|
ಸಿಡ್ನಿ ಟೆಸ್ಟ್ ಸಂದರ್ಭದಲ್ಲಿನ ಕಪಿ ಚೇಷ್ಟೆ, ಜನಾಂಗೀಯ ನಿಂದನೆ ಹಾಗೂ ಹರಭಜನ್ ಸಿಂಗ್ ವಿರುದ್ಧದ ಆರೋಪ... ಎಲ್ಲವೂ ಈಗ ಕ್ರಿಕೆಟ್ ಇತಿಹಾಸದ ಪುಟ ಸೇರಿವೆ. ಹರಭಜನ್ ವಿರುದ್ಧ ಮ್ಯಾಚ್ ರೆಫರಿ ಮೈಕ್ ಪ್ರಾಕ್ಟರ್ ಅವರು ಹೇರಿದ್ದ 3 ಟೆಸ್ಟ್‌ಗಳ ನಿಷೇಧದ ವಿರುದ್ಧ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೇಲ್ಮನವಿ ಸಲ್ಲಿಸಿತ್ತು. ಅಂತರ್ ರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಐಸಿಸಿ) ಈ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡುವಂತೆ ನ್ಯಾಯಮೂರ್ತಿ ಜಾನ್ ಹಾನ್ಸೆನ್ ಆಯೋಗ ನೇಮಕ ಮಾಡಿತು. ಈಗ ಆಯೋಗದ ತೀರ್ಪು ಹೊರಬೀಳುವುದರೊಂದಿಗೆ ಆಸ್ಟ್ರೇಲಿಯ ಕ್ರಿಕೆಟ್ ತಂಡದ ಬಣ್ಣವೂ ಬಯಲಾಗಿದೆ.
ಪ್ರಾಕ್ಟರ್ ಅವರು ಆಸ್ಟ್ರೇಲಿಯ ತಂಡದ ಆಟಗಾರರ ಮಾತನ್ನು ನಂಬಿಕೊಂಡು ಕ್ರಿಕೆಟ್ ನೀತಿ ಸಂಹಿತೆಯ ಲೆವೆಲ್ 3.3 ಪ್ರಕಾರ ಹರಭಜನ್ ಅವರ ಮೇಲೆ 3 ಟೆಸ್ಟ್‌ಗಳ ನಿಷೇಧ ಹೇರಿದ್ದರು. ಲೆವೆಲ್ 3.3 ಎಂದರೆ ಜನಾಂಗೀಯ ನಿಂದನೆ ಮಾಡಿದ ಆರೋಪ. ಆದರೀಗ ಆ ಆರೋಪದ ಮಟ್ಟವನ್ನು ಲೆವೆಲ್ 2.8ಕ್ಕೆ ಇಳಿಸಲು ಆಯೋಗ ನಿರ್ಧರಿಸಿದೆ. ಆ ಮೂಲಕ ಹರಭಜನ್ ಆಸ್ಟ್ರೇಲಿಯದ ಆಟಗಾರ ಆಂಡ್ರ್ಯೂ ಸೈಮಂಡ್ಸ್ ವಿರುದ್ಧ ಜನಾಂಗೀಯ ಆರೋಪ ಮಾಡಿಲ್ಲ ಎನ್ನುವುದು ದೃಢಪಟ್ಟಿದೆ. ಪ್ರಾಕ್ಟರ್ ಹೇರಿದ್ದ ನಿಷೇಧವನ್ನು ಹಿಂತೆಗೆದುಕೊಂಡು ಪಂದ್ಯದ ಶುಲ್ಕದಲ್ಲಿ ಶೇ.೫೦ರಷ್ಟು ದಂಡ ಕಟ್ಟುವಂತೆ ಹರಭಜನ್‌ಗೆ ಆಯೋಗ ಆದೇಶಿಸಿದೆ.
