ಕಾಂಗೋ: ಸಮಸ್ಯೆ
ಕದನವಿರಾಮ: ಭರವಸೆಯ ಆಶಾಕಿರಣ
ಭೌಗೋಳಿಕ ಪರಿಧಿಯನ್ನೂ ದಾಟಿ ಪ್ರತಿಧ್ವನಿಸಿದ ಸಂಘರ್ಷದ ಕಹಳೆ
ಕಾಂಗೋ ದೇಶದ ಒಂದೂವರೆ ದಶಕಗಳ ಯುದ್ಧಕ್ಕೆ ಪರದೆ ಎಳೆಯಲಾಗಿದೆ. ಸರ್ಕಾರ ಮತ್ತು ಉಗ್ರಗಾಮಿಗಳು ಕದನ ವಿರಾಮಕ್ಕೆ ಸಹಿ ಹಾಕಿದ್ದು, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಆಗಸದಲ್ಲಿ ಭರವಸೆಯ ಹೊಂಬೆಳಕು ಮೂಡಿದೆ. ಈ ಸಂಘರ್ಷದ ಬಿಸಿ ತಗಲಿದ್ದ ನೆರೆಯ ದೇಶಗಳೂ ಸಮಾಧಾನದ ನಿಟ್ಟುಸಿರು ಬಿಟ್ಟಿವೆ. ಅಧ್ಯಕ್ಷ ಜೋಸೆಫ್ ಕಬಿಲಾ ಮತ್ತು ಉಗ್ರರ ಪ್ರತಿನಿಧಿಯಾಗಿದ್ದ ದೇಶಭ್ರಷ್ಟ ನಾಯಕ ಲಾರೆಂಟ್ ಕುಂಡಾ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಕಾಂಗೋ ಯುದ್ಧವನ್ನು ಸಾಮಾನ್ಯವಾಗಿ ಆಫ್ರಿಕಾದ ವಿಶ್ವ ಯುದ್ಧ ಎಂದೇ ಬಣ್ಣಿಸಲಾಗುತ್ತದೆ. ಎರಡು ಜಾಗತಿಕ ಮಹಾ ಯುದ್ಧಗಳಿಗಿಂತ ಭೀಕರ ಬೆಳವಣಿಗೆಗಳನ್ನು ಈ ಕಾಂಗೋ ಯುದ್ಧ ಕಂಡಿದೆ. ಇದಕ್ಕೆ ಈಗಾಗಲೇ ಸುಮಾರು 5 ದಶಲಕ್ಷಗಳಿಗಿಂತಲೂ ಹೆಚ್ಚು ಜನ ಬಲಿಯಾಗಿದ್ದಾರೆ. ಬೆಲ್ಜಿಯಂನ ವಸಾಹತುವಾಗಿದ್ದ ಈ ಪ್ರಾಂತ್ಯದ ಸಂಘರ್ಷದ ಕಹಳೆ ತನ್ನ ಭೌಗೋಳಿಕ ಪರಿಧಿಯನ್ನು ದಾಟಿ ಪ್ರತಿಧ್ವನಿಸಿದೆ. ಆಶ್ಚರ್ಯವೇ ಇಲ್ಲ, ಒಂದೂವರೆ ದಶಕದ ಹಿಂದಿನ ಸಮರದ ಪರಿಣಾಮ ಸಾಮಾನ್ಯ ಎಲ್ಲಾ ಸಾಮಾಜಿಕ ಸೂಚ್ಯಂಕಗಳಲ್ಲೂ ಪ್ರತಿಫಲಿಸಿದೆ. ಇದು ಅತೀ ಹೆಚ್ಚು ಎಚ್‌ಐವಿ ಪೀಡಿತರ ದೇಶವೂ ಹೌದು. ಸಂಪನ್ಮೂಲಗಳ ಖನಿಜವಾಗಿದ್ದೂ ಜನಾಂಗೀಯ ಸಂಘರ್ಷ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಮೂಲಕ ಸ್ವತಃ ವಿನಾಶವನ್ನು ಆಹ್ವಾನಿಸಿಕೊಂಡಿರುವ ಆಫ್ರಿಕಾ ದೇಶಗಳಿಗೆ ಅತ್ಯುತ್ತಮ ಉದಾಹರಣೆ ಕಾಂಗೋ.
