ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಪ್ರಸ್ತುತ

ಗಂಧದ ನಾಡು ಉಗ್ರರ ಬೀಡು?

 

ಭಯೋತ್ಪಾದಕರಿಗೆ ರಾಜ್ಯ ನೆಲೆ ಒದಗಿಸುವ ಜೊತೆಗೆ ಹೊಸ ಉಗ್ರರನ್ನು ಸೃಷ್ಟಿಸುತ್ತಿದೆ

ಕರ್ನಾಟಕ ಭಯೋತ್ಪಾದಕರ ಅಡಗುದಾಣವಾಗುತ್ತಿರುವುದಕ್ಕೆ ಮತ್ತೆ-ಮತ್ತೆ ನಿದರ್ಶನಗಳು ದೊರೆಯುತ್ತಲೇ ಇವೆ. ಜೊತೆಗೆ ರಾಜ್ಯದಲ್ಲಿ ಈಗ ಭಯೋತ್ಪಾದಕರ ಸೃಷ್ಟಿ ಕೂಡ ಆಗುತ್ತಿದೆ. ಇದು ಆತಂಕಕಾರಿ ವಿಷಯ. ದಾವಣಗೆರೆಯಲ್ಲಿ ಇತ್ತೀಚೆಗಷ್ಟೇ ಅಂತರ್ ರಾಷ್ಟ್ರೀಯ ಮಟ್ಟದ ಭಯೋತ್ಪಾದಕ ಕೃತ್ಯದಲ್ಲಿ ಭಾಗವಹಿಸಿದ ಉಗ್ರರ ಬಂಧನ ಪ್ರಕರಣ ಇದಕ್ಕೆ ಪ್ರತ್ಯಕ್ಷ ಸಾಕ್ಷಿ. ಹೊನ್ನಾಳಿಯಲ್ಲಿ ಬೈಕ್ ಕಳ್ಳತನ ಆರೋಪದ ಮೇಲೆ ಮಹಮ್ಮದ್ ಗೌಸ್ ಅಲಿಯಾಸ್ ರಿಯಾಸುದ್ದೀನ್ ನಾಸೀರ್ ಮತ್ತು ಅಸಾದುಲ್ಲಾ ಇಸ್ಮಾಯಿಲ್ ಅಬೂಬಕರ್ ಎಂಬವರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಕೇವಲ ಬೈಕ್ ಕಳ್ಳತನ ಆರೋಪದ ಮೇಲೆ ಇವರನ್ನು ಬಂಧಿಸಿದ ಪೊಲೀಸರಿಗೆ ವಿಚಾರಣೆಯ ನಂತರ ದೊಡ್ಡ ಆಘಾತವೇ ಕಾದಿತ್ತು. ಈ ಇಬ್ಬರು ಭಯೋತ್ಪಾದಕರಾಗಿದ್ದರು! ದೆಹಲಿ ಮತ್ತು ಹೈದರಾಬಾದ್ ಪೊಲೀಸರು ಮಹಮ್ಮದ್ ಗೌಸ್‌ನನ್ನು ವಿಚಾರಣೆ ನಡೆಸಿದ ಬಳಿಕ ಆತನಿಗೆ ಭಯೋತ್ಪಾದನೆಯ ಹಿನ್ನೆಲೆ ಇರುವುದು ತಿಳಿದು ಬಂದಿದೆ. ಹೈದರಾಬಾದ್ ಮೆಕ್ಕಾ ಮಸೀದಿ ಸ್ಫೋಟ ಮತ್ತು 2003ರ ಸೆ. 11ರಂದು ಅಮೆರಿಕದ ವಿಶ್ವ ವಾಣಿಜ್ಯ ಸಂಸ್ಥೆ ಮೇಲೆ ಉಗ್ರರ ದಾಳಿಯಲ್ಲಿಯೂ ಈತ ಭಾಗಿಯಾಗಿದ್ದಾನೆ ಎಂಬ ಮಹತ್ತರ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ. ಗುಜರಾತ್‌ನಲ್ಲಿ (1999) ನಡೆದ ಹಿರಿಯ ಬಿಜೆಪಿ ನಾಯಕ ಹರೇನ್ ಪಾಂಡ್ಯ ಕೊಲೆ ಪ್ರಕರಣ ಸೇರಿದಂತೆ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಗಳನ್ನು ಎಸಗಿ, ಪೊಲೀಸರಿಗೆ ಬೇಕಾಗಿದ್ದ ಎಲ್‌ಇಟಿ ಸದಸ್ಯ ಮೌಲಾನ ಮಹಮ್ಮದ್ ನಾಸಿರುದ್ದೀನ್ ಪುತ್ರನೇ ಮಹಮ್ಮದ್ ಗೌಸ್. ಅಸಾದುಲ್ಲಾ ಇಸ್ಮಾಯಿಲ್ ಅಬೂಬಕರ್ ಬೈಕ್ ಕಳ್ಳನಲ್ಲ. ಪಕ್ಕಾ ಉಗ್ರಗಾಮಿ. ಆತನಿಗೆ ಪಾಕಿಸ್ತಾನದ 'ತೆಹರಿಕ್ ಆಟೀಜ್ ಶಹರಿಕ ಇಸ್ಮಾ' ಉಗ್ರವಾದಿ ಸಂಘಟನೆಯೊಂದಿಗೆ ಸಂಪರ್ಕವಿದೆ ಎನ್ನುತ್ತಾರೆ ದಾವಣಗೆರೆ ಪೂರ್ವ ವಲಯದ ಐಜಿಪಿ ಎಚ್.