ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಪ್ರತಿಧ್ವನಿ
ಓದುಗರ ಪತ್ರ
 
ದುಬಾರಿ ಕಾರುಗಳಿಗೆ 'ಟಾಟಾ'

ಭಾರತೀಯ ನಿರ್ಮಿತ ಅಲ್ಪ ವೆಚ್ಚದ ನ್ಯಾನೊ ಕಾರು ಕುರಿತ 'ಇದು ನ್ಯಾನೊ ಪರಿಣಾಮ!' (ಅಲಂ ಶ್ರೀನಿವಾಸ್) ಲೇಖನ ಚೆನ್ನಾಗಿತ್ತು. ನಾಲ್ಕು ವರ್ಷದ ಹಿಂದೆ 'ಟಾಟಾ' ಸಮೂಹದ ಅಧ್ಯಕ್ಷ ರತನ್ ಟಾಟಾ ಒಂದು ಲಕ್ಷ ರೂ.ಗೆ ಕಾರೊಂದನ್ನು ನಿರ್ಮಿಸುವುದಾಗಿ ಹೇಳಿದಾಗ ಯಾರಿಂದಲೂ ಅಷ್ಟೇನೂ ಉತ್ಸಾಹದ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಆದರೆ ಜನವರಿ 10ರಂದು ಅವರು ಕನಸಿನ 'ನ್ಯಾನೊ' ಕಾರನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ಆಶ್ವಾಸನೆಯನ್ನು ನೆರವೇರಿಸಿದ್ದಾರೆ. ಮೊದಲ ಬಾರಿಗೆ 'ಇಂಡಿಕಾ' ಬಿಡುಗಡೆಯಾದಾಗ ಅದರಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಈಗ ವಿಶ್ವದ ಅತೀ ಅಗ್ಗದ ಕಾರು ಎಂಬ ಹೆಗ್ಗಳಿಕೆ ಪಡೆದಿರುವ 'ನ್ಯಾನೊ' ಇಂಥ ತಾಂತ್ರಿಕ ದೋಷಗಳಿಂದ ಮುಕ್ತವಾದಲ್ಲಿ ಎಲ್ಲರ ಮನ ಗೆಲ್ಲುವಲ್ಲಿ ಎರಡು ಮಾತಿಲ್ಲ. ಸಿಂಗೂರಿನಲ್ಲಿ ದೌರ್ಜನ್ಯಕ್ಕೊಳಗಾದವರಿಗೆ ಈ ಕಾರು ನೀಡುವುದಾಗಿ ಘೋಷಿಸಿರುವ 'ಬುದ್ಧ'ದೇವ್ ಅವರಿಗೆ 'ಜ್ಞಾನೋದಯ'ವಾಗಲು ಇದು ಸುಸಂದರ್ಭ. ಒಟ್ಟಿನಲ್ಲಿ ಇದು ದುಬಾರಿ ಕಾರುಗಳಿಗೆ 'ಟಾಟಾ' ಹೇಳುವ ಕಾಲ. ಎಲ್ಲಾ ಅಂದುಕೊಂಡಂತೆಯೇ ನಡೆದರೆ ಭಾರತ ಕಾರುಗಳ ಸಾಮ್ರಾಜ್ಯವಾಗುವುದರಲ್ಲಿ ಸಂಶಯವಿಲ್ಲ. ಶ್ರೀಸಾಮಾನ್ಯನ ಕನಸು ನನಸಾಗಿಸಿದ ರತನ್‌ಜೀಗೆ ಅಭಿನಂದನೆಗಳು.

