|
ಕೇರಳ: ರಾಜಕೀಯ
ಪಕ್ಷ ಮೊದಲು, ನಾಡು ನಂತರ!
ಸಚಿವರಿಗೆ ರಾಜ್ಯದ ಹಿತಾಸಕ್ತಿಗಿಂತ ಪಕ್ಷದ ವ್ಯವಹಾರಗಳೇ ಮುಖ್ಯವಾದರೆ ಗತಿ?
ರಾಜ್ಯ ಮತ್ತು ಪ್ರಜೆಗಳ ಹಿತಾಸಕ್ತಿಗಳಿಗಿಂತ ಆಡಳಿತ ಪಕ್ಷದ ವ್ಯವಹಾರಗಳೇ ಮುಖ್ಯವಾಗಲು ಸಾಧ್ಯವೇ? ಇಂಥ ಒಂದು ಪ್ರಶ್ನೆಯನ್ನು ಕೇರಳದ ವಿತ್ತಸಚಿವ ಟಿ.ಎಂ. ಥಾಮಸ್ ಐಸಾಕ್ ಅವರನ್ನು ಕೇಳಿದರೆ ಖಂಡಿತವಾಗಿ ಸಕಾರಾತ್ಮಕ ಉತ್ತರವೇ ಸಿಗುತ್ತದೆ. ಗೌರವಾನ್ವಿತ ಆರ್ಥಿಕ ತಜ್ಞ ಮತ್ತು ಸಿಪಿಐ(ಎಂ) ಪಕ್ಷದ ಚಿಂತಕ ಥಾಮಸ್ ಅವರು ಮುಂದಿನ ಆರ್ಥಿಕ ವರ್ಷದ ಸಮಗ್ರ ಬಜೆಟ್‌ನ್ನು ಮಂಡಿಸದೆ ಇರುವುದನ್ನು ಪಕ್ಷದ ಹಾಗೂ ಸಿಪಿಐ ರಾಜ್ಯ ಸಮಾವೇಶಗಳಲ್ಲಿ ಸಮರ್ಥಿಸಿಕೊಂಡಿದ್ದಾರೆ. ಸಮಗ್ರ ಬಜೆಟ್ ಮಂಡನೆಯ ಬದಲಾಗಿ ಮೂರು ತಿಂಗಳ ಅವಧಿಗೆ ಅನ್ವಯವಾಗುವಂತೆ ಮಧ್ಯಂತರ ಬಜೆಟ್ ಮಂಡಿಸಲು ಸರ್ಕಾರ ನಿರ್ಧರಿಸಿದೆ. ಕಾರಣ?
ರಾಜ್ಯದ ಸಚಿವರೆಲ್ಲರೂ ಪಕ್ಷದ ಸಮಾವೇಶದಲ್ಲಿ ತೊಡಗಿಸಿಕೊಂಡಿರುವುರಿಂದ ಸಮಗ್ರ ಬಜೆಟ್ ಮಂಡಿಸಲು ಸಾಧ್ಯವಾಗುವುದಿಲ್ಲ. ಹಾಗೇ ಸಂಬಂಧಪಟ್ಟ ಸಮಿತಿಗಳೊಂದಿಗೆ ಈ ಕುರಿತಾಗಿ ಚಚಿಸಲು ಸಮಯದ ಅಭಾವವೂ ಇದೆ ಎಂದು ಥಾಮಸ್ ಸ್ಪಷ್ಟನೆ ನೀಡಿದ್ದಾರೆ.