ಎನ್. ಸತ್ಯನಾರಾಯಣ ರಾವ್. ಪೊಲೀಸರು ಬಂಧಿತರಿಂದ ದೇವಾಲಯ-ಮಸೀದಿಗಳ ರೇಖಾಚಿತ್ರ, ಇಸ್ಲಾಂ ಜಿಹಾದಿ ಸಾಹಿತ್ಯ, ಸಿಡಿಗಳು, ನಕಲಿ ಗುರುತು ಚೀಟಿ, ಕಠಾರಿ, ಎಟಿಎಂ ಕಾರ್ಡುಗಳು, ಅಸಾದುಲ್ಲಾ ವಾಸವಾಗಿದ್ದ ಹುಬ್ಬಳ್ಳಿಯ ಕೇಶವಾಪುರ ಮನೆಯಲ್ಲಿ ಬಂದೂಕು, ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಉಗ್ರರು ಹುಬ್ಬಳ್ಳಿ ವಿಮಾನ ನಿಲ್ದಾಣ, ಉಡುಪಿ ಕೃಷ್ಣ ಮಠ, ಕಾರವಾರ ಕೈಗಾ ಅಣು ವಿದ್ಯುತ್ ಸ್ಥಾವರ ಸ್ಫೋಟ ಸಂಚು ಹೂಡಿದ್ದಾರೆನ್ನಲಾಗಿದೆ. ಇಷ್ಟೆಲ್ಲಾ ಸತ್ಯಾಂಶಗಳು ಉಗ್ರರ ಬಾಯಿಯಿಂದಲೇ ಹೊರಬಂದರೂ ಹುಬ್ಬಳ್ಳಿ ಪೊಲೀಸರು ಇವರು ಉಗ್ರವಾದಿಗಳೆಂಬುದನ್ನು ನಿರಾಕರಿಸಿದ್ದು ಅಚ್ಚರಿಯ ಸಂಗತಿಯೇ. ಈ ನಡುವೆ ಭಯೋತ್ಪಾದಕರು ರಾಜಧಾನಿ ಬೆಂಗಳೂರನ್ನು ಗುರಿಯಾಗಿಸಿದ್ದಾರೆಂಬುದು ತನಿಖೆಯಿಂದ ದೃಢಪಟ್ಟಿದೆ. ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ಎಸಗಲು ನಗರದ ಕೆಲವು ಯುವಕರು ಸಂಚು ರೂಪಿಸಿದ್ದಾರೆನ್ನುವ ಮಾಹಿತಿ ಪೊಲೀಸರಿಗೆ ದೊರೆತಿದ್ದು ಬೆಂಗಳೂರಿನಲ್ಲಿಯೂ ತನಿಖೆ ಆರಂಭಿಸಿದ್ದಾರೆ. ಜಡವಾದ ಪೊಲೀಸ್ ವ್ಯವಸ್ಥೆ, ಅಧಿಕಾರಕ್ಕಾಗಿ ಕಿತ್ತಾಡುವ ಜನಪ್ರತಿನಿಧಿಗಳು, ತರಬೇತಿ ಪಡೆಯದ ಪೊಲೀಸರು ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸದಿರುವುದು... ಎಲ್ಲವೂ ಕರ್ನಾಟಕ ಭಯೋತ್ಪಾದಕರ ಅಡಗುದಾಣವಾಗಲು ಸಹಕಾರಿಯಾಗಿದೆ. ರಾಜ್ಯದಲ್ಲಿ ಉಗ್ರಗಾಮಿ ಚಟುವಟಿಕೆ ಕುರಿತು ಕ್ರಮ ಕೈಗೊಳ್ಳುವ ಘೋಷಣೆಗಳು ಆಶ್ವಾಸನೆಗಳಾಗಿಯೇ ಉಳಿದಿವೆ. 2006ರಲ್ಲಿ ಪಾಕಿಸ್ತಾನ ಮೂಲದ ಫಹಾದ್ ಮೈಸೂರಿನಲ್ಲಿ ಬಂಧಿತನಾಗಿದ್ದು, ವಿಕಾಸಸೌಧ, ವಿಧಾನಸೌಧ, ಮೈಸೂರಿನ ಭಾರತೀಯ ಭಾಷಾ ಕೇಂದ್ರೀಯ ಸಂಸ್ಥೆಯನ್ನು ಸ್ಫೋಟಿಸಲು ಸಂಚು ಹೂಡಿದ್ದ. ಆತನಿಗೆ 'ಲಷ್ಕರ್- ಎ- ತೊಯ್ಬಾ' ಮತ್ತು 'ಅಲ್ ಖದರ್' ಉಗ್ರಗಾಮಿ ಸಂಘಟನೆಗಳೊಂದಿಗೆ ಸಂಪರ್ಕವಿರುವುದು ತನಿಖೆಯಿಂದ ಸಾಬೀತಾಗಿತ್ತು. ಕಳೆದ ವರ್ಷ ಜಮ್ಮು- ಕಾಶ್ಮೀರ ಮೂಲದ ಭಯೋತ್ಪಾದಕ ಇಮ್ರಾನ್ ಅಲಿ ಬಿಲಾಲ್ ಎಂಬಾತನನ್ನು ರಾಜಧಾನಿಯಲ್ಲಿ ಬಂಧಿಸಲಾಗಿತ್ತು. ಇನ್ನೊಂದು ಆತಂಕಕಾರಿ ಅಂಶವೆಂದರೆ ರಾಜ್ಯದ ಯುವಕರೇ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳು ತ್ತಿರುವುದು. ವೈದ್ಯರು, ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಭಯೋತ್ಪಾದನೆಯತ್ತ ವಾಲುತ್ತಿದ್ದಾರೆ. 2006ರಲ್ಲಿ ಬೆಂಗಳೂರಿನ ಎಂಎನ್‌ಸಿಯ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಮುಜಾಮಿಲ್ ಶೇಕ್ ಎಂಬಾತನನ್ನು ಬಂಧಿಸಿದ್ದು, ಆತ ಅದೇ ವರ್ಷ ಮುಂಬೈಯಲ್ಲಿ ನಡೆದ ರೈಲು ಬಾಂಬ್ ಸ್ಫೋಟ ಕೃತ್ಯದಲ್ಲಿ ಭಾಗಿಯಾಗಿದ್ದ. ಕಳೆದ ವರ್ಷವಷ್ಟೇ ಬೆಂಗಳೂರಿನ ಸಬೀಲ್ ಅಹಮ್ಮದ್ ಮತ್ತು ಕಫೀಲ್ ಅಹಮ್ಮದ್ ಎಂಬಿಬ್ಬರನ್ನು ಗ್ಲಾಸ್ಗೊ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬ್ರಿಟನ್ ಪೊಲೀಸರು ಬಂಧಿಸಿದ್ದರು. ಇದೀಗ ಬಂಧಿಯಾದ ಅಸಾದುಲ್ಲಾ ಮತ್ತು ಮಹಮ್ಮದ್ ಗೌಸ್ ಕೂಡ ಎಂಬಿಬಿಎಸ್ ವಿದ್ಯಾರ್ಥಿಗಳು. ಒಂದು ಕಡೆ ಎಲ್‌ಟಿಟಿಇ ಕ್ರಾಂತಿಕಾರಿಗಳು ಕರ್ನಾಟಕದ ಪೊಲೀಸರ ವಶಕ್ಕೆ ಬರುತ್ತಿದ್ದರೆ, ಮತ್ತೊಂದು ಕಡೆ ಭೀಕರ ಕೃತ್ಯಗಳ ಸಂಚು ಹೂಡುತ್ತಿರುವ ಭಯೋತ್ಪಾದಕರು ಪ್ರಬಲರಾಗುತ್ತಿದ್ದಾರೆ. ರಾಜ್ಯ ಭಯೋತ್ಪಾದಕರಿಗೆ ಆಶ್ರಯ ನೀಡುವ ಜೊತೆಗೆ ಹೊಸ ಭಯೋತ್ಪಾದಕರನ್ನೂ ಸೃಷ್ಟಿಸುತ್ತಿದೆ. ಇದನ್ನು ಮಟ್ಟ ಹಾಕುವತ್ತ ಕೂಡಲೇ ನಮ್ಮ ಆಡಳಿತ ಎಚ್ಚೆತ್ತುಕೊಳ್ಳಬೇಕು. ಭದ್ರತೆ ಮತ್ತು ಗುಪ್ತಚರ ವ್ಯವಸ್ಥೆಯನ್ನು ಬಿಗಿಗೊಳಿಸಬೇಕು. ಇಲ್ಲದಿದ್ದರೆ ಗಂಧದ ನಾಡು ಉಗ್ರಗಾಮಿಗಳ ಬೀಡಾಗುವುದರಲ್ಲಿ ಸಂಶಯವಿಲ್ಲ.