ಇರ್ಷಾದ್ ಎಂ.
ವೇಣೂರು

ಗೌರವಯುತವಾಗಿ ಚಿತ್ರಿಸಿ

ಸ್ತ್ರೀ ಸಮಾಜದ ಪರವಾಗಿರುವ ಟಿಎಸ್‌ಐಗೆ ನಾನು ಮೊದಲು ಧನ್ಯವಾದ ಅರ್ಪಿಸುತ್ತೇನೆ. 'ದುಶ್ಶಾಸನರ ನಡುವೆ ಅಡಗಲು ಸ್ಥಳವೆಲ್ಲಿ?' ಲೇಖನದಲ್ಲಿ ಅರಿಂದಮ್ ಚೌಧುರಿ ಅವರು ಹೇಳಿರುವಂತೆ ಮಹಿಳೆಯರ ಮೇಲಾಗುತ್ತಿರುವ ಅಮಾನವೀಯ ಕೃತ್ಯಗಳಿಗೆ ಸಮಾಜದ ಜನರಲ್ಲಿ ಬೇರೂರಿರುವ ಮನಸ್ಥಿತಿಯೇ ಕಾರಣ. ಹೊಸ ವರ್ಷದ ಸಂದರ್ಭದಲ್ಲಿ ಜುಹುವಿನಲ್ಲಿ ನಡೆದ ಘಟನೆ ದೇಶದ ವರ್ಚಸ್ಸನ್ನು ಕುಂದಿಸಿದ್ದು, ಭಾರತ ಮಹಿಳೆಯರಿಗೆ ರಕ್ಷಣಾ ತಾಣ ಅಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಆದ್ದರಿಂದ ಅಧಿಕಾರಿಗಳು ಮತ್ತು ಮುಖ್ಯವಾಗಿ ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಮಹಿಳೆಯರ ಮೇಲಿನ ಶೋಷಣೆಗಳ ಹೊಣೆಗಾರರನ್ನಾಗಿಸಬೇಕು. ಸಮಾಜ ರಕ್ಷಣೆಯ ಜವಾಬ್ದಾರಿ ಹೊತ್ತ ಮಾಧ್ಯಮಗಳೂ ಮಹಿಳೆಯರನ್ನು ಗೌರವಯುತವಾಗಿ ಚಿತ್ರಿಸಬೇಕು. ಆ ಮೂಲಕ ಮಾತ್ರ ಮಹಿಳೆಯರಿಗೆ ಸಮಾಜದಲ್ಲಿ ಗೌರವದ ಸ್ಥಾನಮಾನ ದೊರಕಲು ಸಾಧ್ಯ.

ಪಿ. ಮರಿಯಮ್ಮ
ಕೇರಳ

ಸಂಸದರು ಎಲ್ಲಿ?

ರೈಲ್ವೆ ಇಲಾಖೆಯ ಅನ್ಯಾಯ ಕುರಿತ 'ಅನ್ಯಾಯದ ಹಳಿಯ ಮೇಲೆ' (ಶಶಿ ಸಂಪಳ್ಳಿ) ಲೇಖನ ಓದಿದೆ. ನೈರುತ್ಯ ರೈಲ್ವೆ ಇಲಾಖೆಯಲ್ಲಿ ಬಿಹಾರಿ ಲಾಬಿ ಕಣ್ಣ ಮುಂದೆಯೇ ನಡೆಯುತ್ತಿದ್ದರೂ, ನಮ್ಮ 40 ಮಂದಿ ಸಚಿವರು ತುಟಿಪಿಟಿಕ್ ಎನ್ನದೆ ಕುಳಿತಿರುವುದು ಅಚ್ಚರಿಯೇ ಸರಿ. ತಮ್ಮ ಸ್ವಾರ್ಥ ಸಾಧನೆಗಾಗಿ ಸಂಸತ್ತಿನಲ್ಲಿ ಬಡಬಡಿಸುವ ಸಂಸದರು ರೈಲ್ವೆ ವಿಷಯ ಬಂದಾಗ ಮಾತ್ರ ಬಾಲ ಮುದುರಿ ತೆಪ್ಪಗೆ ಕುಳಿತಿದ್ದರು. ಕನ್ನಡಪರ ಸಂಘಟನೆಗಳು ಈ ಬಗ್ಗೆ ಗಮನ ಸೆಳೆದ ನಂತರ ಕಾಣೆಯಾದ ರಾಜಕಾರಣಿಗಳು ಒಬ್ಬೊಬ್ಬರಾಗಿಯೇ 'ನಾನಿದ್ದೇನೆ' ಎಂದು ಬೆಂಬಲ ಸೂಚಿಸಿದ್ದು ನಿಜಕ್ಕೂ ನಾಚಿಕೆಗೇಡಿನ ವಿಷಯ. ರೈಲ್ವೆ, ಭಾಷೆ, ನೀರು ಎಲ್ಲದರಲ್ಲೂ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಆದರೆ ಕರ್ನಾಟಕದಿಂದ ಸಂಸತ್ತಿಗೆ ಆಯ್ಕೆಯಾಗಿರುವ ಮಹನೀಯರಿಗೆ ಈ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಅದೇ ಕಾರಣದಿಂದ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಎನ್ನುವುದು ಇಂದಿಗೂ ಮರೀಚಿಕೆಯಾಗಿಯೇ ಉಳಿದಿದೆ. ನಾವು ಕನ್ನಡ ಭಾಷೆ, ಶಾಸ್ತ್ರೀಯ ಸ್ಥಾನಮಾನದ ಕುರಿತು ಮಾತೆತ್ತಿದರೆ ಅದೇ ತಪ್ಪಾಗುತ್ತದೆ. ಕನ್ನಡ ಬಾಷೆ - ಕನ್ನಡ ನಾಡು ಇಲ್ಲಿನ ಜನತೆಗೆ ಏನೇ ಅನ್ಯಾಯವಾದರೂ ಎಲ್ಲರೂ ಒಗ್ಗಟ್ಟಿನಿಂದ ವಿರೋಧಿಸಬೇಕು. ಇಲ್ಲವಾದಲ್ಲಿ ಕರ್ನಾಟಕ ಅನ್ಯ ರಾಜ್ಯಗಳ ಕಪಿ ಮುಷ್ಟಿಯಲ್ಲಿ ನಲುಗುವ ದಿನ ದೂರವಿಲ್ಲ.

