ಫೆಬ್ರುವರಿ 13, 1879ರಂದು ಬಂಗಾಳಿ ಕುಟುಂಬವೊಂದರಲ್ಲಿ ಜನಿಸಿದ ಸ್ವಾತಂತ್ರ್ಯ ಹೋರಾಟಗಾರ್ತಿ ಸರೋಜಿನಿ ನಾಯ್ಡು ಅವರ ಸಮಗ್ರ ಕವನ ಸಂಕಲನಗಳಿಂದಾಗಿ ಸಮಾಜದಲ್ಲಿ ಗುರುತಿಸಿಕೊಂಡವರು. ಹೈದರಾಬಾದ್ ಸರೋಜಿನಿ ಅವರ ಹುಟ್ಟೂರು. 1898ರಲ್ಲಿ, ಅಂತರ್ ಜಾತೀಯ ವಿವಾಹ ನಿಷಿದ್ಧವಾಗಿದ್ದ ಅಂದಿನ ಸಂಪ್ರದಾಯಸ್ಥ ಕಾಲದಲ್ಲೇ ಡಾ. ಗೋವಿಂದರಾಜುಲು ನಾಯ್ಡು ಅವರನ್ನು ವಿವಾಹವಾದ ದಿಟ್ಟೆ ಸರೋಜಿನಿ. 1916ರ ಮಹಾತ್ಮ ಗಾಂಧಿ ಭೇಟಿ ನಂತರ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡರು. ಸ್ವಾತಂತ್ರ್ಯಾ ನಂತರ ಅವರು ಉತ್ತರ ಪ್ರದೇಶದ ಮೊದಲ ರಾಜ್ಯಪಾಲರಾಗಿ ಆಯ್ಕೆಯಾದರು. 1934ರ ಆಗಸ್ಟ್‌ನಲ್ಲಿ ಅವರು ಮಹಾತ್ಮ ಗಾಂಧಿ ಅವರಿಗೆ ಈ ಪತ್ರವನ್ನು ಬರೆದರು.
ಆಗಸ್ಟ್, 1934
ಪ್ರೀತಿಯ ಲಿಟ್ಲ್ ಮನ್
ಅದ್ಭುತಗಳು ಘಟಿಸುತ್ತಿರುವ ಯುಗ ಇದು. ಭೂಮಿ, ಸಮುದ್ರ, ಶತ ಶತಮಾನಗಳ ನಿಗೂಢಗಳನ್ನು ಪತ್ತೆಹಚ್ಚಿ ಅವನ್ನೆಲ್ಲಾ ದೈನಂದಿನ ಜೀವನಕ್ಕೆ ತಳುಕು ಹಾಕುತ್ತಿರುವ ಈ ಕಾಲದಲ್ಲಿ ಸರಿ ಸಾಟಿಯಿಲ್ಲದ ಮತ್ತು ಎದುರಿಸಲಾಗದ ಭಗವತ್‌ಸ್ವರೂಪಿ ಅಚ್ಚರಿ ಎಂದರೆ ನೀವೇ ಅಲ್ಲವೆ? ಪ್ರತಿಯೊಂದಕ್ಕೂ ಕಾರಣಗಳನ್ನು ಅರಸುವ ಈ ಶತಮಾನದಲ್ಲಿ, ವಿಶ್ವಾಸದ ಪ್ರತಿರೂಪವಾಗಿ ಎಲ್ಲರಿಗೂ ಪ್ರಿಯವಾಗಿ ಮತ್ತು ಸ್ಫೂರ್ತಿ ನೀಡುವ ಉಪದೇಶಗಳನ್ನು ನೀಡುತ್ತಿರುವಿರಿ. 'ಗಾಂಧಿ, ಕನಸುಗಾರ ಮತ್ತು ಕಾರ್ಮಿಕ’ ಎಂದು ನಿಮ್ಮ ಹೆಸರು ಇತಿಹಾಸದಲ್ಲಿ ಅಮರವಾಗದೆ ಇರುವುದೆ?
ನಿಮ್ಮ ಕನಸು ಹಾಗೂ ಕರ್ಮಗಳು ಒಂದೇ ಆಗಿವೆ. ಆದರೆ ಇದೇ ವ್ಯಕ್ತಿ ತನ್ನ ಕನಸು ಮತ್ತು ಕರ್ಮ ಒಂದೇ ಆಗಿರುವಂತೆ ನೋಡಿಕೊಳ್ಳಲು ಮತ್ತೊಮ್ಮೆ ಅಂತಹ ಅಪೂರ್ವ ಪರೀಕ್ಷೆಯನ್ನು ಎದುರಿಸಬಲ್ಲರೆ? ಮತ್ತೊಂದು ಬಾರಿ ನಿಮ್ಮ ಅಶಕ್ತ ದೇಹ ಸುದೀರ್ಘ ಕಾಲ ಹಸಿವು ಮತ್ತು ನೋವಿನ ನರಕಯಾತನೆಯನ್ನು ಸಹಿಸಬಲ್ಲುದೆ? ಈ ಪ್ರಯತ್ನದಲ್ಲಿ ಮರಣವೂ ಸಂಭವಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ನಿಮ್ಮ ಈ ತೇಜಸ್ಸು ಅಜ್ಞಾನದ ಕತ್ತಲೆಯಲ್ಲಿ ಬಂಧಿಯಾಗಿರುವ ಮಾನವ ಜೀವನಕ್ಕೆ ಬೆಳಕಿನ ಕಿರಣ ತೋರುವುದರಲ್ಲಿ ಸಂಶಯವಿಲ್ಲ. ಭಯದಿಂದ ಕಂಪಿಸುತ್ತಿರುವ ಪಾದಗಳು ಮತ್ತು ಭರವಸೆ ಕಂದಿ ಹೋಗಿರುವ ಕಂಗಳು ನಿಮ್ಮ ಅದಮ್ಯ ಚೇತನದಿಂದ ಮತ್ತೆ ಮಿನುಗಬಹುದು. ಮಾನಸಿಕವಾಗಿ ಅವರನ್ನು ಸದೃಢರನ್ನಾಗಿಸಿ, ಹೊಸಹಾದಿಯಲ್ಲಿ ಕರೆದೊಯ್ಯುವ ನಿಮ್ಮ ಕಾಳಜಿಯಿಂದ ಅವರ ಬದುಕು ಹಸನಾಗಲಿ.