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ದೇಶದಲ್ಲಿ 200 ಜನಾಂಗೀಯ ಸಂಘಟನೆಗಳಿವೆ. ಈ ಸಂಘಟನೆಗಳಿಗೆ ಪರಸ್ಪರ ಕಾದಾಟಕ್ಕಿಳಿಯಲು ಸಮಂಜಸ ಕಾರಣಗಳೂ ಇವೆ. ತಮ್ಮ ತಂದೆ ಲಾರೆಂಟ್ ಕಬಿಲ ಅವರಿಗೆ ಸಾಧ್ಯವಾಗದೆ ಇದ್ದುದನ್ನು ಜೋಸೆಫ್ ಕಬಿಲ ಅವರು ಸಾಧಿಸಿದ್ದಾರೆ. 'ಪ್ರೆಟೋರಿಯನ್ ಅಕಾರ್ಡ್' ಜೊತೆ ಸಂಧಾನ ಮಾತುಕತೆ ನಡೆಸುವಲ್ಲಿ ಜೋಸೆಫ್ ಕಬಿಲ ತೋರಿದ ಚಾಕಚಕ್ಯತೆಯಿಂದ ಈ ಪ್ರಾಂತ್ಯ ಸಮಾಧಾನದ ಉಸಿರು ಬಿಡುವ ಹಾಗಾಗಿದೆ.
ಈ ಬಾರಿಯೂ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಕೆಲ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗಿ ಬಂದಿತ್ತು. ಸಂಧಾನ ಮಾತುಕತೆಗಾಗಿ ದೇಶಭ್ರಷ್ಟ ನಾಯಕ ಲಾರೆಂಟ್ ಕುಂಡಾ ವಿರುದ್ಧ ಹೊರಡಿಸಿದ್ದ ಬಂಧನದ ವಾರಂಟನ್ನು ಹಿಂತೆಗೆದುಕೊಳ್ಳಲಾಗಿದೆ. ವಿಶ್ವಸಂಸ್ಥೆಯ 'ಶಾಂತಿ ಸ್ಥಾಪನಾ ಕಾರ್ಯಾಚರಣೆ ವರದಿ' ಈಗಾಗಲೇ ದೇಶದ ವಿರುದ್ಧ ಆರೋಪಗಳ ಪಟ್ಟಿಯನ್ನೇ ಸಿದ್ಧಪಡಿಸಿದೆ. ಮಾನವ ಹಕ್ಕುಗಳ ಉಲ್ಲಂಘನೆ ಇಲ್ಲಿ ತೀವ್ರ ಸ್ವರೂಪದಲ್ಲಿದೆ. ಹಣಕಾಸು ಅವ್ಯವಸ್ಥೆಯಿಂದಾಗಿ ಅರ್ಥವ್ಯವಸ್ಥೆ ಕುಸಿದಿದೆ. ದೇಶ ಭ್ರಷ್ಟಾಚಾರಿಗಳ ಸ್ವರ್ಗವೆನಿಸಿದೆ. ದೇಶದ ಸ್ಥಿತಿಯನ್ನು ಸುಸ್ಥಿರಗೊಳಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ ಈ ಕದನ ವಿರಾಮ. ಇತ್ತೀಚೆಗೆ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ವಿಶ್ವ ಸಂಸ್ಥೆಯ ವಿಶೇಷ ವರದಿಗಾರ ಯಾಕಿನ್ ಎರ್ಟರ್ಕ್ ಅವರು ಕಾಂಗೋ ಬಗ್ಗೆ ವಿವರ ನೀಡುತ್ತಾ, ಪರಿಸ್ಥಿತಿ ತುಂಬಾ ಭಯಂಕರವಾಗಿದೆ ಎಂದು ಉದ್ಗರಿಸಿದ್ದರು. ಮೇಲ್ನೋಟಕ್ಕೆ ಕಂಡು ಬರುತ್ತಿರುವ ಬಲಿಪಶುಗಳ ಅಂಕಿ ಅಂಶಗಳನ್ನೇ ನಾವು ಮಹಾವಿಪತ್ತು ಎಂದು ಬಣ್ಣಿಸುತ್ತಿದ್ದೇವೆ. ಇನ್ನೂ ಹಲವು ಗ್ರಾಮೀಣ ಪ್ರದೇಶಗಳಲ್ಲಿರುವ ಜನ ಸಾಮಾನ್ಯರ ಸ್ಥಿತಿಗತಿಯ ಬಗ್ಗೆ ನಮಗೆ ಅರಿವೇ ಇಲ್ಲ ಎಂದಿದ್ದಾರೆ ಯಾಕಿನ್.