ಸವಿತಾ ಶಿರಂಕಲ್ಲು
 ಕನ್ಯಾನ

ಅನ್ಯಾಯದವಿರುದ್ಧಧ್ವನಿ

'ಅನ್ಯಾಯದ ಹಳಿ ಮೇಲೆ...' ಲೇಖನ ಪ್ರಸ್ತುತ ಕನ್ನಡಿಗರ ಮೇಲಾಗುತ್ತಿರುವ ಅನ್ಯಾಯ ಹಾಗೂ ತಾರತಮ್ಯವನ್ನು ಅರ್ಥಪೂರ್ಣವಾಗಿ ವಿವರಿಸಿದೆ. ಹಾಗೆ ಸೂಕ್ಷ್ಮವಾಗಿ ಗಮನಿಸಿದರೆ ಕೇವಲ ರೈಲ್ವೆಯಲ್ಲಿ ಮಾತ್ರ ಬಿಹಾರಿ ಲಾಬಿ ನಡೆದು ಕನ್ನಡಿಗರಿಗೆ ಅನ್ಯಾಯವಾಗಿದೆ ಎಂದಲ್ಲ. ಭಾಷೆ, ನೀರು ಎಲ್ಲದರಲ್ಲೂ ಕನ್ನಡಿಗರಿಗೆ ಅನ್ಯಾಯವಾಗಿದೆ. ರೈಲ್ವೆ ಹುದ್ದೆ ನೇಮಕಾತಿಯಲ್ಲಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಲಾಬಿ ನಡೆಸಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅನುದಾನಗಳ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿರುವುದು ಇಂದು- ನಿನ್ನೆಯ ಮಾತಲ್ಲ. ಇದಕ್ಕೆಲ್ಲ ಕಾರಣ ಕನ್ನಡಿಗರ ತಾಳ್ಮೆ ಎಂದರೆ ತಪ್ಪಾಗದು. ಆದರೆ ಇದನ್ನೇ ಹೇಡಿತನ ಅಂದುಕೊಳ್ಳುವುದಕ್ಕಿಂತ ಮುಂಚೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ. ಯಾವುದೇ ವಿಚಾರದಲ್ಲಿ ಕನ್ನಡಿಗರಿಗೆ ಅನ್ಯಾಯವಾದಾಗ ಪ್ರತಿಭಟಿಸುವುದು ಕೇವಲ ಕನ್ನಡಪರ ಸಂಘಟನೆಗಳ ಕೆಲಸವಲ್ಲ, ಸಮಸ್ತ ಕನ್ನಡಿಗರೂ ಒಕ್ಕೊರಲಿನಿಂದ ಪ್ರತಿಭಟಿಸಬೇಕು. ಹೀಗಿದ್ದರೆ ಮಾತ್ರ ಕನ್ನಡಿಗರಿಗಾಗುವ ಅನ್ಯಾಯ ತಡೆಯಲು ಸಾಧ್ಯ.

ಆನಂದ ಜೋಯಿಸ ಶಿವಮೊಗ್ಗ

ಇದ್ದೇನು ಪ್ರಯೋಜನ?

ರೈಲ್ವೆ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಕುರಿತು ಬೆಳಕು ಚೆಲ್ಲಿದ 'ಅನ್ಯಾಯದ ಹಳಿಯ ಮೇಲೆ' ಮುಖಪುಟ ಲೇಖನ ಸಕಾಲಿಕ. ಕನ್ನಡಿಗರಿಗಾಗುತ್ತಿರುವ ಅನ್ಯಾಯದ ವಿರುದ್ಧ ಕನ್ನಡಿಗರೆಲ್ಲರೂ ಪ್ರತಿಭಟಿಸಬೇಕು. ಈ ಲೇಖನದಲ್ಲಿ ರಾಜ್ಯದ 40 ಸಂಸದರ ವಿಳಾಸ ನೀಡಿದ್ದು ಕಂಡು ನಿಜಕ್ಕೂ ಕರ್ನಾಟಕ ರಾಜ್ಯದಲ್ಲಿ ಇಷ್ಟು ಮಂದಿ ಸಂಸದರು ಇದ್ದಾರೆಯೇ? ಇದ್ದರೂ ಅವರು ಏನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆ ಜನ ಸಾಮಾನ್ಯನಲ್ಲಿಯೂ ಮೂಡಬಹುದು. ನಾವೇ ಆರಿಸಿ ಕಳುಹಿಸಿರುವ ನಮ್ಮ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಲೇ ರೈಲ್ವೆ ಇಲಾಖೆಯಲ್ಲಿ 'ಬಿಹಾರಿ ಲಾಬಿ' ಮುಂದುವರೆದಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಇಷ್ಟೆಲ್ಲಾ ಆದ ಮೇಲೂ ತೆಪ್ಪಗಿರುವ ಇಂಥ ನಾಯಕರು ಇದ್ದೇನು ಪ್ರಯೋಜನ?

ಎಂ. ರಾಮಚಂದ್ರ ಭಟ್
ಉತ್ತರಕನ್ನಡ

ಮುಜಗರದ ಸಂಗತಿ

'ಬಜೆಟ್‌ನಲ್ಲಿ ಕೇಳಿಸಿದ್ದು ಬರೀ ಸಿಳ್ಳೆ' (ಬಿ.ಎಸ್. ನಾರಾಯಣಸ್ವಾಮಿ) ಲೇಖನಕ್ಕೆ ಈ ಪ್ರತಿಕ್ರಿಯೆ. ಲಾಲೂ ಬಿಹಾರಕ್ಕೆ ಕೊಟ್ಟಿದ್ದೆಷ್ಟು? ಕರ್ನಾಟಕಕ್ಕೆ ಬಿಟ್ಟಿದ್ದೆಷ್ಟು? ಲೇಖಕರ ಮಾರ್ಮಿಕ ಪ್ರಶ್ನೆ ಇಡೀ ಲೇಖನದ ಸಾರವನ್ನು ಒತ್ತಿ ಹೇಳುತ್ತಿದೆ. ಸಚಿವ ಆರ್. ವೇಲು ಸಂದರ್ಶನ ಸಕಾಲಿಕ. ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಕಣ್ಣೆದುರೇ ಅನ್ಯಾಯವಾಗುತ್ತಿದ್ದರೂ 'ರೈಲ್ವೆ ಇಲಾಖೆ ಪಕ್ಷಪಾತ ಮಾಡುತ್ತಿಲ್ಲ' ಎನ್ನುವ ಸಚಿವ ಆರ್. ವೇಲು ಅವರ ಮಾತನ್ನು ನಂಬುವಷ್ಟು ದಡ್ಡರಲ್ಲ ಕನ್ನಡಿಗರು. ಇಷ್ಟೆಲ್ಲಾ ಅನ್ಯಾಯವಾಗುತ್ತಿದ್ದರೂ ಕರ್ನಾಟಕದ 40 ಸಂಸದರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿರುವುದು ಮುಜಗರದ ಸಂಗತಿ.

ರಮಾ ಕೊಡೇರಿ
ಕುಂದಾಪುರ

ಬಹುಮಾನಿತ ಪತ್ರಗಳು

ವಸ್ತುನಿಷ್ಠ ವಿಶ್ಲೇಷಣೆ

ಜನವರಿ 27ರ 'ದ ಸಂಡೆ ಇಂಡಿಯನ್' ಪತ್ರಿಕೆಯಲ್ಲಿ ಪ್ರಕಟವಾದ 'ದುಶ್ಶಾಸನರ ನಡುವೆ ಅಡಗಲು ಸ್ಥಳವೆಲ್ಲಿ?' ಲೇಖನ ಸಮಾಜದ ಮೇಲೆ ಪತ್ರಿಕೆಗೆ ಇರುವ ಕಾಳಜಿ ಹಾಗೂ ಬದ್ಧತೆಯನ್ನು ಎತ್ತಿ ಹಿಡಿದಿದೆ. ಯುವತಿಯರನ್ನು ಚುಡಾಯಿಸುವುದು, ಅತ್ಯಾಚಾರ, ಲೈಂಗಿಕ ದೌರ್ಜನ್ಯದಂಥ ಪ್ರಕರಣಗಳು ಸಮಾಜದಲ್ಲಿ ದಿನದಿಂದ ದಿನಕ್ಕೆ ಏರುತ್ತಿದ್ದು, ಜನರು ತಪ್ಪು ದಾರಿ ತುಳಿಯುತ್ತಿರುವ ಬಗ್ಗೆ ನಾವು ಮರು ಚಿಂತನೆ ನಡೆಸಬೇಕಿದೆ. ಇತರ ಎಲ್ಲಾ ವಾರ ಪತ್ರಿಕೆಗಳು ಡಿಸೆಂಬರ್ 31ರ ರಾತ್ರಿಯಂದು ಮುಂಬೈಯಲ್ಲಿ ನಡೆದ ದುರಂತದ ಬಗ್ಗೆ ವರದಿ ಮಾಡಿದ್ದು, ಬಿಟ್ಟರೆ ವಸ್ತುನಿಷ್ಠ ವಿಶ್ಲೇಷಣೆ ಎಲ್ಲೂ ಕಂಡು ಬಂದಿರಲಿಲ್ಲ. ಆದರೆ ಎಲ್ಲಾ ಪತ್ರಿಕೆಗಳಿಗೆ ಹೊರತೆಂಬಂತೆ ಟಿಎಸ್‌ಐನಲ್ಲಿ ಪ್ರಕಟವಾದ ಲೇಖನ ಸಂದರ್ಭೋಚಿತವಾಗಿದ್ದು ವಸ್ತುಸ್ಥಿತಿಯ ಕುರಿತು ಆಳ ಅಧ್ಯಯನ ನಡೆಸಿದೆ. ಜೊತೆಗೆ ಸಾರ್ವಜನಿಕ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಈ ಒಂದು ಗುಣವೇ ಟಿಎಸ್‌ಐನ್ನು ಇತರ ಪತ್ರಿಕೆಗಳಿಂದ ಭಿನ್ನವಾಗಿಸಿದೆ. ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ಹಾಗೂ ಅಪರಾಧಗಳಿಂದಾಗಿ ಇಂದು ಇಡೀ ಸಮಾಜವೇ ತಲೆತಗ್ಗಿಸುವಂತಾಗಿದೆ. ನಾವು ಭಾರತೀಯರು ಮಹಿಳೆಯರನ್ನು 'ದುರ್ಗೆ', 'ಸರಸ್ವತಿ' ಮುಂತಾದ ದೇವತೆಗಳಿಗೆ ಹೋಲಿಸುತ್ತೇವೆ. ಈ ನಡುವೆಯೂ ಇಂಥ ಪ್ರಕರಣಗಳು ನಡೆಯುತ್ತಿರುವುದು ನಿಜಕ್ಕೂ ಅಸಹ್ಯ.