 ಕರ್ನಾಟಕದ 'ಉಗ್ರ ಚರಿತ್ರೆ'

2000 ಚರ್ಚ್ ಸ್ಫೋಟ: ಗುಲ್ಬರ್ಗಾ ಮತ್ತು ಬೆಂಗಳೂರಿನ ಚರ್ಚ್‌ಗಳಲ್ಲಿ ಸ್ಫೋಟ.
2002 ಬೆಂಗಳೂರಿನಲ್ಲಿ ಎಲ್‌ಟಿಟಿಇ ಉಗ್ರರ ಬಂಧನ: ಅಪಾರ ಮದ್ದುಗುಂಡು ವಶ
2006 ಲಷ್ಕರ್- ಎ- ತೊಯ್ಬಾದ ದಕ್ಷಿಣ ಭಾರತ ವಿಭಾಗದ ಮುಖ್ಯಸ್ಥ ಅಬ್ದುಲ್ ರೆಹಮಾನ್ ಸೇರಿದಂತೆ ಏಳು ಭಯೋತ್ಪಾದಕರ ಸೆರೆ
2006 ಪಾಕ್ ಮೂಲದ ಉಗ್ರರಾದ ಮಹಮ್ಮದ್ ಫಹಾದ್, ಮೊಹಮ್ಮದ್ ಅಲಿ ಮೈಸೂರಿನಲ್ಲಿ ಬಂಧನ
2007 ಐಐಎಸ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ಜಮ್ಮು- ಕಾಶ್ಮೀರ ಮೂಲದ ಭಯೋತ್ಪಾದಕ ಇಮ್ರಾನ್ ಅಲಿಯಾಸ್ ಬಿಲಾಲ್ ಬೆಂಗಳೂರಿನಲ್ಲಿ ಬಂಧನ
2007 ಗ್ಲಾಸ್ಗೋ ಬಾಂಬು ಸ್ಫೋಟ-ಬೆಂಗಳೂರಿನ ಸಬೀಲ್ ಅಹ್ಮದ್ ಮತ್ತು ಕಫೀಲ್ ಅಹ್ಮದ್ ಬ್ರಿಟನ್ ಪೊಲೀಸರಿಂದ ಬಂಧನ

ಟಿಎಸ್‌ಐ

ಚಿತ್ರಾ ಕರ್ಕೇರಾ

ಪ್ರಸ್ತುತ

ಗಂಧದ ನಾಡು ಉಗ್ರರ ಬೀಡು? : ಭಯೋತ್ಪಾದಕರಿಗೆ ರಾಜ್ಯ ನೆಲೆ ಒದಗಿಸುವ ಜೊತೆಗೆ ಹೊಸ ಉಗ್ರರನ್ನು ಸೃಷ್ಟಿಸುತ್ತಿದೆ

ಚುನಾವಣೆಗೆ ಹೊಸ ತಿರುವು : ಕೆನಡಿ ಬೆಂಬಲ ಪಡೆದ ಒಬಾಮ, ಕ್ಲಿಂಟನ್ ಕುಟುಂಬದ ನಿದ್ದೆಗೆಡಿಸಿದ್ದಾರೆ

ಉಪಖಂಡದ ಪ್ರಥಮ ಜಯ! : ಪ್ರಕರಣಕ್ಕೆ ನಾಂದಿ ಹಾಡಿದ ಸೈಮಂಡ್ಸ್ ಅವರನ್ನು ಸುಮ್ಮನೆ ಬಿಟ್ಟಿದ್ದೇಕೆ?

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .