|
|
ಪ್ರಸೂನ್ ಮಜುಂದಾರ್ |
ವಾಣಿಜ್ಯ ಸಂಪಾದಕ
ದ ಸಂಡೆ ಇಂಡಿಯನ್
|
ಕೋಳಿ ಸಾಕಣೆ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಸರ್ವೇ ಸಾಮಾನ್ಯವಾಗಿ ಕಂಡುಬರುವ ಒಂದು ಉದ್ಯಮ. ಅದರಲ್ಲೂ ಪಶ್ಚಿಮ ಬಂಗಾಳದ ಗ್ರಾಮೀಣ ಪ್ರದೇಶದಲ್ಲಿ ಕೋಳಿ ಸಾಕಣೆಯ ವ್ಯಾಪಕತೆ ಒಂದು ಹೆಜ್ಜೆ ಮುಂದೆಯೇ ಇದೆ ಎನ್ನಬಹುದು. ಇದರ ವ್ಯಾಪಕತೆಗೆ ಮೊದಲ ಕಾರಣ ಇದು ಭಾರೀ ಬಂಡವಾಳವನ್ನು ಅಪೇಕ್ಷಿಸುವ ಉದ್ಯಮವಲ್ಲ. ಕೋಳಿಗಳನ್ನು ಸಾಕುವುದೂ ಅಂಥ ಕಷ್ಟದ ಕೆಲಸವೂ ಅಲ್ಲ. ಬಂಗಾಳದ ಬಡ ರೈತಾಪಿ ವರ್ಗಕ್ಕೆ ಇದೊಂದು ಆದಾಯದ ಮಾರ್ಗ. ಅದರ ಜೊತೆಗೆ ಸಾಮಾಜಿಕ- ಆರ್ಥಿಕ ಸ್ಥಿತಿಯನ್ನೂ ಇದು ತಕ್ಕಮಟ್ಟಿಗೆ ಸಮತೋಲನದಲ್ಲಿಡುತ್ತದೆ. ಅದೇ ಕಾರಣಕ್ಕೇ ರಾಜ್ಯ ಸರ್ಕಾರವೂ ಆಗಾಗ ಕೋಳಿ ಸಾಕಣೆಗೆ ಪೂರಕವಾಗುವ ಯೋಜನೆಗಳನ್ನು ತಂದು ಬಡ ಗ್ರಾಮೀಣ ರೈತರನ್ನು ಪ್ರೋತ್ಸಾಹಿಸುತ್ತಿದೆ. ಎರಡನೇ ಮತ್ತು ಅತೀ ಪ್ರಮುಖವಾದ ಇನ್ನೊಂದು ಕಾರಣ ಎಂದರೆ ಕೋಳಿ ಬಂಗಾಳಿಗಳ ಸರ್ವೇ ಸಾಮಾನ್ಯ ಆಹಾರ. ಬಂಗಾಳಿಗಳು ತಮ್ಮ ಕಟ್ಟಾ ಮಾಂಸಾಹಾರಿ ಊಟಕ್ಕೇ ಪ್ರಸಿದ್ಧರು! ಅದೇ ಕಾರಣಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಕೋಳಿ ಸಾಕಣೆ ಸಮರ್ಥನೀಯ ಮತ್ತು ಆರ್ಥಿಕ ಸುಸ್ಥಿರತೆ ಒದಗಿಸುವ ಆದಾಯ ಮಾರ್ಗವಾಗಿ ಬೆಳೆದು ನಿಂತಿದೆ.