ಗೌರವ್ ಜುಲ್ಕಾ
ಪಂಜಾಬ್

ಸಮರ್ಥಅಭಿವೃದ್ಧಿಮಾದರಿ

ಜನವರಿ 20ರ ಟಿಎಸ್‌ಐನಲ್ಲಿ ಪ್ರಕಟವಾದ 'ಆರಕ್ಕೇರದ ಅಭಿವೃದ್ಧಿ ಬೆನ್ನು ಹತ್ತಿ' (ಪ್ರಸೂನ್ ಮಜುಂದಾರ್) ಹಾಗೂ 'ಭಾರತದ ದಾಖಲೆ ಪತ್ರ' (ಸ್ರೇ ಅಗರ್‌ವಾಲ್) ಲೇಖನಗಳು ನಿಜವಾಗಿಯೂ ಮನಮುಟ್ಟುವಂತಿತ್ತು. ಸಮಾಜದಲ್ಲಿ ಮೂಲೆಗುಂಪಾದವರ ಕುರಿತು ಟಿಎಸ್‌ಐ ಕಾಳಜಿ ಪ್ರಶಂಸಾರ್ಹ. ದೇಶದಾದ್ಯಂತ ನಿರುದ್ಯೋಗಿಗಳು, ಅನಕ್ಷರಸ್ಥರು ಹಾಗೂ ಪೌಷ್ಠಿಕ ಆಹಾರದ ಕೊರತೆಯಿಂದ ನರಳುತ್ತಿರುವವರೇ ತುಂಬಿ ಹೋಗಿರುವಾಗ ನಮ್ಮ ವಿದೇಶಿ ವಿನಿಮಯ, ಪ್ರಗತಿ ದರ ಅಥವಾ ಇತರ ಸೌಲಭ್ಯಗಳು ಪ್ರಾಮುಖ್ಯತೆ ಕಳೆದುಕೊಂಡಿವೆ. ಆದರೆ ಕ್ಯೂಬಾ ದೇಶದ ಉದಾಹರಣೆಯನ್ನೇ ಗಮನಿಸಿ. ಎಲ್ಲಾ ಮಾದರಿಯ ಹಣಕಾಸು ಸೌಲಭ್ಯಗಳು ಕ್ಯೂಬಾದಲ್ಲಿ ನಿಷೇಧವಾಗಿದ್ದರೂ ಆ ದೇಶ ಸಮಗ್ರ ಸಮಾಜದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡಿರುವುದು ಮಾತ್ರವಲ್ಲ, ಮಾನವಾಭಿವೃದ್ಧಿ ಸೂಚ್ಯಂಕ ಪಟ್ಟಿಯಲ್ಲಿ 51ನೇ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ನಮ್ಮ ಆಡಳಿತ ವರ್ಗವೂ 'ಸಾಮಾಜಿಕ ಪ್ರಜಾಪ್ರಭುತ್ವದ ಕೊರತೆ' ಗುರುತಿಸಿ ಸಮರ್ಥ ಮತ್ತು ಸಾಮಾಜಿಕ ನ್ಯಾಯ ಸಮ್ಮತ ಅಭಿವೃದ್ಧಿ ಮಾದರಿ ರೂಪಿಸಬೇಕು.