ಆದರೂ ಕದನ ವಿರಾಮಕ್ಕೆ ಸಹಿ ಹಾಕಿ ದೇಶ ಮೌಲ್ಯಯುತ ಹೆಜ್ಜೆಯನ್ನೇ ಇಟ್ಟಿದೆ ಎನ್ನಬಹುದು. ಪೂರ್ವ ಕಾಂಗೋ ಪ್ರದೇಶದಲ್ಲಿ ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ಮತ್ತು ಸಮಸ್ಯೆಯನ್ನು ಬುಡ ಸಮೇತ ಕಿತ್ತು ಹಾಕುವ ಪ್ರಯತ್ನವಾಗಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಅಮೆರಿಕ ಸ್ವಾಗತಿಸಿದೆ ಎಂದು ವೈಟ್ ಹೌಸ್ ವಕ್ತಾರ ಎವೆನ್ ಡಾನಾ ಪೆರಿನೊ ಹರ್ಷ ವ್ಯಕ್ತಪಡಿಸಿದ್ದಾರೆ. ಏನೂ ನಡೆದೇ ಇಲ್ಲ ಎನ್ನುವುದಕ್ಕಿಂತ ಏನೋ ಒಂದು ನಡೆಯಿತು ಎನ್ನುವುದೇ ಒಳಿತು. ಆದರೆ ಇದು ಶಾಶ್ವತ ಕದನ ವಿರಾಮವೆ ಅಥವಾ ಪರಿಸ್ಥಿತಿಯಿಂದ ಕೆಲ ಸಮಯದ ಮಟ್ಟಿಗೆ ನುಣುಚಿಕೊಳ್ಳುವ ಪ್ರಯತ್ನವೆ ಎನ್ನುವುದಕ್ಕೆ ಕಾಲವೇ ಉತ್ತರ ಹೇಳಬೇಕಾಗಿದೆ.
ಟಿಎಸ್‌ಐ
ಪ್ರಥಿಕೃತ್ ಪಾಯ್ನೆ
ಪರಮಾಣು: ಬಿಕ್ಕಟ್ಟು
ಇರಾನ್ ಮೇಲೆ ಮತ್ತೆ ದಿಗ್ಬಂಧನ?
ಆರ್ಥಿಕ ನಿಷೇಧ ಹೇರುವ ಅಮೆರಿಕದ ಬಯಕೆ ಕೈಗೂಡುತ್ತಿಲ್ಲ
ರಾಷ್ಟ್ರೀಯ ಗುಪ್ತಚರ ಅಂದಾಜು ವರದಿಯ ವಿವರಗಳ ಹೊರತಾಗಿಯೂ ಜಾಗತಿಕ ಶಕ್ತಿಗಳು ಇರಾನ್ ಮೇಲೆ ಮತ್ತೊಂದು ದಿಗ್ಬಂಧನ ಹೇರುವ ನೀಲನಕ್ಷೆಯನ್ನು ಸಿದ್ಧಪಡಿಸಿವೆ. ಅಮೆರಿಕ ಕಾರ್ಯದರ್ಶಿ ಕಾಂಡೊಲಿಸಾ ರೈಸ್ ಮತ್ತು ಇತರ ಐದು ದೇಶಗಳ ವಿದೇಶಾಂಗ ಸಚಿವರು ಬರ್ಲಿನ್‌ನಲ್ಲಿ ನಡೆಸಿದ ಸಮಾಲೋಚನೆ ಬಳಿಕ ಇರಾನ್‌ನ ಪರಮಾಣು ಕಾರ್ಯಕ್ರಮ ಕುರಿತು ಅಧಿಕೃತ ಒಮ್ಮತಕ್ಕೆ ಬಂದಿದ್ದಾರೆ ಮತ್ತು ವಿಶ್ವ ಸಂಸ್ಥೆಯ ನಿರ್ಣಯಗಳನ್ನು ಜಾರಿ ಮಾಡುವ ಎಲ್ಲಾ ಸೂಚನೆಗಳು ಕಂಡು ಬಂದಿವೆ. ಈ ನಿರ್ಣಯಗಳ ಸಂಪೂರ್ಣ ವಿವರಗಳು ಇನ್ನೂ ಬಿಡುಗಡೆಯಾಗಿಲ್ಲವಾದರೂ, ಮತ್ತೆ ನಿಷೇಧ ಹೇರಲಾಗುವುದು ಹಾಗೂ ಪ್ರಸ್ತುತ ಇರುವ ನಿಷೇಧವನ್ನು ವಿಸ್ತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಭೆಯಲ್ಲಿ ಈ ಸಂಬಂಧ ಎಲ್ಲಾ ವಿಷಯಗಳನ್ನು ವಿಸ್ತೃತವಾಗಿ ಚರ್ಚಿಸಲಾಗಿದೆ ಎಂದಿದ್ದಾರೆ ಶೃಂಗ ಸಮ್ಮೇಳನದ ಬಳಿಕ ಮಾತನಾಡಿದ ಜರ್ಮನಿಯ ವಿದೇಶಾಂಗ ಸಚಿವ ಫ್ರಾಂಕ್- ವಾಲ್ಟರ್ ಸ್ಟೆನ್‌ಮಿಯರ್. ಸಭೆಯಲ್ಲಿ ಬಿಗುವಿನ ವಾತಾವರಣವಿದ್ದ ಸೂಚ್ಯವೂ ಅವರ ಮಾತುಗಳಲ್ಲಿ ಇಣುಕಿತ್ತು. ಜರ್ಮನಿ, ಫ್ರಾನ್ಸ್ ಮತ್ತು ಇಂಗ್ಲೆಂಡ್‌ಗಳು ಭವಿಷ್ಯದ ಚರ್ಚೆ ಕುರಿತಂತೆ ವಿಶ್ವಸಂಸ್ಥೆ ಭದ್ರತಾ ಸಭೆಯ ಕರಡು ಪ್ರತಿಯನ್ನು ಸಿದ್ಧಪಡಿಸಲಿವೆ. ಜರ್ಮನಿ ಸೇರಿದಂತೆ 'ಪಿ5 ಪ್ಲಸ್ 1' ಎಂದೇ ಕರೆಯಲಾಗುವ ಫ್ರಾನ್ಸ್, ಚೀನಾ, ರಷ್ಯಾ, ಅಮೆರಿಕ ಮತ್ತು ಬ್ರಿಟನ್ ಪರವಾಗಿ ಉತ್ತರಿಸಿದ ಸ್ಟೆನ್‌ಮಿಯರ್, ಈ ನಿಷೇಧಗಳ ಅಗತ್ಯವೇ ಬಾರದಂತೆ ಇರಾನ್ ಕೂಡಲೇ ತನ್ನ ಪರಮಾಣು ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸುವತ್ತ ಕಾರ್ಯ ಪ್ರವೃತ್ತವಾಗುವುದು ಒಳಿತು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಜಾಗತಿಕ ಶಕ್ತಿಗಳು ಯಾವುದೇ ಗಂಭೀರ ಆರ್ಥಿಕ ನಿಷೇಧಗಳನ್ನು ಹೇರುವುದಿಲ್ಲ ಎನ್ನುವುದಂತೂ ಖಚಿತ. ಗ್ಯಾಸೋಲಿನ್ ಮಾರಾಟಕ್ಕೆ ಕೊನೆ ಹಾಡುವುದು ಮತ್ತು ಇರಾನ್‌ನ ರಫ್ತು ವ್ಯವಹಾರಗಳನ್ನು ತಡೆಯುವಂತಹ ನಿಷೇಧಗಳನ್ನು ಹೇರುವುದು ಅಸಾಧ್ಯ. ಇಂಥ ಕ್ರಮಗಳು ಮಾತ್ರ ತತ್‌ಕ್ಷಣ ಮತ್ತು ತೀವ್ರ ಪರಿಣಾಮಕಾರಿ ಎನಿಸಬಹುದು. ಆದರೆ ರಫ್ತು ವ್ಯವಹಾರಗಳನ್ನು ಮೊಟಕುಗೊಳಿಸುವ ಕಠಿಣ ಕ್ರಮ ಕೈಗೊಳ್ಳುವುದನ್ನು ರಷ್ಯಾ, ಚೀನಾ ಸೇರಿದಂತೆ ಪ್ರತಿ ಯುರೋಪ್ ದೇಶಗಳೂ ವಿರೋಧಿಸಿವೆ ಎನ್ನುತ್ತಾರೆ ನಿಷೇಧಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಹಿರಿಯ ಪರಮಾಣು ಪ್ರಸರಣ ತಡೆ ತಜ್ಞ ಹಾಗೂ ಲಂಡನ್‌ನ 'ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಟ್ರಾಟಜಿಕ್ ಸ್ಟಡೀಸ್'ನ ಇರಾನ್ ತಜ್ಞ ಮಾರ್ಕ್ ಫಿಟ್ಸ್‌ಪ್ಯಾಟ್ರಿಕ್.
ಇರಾನ್ ಯುರೇನಿಯಂ ಅಭಿವೃದ್ಧಿಗೊಳಿಸುವುದನ್ನು ತಡೆಯಲು ಈ ಹಿಂದೆ ವಿಶ್ವಸಂಸ್ಥೆಯ ಭದ್ರತಾ ಸಭೆ ಡಿಸೆಂಬರ್ 2006 ಮತ್ತು ಮಾರ್ಚ್ 2007ರಲ್ಲಿ ಎರಡು ಬಾರಿ ನಿಷೇಧಗಳನ್ನು ಹೇರಿದೆ. ಆದರೂ ಈಗ ವಾಷಿಂಗ್ಟನ್ ಮತ್ತೆ ನಿಷೇಧದ ಮಾತೆತ್ತಿದೆ ಮತ್ತು ಇರಾನ್‌ನ ಪ್ರಮುಖ ರಾಷ್ಟ್ರೀಯ ಬ್ಯಾಂಕುಗಳ ವ್ಯವಹಾರಗಳ ಮೇಲೆ ನಿಷೇಧ ಹೇರುವ ಸನ್ನಾಹದಲ್ಲಿದೆ. ಆದರೆ ಇರಾನ್ ಮೇಲೆ ಕಠಿಣ ಕ್ರಮಗಳನ್ನು ಹೇರುವ ಅಮೆರಿಕದ ಬಯಕೆ ಮಾತ್ರ ತಕ್ಷಣ ಈಡೇರುವಂತೆ ತೋರುತ್ತಿಲ್ಲ. ಇರಾನ್ 2003ರಲ್ಲೇ ಪರಮಾಣು ಅಸ್ತ್ರ ಕಾರ್ಯಕ್ರಮಗಳನ್ನು ಕೈ ಬಿಟ್ಟಿದೆ ಎಂದು ಕಳೆದ ತಿಂಗಳಷ್ಟೇ ಬಿಡುಗಡೆಯಾದ 'ರಾಷ್ಟ್ರೀಯ ಗುಪ್ತಚರ ಅಂದಾಜು ವರದಿ' ತಿಳಿಸಿದೆ. ಹೀಗಾಗಿ ಇರಾನ್ ಜೊತೆಗೆ ವ್ಯಾಪಾರಿ ಸಂಬಂಧ ಹೊಂದಿರುವ
ರಷ್ಯಾ ಮತ್ತು ಚೀನಾ ತೀವ್ರ ನಿಷೇಧ ಕ್ರಮ ಕೈಗೊಳ್ಳುವುದನ್ನು ವಿರೋಧಿಸಿವೆ.
ಟಿಎಸ್‌ಐ
ಸೌರಭ್ ಕುಮಾರ್ ಶಾಹಿ
ಹಾಲಿವುಡ್: ಪ್ರಶಸ್ತಿ
ಆಸ್ಕರ್ ಪ್ರಶಸ್ತಿಗೆ ರಂಗ ಸಜ್ಜು
ಚಿತ್ರ ಸಾಹಿತಿಗಳ ಮುಷ್ಕರ ಮೂರನೇ ತಿಂಗಳಿಗೆ
ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ವೇದಿಕೆ ಸಜ್ಜಾಗಿದೆ. ಈ ಬಾರಿ ಕೆಲವು ಅತ್ಯುತ್ತಮ ಚಿತ್ರಗಳು ಸ್ಪರ್ಧಾ ಕಣದಲ್ಲಿದ್ದು, 80ನೇ 'ಅಕಾಡೆಮಿ ಅವಾರ್ಡ್ಸ್'ಗೆ ಹೊಸ ಕಳೆ ಬಂದಿದೆ. 'ದೇರ್ ವಿಲ್ ಬಿ ಬ್ಲಡ್', 'ನೋ ಕಂಟ್ರಿ ಫಾರ್ ಓಲ್ಡ್ ಮೆನ್' ಮತ್ತು 'ಮೈಖಲ್ ಕ್ಲೇಟನ್'ನಂತಹ ಚಿತ್ರಗಳು ಮುಂಚೂಣಿಯಲ್ಲಿದ್ದು ತೀವ್ರ ಸ್ಪರ್ಧೆಯೊಡ್ಡಿವೆ.
ಹಿಂದಿನ ವರ್ಷದಂತೆ ಈ ವರ್ಷದ ಸ್ಪರ್ಧೆಯಲ್ಲಿ ಆಡಂಬರದ ಹಿಟ್ ಚಿತ್ರಗಳಿಲ್ಲ. 'ದ ಡಿಪಾರ್ಟೆಡ್' ಮತ್ತು 'ಡ್ರೀಮ್ ಗರ್ಲ್ಸ್' ಚಿತ್ರಗಳು ಹಲವು ವಿಭಾಗಗಳಲ್ಲಿ ಸ್ಪರ್ಧೆಯಲ್ಲಿವೆ. ಆದರೆ 2008 ಆಸ್ಕರ್ ಸ್ಪರ್ಧೆಯಲ್ಲಿ ಮತ್ತೆ ಅಸಾಂಪ್ರದಾಯಿಕ ಚಿತ್ರಗಳೇ ಆಕ್ರಮಿಸಿಕೊಂಡಿವೆ. 'ದೇರ್ ವಿಲ್ ಬಿ ಬ್ಲಡ್' ಮತ್ತು 'ನೋ ಕಂಟ್ರಿ ಫಾರ್ ಓಲ್ಡ್ ಮೆನ್' ಎಂಟು ವಿಭಾಗಗಳಲ್ಲಿ ನಾಮಾಂಕಿತಗೊಂಡಿವೆ. ಅಪ್ಟನ್ ಸಿನ್‌ಕ್ಲೇರ್ ಅವರ ಕಾದಂಬರಿ 'ಆಯಿಲ್' ಆಧರಿತ, ಪಾಲ್ ಥಾಮಸ್ ಆಂಡರ್‌ಸನ್ ಅವರ 'ದೇರ್ ವಿಲ್ ಬಿ ಬ್ಲಡ್' ಕ್ಯಾಲಿಫೋರ್ನಿಯಾದ ತೈಲ ಉದ್ಯಮ ಕುರಿತ ಚಿತ್ರ. ಇದು ಬಿಡುಗಡೆಯಾದಂದಿನಿಂದ ಹಲವಾರು ವಿಮರ್ಶಾತ್ಮಕ ಪ್ರಶಂಸೆ ಹಾಗೂ ಹಲವಾರು ಪ್ರಶಸ್ತಿಗಳನ್ನು ಗಳಿಸಿದೆ. ಆದರೆ ಎಲ್ಲರ ಮನ ಗೆದ್ದದ್ದು ಮಾತ್ರ ಮಾದಕದ್ರವ್ಯ ಮಾರಾಟ ದಂಧೆ ಕುರಿತ 'ನೋ ಕಂಟ್ರಿ ಫಾರ್ ಓಲ್ಡ್ ಮೆನ್'. ವಿಮರ್ಶಕ ವಲಯದಲ್ಲೂ ಈ ಚಿತ್ರ ಮೆಚ್ಚುಗೆಗೆ ಪಾತ್ರವಾಗಿದೆ. ಖ್ಯಾತ ವಿಮರ್ಶಕ ರೋಜರ್ ಎಬರ್ಟ್ "ಇದು ಕೋಯೆನ್ ಬ್ರದರ್ಸ್ ಇದುವರೆಗೆ ನಿರ್ಮಿಸಿದ ಚಿತ್ರಗಳಲ್ಲೇ ಅತ್ಯುತ್ತಮ ಚಿತ್ರ" ಎಂದಿದ್ದಾರೆ. ಇನ್ನು ಜೋ ವ್ರಿಟ್ ನಿರ್ದೇಶನದ, ಬ್ರಿಟಿಷ್ ಮೂಲದ 'ಅಟೋನ್‌ಮೆಂಟ್' ಕಪಟ ಯುವಕನಿಂದ ಮೋಸ ಹೋಗುವವರ ಜೀವನ ಕಥನ. ಇದು ಕೂಡಾ ಕಾದಂಬರಿ ಆಧಾರಿತ ಚಿತ್ರ. ಇದು ಅತ್ಯುತ್ತಮ ಚಿತ್ರ ಸೇರಿದಂತೆ ಏಳು ವಿಭಾಗಗಳಲ್ಲಿ ಸ್ಪರ್ಧೆಯಲ್ಲಿದೆ.
ತೈಲ ಮಾರಾಟಗಾರ ಡೇ-ಲೂಯಿಸ್ ಅವರ ಅದ್ಭುತ ಅಭಿನಯವೇ 'ದೇರ್ ವಿಲ್ ಬಿ ಬ್ಲಡ್' ಚಿತ್ರದ ಜೀವಾಳ. ಈ ಚಿತ್ರಕ್ಕಾಗಿ ಡೇ-ಲೂಯಿಸ್ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈಗ ಅತ್ಯುತ್ತಮ ನಟ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮಾಂಕಿತರಾಗಿದ್ದಾರೆ. ಈ ವಿಭಾಗದಲ್ಲಿ 'ಮೈಖಲ್ ಕ್ಲೇಟನ್' ಚಿತ್ರಕ್ಕಾಗಿ ಜಾರ್ಜ್ ಕ್ಲೂನಿ, 'ಈಸ್ಟರ್ನ್ ಪ್ರಾಮಿಸಸ್' ಚಿತ್ರದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ವಿಗೊ ಮಾರ್ಟೆನ್ಸನ್, 'ಅಟೋನ್‌ಮೆಂಟ್'ನಲ್ಲಿ ಪ್ರಚಂಡ ಪ್ರಶಂಸೆ ಪಡೆದ ಮೆಕ್‌ಅವಾಯ್ ಅವರು ಸ್ಪರ್ಧೆಯಲ್ಲಿದ್ದಾರೆ. ಇದೇ ವಿಭಾಗದಲ್ಲಿ ಸ್ಪರ್ಧೆಯಲ್ಲಿರುವ ಟಾಮಿ ಲೀ ಜೋನ್ಸ್ ಅವರ ಆಯ್ಕೆಯನ್ನು ಪರಿಗಣಿಸಿದ ಚಿತ್ರದ ಬಗ್ಗೆ ವಿಮರ್ಶಕರಲ್ಲೇ ಒಮ್ಮತವಿಲ್ಲ. ಅವರು 'ನೋ ಕಂಟ್ರಿ ಫಾರ್ ಓಲ್ಡ್ ಮೆನ್' ಬದಲಾಗಿ 'ಇನ್ ದ ವ್ಯಾಲಿ ಆಫ್ ಇಲ್ಹಾ' ಚಿತ್ರಕ್ಕಾಗಿ ಅತ್ಯುತ್ತಮ ನಟ ವಿಭಾಗದಲ್ಲಿ ಸ್ಪರ್ಧೆಯಲ್ಲಿ ಇರಬೇಕಿತ್ತು ಎಂಬುದು ವಿಮರ್ಶಕರ ಅಂಬೋಣ. ಇನ್ನು ಉಳಿದವರು ಜಾನಿ ಡೆಪ್. 'ಸ್ವೀನಿ ಟಾಡ್: ದ ಡೆಮನ್ ಬಾರ್ಬರ್ ಆಫ್ ಫ್ಲೀಟ್ ಸ್ಟ್ರೀಟ್' ಚಿತ್ರದ ಹಾಸ್ಯಪಾತ್ರಕ್ಕಾಗಿ ಜಾನಿ ಈ ವಿಭಾಗದಲ್ಲಿ ಸ್ಪರ್ಧೆಯಲ್ಲಿದ್ದಾರೆ.
ಅತ್ಯುತ್ತಮ ನಟಿ ವಿಭಾಗದಲ್ಲಿ ಮಾತ್ರ ಯಾವುದೇ ಅಚ್ಚರಿ ಅಥವಾ ಆತಂಕದ ಕ್ಷಣಗಳು ಇದ್ದ ಹಾಗಿಲ್ಲ. ಇದು 'ಅವೇ ಫ್ರಂ ಹರ್' ಚಿತ್ರದಲ್ಲಿ ಜ್ಯೂಲಿ ಕ್ರಿಸ್ಟೀ ಅವರ 'ಮರೆಗುಳಿ' ಯುವತಿ ಪಾತ್ರ ಮತ್ತು 'ಲಾ ವಿ ಎನ್ ರೋಸ್' ಫ್ರೆಂಚ್- ಭಾಷಾ ಚಿತ್ರದ ಎಡಿತ್ ಪಿಯಾಫ್ ಎಂಬ ಯುವತಿ ಪಾತ್ರದಲ್ಲಿ ನಟಿಸಿರುವ ಮರಿಯನ್ ಕೊಟಿಲರ್ಡ್ ನಡುವಿನ ಸ್ಪರ್ಧೆ ಎಂದೇ ಪರಿಗಣಿತವಾಗಿದೆ. ಇನ್ನುಳಿದಂತೆ 'ದ ಸ್ಯಾವೇಜಸ್' ಚಿತ್ರದಲ್ಲಿ ಬುದ್ಧಿಮಾಂದ್ಯ ರೋಗಿಯ ಮಗಳಾಗಿ ನಟಿಸಿದ ಲೋರಾ ಲಿನಿ ಮತ್ತು 'ಎಲಿಜಬೆತ್: ದ ಗೋಲ್ಡನ್ ಏಜ್' ಚಿತ್ರಕ್ಕಾಗಿ ಕೇಟ್ ಬ್ಲಾಂಷೆಟ್ ಸ್ಪರ್ಧೆಯಲ್ಲಿದ್ದಾರೆ.
ಚಿತ್ರಕಥಾ ಬರಹಗಾರರ ಮುಷ್ಕರ ಮೂರನೇ ತಿಂಗಳಿಗೆ ತಲುಪಿರುವ ಹಿನ್ನೆಲೆಯಲ್ಲಿ ಆಸ್ಕರ್ ಪ್ರಶಸ್ತಿ ಸಮಾರಂಭ ಡೋಲಾಯಮಾನದಲ್ಲಿದೆ. ಚಿತ್ರ ಸಾಹಿತಿಗಳ ಮುಷ್ಕರ ಮುಂದುವರಿದಿದೆ. ಡಿ. 7ರ ನಂತರ ಲೇಖಕರು ಮತ್ತು ಚಿತ್ರ ನಿರ್ಮಾಪಕರು ಪರಸ್ಪರ ಮುಖ ಕೊಟ್ಟು ಮಾತನಾಡಿಲ್ಲ. 80 ವರ್ಷಗಳ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿ ಆಸ್ಕರ್ ಸಮಾರಂಭ ನಿಂತು ಹೋಗುವ ಪರಿಸ್ಥಿತಿ ಬಾರದೇ ಇದ್ದರೆ ಒಳಿತು ಎನ್ನುತ್ತಾರೆ ಈ ಬಗ್ಗೆ ಟಿಎಸ್‌ಐ ಕಳುಹಿಸಿದ ಇ-ಮೇಲ್‌ಗೆ ಉತ್ತರಿಸಿದ ಲಾಸ್ ಏಂಜಲೀಸ್ ಟೈಮ್ಸ್‌ನ ವಿಮರ್ಶಕ ವಿಲಿಯಂ ಅರ್ನಾಲ್ಡ್. ಅದೇನೇ ಇರಲಿ ಅಭಿಮಾನಿಗಳು ಮತ್ತು ವಿಮರ್ಶಕರು ಮಾತ್ರ ಫಲಿತಾಂಶಕ್ಕಾಗಿ ಕಾತರದಿಂದ ನಿರೀಕ್ಷಿಸುತ್ತಿದ್ದಾರೆ.
ಟಿಎಸ್‌ಐ
ಸೌರಭ್ ಕುಮಾರ್ ಶಾಹಿ