ಆದರೆ ಪ್ರಳಯಾಂತಕನಂತೆ ಅಪ್ಪಳಿಸಿದ ಕೋಳಿಜ್ವರ ರಾಜ್ಯದಾದ್ಯಂತ ಆರೋಗ್ಯದ ಎಚ್ಚರಿಕೆಯ ಗಂಟೆಯನ್ನು ಬಾರಿಸಿದ್ದೇ ಅಲ್ಲದೆ, ಬಂಗಾಳದ ಗ್ರಾಮೀಣ ಅರ್ಥವ್ಯವಸ್ಥೆಯನ್ನೂ ಅಲುಗಾಡಿಸಿಬಿಟ್ಟಿತು. ಪ್ರಸ್ತುತ ಕೋಳಿ ಜ್ವರದಿಂದ ಕುಕ್ಕುಟ ಉದ್ಯಮಕ್ಕೆ ಭಾರಿ ನಷ್ಟವಾಗಿದೆ. ಇತರ ರಾಜ್ಯಗಳೆಲ್ಲಾ ಬಂಗಾಳದ ಕೋಳಿ ಮತ್ತು ಮೊಟ್ಟೆಗಳ ಖರೀದಿಯನ್ನಷ್ಟೇ ಅಲ್ಲ, ತಮ್ಮ ವ್ಯಾಪ್ತಿಯ ಭೂಭಾಗದ ಮೂಲಕ ಸಾಗಣೆಯಾಗುವುದನ್ನೂ ನಿಷೇಧಿಸಿಬಿಟ್ಟಿವೆ. ರಾಜಧಾನಿ ಕೋಲ್ಕತ್ತಾಕ್ಕಂತೂ ಎಂತಹ ಕಾವಲು ಒದಗಿಸಲಾಗಿದೆ ಎಂದರೆ ಹಕ್ಕಿಜ್ವರ ಪೀಡಿತ ಜಿಲ್ಲೆಗಳಿಂದ ಯಾವುದೇ ಒಂದು ಕೋಳಿಪಿಳ್ಳೆ ಕೂಡಾ ಮಹಾನಗರಿಯನ್ನು ಪ್ರವೇಶಿಸಲು ಸಾಧ್ಯವಿಲ್ಲ!
ಹಕ್ಕಿಜ್ವರದಿಂದ ಕಂಗೆಟ್ಟ ಪಶ್ಚಿಮ ಬಂಗಾಳದ ಜಿಲ್ಲೆಗಳಲ್ಲಿ (ಬಿರ್ಭಂ, ದಕ್ಷಿಣ ದಿನಾಜ್‌ಪುರ್, ಮುರ್ಶಿದಾಬಾದ್, ನಾದಿಯಾ, ಬರ್ದವನ್, ಬಂಕುರ, ಹೂಗ್ಲಿ, ಮಾಲ್ಡಾ, ಕೂಚ್ ಬೆಹಾರ್, ಪುರುಲಿಯಾ, ಹೌರಾಹ್, ಸೌತ್ ೨೪ ಪರಗಣಗಳು ಮತ್ತು ಪಶ್ಚಿಮ ಮಿಡ್ನಾಪುರ್) ಬಹುತೇಕರೂ ಕಡುಬಡತನದ ಜೀವನ ಸಾಗಿಸುತ್ತಿದ್ದಾರೆ. ಕೋಳಿಜ್ವರದಿಂದಾಗಿ ಸುಮಾರು ಐದು ಲಕ್ಷ ರೈತಾಪಿ ಕುಟುಂಬ ಆತಂಕಕ್ಕೀಡಾಗಿದೆ. ಈ ಕುಟುಂಬಗಳಿಗೆ ಒಪ್ಪೊತ್ತಿನ ಊಟಕ್ಕೂ ಕೋಳಿ ಸಾಕಣೆಯೇ ಆಧಾರ. ಅಂಥದ್ದರಲ್ಲಿ ಇಲ್ಲಿನ ರೈತರು ಕಾಯಿಲೆ ಕೋಳಿಗಳ ನಾಶಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಅನ್ನುವುದರಲ್ಲಿ ಅಂಥ ವಿಶೇಷತೆಯೇನೂ ಇಲ್ಲ. ಅವರ ಈ ಸಾಂಘಿಕ ವಿರೋಧಕ್ಕೆ ಮತ್ತೊಂದು ಕಾರಣವೂ ಇದೆ; ಜ್ವರ ಬಾಧಿತ ಕೋಳಿಗಳನ್ನು ನಾಶಪಡಿಸಿದ ಬಳಿಕ ಸರ್ಕಾರ ನೀಡುವ ಪರಿಹಾರ ಧನ (ಒಂದು ಕುಟುಂಬ ಕ್ಕೆ ರೂ. 500, ಜೊತೆಗೆ ಒಂದು ನಾಟಿ ಕೋಳಿಗೆ ರೂ. 40, ಬ್ರಾಯ್ಲರ್ ಕೋಳಿಗೆ ರೂ. 30 ಮತ್ತು ಕೋಳಿ ಮರಿಯೊಂದಕ್ಕೆ ರೂ. 