ನೀತು ಸಿ.ವಿ.
ನವದೆಹಲಿ

ಟಾಟಾ ಭಾರತರತ್ನ

'ಕಣ ಕಣದಲ್ಲೂ ಭಾರತೀಯತೆ ತುಂಬಿಕೊಂಡ ರತನ್ ಟಾಟಾ ನಿಜವಾದ ಭಾರತರತ್ನ' (ಅರಿಂದಮ್ ಚೌಧುರಿ) ಸಂಪಾದಕೀಯ ಮನಸೂರೆಗೊಂಡಿತ್ತು. ಹೌದು! ರತನ್ ಟಾಟಾ ನಿಜವಾದ ಭಾರತರತ್ನ. ಇದರಲ್ಲಿ ಎರಡು ಮಾತಿಲ್ಲ. ಕೇವಲ ಹಣದ ಬೆನ್ನು ಬಿದ್ದು, ಹೇರಳವಾಗಿ ಲಾಭ ಮಾಡಿಕೊಳ್ಳುತ್ತ ಆ ಮೂಲಕ ಜಾಗತಿಕ ಮಟ್ಟದಲ್ಲಿ ಕೋಟ್ಯಾಧಿಪತಿಗಳಾಗಿ ಪ್ರಚಾರ ಗಿಟ್ಟಿಸಲು ಹಂಬಲಿಸುವವರ ಮಧ್ಯೆ ಪ್ರಾಮಾಣಿಕತೆ, ಬದ್ಧತೆ, ಸಾಮಾಜಿಕ ಕಳಕಳಿಯಿಂದ ದುಡಿಯುತ್ತಿರುವ ಟಾಟಾ ಸಮೂಹದ ರತನ್ ಟಾಟಾಗೆ ಭಾರತರತ್ನ ಸಿಗಲೇಬೇಕು. ಆದರೆ ಭಾರತರತ್ನದಂತಹ ಶ್ರೇಷ್ಠ ಪುರಸ್ಕಾರಕ್ಕಾಗಿಯೇ ರಾಜಕಾರಣಿಗಳ ನಡುವೆ ಯುದ್ಧ ಆರಂಭವಾಗಿರುವುದು ದುರದೃಷ್ಟಕರ. ಆದರೆ ಕಳೆದ ಕೆಲವು ವರ್ಷಗಳಿಂದ ಸರ್ಕಾರ ಭಾರತರತ್ನ ಪ್ರಶಸ್ತಿ ನೀಡುವುದನ್ನೇ ನಿಲ್ಲಿಸಿದೆ. ಸ್ವಾರ್ಥ ತುಂಬಿದ, ಹೊಲಸು ರಾಜಕೀಯ ಮಾಡುವ ಪುಢಾರಿಗಳಿಗೆ ಈ ಅತ್ಯುನ್ನತ ಪುರಸ್ಕಾರ ನೀಡುವ ಬದಲು ನಿಲ್ಲಿಸಿದ್ದೇ ಒಳಿತು.