ನನ್ನ ಪ್ರೀತಿಯ ಸಂತರಾದ ಗಾಂಧಿ ಅವರೇ, ವಿಶ್ವವೇ ಹಾಡಿ ಹೊಗಳುವಂತಹಾ ನಿಮ್ಮ ತ್ಯಾಗವನ್ನು ಪ್ರಶ್ನಿಸುವ ಧೈರ್ಯ ಯಾರಿಗಿದೆ? ಫ್ರಾನ್ಸ್‌ನ ಆಧುನಿಕ ಕವಿಯೊಬ್ಬ 'ಪ್ರತಿಯೊಬ್ಬರೂ ತಮ್ಮ ವಿಧಿಗೆ ತಾವೇ ಹೊಣೆಗಾರರು” ಎಂದು ಹೇಳಿರುವುದನ್ನು ನಾನಿಲ್ಲಿ ನೆನಪಿಸುವೆ. ಏಕೆಂದರೆ ಪಾಪ ಕೃತ್ಯ ಎಸಗಿದವರನ್ನು ಕ್ಷಮಿಸಿ, ಅವರಿಗೆ ಮುಕ್ತಿ ನೀಡುವ ಧ್ಯೇಯ ನಿರ್ವಹಿಸಬೇಕೆಂಬ ವಿಧಿಬರಹ ನಿಮ್ಮದು. ನೀವು ಸ್ವತಃ ಆರಿಸಿಕೊಂಡಿರುವ ಹಾದಿಯಲ್ಲಿ ಹಗಲು- ರಾತ್ರಿ ಎನ್ನದೆ ನೀವು ಅನುಭವಿಸಿದ ನೋವುಗಳನ್ನು ನಾವು ಹಂಚಿಕೊಳ್ಳಲು ಬಯಸುತ್ತೇವೆ. ಹಾಗೆಯೇ ನಿಮ್ಮ ನಂಬಿಕೆ ಮತ್ತು ಭರವಸೆಗಳಲ್ಲೂ ಭಾಗಿಯಾಗ ಬಯಸುತ್ತೇವೆ. ನಾನು ನಿಮ್ಮೊಂದಿಗೆ ಮತ್ತು ನಿಮ್ಮ ಕೆಲಸಗಳಲ್ಲಿ ಸೇರಲು ಯೋಗ್ಯಳಲ್ಲದಿದ್ದರೂ ನಿಮ್ಮ ಗೆಲುವನ್ನು ಹಂಚಿಕೊಳ್ಳುತ್ತೇನೆ.
ನೀವು ಈಗಾಗಲೇ ಅಪೂರ್ವವಾದ ಭರವಸೆಯ ಬೆಳಕಿನಲ್ಲಿ ಬದುಕು ಸವೆಸುತ್ತಿದ್ದೀರಿ. ಇದು ನಮ್ಮ ಹೃದಯದಲ್ಲಿ ಅಚ್ಚಳಿಯದೆ ಶಾಶ್ವತವಾಗಿ ಉಳಿಯಲಿದೆ. ಆದರೆ ನಿಮ್ಮ ಆ ಪರಿಶುದ್ಧ ತ್ಯಾಗದ ದಿನಗಳಲ್ಲಿ ನಾನು ನಿಮ್ಮ ಜೊತೆಗಿಲ್ಲ ಎಂಬ ದುಃಖ ನನ್ನನ್ನು ಬಹುವಾಗಿ ಕಾಡುತ್ತಿದೆ. ನಿಮ್ಮ ನೆಮ್ಮದಿಗಾಗಿ ಅಲ್ಲ. ನನ್ನ ನೆಮ್ಮದಿಗಾಗಿ ನಾನು ನಿಮ್ಮ ಜೊತೆ ಇರಬಯಸಿದ್ದೆ. ಆದರೆ ನನ್ನ ಇಲ್ಲಿನ ಕರ್ತವ್ಯ ನನ್ನನ್ನು ಅಲ್ಲಿಗೆ ಬರಗೊಡುತ್ತಿಲ್ಲ. ಏನೇ ಆಗಲಿ, ನಿಮ್ಮ ಮೇಲಿನ ನನ್ನ ಪ್ರೀತಿ ಚಿರಕಾಲ ಉಳಿಯಲಿದೆ. ಆ ಪ್ರೀತಿಯ ಸಂದೇಶಕ್ಕೆ ಯಾರೂ ಕೂಡ ಅಡೆತಡೆ ಒಡ್ಡಲು ಸಾಧ್ಯವಿಲ್ಲ ಎಂಬುದನ್ನೂ ನಾನಿಲ್ಲಿ ಸ್ಪಷ್ಟಪಡಿಸಲು ಬಯಸುತ್ತೆನೆ.