ಆದರೆ ಇದರ ಒಟ್ಟಾರೆ ಫಲಿತಾಂಶ? ಮುಂಬರುವ ಹಣಕಾಸು ವರ್ಷದಲ್ಲಿ ರಾಜ್ಯ ಬಜೆಟ್ ಬಳಕೆ ಸಂಪೂರ್ಣ ಅಸ್ತವ್ಯಸ್ತವಾಗಲಿದೆ. ಪ್ರಸ್ತುತ ಹಣಕಾಸು ವರ್ಷ ಕೊನೆಗೊಳ್ಳಲು ಕೇವಲ ಎರಡು ತಿಂಗಳು ಮುನ್ನ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿರುವುದಕ್ಕೆ ಹಾಗೂ ಯೋಜನೆಯ ಒಟ್ಟು ಹಣವನ್ನು ಸಮರ್ಪಕವಾಗಿ ಬಳಸದಿರುವುದಕ್ಕೆ ಈಗಾಗಲೇ ವ್ಯಾಪಕ ಟೀಕೆಗಳಿಗೆ ಗುರಿಯಾಗಿದೆ. ವಿರೋಧ ಪಕ್ಷಗಳೂ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿವೆ.
ರಾಜ್ಯ ಸರ್ಕಾರ ಕೇಂದ್ರದ ನಿಧಿಯಿಂದ ಶೇ. 24 ರಷ್ಟನ್ನು ಮಾತ್ರ ಉಪಯೋಗಿಸಿಕೊಳ್ಳುವಲ್ಲಿ ಸಫಲವಾಗಿರುವುದರಿಂದ, ಸ್ಥಳೀಯ ಸಂಸ್ಥೆಗಳು ಶೇ. 7.44ರಷ್ಟು ಅನುದಾನವನ್ನು ಮಾತ್ರ ಬಳಸಲು ಸಾಧ್ಯವಾಗಿದೆ ಎಂದು ವಿರೋಧ ಪಕ್ಷಗಳ ದೂರು. ಜೊತೆಗೆ ಈ ವರ್ಷದ ಯೋಜಿತ ಹಣಕಾಸು ವೆಚ್ಚವೂ ಅತಿ ಕಡಿಮೆ ಆಗಿತ್ತು ಎಂಬ ಮಾತುಗಳು ಕೇಳಿ ಬಂದಿವೆ.
ಈ ಮಧ್ಯೆ, ಸ್ಥಳೀಯ ಸಂಸ್ಥೆಗಳು ಫೆಬ್ರುವರಿ ತಿಂಗಳಲ್ಲಿ ಒಟ್ಟು ಹಣಕಾಸು ನಿಧಿಯ ಶೇ. 15ರಷ್ಟು ಹಣವನ್ನು ಮಾತ್ರ ಬಳಸಬಹುದು ಹಾಗೂ ಮಾರ್ಚ್‌ನಲ್ಲಿ ಶೇ. 20ರಷ್ಟು ಹಣವನ್ನು ಉಪಯೋಗಿಸಿಕೊಳ್ಳಬಹುದು ಎಂದು ಹೇಳುವ ಮೂಲಕ ಹಣಕಾಸು ಸಚಿವರು ಯೋಜಿತ ಹಣಕಾಸು ನಿಧಿಯನ್ನು ರಾಜ್ಯ ಸರ್ಕಾರದ ಬೊಕ್ಕಸದಲ್ಲೇ ಕೊಳೆಯುವಂತೆ ಮಾಡಿದ್ದಾರೆ. ಅರ್ಧದಷ್ಟು ನಿಧಿಯ ಬಳಕೆಯಾಗದೆ ಇರುವುದರಿಂದ ಅಭಿವೃದ್ಧಿ ಯೋಜನೆಗಳಿಗೂ ಪೆಟ್ಟು ಬೀಳಲಿದೆ.