ಲಕ್ಷ್ಮಿಕಾಂತ್ ಕೊಂಪಲ್
ಲಿಂಗಸುಗೂರು

ಸಾಧನೆ-ಸಹೃದಯತೆಯಸಮಾಗಮ

ಟಾಟಾ ಸಮೂಹ ಯಾವತ್ತೂ ತನ್ನ ಬದ್ಧತೆಗೆ ಪ್ರಸಿದ್ಧಿ ಪಡೆದಿದೆ. ಸಂಪಾದಕೀಯ (ಅರಿಂದಮ್ ಚೌಧುರಿ) ಓದಿದ ನಂತರವೇ ನ್ಯಾನೊ ಕಾರು ನಿರ್ಮಾಣದ ಹಿಂದಿದ್ದ ಮಾನವೀಯ ಮುಖದ ಅರಿವಾಗಿದ್ದು. ಸ್ಕೂಟರ್ ಕೊಳ್ಳಲಷ್ಟೇ ಸಾಧ್ಯವಿರುವ ಕುಟುಂಬವೊಂದು ಕಾರು ಕೊಳ್ಳಲು ಸಾಧ್ಯವಾಗುವಂತೆ ಮಾಡಿದ ರತನ್ ಟಾಟಾ ಅವರ ಪರಿಶ್ರಮಕ್ಕೆ ಕೃತಜ್ಞತೆ ಅರ್ಪಿಸಲೇಬೇಕು. ಹಣವೊಂದೇ ಮುಖ್ಯ ಎನ್ನುವ ಉದ್ಯಮ ವಲಯದ ನಡುವೆ ಇದ್ದರೂ, ಇನ್ನೂ ಜನಸಾಮಾನ್ಯರ ನೋವಿಗೆ ಸ್ಪಂದಿಸುವಂತಹ ಮನಸ್ಥಿತಿ ಉಳಿಸಿಕೊಂಡಿರುವ ರತನ್ ಟಾಟಾ ನಿಜಕ್ಕೂ ಪ್ರಶಂಸಾರ್ಹರು. ಒಂದು ಸಾಧನೆಯ ನಂತರ ಕೈಕಟ್ಟಿ ಕುಳಿತು ಬಿಡುವವರೇ ಹೆಚ್ಚಾಗಿರುವಾಗ ರತನ್ ಟಾಟಾ ಇನ್ನೊಂದು ಮೈಲಿಗಲ್ಲು ಸಾಧಿಸಲು ಹೊರಟಿರುವುದು ಶ್ಲಾಘನೀಯ. ಒಂದು ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಬಾಳುವ ಜಲಶುದ್ಧೀಕರಣ ಉಪಕರಣದ ಉತ್ಪಾದನೆ ಮುಂದಿನ ಗುರಿ ಎಂದು ರತನ್ ಹೇಳಿದ್ದಾರೆ. ಅವರ ಮಾತುಗಳಲ್ಲಿ ಮಾನವೀಯತೆ ಮತ್ತು ಸಹೃದಯತೆ ಎದ್ದು ಕಾಣಿಸುತ್ತಿದೆ. ಉತ್ತಮ ಸಂಪಾದಕೀಯಕ್ಕೆ ಧನ್ಯವಾದಗಳು.

ಎಂ.ಎಸ್. ಕೀರ್ತಿ
ರಾಯಚೂರು

ಕೊನೆಯೆಂದು?

ಸಮಾಜದಲ್ಲಿ ಸ್ತ್ರೀಯರ ಮೇಲಾಗುತ್ತಿರುವ ದೌರ್ಜನ್ಯದ ಕುರಿತು ಮೂಡಿಬಂದ 'ದುಶ್ಶಾಸನರ ನಡುವೆ ಅಡಗಲು ಸ್ಥಳವೆಲ್ಲಿ?' ಲೇಖನ ಓದಿದೆ. ಸ್ತ್ರೀಯರ ಮೇಲಿನ ದೌರ್ಜನ್ಯ ಇಂದು ನಿನ್ನೆಯ ಮಾತಲ್ಲ. ಈ 'ಸಾಮಾಜಿಕ ಪಿಡುಗು' ದಿನೇ ದಿನೇ ಹೆಚ್ಚಾಗುತ್ತಿದೆ ಹೊರತು ಕಡಿಮೆಯಾಗುತ್ತಿಲ್ಲ. ಕಾರಣ? ಅತ್ಯಾಚಾರದಂಥ ಭೀಕರ ಕೃತ್ಯ ಎಸಗಿದರೂ ಅಪರಾಧಿಗಳು ಜಾಮೀನು ಮೂಲಕ ಬಿಡುಗಡೆಯಾಗುತ್ತಾರೆ. ಪ್ರತಿಬಾರಿ ಮಾಧ್ಯಮಗಳು ಮಹಿಳಾ ದೌರ್ಜನ್ಯದ ಕುರಿತು ಕಣ್ಣಿಗೆ ರಾಚುವಂತೆ ಪ್ರಕಟಿಸುತ್ತವೆ. ಆದರೂ ಈ ದುಷ್ಕೃತ್ಯಗಳಿಗೆ ಮುಕ್ತಿ ಸಿಕ್ಕಿಲ್ಲ. ದುರುಳರ ಅಟ್ಟಹಾಸಕ್ಕೆ ಅಮಾಯಕ ಮಹಿಳೆಯರು ಬಲಿಯಾಗುತ್ತಲೇ ಇದ್ದಾರೆ, ಜೀವನವಿಡೀ ನರಕಯಾತನೆ ಅನುಭವಿಸುತ್ತಲೇ ಬಂದಿದ್ದಾರೆ. ಇದಕ್ಕೆ ಕೊನೆ ಇಲ್ಲವೆ?