10) ಯಾವುದೇ ಮೂಲೆಗೂ ಸಾಲುವುದಿಲ್ಲ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಅವರು ತಕ್ಷಣ ಐವತ್ತು ಕೋಟಿ ರೂ. ನೆರವು ನೀಡುವಂತೆ ಕೇಂದ್ರವನ್ನು ಕೋರಿದ್ದು ಕೃಷಿ ಸಚಿವ ಶರದ್ ಪವಾರ್ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯಸರ್ಕಾರ ಹಾಗೂ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ತನ್ನಿಂದಾದ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಈ ಪರಿಸ್ಥಿತಿಯ ಭೀಕರ ಪರಿಣಾಮ ತಟ್ಟಿದ್ದು ಆರೋಗ್ಯ ವಲಯದ ಮೇಲೆ ಮಾತ್ರವಲ್ಲ ರೈತರ ಸಾಮಾಜಿಕ- ಆರ್ಥಿಕ ಬದುಕಿನ ಮೇಲೂ ಮಾಸಲಾರದ ಬರೆ ಎಳೆದಿದೆ. ಈ ಕೋಳಿಗಳ ಮೇಲೆ ವಿಮೆ ಇದ್ದಿದ್ದರೆ ಪರಿಸ್ಥಿತಿಯೇ ಬದಲಾಗುತ್ತಿತ್ತು. ವಿಮೆಯಿಂದ ದೊರಕುವ ಪರಿಹಾರ ಧನ, ಕೇಂದ್ರ ಮತ್ತು ರಾಜ್ಯ ಸರ್ಕಾರ ಇಲ್ಲಿಯವರೆಗೆ ಮಾಡಿದ ವೆಚ್ಚ (ಪರಿಹಾರ ಕಾರ್ಯಕ್ಕಾಗಿ ಖರ್ಚಾದ ಹಣ) ಎಲ್ಲವೂ ಸೇರಿ ನಷ್ಟ ಅನುಭವಿಸಿದ ಕುಟುಂಬಗಳಿಗೆ ಅಲ್ಪವಾದರೂ ಸಮಾಧಾನ ನೀಡುತ್ತಿತ್ತು.
ಆದರೆ ಇಲ್ಲಿ ವಿಮೆ ಇರಲಿಲ್ಲ. ಕೋಳಿ ಸಾಕಣೆಯನ್ನೇ ನಂಬಿದ್ದ ಕುಟುಂಬಗಳ ಅವಸ್ಥೆಯೂ ಕಾಯಿಲೆ ಹಿಡಿದು ಬಿದ್ದ ಕೋಳಿಗಳಂತೆಯೇ ಆಯಿತು. ಇಂಥ ಸಂದರ್ಭದಲ್ಲಿ ಒಂದೇ ಒಂದು ಉಪಾಯದಿಂದ ಮಾತ್ರ ನಷ್ಟದಲ್ಲಿರುವ ಬಡ ರೈತರನ್ನು ಮೇಲಕ್ಕೆತ್ತಲು ಸಾಧ್ಯ. ತಮ್ಮ ಮಾಂಸಾಹಾರಪ್ರಿಯತೆಯಿಂದಲೇ ಖ್ಯಾತರಾದ ಬಂಗಾಳಿಗಳು (ಕೋಳಿ ಜ್ವರದ ನಂತರ ಒಂದು ಕೆ.ಜಿ. ಕೋಳಿಯ ಬೆಲೆ 30 ರೂಪಾಯಿ ಮತ್ತು ಒಂದು ಡಜನ್ ಮೊಟ್ಟೆಯ ಬೆಲೆ 10 ರೂಪಾಯಿಗೆ ಇಳಿದಿದ್ದು ಮಾಂಸಾಹಾರಿ ಬಂಗಾಳಿಗಳ ಮುಖದಲ್ಲಿ ಕಿರುನಗೆ ಮೂಡಿಸಿದೆ ಎಂಬ ಸುದ್ದಿಯೂ ಹರಡಿತ್ತು!) ಕೋಳಿ ಜ್ವರದ ಅಬ್ಬರ ತಗ್ಗಿದ ಮೇಲೆ ಹೆಚ್ಚು ಹೆಚ್ಚು ಕೋಳಿ ಖರೀದಿಸಿ ಕುಸಿಯುತ್ತಿರುವ ರೈತರ ಆದಾಯಕ್ಕೆ ಊರುಗೋಲಾಗಬಹುದು.
ಐಐಪಿಎಂ
'ಥಿಂಕ್ ಟ್ಯಾಂಕ್' |