ಹರಭಜನ್ ವಿರುದ್ಧದ ಜನಾಂಗೀಯ ನಿಂದನೆ ಆರೋಪ, ನಂತರ ಹೇರಲಾದ ನಿಷೇಧ, ಬಿಸಿಸಿಐ ಸಲ್ಲಿಸಿದ ಮೇಲ್ಮನವಿ...ಇದೆಲ್ಲ ಆದ ಮೇಲೂ ಟರ್ಬನೇಟರ್ ವಿರುದ್ಧ ತೀರ್ಪು ಬಂದಲ್ಲಿ ತಾನು ಏಕದಿನ ಪಂದ್ಯಗಳ ತ್ರಿಕೋನ ಸರಣಿಯಿಂದ ಹಿಂದಕ್ಕೆ ಸರಿಯುವುದಾಗಿ ಭಾರತ ತಂಡ ಸ್ಪಷ್ಟ ಪಡಿಸಿತ್ತು. ಬಿಸಿಸಿಐ ಕೂಡ ತಂಡದ ಬೆಂಬಲಕ್ಕೆ ನಿಂತ ಹಿನ್ನಲೆಯಲ್ಲಿ ಐಸಿಸಿಗೆ ಬಿಸಿ ಮುಟ್ಟಿತ್ತು. ದುರಂತವೆಂದರೆ ಸೌಹಾರ್ದತೆಯ ದೃಷ್ಟಿಯಿಂದ ಭಾರತ ತಂಡದವರು ಆಸ್ಟ್ರೇಲಿಯದ ಸ್ಪಿನ್ನರ್ ಬ್ರಾಡ್ ಹಾಗ್ ವಿರುದ್ಧ ಮಾಡಿದ್ದ ಆರೋಪವನ್ನು ಕೈಬಿಟ್ಟಿದ್ದರು. ಆದರೆ, ಸಿಡ್ನಿಯಲ್ಲಿ ಡಿಸೆಂಬರ್ 29ರಂದು ನಡೆದ ಈ ಕರಾಳ ಘಟನೆಗೆ ನಿಜವಾಗಿಯೂ ಯಾರು ಕಾರಣರು? ಎಂಬ ಪ್ರಶ್ನೆಗೆ ಉತ್ತರ ಹುಡುಕದೇ ರಿಕಿ ಪಾಂಟಿಂಗ್ ತಂಡ ಹರಭಜನ್ ವಿರುದ್ಧ ದೂರನ್ನು ಎತ್ತಿ ಹಿಡಿದಿತ್ತು. ಅದರ ಪರಿಣಾಮವಾಗಿಯೇ ಈ ಪ್ರಕರಣ ಆಯೋಗದ ಮೆಟ್ಟಿಲವರೆಗೆ ಏರಿ ಹೋಯಿತು.
ಡಿಸೆಂಬರ್ 29ರಂದು ನಡೆದ ಆಯೋಗದ ವಿಚಾರಣೆ ಸಂದರ್ಭದಲ್ಲಿ ಬ್ರಯಾನ್ ವಾರ್ಡ್ ಕ್ರಿಕೆಟ್ ಆಸ್ಟ್ರೇಲಿಯ ಪರ ವಾದ ಮಂಡಿಸಿದರು. ಬಿಸಿಸಿಐ ಪರ ಖ್ಯಾತ ವಕೀಲರಾದ ವಿ.ಆರ್. ಮನೋಹರ್ ವಾದ ಮಂಡಿಸಿದರು. ಈ ಸಂದರ್ಭದಲ್ಲಿ ಎರಡೂ ಪಕ್ಷದ ಸಾಕ್ಷಿಗಳ ವಿಚಾರಣೆ ಕೂಡ ನಡೆಯಿತು. ಲಭ್ಯವಿದ್ದ ಸಾಕ್ಷ್ಯಾಧಾರಗಳ ನೆರವಿನಿಂದ ಸೈಮಂಡ್ಸ್ ಅವರು ಹರಭಜನ್ ವಿರುದ್ಧ ಮಾಡಿದ್ದ ಆರೋಪವನ್ನು ಸಾಬೀತು ಮಾಡಲು ಆಗುವುದಿಲ್ಲ ಎಂದು ಆಯೋಗ ಅಭಿಪ್ರಾಯ ಪಟ್ಟಿದೆ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವಾರು ಪ್ರಶ್ನೆಗಳಿಗೆ ಉತ್ತರವೇ ಸಿಕ್ಕಿಲ್ಲ. ಅಂತಿಮ ತೀರ್ಪಿನ ಸಂದರ್ಭದಲ್ಲಿ ಕೂಡ ಹರಭಜನ್ ಅವರು ಸೈಮಂಡ್ಸ್ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎಂಬ ನಿರ್ಧಾರಕ್ಕೆ ಬಂದೇ ಲೆವೆಲ್ 2.8 ಆರೋಪ ಹೊರಿಸಿ ಶಿಕ್ಷೆ ನೀಡಲಾಗಿದೆ. ಆದರೆ, ಸುಳ್ಳು ಆರೋಪ ಮಾಡಿದ ಸೈಮಂಡ್ಸ್ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಸಿಡ್ನಿಯಲ್ಲಿ ಆ ಪ್ರಕರಣ ಆರಂಭವಾಗಿದ್ದೇ ಸೈಮಂಡ್ಸ್, ಹರಭಜನ್ ವಿರುದ್ಧ ಮಾತಿನ ದಾಳಿ ಆರಂಭಿಸಿದ ಮೇಲೆ. ಆಸ್ಟ್ರೇಲಿಯದಲ್ಲಿನ ಕ್ರಿಕೆಟ್ ಪಂದ್ಯಗಳ ಪ್ರಸಾರದ ಹಕ್ಕನ್ನು ಪಡೆದಿರುವ ಚಾನೆಲ್ 9 ನೀಡಿರುವ ದೃಶ್ಯ-ಶ್ರವಣಾಧರಿತ ಸಾಕ್ಷ್ಯ ಅವಲೋಕಿಸಿದರೆ ಸೈಮಂಡ್ಸ್ ಈ ಪ್ರಕರಣಕ್ಕೆ ನಾಂದಿ ಹಾಡಿದ ವ್ಯಕ್ತಿ ಎನ್ನುವುದು ಶೇಕಡಾ ನೂರರಷ್ಟು ಖಚಿತವಾಗುತ್ತದೆ. ಹಾಗಿದ್ದರೆ ಸೈಮಂಡ್ಸ್ ಅವರನ್ನು ಹಾಗೆಯೇ ಬಿಟ್ಟಿದ್ದೇಕೆ?
ಈ ನಡುವೆಯೂ ಒಂದು ಸಕಾರಾತ್ಮಕ ಪರಿಣಾಮವಾಗಿದೆ. ಅದೇನೆಂದರೆ ಸದಾ ಭಾರತದ ಉಪಖಂಡದ ಆಟಗಾರರ ಮೇಲೆ ಆಸ್ಟ್ರೇಲಿಯದ ಆಟಗಾರರು ಒಂದಲ್ಲ ಒಂದು ಆರೋಪ ಮಾಡುತ್ತಲೇ ಬಂದಿದ್ದಾರೆ. ಅದೆಲ್ಲ ಸಂದರ್ಭಗಳಲ್ಲಿ ಐಸಿಸಿ ಆಸ್ಟ್ರೇಲಿಯ ಪರ ವಹಿಸಿತ್ತು. ಈ ಬಾರಿ ಅದು ಎದುರು ಹಾಕಿಕೊಂಡಿದ್ದು 'ಬಲಿಷ್ಠ' ಭಾರತ ತಂಡವನ್ನು. ಇಡೀ ಕ್ರಿಕೆಟ್ ಲೋಕದ ವ್ಯವಹಾರದ ಬೇರು ಇರುವುದು ಭಾರತ ಉಪಖಂಡದಲ್ಲಿ. ಅಕಸ್ಮಾತ್ ಈ ಬೇರು ಕಡಿದು ಹೋದಲ್ಲಿ ತಮ್ಮದೇನೂ ನಡೆಯುವುದಿಲ್ಲ ಎಂದು ಐಸಿಸಿಗೆ ಸ್ಪಷ್ಟವಾಗಿ ತಿಳಿದಿದೆ. ಆ ಕಾರಣದಿಂದಲೇ ಈ ಬಾರಿ ಭಾರತದ ಎದುರು ಐಸಿಸಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯ ಎರಡೂ ತಲೆತಗ್ಗಿಸಿ ನಿಲ್ಲುವಂತಾಗಿದೆ. ಇನ್ನು ಉಳಿದ ದೇಶಗಳು ಕೂಡ ಇದೇ ಹಾದಿ ಹಿಡಿಯಬೇಕು.
ಟಿಎಸ್‌ಐ
ಸೈಬಲ್ ಚಟರ್ಜಿ
|