ಮಾನ್ಯ ಹಣಕಾಸು ಸಚಿವರು ತಾತ್ಕಾಲಿಕ ಬಜೆಟ್‌ನಿಂದಾಗಿ ಮುಂದಿನ ವರ್ಷದ ಅಭಿವೃದ್ಧಿ ಯೋಜನೆಗಳು ಹಾಗೂ ಹಣಕಾಸು ನಿಧಿಯ ಬಳಕೆಗೆ ಯಾವುದೇ ತೊಂದರೆಯುಂಟಾಗದು ಎಂದು ಭರವಸೆ ನೀಡಿದ್ದರೂ, ಸಮಗ್ರ ಬಜೆಟ್ ಇಲ್ಲದಿರುವುದರಿಂದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿರುವ ಇಲಾಖೆಗಳಿಗೆ ಹೊಡೆತ ಬೀಳಲಿದೆ ಎಂಬುದಂತೂ ಸತ್ಯ. ಯೋಜನೆಗಳನ್ನು ರೂಪಿಸಲು ಹಾಗೂ ಅನುಷ್ಠಾನಗೊಳಿಸಲು ಸಮಗ್ರ ಬಜೆಟ್ ಇರಬೇಕು ಹಾಗೂ ಸಮಯಾವಕಾಶವೂ ಬೇಕು. ಆದರೆ ಇಲಾಖೆಗಳಿಗೆ ಒಂದು ವರ್ಷದ ಬದಲಾಗಿ ಕೇವಲ 9 ತಿಂಗಳುಗಳು ಮಾತ್ರ ಲಭ್ಯ. ಏನೇ ಇರಲಿ, ಸಮಗ್ರ ಬಜೆಟ್‌ನ ಕೊರತೆಯಿಂದ ಯೋಜನೆಗಳು ಮೂಲೆ ಸೇರಿದರೂ ಆಶ್ಚರ್ಯವಿಲ್ಲ.
ರಾಜ್ಯದ ವ್ಯವಹಾರಗಳಿಗಿಂತ ಪಕ್ಷದ ವ್ಯವಹಾರಗಳೇ ಬಹುಮುಖ್ಯ ಎಂದು ಘೋಷಿಸಿರುವ ಮೊದಲ ಸಚಿವ ಐಸಾಕ್ ಆಗಿರುವ ಕಾರಣ, ಈ ಒಂದು ವಿಷಯದಲ್ಲಿ ಅವರಿಗೆ ಭಾರೀ ಹೆಮ್ಮೆಯಿರಬಹುದೇನೋ
ಎಂದು ಅನ್ನಿಸುತ್ತದೆ.
ಟಿಎಸ್‌ಐ
ಅನು ವಾರಿಯರ್
ತಮಿಳುನಾಡು: ಸಮಾಜ
'ಕಳಂಕಿತ'ರ ಕಂಗಳಲ್ಲಿ ಹೊಂಬೆಳಕು
ದೇಶದಲ್ಲೇ ಲಿಂಗಪರಿವರ್ತಿತರ ಕ್ಷೇಮಾವೃದ್ಧಿ ಮಂಡಳಿ ಸ್ಥಾಪಿಸಿದ ಪ್ರಥಮ ರಾಜ್ಯ
ಅದೆಷ್ಟೋ ಕಾಲದಿಂದ ಸಮಾಜದ ನಿರ್ಲಕ್ಷ್ಯಕ್ಕೆ ಬಲಿಯಾದ ಲಿಂಗಪರಿವರ್ತಿತ ಸಮುದಾಯಕ್ಕೆ ಇದೀಗ ಶುಭಸುದ್ದಿ. ಅದೇನಂತೀರಾ? ಜನವರಿ 23ರಂದು ತಮಿಳುನಾಡಿನ ರಾಜ್ಯಪಾಲ ಸುರ್ಜಿತ್ ಸಿಂಗ್ ಬಾನಾಲ ವಿಧಾನಸಭೆಯಲ್ಲಿ ಮಾತನಾಡುತ್ತಾ ಅತಿ ಶೀಘ್ರದಲ್ಲಿಯೇ ಲಿಂಗ ಪರಿವರ್ತಿತರಿಗೆ ಕ್ಷೇಮಾಭಿವೃದ್ಧಿ ಮಂಡಳಿ ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಆ ಮೂಲಕ ಭಾರತದಲ್ಲಿ ಮೊತ್ತಮೊದಲ ಬಾರಿಗೆ ಲಿಂಗಪರಿವರ್ತಿತ ಕ್ಷೇಮಾಭಿವೃದ್ಧಿ ಮಂಡಳಿ ಅನುಷ್ಠಾನಗೊಳಿಸಿದ ರಾಜ್ಯವೆಂಬ ಹೆಗ್ಗಳಿಕೆಗೆ ತಮಿಳುನಾಡು ಪಾತ್ರವಾಗಲಿದೆ. ಕೊನೆಗೂ ಸಿಕ್ಕ ಹುಲ್ಲುಕಡ್ಡಿಯ ಆಸರೆಗೆ ಶೋಷಿತ ಮತ್ತು ಕಳಂಕಿತ ಸಮುದಾಯದ ಪರವಾಗಿ ಹೋರಾಡುತ್ತಿರುವ ಕಾರ್ಯಕರ್ತರು ಸುದ್ದಿ ಕೇಳಿ ಸಂತೋಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಂತಸ ವ್ಯಕ್ತಪಡಿಸಿದ ತಮಿಳುನಾಡು ಲಿಂಗಪರಿವರ್ತಿತರ ಸಂಘದ ಅಧ್ಯಕ್ಷೆ ಆಶಾ ಭಾರತಿ ಟಿಎಸ್‌ಐ ಜೊತೆ ಮಾತಾಡುತ್ತಾ, ಕಳೆದ ಆಗಸ್ಟ್‌ನಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರ್‍ಯಾಲಿ ನಡೆಸಿದ್ದೆವು. ಕ್ಷೇಮಾಭಿವೃದ್ಧಿ ಮಂಡಳಿ ಸ್ಥಾಪನೆಯೂ ನಮ್ಮ ಬೇಡಿಕೆಗಳ ಪಟ್ಟಿಯಲ್ಲಿತ್ತು. ಸಕಾರಾತ್ಮಕವಾಗಿ ಸ್ಪಂದಿಸಿರುವ ಸರ್ಕಾರ, ನಮ್ಮ ಅಭಿವೃದ್ಧಿಗಾಗಿ ಸಂಸ್ಥೆಯೊಂದನ್ನು ಸ್ಥಾಪಿಸುವುದು ಉತ್ತಮ ಬೆಳವಣಿಗೆ. ಇದು ಸಮಾಜದಲ್ಲಿ ಶೋಷಿತರಾಗಿರುವ ಲಿಂಗಪರಿವರ್ತಿತರ ಬಗ್ಗೆ ಸದ್ಭಾವನೆ ಹುಟ್ಟುಹಾಕಲಿದೆ ಎನ್ನುತ್ತಾರೆ.
ತಮಿಳುನಾಡಿನಲ್ಲಿ ಎಷ್ಟು ಲಿಂಗಪರಿವರ್ತಿತರಿದ್ದಾರೆ ಎಂಬ ಬಗ್ಗೆ ಸಂಪೂರ್ಣ ದಾಖಲೆಗಳು ಲಭ್ಯವಿಲ್ಲ. ತಮಿಳುನಾಡಿನಲ್ಲಿ ಸುಮಾರು ಒಂದು ಲಕ್ಷ ಮಂದಿ ಲಿಂಗಪರಿವರ್ತಿತರಿದ್ದು, ಚೆನ್ನೈಯಲ್ಲಿ 3000 ಇರಬಹುದು. ಕ್ಷೇಮಾಭಿವೃದ್ಧಿ ಮಂಡಳಿ ಮೊತ್ತ ಮೊದಲನೆಯದಾಗಿ ಎಷ್ಟು ಮಂದಿ ಲಿಂಗಪರಿವರ್ತಿಗಳಿದ್ದಾರೆ ಎಂಬುದನ್ನು ಗಣತಿ ಮಾಡಬೇಕು ಎನ್ನುತ್ತಾರೆ ಆಶಾ ಭಾರತಿ. ಸರ್ಕಾರ ಜನ ಸಾಮಾನ್ಯರಿಗೆ ನೀಡುವ ಎಲ್ಲಾ ನೆರವುಗಳನ್ನು ನಮಗೂ ಕ್ಷೇಮಾಭಿವೃದ್ಧಿ ಮಂಡಳಿ ಮೂಲಕ ನೀಡಬೇಕು ಎನ್ನುತ್ತಾರೆ ಲಿಂಗಪರಿವರ್ತಿತರಾದ ಜನಪ್ರಿಯ ಭರತನಾಟ್ಯ ಕಲಾವಿದೆ ನರ್ತಕಿ ನಟರಾಜ್.
ಈಗ ತಮಿಳುನಾಡು ಸರ್ಕಾರ ನಮಗೂ ಪಡಿತರ ಚೀಟಿ, ಗುರುತಿನ ಚೀಟಿ ನೀಡುತ್ತಿದೆ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಿಂಗಪರಿವರ್ತನೆಗೆ ಅವಕಾಶ ನೀಡುತ್ತದೆ. ಕ್ಷೇಮಾಭಿವೃದ್ಧಿ ಮಂಡಳಿ ಇನ್ನೂ ಹೆಚ್ಚಿನ ಸೇವೆ ಒದಗಿಸಬಹುದು. ಈ ಕ್ಷೇಮಾಭಿವೃದ್ಧಿ ಮಂಡಳಿಯ ಉನ್ನತ ಸ್ಥಾನಗಳಲ್ಲಿ ಲಿಂಗಪರಿವರ್ತಿತರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವಂತೆ ಕೋರಲಾಗುವುದು ಎನ್ನುತ್ತಾರೆ 'ಅರ್ವಾನಿಗರ ಸಾಮಾಜಿಕ ಭಾವೈಕ್ಯತೆ ಮತ್ತು ಅಭಿವೃದ್ಧಿ' ನಿರ್ದೇಶಕರಾದ ಪ್ರಿಯಾ ಬಾಬು. ಈ ಸರ್ಕಾರೇತರ ಸಂಸ್ಥೆ ಲಿಂಗಪರಿವರ್ತಿತರ ಪರ ಕಾರ್ಯನಿರ್ವಹಿಸುತ್ತಿದೆ.
ತಮಿಳುನಾಡು ಮಹಿಳಾ ಆಯೋಗದ ಅಧ್ಯಕ್ಷೆ ಕೆ. ರಾಮಾತ್ತಲ್ ಸರ್ಕಾರದ ಜೊತೆ ಲಾಬಿ ನಡೆಸಿ ಈ ಮಂಡಳಿಯನ್ನು ಹುಟ್ಟುಹಾಕಿದ್ದಾರೆ. ಆಯೋಗ ಲಿಂಗಪರಿವರ್ತಿತರಿಗೆ ಸಾರ್ವಜನಿಕ ಸಂವಾದ ಏರ್ಪಡಿಸಿತ್ತು ಮತ್ತು ನಾವು ಕ್ಷೇಮಾಭಿವೃದ್ಧಿ ಮಂಡಳಿ, ಪಡಿತರ ಚೀಟಿ ಮತ್ತು ಗುರುತಿನ ಚೀಟಿ ಮೊದಲಾದ ಬೇಡಿಕೆಗಳನ್ನು ಸಲ್ಲಿಸಿದ್ದೇವೆ. ಕ್ಷೇಮಾಭಿವೃದ್ಧಿ ಮಂಡಳಿಯು ಲಿಂಗಪರಿವರ್ತಿತರ ಶಿಕ್ಷಣ, ಜೀವನಾಧಾರ ಮತ್ತು ಆರ್ಥಿಕ ಸುಧಾರಣೆಗೆ ನೆರವು ನೀಡುತ್ತದೆ ಎಂದು ಪ್ರಿಯಾ ಬಾಬು ಅವರು ಅಭಿಪ್ರಾಯಪಡುತ್ತಾರೆ. ಟಿಎಸ್‌ಐ ಜೊತೆ ಮಾತಾಡಿದ ಸಮಾಜ ಕಲ್ಯಾಣ ಇಲಾಖೆ ಸಚಿವೆ ಪೂಂಗೊತಾಯಿ ಆಲಾಡಿ ಅರುಣ ಅವರು, ಇನ್ನು ಒಂದು ವಾರದೊಳಗೆ ಲಿಂಗ ಪರಿವರ್ತಿತರ ಕ್ಷೇಮಾಭಿವೃದ್ಧಿ ಮಂಡಳಿ ಕಾರ್ಯಾರಂಭಿಸಲಿದೆ
ಎಂದು ಹೇಳಿದ್ದಾರೆ.
ಟಿಎಸ್‌ಐ
ಸುಂದರಬುದ್ಧನ್
ಒರಿಸ್ಸಾ: ಅಪರಾಧ
ಪಾತಕಿಗಳ ನೆಲೆವೀಡು
ದೆಹಲಿ ಪೊಲೀಸ್ ಕಾರ್ಯಾಚರಣೆ ಅರಿಯದ ಸ್ಥಳೀಯ ಪೊಲೀಸರು
ಇದೀಗ ಒರಿಸ್ಸಾ ರಾಜ್ಯ ಭಾರತದ ಕುಖ್ಯಾತ ಪಾತಕಿಗಳ ಮೆಚ್ಚಿನ ತಾಣ! ಹೌದು, ಇದು ವಾಸ್ತವ ಸಂಗತಿ. ಕಳೆದ ಜನವರಿ 21ರಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಸಹಾಯಕನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಅದೇ ದೇಶದ ಅರ್ಮಾನ್ ಇಸ್ಲಾಂ ಎಂಬ ಪಾತಕಿಯನ್ನು ಪವಿತ್ರ ನಗರ ಪುರಿಯಲ್ಲಿ ಬಂಧಿಸಲಾಗಿದೆ. ಅದಾದ ಮೂರು ದಿನಗಳ ನಂತರ (ಜ.24) ದೆಹಲಿಯ ವಿಶೇಷ ಪೊಲೀಸ್ ವಿಭಾಗ ಉತ್ತರ ಭಾರತದ ಕುಖ್ಯಾತ ಪಾತಕಿ ಬ್ರಿಜೇಶ್ ಸಿಂಗ್ ಎಂಬಾತನನ್ನು ಒರಿಸ್ಸಾದ ರಾಜಧಾನಿ ಭುವನೇಶ್ವರದಲ್ಲಿ ಬಂಧಿಸಿದೆ. 1993ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದ ಆಪಾದಿತರು ದೇಶ ತ್ಯಜಿಸಲು ಭುವನೇಶ್ವರದಿಂದ ನಕಲಿ ಪಾಸ್‌ಪೋರ್ಟ್ ಪಡೆದಿದ್ದರು ಎನ್ನುವುದನ್ನೂ ನೆನಪಿಸಿಕೊಳ್ಳಬಹುದು.
ಬಾಂಗ್ಲಾದೇಶದ ಪೊಲೀಸರಿಗೆ ಬೇಕಾಗಿದ್ದ ಅಲ್ಲಿನ ಕುಖ್ಯಾತ ಪಾತಕಿ ಅರ್ಮಾನ್ ಇಸ್ಲಾಂ ಕಳೆದ ಎಂಟು ತಿಂಗಳಿಂದ ಒರಿಸ್ಸಾದಲ್ಲಿ ನೆಲೆಸಿದ್ದರೂ, ಸ್ಥಳೀಯ ಪೊಲೀಸರಿಗೆ ಮಾತ್ರ ಈ ಬಗ್ಗೆ ಸುಳಿವು ಕೂಡಾ ಸಿಕ್ಕಿರಲಿಲ್ಲ. ಭುವನೇಶ್ವರ ಮತ್ತು ಪುರಿ ಅವನ ಪ್ರಮುಖ ಆಶ್ರಯತಾಣಗಳಾಗಿದ್ದವು. ಬಂಗಾಳ- ಒರಿಸ್ಸಾದ ಸಿಐಡಿ ಅಧಿಕಾರಿಗಳು ಒರಿಸ್ಸಾದ ವೈಭವೋಪೇತ ಹೊಟೇಲ್ ಮೇಲೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಕುಖ್ಯಾತ ಕೊಲೆಗಾರನನ್ನು ಬಂಧಿಸಿದ್ದಾರೆ.
ಹಲವಾರು ಕೊಲೆ ಮತ್ತು ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿ ಉತ್ತರ ಪ್ರದೇಶದ ಪೊಲೀಸರಿಗೆ ಬೇಕಾಗಿದ್ದ ಬ್ರಿಜೇಶ್ ಸಿಂಗ್ ಅಂತಿಮವಾಗಿ ಭುವನೇಶ್ವರದಲ್ಲಿ ಬಂಧಿಯಾದ. ಕಳೆದ ಮೂರು ವರ್ಷಗಳಿಂದ ಒರಿಸ್ಸಾದಲ್ಲಿ ಬೀಡುಬಿಟ್ಟಿದ್ದ ಈತ ತನ್ನ ಹೆಸರನ್ನು ಅರುಣ್ ಸಿಂಗ್ ಎಂದು ಬದಲಾಯಿಸಿಕೊಂಡಿದ್ದು, ಇದೇ ನಕಲಿ ಹೆಸರಿನಲ್ಲಿ ಪಾಸ್‌ಪೋರ್ಟ್ ಪಡೆದಿದ್ದ. ಭೂಗತ ದೊರೆ ದಾವೂದ್ ಇಬ್ರಾಹಿಂ ಮಾಜಿ ಸಹಾಯಕನಾಗಿದ್ದ ಬ್ರಿಜೇಶ್ ಸಿಂಗ್ ಕಳೆದ 20 ವರ್ಷಗಳಿಂದ ಉತ್ತರ ಭಾರತದಲ್ಲಿ ತಲೆ ಮರೆಸಿಕೊಂಡಿದ್ದ. ಈ ಪಾತಕಿ ನಗರದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಆರಂಭಿಸಿದ್ದರೂ ಒರಿಸ್ಸಾದ ಪೊಲೀಸರು ಮಾತ್ರ ಈ ಬಗ್ಗೆ ಕುರುಡರಾಗಿದ್ದರು!
ಇನ್ನೊಂದು ಕುತೂಹಲದ ಸಂಗತಿಯೆಂದರೆ ದೆಹಲಿಯ ಪೊಲೀಸರು ಶಾಪಿಂಗ್ ಮಾಲ್ ಬಳಿ ಬ್ರಿಜೇಶ್‌ನನ್ನು ಬಂಧಿಸಿದಾಗ ಕೆಲವು ಸಮಾಜಘಾತುಕರು ಆತನ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎನ್ನುವ ಭಾವನೆಯಿಂದ ಸ್ಥಳೀಯ ಯುವಕರು ಅವನನ್ನು ಪಾರುಮಾಡಲು ಪ್ರಯತ್ನಿಸಿದ್ದರು. ತಾವು ಸಿಐಡಿ ಅಧಿಕಾರಿಗಳೆಂದು ಪರಿಚಯಿಸಿಕೊಂಡ ದೆಹಲಿ ಪೊಲೀಸರು ಅವರನ್ನು ದೂರ ಸರಿಸಿದ್ದರು ಮತ್ತು ಕೂಡಲೇ ಆತನನ್ನು ರಹಸ್ಯ ತಾಣಕ್ಕೆ ಕರೆದೊಯ್ದರು. ವಿಪರ್ಯಾಸವೆಂದರೆ ಈ ಕಾರ್ಯಾಚರಣೆ ಕುರಿತು ಒರಿಸ್ಸಾ ಪೊಲೀಸರಿಗೆ ಯಾವುದೇ ಪೂರ್ವ ಮಾಹಿತಿಯಿರಲಿಲ್ಲ. ಆದ್ದರಿಂದ ಅವರು ಅಪಹರಣ ಪ್ರಕರಣ ದಾಖಲಿಸಿದ್ದರು. ಅಲ್ಲದೆ ಅಪರಾಧಿಗಳನ್ನು ಪತ್ತೆ ಹಚ್ಚಲು ನಗರವಿಡೀ ಜಾಲಾಡಿದ್ದರು! ಭುವನೇಶ್ವರದಿಂದ ಹೊರಡುವ ಬೆಳಗ್ಗಿನ ವಿಮಾನದಲ್ಲಿ ಪೊಲೀಸರು ಬ್ರಿಜೇಶ್‌ನನ್ನು ದೆಹಲಿಗೆ ಕೊಂಡೊಯ್ಯುವ ಪ್ರಯತ್ನದಲ್ಲಿದ್ದಾಗ ಸ್ಥಳಕ್ಕೆ ಧಾವಿಸಿದ ರಾಜ್ಯ ಪೊಲೀಸರು, ಕಾನೂನಿನ ಅನುಸಾರ ಅವನನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರು ಪಡಿಸುವಂತೆ ವಿನಂತಿಸಿದ್ದರು.
ಒರಿಸ್ಸಾ ಅಪರಾಧಿಗಳ ಬೀಡಾಗುತ್ತಿದೆ ಎಂಬುದಕ್ಕೆ ಅರ್ಮಾನ್ ಇಸ್ಲಾಂ ಮತ್ತು ಬ್ರಿಜೇಶ್ ಸಿಂಗ್ ಬಂಧನಗಳೇ ಸಾಕ್ಷಿ. ಗುಪ್ತಚರ ವ್ಯವಸ್ಥೆ ಮತ್ತು ಪೊಲೀಸರ ವೈಫಲ್ಯವೇ ಇದಕ್ಕೆ ಮುಖ್ಯ ಕಾರಣ ಎನ್ನುತ್ತಾರೆ ಒರಿಸ್ಸಾ ಹೈಕೋರ್ಟ್‌ನ ಹಿರಿಯ ನ್ಯಾಯವಾದಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ಉಪಾಧ್ಯಕ್ಷ ಶಿವಾನಂದ ರೇ. ಆದರೆ ಭುವನೇಶ್ವರದ ಎಸಿಪಿ ವೈ.ಬಿ. ಖುರಾನಿಯಾ ಮಾತ್ರ ತಮ್ಮನ್ನು ಸಮರ್ಥಿಸಿಕೊಂಡರು. ರಾಜಧಾನಿಯಲ್ಲಿ ಇಂಥ ಚಟುವಟಿಕೆಗಳ ಬಗ್ಗೆ ಮಾಹಿತಿ ಇರದೆ ಇದ್ದುದರಿಂದ ಈ ಕಾರ್ಯಾಚರಣೆ ಒರಿಸ್ಸಾ ಪೊಲೀಸರಿಗೆ ನಾಚಿಕೆಗೇಡಿನ ಸಂಗತಿಯಾಗಿತ್ತು ಎನ್ನುವುದು ಭುವನೇಶ್ವರದ ಎಸಿಪಿ ವೈ.ಬಿ. ಖುರಾನಿಯಾ ಅವರ ಅಭಿಪ್ರಾಯ. ಒರಿಸ್ಸಾ ಪಾತಕಿಗಳ ಸ್ವರ್ಗ ಎಂಬುದಕ್ಕೆ ಇದಕ್ಕಿಂತ ಹೆಚ್ಚೇನು ಬೇಕು?
ಟಿಎಸ್‌ಐ
ಧ್ರುತಿಕಂ ಮೊಹಂತಿ
|