ಅಪ್ಪೇನಹಳ್ಳಿ ಬಸವರಾಜು
ತುಮಕೂರು

ಬದುಕು-ಬವಣೆಯ ಪರಿಚಯ

'ಕತ್ತಲೆಯಿಂದ ಭರವಸೆಯ ಬೆಳಕಿನೆಡೆಗೆ' ಮುಖಪುಟ ಹೊತ್ತು ಬಂದ ವರ್ಷದ ವಿಶೇಷಾಂಕ ಓದುಗರಿಗೆ ಉತ್ತಮ ಮಾಹಿತಿಯನ್ನು ನೀಡಿದೆ. ಲೇಖಕರ ಪಯಣದ ಅನುಭವಗಳು ಓದುಗರಿಗೆ ದೇಶವನ್ನೇ ಪರಿಚಯಿಸಿಕೊಟ್ಟಿವೆ. ಸಮುದ್ರತೀರ, ದೇಶದ ಗಡಿ ಭಾಗಗಳ ಜನರ ಬದುಕು- ಬವಣೆಯನ್ನು ಅನಾವರಣಗೊಳಿಸಿವೆ. ರಾಷ್ಟ್ರೀಯ- ಅಂತರ್ ರಾಷ್ಟ್ರೀಯ ಸುದ್ದಿಗಳನ್ನು ಕೈಗೆಟುಕುವ ದರದಲ್ಲಿ ನೀಡುತ್ತಿರುವ ಟಿಎಸ್‌ಐ ಪ್ರಯತ್ನ ಶ್ಲಾಘನೀಯ. ಇದರಿಂದ ಎಲ್ಲ ವರ್ಗದವರಿಗೂ ಪತ್ರಿಕೆ ತಲುಪುವಂತಾಗಿದೆ.

ಬಲ್ಲೇನಹಳ್ಳಿ ಮಂಜುನಾಥ್
ಮಂಡ್ಯ

ಉತ್ತಮ ಕಥೆ

ಕುಂ.ವೀ. ಅವರ ಅನುವಾದಿತ ಕಥೆ 'ಶ್ರಾದ್ಧದೂಟ' ಚೆನ್ನಾಗಿತ್ತು. ಮನಸ್ಸಿನ ದ್ವಂದ್ವಗಳು, ಹಳ್ಳಿ ಬದುಕಿನ ಸೊಗಡನ್ನು ಕಥೆಯಲ್ಲಿ ಅಭಿವ್ಯಕ್ತಿಗೊಳಿಸಿದ ರೀತಿ ಅನುಪಮ. ತುಮುಲಗಳ ಮಧ್ಯೆ ಕಳೆದುಹೋಗುವ ಪಾತ್ರದ ಚಿತ್ರಣ ಅನನ್ಯ. ಯಾವುದೋ ಕಲ್ಪನಾಲೋಕವನ್ನು ಚಿತ್ರಿಸದೆ ವಾಸ್ತವ ಬದುಕನ್ನು ನಮ್ಮೆದುರಿಗೆ ತಂದಿಟ್ಟಿದ್ದಾರೆ. ತೆಲುಗಿನ ಉತ್ತಮ ಕಥೆಯೊಂದನ್ನು ಅನುವಾದಿಸಿ ಕನ್ನಡಿಗರಿಗೆ ನೀಡಿದ ಕುಂ.ವಿ. ಅವರಿಗೆ ವಂದನೆಗಳು.

ಪರಿಮಳಾ ರಾಜಶೇಖರ್,
ಬೆಂಗಳೂರು

ಸಾಧಕ

'ಕೈಗೆಟುಕುವ ಕನಸು' (ಪ್ರಸೂನ್ ಮಜುಂದಾರ್) ಲೇಖನ ಸಕಾಲಿಕ. ಅತೀ ಪುಟ್ಟ ವಸ್ತುವಿನ ಬೆಲೆಯೂ ಗಗನಕ್ಕೇರುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಅತೀ ಅಗ್ಗದ ನ್ಯಾನೊ ಕಾರನ್ನು ಜನತೆಗೆ ಪರಿಚಯಿಸಿದ್ದು ರತನ್ ಟಾಟಾ ಅವರ ದಕ್ಷತೆ ಹಾಗೂ ನಿಷ್ಠೆಗೆ ಸಾಕ್ಷಿ. ನಿಜವಾಗಿಯೂ ಇದು ಭಾರತದ ಮಧ್ಯಮ ವರ್ಗದ ಜನರ ಕನಸನ್ನು ಸಾಕಾರಗೊಳಿಸಿದೆ. ಇಂದಿನ ದಿನಗಳಲ್ಲಿ ಮಧ್ಯಮವರ್ಗದ ಜನರಿಗೆ ಒಂದು ಲಕ್ಷ ಎಂಬುದು ದೊಡ್ಡ ಮೊತ್ತವೇನಲ್ಲ. ಹೀಗಿರುವಾಗ ನ್ಯಾನೊ ಅದೆಷ್ಟು ಮಂದಿಯ ಕನಸನ್ನು ನನಸು ಮಾಡಲಿದೆಯೋ? ಹೌದು! ಕೇವಲ ಪೊಳ್ಳು ಭರವಸೆಗಳನ್ನು ನೀಡಿ, ಕೊಟ್ಟ ಮಾತನ್ನೇ ಮರೆಯುವವರ ಮಧ್ಯೆ ರತನ್ ಟಾಟಾ ಮಹಾನ್ ಸಾಧಕ.

ಅರುಣ್ ಮಂದೇವಾಲ
ಗುಲ್ಬರ್ಗಾ

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .