಿದ್ನಲ್ಲ, ಆವಾಗ ಮೊಟ್ಟ ಮೊದಲ ಸಲ ನಂಗರ್ಥ ಆಯ್ತು, ನನಗಿಂತ ಅವಳು ನನ್ನನ್ನ ತನ್ನ ಆತ್ಮಕ್ಕೆ ಅಂಟಿದಂತೆ ಹಚ್ಚಿಕೊಂಡಿದ್ದಾಳೆ ಅಂತ, ಯಾವ ಕ್ಷಣದಲ್ಲಿ ಆ ಭಾವ ಗ್ರಹಿಕೆಗೆ ಸಿಕ್ತೋ ಆಗಿಂದ ಅವಳನ್ನ ನನ್ನ ಪ್ರಾಣದ ಥರಾ ನೋಡ್ಕೋಬೇಕು ಅಂತ ವಿಪರೀತ ಕಾಳಜಿ ಹುಟ್ತು. ನಂಗೆ ಆ ತಿಳಿವಳಿಕೆ ಬಂದ ನಂತರ ನಮ್ಮ ಸಂಬಂಧದ ಸ್ವರೂಪನೇ ಬದಲಾಯ್ತು. ನಾನು ಆ ದಿನಗಳಲ್ಲಿ ಒರಟಾಗಿ ನಡ್ಕೊಂಡು ತಪ್ಪು ಮಾಡ್ದೆ ಅಂತ ಈಗ್ಲೂ ಪಶ್ಚಾತ್ತಾಪ ಅನ್ನಿಸುತ್ತೆ, ನಾನು ಮಾಡಿದ ತಪ್ಪನ್ನೇ ನೀನೂ ಮಾಡಬೇಕು ಅಂತೇನೂ ಇಲ್ಲವಲ್ಲ ರಘು..." ಇಷ್ಟು ಹೇಳುವ ಹೊತ್ತಿಗೆ ಗಂಟಲು ಕಟ್ಟಿ ಮಾತಾಡಲಾಗದೆ ರೂಮಿಗೆ ಬಂದು ಮಲಗಿಬಿಟ್ಟರು. ಊಟ ಮಾಡುತ್ತಿದ್ದ ರಘುವಿಗೂ ತಾನು ಹಾಗೆ ಹೇಳಬಾರದಿತ್ತೇನೋ ಎಂಬ ಭಾವನೆ ಆವರಿಸತೊಡಗಿ, ಅದೇ ಕೈಯಲ್ಲಿ ಅವರ ರೂಮಿನ ಬಾಗಿಲಲ್ಲೇ ನಿಂತು "ಸಾರಿ ಅಪ್ಪ.. ಯಾಕೋ ಕೆಲವು ಸಲ ಅಮ್ಮ ಅಷ್ಟೆಲ್ಲ ಕೆಲಸ ಮಾಡ್ತಾ ಇದ್ದದ್ದು ನೆನಪಾದ್ರೆ ಒಂಥರಾ ಸಂಕಟವಾಗುತ್ತೆ ಅಷ್ಟೇ" ಎಂದ. ಊಟ ಮುಗಿಸಿದವ ತಾನೇ ಎಲ್ಲ ಎತ್ತಿಟ್ಟು, ಮಲಗಲು ಹೋಗುವ ಮುನ್ನ ಮತ್ತೆ ಬಂದು ನಿದ್ದೆ ಬಂತಾ ಇವರಿಗೆ ಎಂದು ಮೃದುವಾಗಿ ವಿಚಾರಿಸಿಕೊಂಡಿದ್ದ.
ಮಧ್ಯಾಹ್ನ ತಟ್ಟೆಗೆ ಊಟಕ್ಕೆ ಹಾಕಿಕೊಳ್ಳುವ ಮುಂಚೆ ಸೀಮಾ ಏನಾದ್ರೂ ತಿಂದಳೋ ಇಲ್ಲವೋ ಎಂದು ನೆನಪಾಯಿತು. ಪಾಪ ಈಗ ಎರಡು ತಿಂಗಳೂ ಆಗಿಲ್ಲ, ಏನು ನೋಡಿದರೂ ವಾಕರಿಕೆ ತಲೆಸುತ್ತು ಅಂತ, ಫೋನ್ ಮಾಡಿ ವಿಚಾರಿಸಲೇ ಎಂದುಕೊಂಡರೂ ಮತ್ತೆ ಅವಳೇನಾದ್ರೂ ಕೆಲಸದ ಒತ್ತಡದಲ್ಲಿದ್ದರೆ ರೇಗ್ತಾಳೆ ಎನ್ನಿಸಿ ಸುಮ್ಮನಾದರು. ಸೇರಿದಷ್ಟು ಉಂಡು ಎಂದಿನಂತೆ ಕೊಂಚ ಅಡ್ಡಾದರಾಯ್ತು ಎಂದುಕೊಂಡು ಮಲಗಿದರು. 'ತನ್ನ ಸಿಟ್ಟೋ, ಅಸಹನೆಯೋ ಆ ಕ್ಷಣಕ್ಕೆ ಅದನ್ನು ಹೇಳಿ ಯಾವುದನ್ನೂ ಮನಸ್ಸೊಳಗೆ ಇಟ್ಟುಕೊಳ್ಳದೇ ಹಗುರಾಗುವ ಈ ಹುಡುಗಿ ಎಷ್ಟೆಲ್ಲ ಆಪ್ತತೆ ಹುಟ್ಟಿಸುತ್ತಿದ್ದಾಳೆ. ಇವತ್ತು ಅವಳೊಂದಿಗೆ ಒಂದಿಷ್ಟು ಮನಸ್ಸು ಬಿಚ್ಚಿ ಮಾತಾಡಿ, ಅವಳ ದುಗುಡವನ್ನೂ ಪೂರ್ಣ ಕೇಳಿಸಿಕೋಬೇಕು' ಯೋಚಿಸುತ್ತಲೇ ತುಸು ಕಣ್ಣು ಹತ್ತಿ ನಿದ್ದೆ ಬಂದಿದೆ.. ಫೋನ್ ಕರೆ. ಅದು ಫೋನ್ ಕರೆಯೋ, ಕಾಲಿಂಗ್‌ಬೆಲ್ ಕರೆಯೋ ಅರ್ಥವಾಗದೆ ಕಣ್ಣು ಬಿಟ್ಟವರಿಗೆ ಫೋನ್ ಎಂದು ಗ್ರಹಿಕೆಗೆ ಸಿಕ್ಕಿ, ಛೇ ಇದೆಂಥ ಮಧ್ಹಾಹ್ನದ ನಿದ್ದೆಯಪ್ಪ ಎಂದುಕೊಳ್ಳುತ್ತ ಫೋನ್ ತೆಗೆದುಕೊಂಡರೆ ಅತ್ತ ಕಡೆಯಿಂದ ಸೀಮಾಳ ಗಾಬರಿಯ ಧ್ವನಿ.
"ಮಾವ, ನಂಗೆ ಚೂರು ಬ್ಲೀಡಿಂಗ್ ಆಗಿರೋ ಹಾಗಿದೆ, ಈಗ ಲೂಗೆ ಹೋದಾಗ ಗೊತ್ತಾಯ್ತು... ರಘು ಮೊಬೈಲ್‌ಗೆ ಆನ್ಸರ್ ಮಾಡ್ತಿಲ್ಲ, ಮೀಟಿಂಗ್‌ನಲ್ಲಿರಬೇಕು ಪಾಪ, ನೀವು ಚೂರು ಬೇಗ ಇಲ್ಲಿಗೆ ಬರ್‍ತೀರ.. ಆಸ್ಪತ್ರೆಗೆ ಹೋಗಿ ಬರೋಣ... ನಂಗೆ ಏನು ಮಾಡಕ್ಕೂ ತೋಚ್ತಿಲ್ಲ ಮಾವಾ..." ಮೂರ್ತಿಯವರಿಗೆ ಅವಳು ಹೇಳಿದ್ದು ಮೊದಲಿಗೆ ಪೂರ್ಣವಾಗಿ ಗ್ರಹಿಕೆಗೆ ಸಿಗಲಿಲ್ಲ. ತಕ್ಷಣ ಅನ್ನಿಸಿದ್ದು ತಾನು ಈಗ ಅವಳ ಆಫೀಸಿನ ಹತ್ತಿರ ಹೋಗಬೇಕು ಎಂದಷ್ಟೇ. "ಸರಿ, ಅಲ್ಲೇ ಇರಮ್ಮ, ನಾನು ಬರ್‍ತೀನಿ, ಗಾಬರಿಯಾಗಬೇಡ" ಇಷ್ಟು ಹೇಳಿ ರಿಸೀವರ್ ಇಡುವಷ್ಟರಲ್ಲಿ ಯಾಕೋ ಸಣ್ಣ ನಡುಕ. ಬೇಡದ ಗರ್ಭ ಎಂದು ಈ ಹುಡುಗಿ ತಾನೇ ಏನಾದ್ರೂ ಮಾಡಿಕೊಂಡಿಲ್ಲ ತಾನೆ.. ಈಗೇನು ಹಾಳು ಮೂಳು ಟ್ಯಾಬ್ಲೆಟ್‌ಗಳು, ಏನೇನೋ ಔಷಧಿ ಎಲ್ಲ ಮೆಡಿಕಲ್ ಶಾಪ್‌ನಲ್ಲೂ ಸಿಗುತ್ತೆ... ಯೋಚಿಸುತ್ತಲೇ ಗಡಬಡೆಯಿಂದ ಸಿದ್ಧರಾಗಿ ಆಟೋ ಹಿಡಿದು ಅವಳ ಆಫೀಸಿನ ಬಳಿ ಹೊರಟರು. 'ರಘು ಸಿಗಲಿಲ್ಲ ಅಂತಲಾದ್ರೂ ಸರಿ, ಹೀಗೆ ತಟ್ಟನೆ ಮಾವನೊಂದಿಗೆ ಇದನ್ನು ಹಂಚಿಕೊಳ್ಳಬಹುದು, ಮಾವ ಆಲಿಸ್ತಾರೆ ಎಂಬ ಭಾವನೆ ಸೀಮಾನೊಳಗೆ ಚಿಗುರಿತಲ್ಲ... ಹೀಗೆ ಈ ದಡದಲ್ಲಿ ಮಾವ ಇರ್‍ತಾರೆ ಎಂಬ ಭಾವವನ್ನು ಸೀಮಾನಲ್ಲಿ ಯಾವಾಗ್ಲೂ ಉಳಿಸಪ್ಪ.. ದೇವ್ರೇ.. ಮತ್ತೇನೂ ಕೆಟ್ಟದು ನಡೀದಿರೋ ಹಾಗೆ ನೀನೇ ಕಾಪಾಡಪ್ಪ... ಅವಳೊಳಗಿನ ಚಿಗುರನ್ನು ನೀನೇ ಉಳಿಸಪ್ಪ' ಆಟೋದಲ್ಲಿ ಕುಳಿತಾಗ ಮೂರ್ತಿಯವರಲ್ಲಿ ಏನೆಲ್ಲ ಪ್ರಾರ್ಥನೆಯ ಸಾಲುಗಳು. ಅಲ್ಲಿ ಯಾರಿಗಾದ್ರೂ ಗೊತ್ತಾಗಿ ಮೆಲೊಡ್ರಾಮದ ದೃಶ್ಯ ಹುಟ್ಟಿಸೋದು ಬೇಡವೆಂದು ಸೀಮಾ ಆ ಗಾಬರಿಯಲ್ಲಿಯೂ ಹೊರಗಡೆ ತೋರಗೊಡದೆ ಒಂದು ನಸುನಗು ಅಂಟಿಸಿಕೊಂಡು ಆಫೀಸಿನ ಗೇಟ್ ಹೊರಗೆ ನಿಂತಿದ್ದಳು.
ಅಲ್ಲಿಂದ ಹತ್ತಿರದ ಪರಿಚಯದ ಗೈನಕಾಲಜಿಸ್ಟ್. ಪರೀಕ್ಷೆ ಮಾಡಿದ ಡಾಕ್ಟರ್ ನಂತರ ಇವರನ್ನೂ ಒಳಗೆ ಕರೆದರು. ಅಷ್ಟೆಲ್ಲ ಹೆದರುವ ಅಗತ್ಯವೇ ಇಲ್ಲವೆಂದು, ಒಂದೆರಡೇ ಹನಿ ಬ್ಲೀಡಿಂಗ್ ಆಗಿರೋದ್ರಿಂದ ಸರ್ವಿಕ್ಸ್ ಒಳಗೆ ಹೊಲಿಗೆ ಹಾಕಿ ಕಳಿಸುವೆ ಎಂದೆಲ್ಲ ಡಾಕ್ಟರ್ ಹೇಳುವಾಗ ಇದು ಬೇಡದ ಗರ್ಭ, ತೆಗೆಸುವ ಯೋಚನೆಯಿದೆ ಎಂದು ಸೀಮಾ ಹೇಳಲು ಪ್ರಯತ್ನಿಸಿದಳು. ಡಾಕ್ಟರ್‌ಗೆ ವಿಷಯ ಪೂರ್ಣ ಅರ್ಥವಾಗದೇ ಏನೂ ಹೆದರಿಕೆ ಬೇಡ, ಒಂದೆರಡು ಹನಿ ಬ್ಲೀಡಿಂಗ್ ಆದರೂ ಗರ್ಭ ಸಹಜವಾಗಿಯೇ ಬೆಳೆಯುತ್ತಿದೆ, ಏನೂ ಅಬ್‌ನಾರ್ಮಾಲಿಟೀಸ್ ಇಲ್ಲ, ಮಗು ಆರೋಗ್ಯವಾಗಿಯೇ ಹುಟ್ಟುತ್ತೆ, ಎಂದರು.
ಸೀಮಾಗೆ ಮತ್ತೆ ಏನು ಹೇಳಲೂ ಸಾಧ್ಯವಾಗದೇ ಮಾವನನ್ನು ನೋಡಿದಳು. "ಈಗಲೇ ಹಾಕಬೇಕ, ಅಥವಾ ನಾಳೆ ಬಂದರೆ ಆಗುತ್ತಾ" ಎಂದು ಮೂರ್ತಿಯವರೇ ಕೇಳಿದರು. "ಈಗಲೇ ಹಾಕೋದು ಒಳ್ಳೆಯದು, ಹತ್ತು ನಿಮಿಷ ಅಷ್ಟೇ" ಡಾಕ್ಟರ್‌ದು ಮತ್ತದೇ ಸಿಹಿನಗೆ.
"ಐದು ನಿಮಿಷ.. ಹೊರಗೆ ಕುಳಿತು ಯೋಚನೆ ಮಾಡಿ ಹೇಳ್ತೀವಿ" ಎಂದ ಮೂರ್ತಿಯವರು ಸೀಮಾಗೆ ಕಣ್ಣು ಸನ್ನೆ ಮಾಡಿದರು. ಇಬ್ಬರೂ ಹೊರಬಂದು ನರ್ಸಿಂಗ್ ಹೋಂನ ಲಾನ್‌ನಲ್ಲಿ ಹಾಕಿದ್ದ ಚಿಕ್ಕ ಕಲ್ಲು ಬೆಂಚಿನಲ್ಲಿ ಕೂತರು. ಇದು ತಮ್ಮ ಕಾಲವಲ್ಲ ಎನ್ನುವ ಭಾವನೆ ಮಾತ್ರ ಮೂರ್ತಿಯವರಲ್ಲಿ ಸದಾ ಜಾಗೃತವಾಗಿರುತ್ತಿತ್ತು. ಅವಳೇ ನಿರ್ಧರಿಸಲಿ, ಅವಳು ಒಮ್ಮೆ ತನ್ನ ನಿರ್ಧಾರ ಹೇಳಿದ ನಂತರ ಅದರ ಸರಿ, ತಪ್ಪು ತಿಳಿಸಿ ಹೇಳುವ ಎಂದುಕೊಂಡು ಸುಮ್ಮನಾದರು. ತಲೆ ತಗ್ಗಿಸಿ ಹತ್ತು ನಿಮಿಷ ಗಾಢ ಯೋಚನೆಯಲ್ಲಿ ಮಗ್ನಳಾದಳು. ಮತ್ತೆ ಎರಡು ಮೂರು ಸಲ ರಘು ಮೊಬೈಲ್‌ಗೆ ಪ್ರಯತ್ನಿಸಿದಳು. ಅವನು ಸೈಲನ್ಸ್ ಮೋಡ್‌ನಲ್ಲಿಟ್ಟಿದ್ದ ಕಾಣುತ್ತೆ. ಗೊಣಗಿಕೊಂಡು ಸುಮ್ಮನಾದಳು.
ಮತ್ತೈದು ನಿಮಿಷದ ನಂತರ "ಮಾವ... ವೈ ಡೋಂಟು ಯು ಕಮ್ ವಿತ್ ಮಿ ಟು ಇರ್ಮಾ.. ಅದೇನೂ ಭಾರೀ ದೂರ ಏನಲ್ಲವಲ್ಲ, ಅಲಹಾಬಾದ್ ತಾನೆ..." ಮೂರ್ತಿಯವರಿಗೆ ಅವಳೇನು ನಿರ್ಧರಿಸಿದ್ದಾಳೆ ಎಂದು ಅರ್ಥವಾಗದೇ ಅವಳನ್ನು ನೋಡುತ್ತಿರುವಂತೆ "ನೀವು ಬಂದು ನಂಜೊತೆ ಇದ್ರೆ ನಂಗೆ ಒಬ್ಬಳೇ ಅಂತ ಭಯವೂ ಇರಲ್ಲ ಮಾವ.. ಅವರು ಕೊಡೊ ಗೆಸ್ಟ್‌ಹೌಸ್‌ನಲ್ಲಿಯೇ ಇರಬಹುದು ಅಥವಾ ನಾಲ್ಕು ತಿಂಗಳಿಗೆ ನಾವು ಸಣ್ಣ ಮನೆ ತಗೊಂಡೂ ಇರಬಹುದು.. ಅಲ್ಲೇ ಚೆಕ್‌ಅಪ್ ಮಾಡಿಸಿಕೊಳ್ತ ಇದ್ರಾಯ್ತು. ಅಷ್ಟೊತ್ತಿಗೆ ನಂಗೆ ಆರೇಳು ತಿಂಗಳು ತುಂಬುತ್ತೆ... ಆಮೇಲೆ ವಾಪಾಸು ಬರೋಣ... ಅಲ್ವಾ " ಅವಳು ಯೋಚಿಸುತ್ತಲೇ ಹೇಳುತ್ತಿದ್ದರೆ ಮೂರ್ತಿಯವರಿಗೆ ಅವಳೇನು ನಿರ್ಧರಿಸಿದ್ದಾಳೆ ಎನ್ನುವುದು ಅರಿವಾಗುತ್ತ, ಇದೀಗ ಪುಟ್ಟ ಗುಲಾಬಿ ಕಾಲುಗಳ ಸ್ಪರ್ಶ ಕೈ ಬೆರಳಿಗೆ ಸಿಕ್ಕ ಅನುಭವ. ಇಂಥದೊಂದು ಸಿನಿಮೀಯ ಎನ್ನಬಹುದಾದ ಗಳಿಗೆಗೆ ಪಕ್ಕಾದ ಖುಷಿ ತಡೆಯದೇ ಅವಳ ಕೈ ಬಿಗಿಯಾಗಿ ಹಿಡಿದವರಿಗೆ ಬರಿದೇ ಹೂಂಗುಟ್ಟಲು ಸಾಧ್ಯವಾಯಿತು. ಇಬ್ಬರೂ ಎದ್ದು ಒಳ ಹೊರಟಾಗ ಇರಿ ಒಂದ್ನಿಮಿಷ, ರಘುಗೆ ಮೆಸೇಜ್ ಮಾಡ್ತೀನಿ ಎಂದು ಮೊಬೈಲ್ ಮೇಲೆ ಅರೆಕ್ಷಣ ನವಿರಾಗಿ ಟಕಾಯಿಸಿದಳು. ಮತ್ತೆ ಅರ್ಧ ಗಂಟೆ ಇವರನ್ನು ಕಾಯಿಸಿದ ಡಾಕ್ಟರ್ ಕಡೆಗೆ ಸೀಮಾಳನ್ನು ಒಳಗೆ ಕರೆದರು. ಅವಳು ಒಳ ಹೋದ ನಂತರ ಅವಳ ಪರ್ಸ್, ಬ್ಯಾಗನ್ನು ತಮ್ಮ ತೊಡೆ ಮೇಲಿಟ್ಟುಕೊಂಡು ಕುಳಿತ ಮೂರ್ತಿಯವರಲ್ಲಿ ಈಗಲೇ ಡೆಲಿವರಿ ವಾರ್ಡ್ ಹೊರಗೆ ಕಾಯುವ ಅಜ್ಜನ ಚಹರೆ ಇತ್ತು. ಒಂದು ಬಾರಿ ಬೀಪ್ ಎಂದ ಅವಳ ಮೊಬೈಲ್‌ನಲ್ಲಿ "ಸಾರಿ ಡಿಯರ್... ಥ್ಯಾಂಕ್ಸ್ ಅಪ್ಪಾ" ಎಂಬ ರಘುವಿನ ಸಂದೇಶವಿತ್ತು.
ಟಿಎಸ್‌ಐ
ಸುಮಂł |