ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
 
ಸಂಪಾದಕೀಯ
'ಸಣ್ಣ ಪ್ರಮಾಣದ ಅಂಗಾಂಗ ಮಾರುಕಟ್ಟೆ ಉದ್ಯಮ'ಕ್ಕೆ ತಕ್ಕ ವಾತಾವರಣ ಈ ದೇಶದಲ್ಲಿದೆ!
Arindam Choudhuri
ಅರಿಂದಮ್ ಚೌಧುರಿ,
ಪ್ರಧಾನ ಸಂಪಾದಕರು, ದ ಸಂಡೆ ಇಂಡಿಯನ್

 

ಇದಕ್ಕಿಂತ ದೊಡ್ಡ ವಿಪರ್ಯಾಸ ಬೇರೆ ಯಾವುದೂ ಆಗಲಿಕ್ಕಿಲ್ಲ ಮತ್ತು ಇರಲಿಕ್ಕಿಲ್ಲ. ಗಣರಾಜ್ಯೋತ್ಸವದ ದಿನ ಬೆಳಕಿಗೆ ಬಂದ ದೇಶದ ಅತ್ಯಂತ ದೊಡ್ಡ ಅಕ್ರಮ ಮೂತ್ರಪಿಂಡ ಮಾರಾಟ ಹಗರಣದ ಬಗ್ಗೆ ಈಗ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಚರ್ಚೆ ನಡೆಯುತ್ತಿದೆ. ಈ ಹಗರಣ ಹದಗೆಟ್ಟಿರುವ ನಮ್ಮ ಕಾನೂನು ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ವೈದ್ಯಕೀಯ ಕ್ರೌರ್ಯದ ಪಡಿಯಚ್ಚಿನಂತಿರುವ ಈ ಹಗರಣ ನಮ್ಮ ಅಮಾನವೀಯ ವ್ಯವಸ್ಥೆಯ ದುರಂತ ಮುಖ. ಒಂಬತ್ತು ವರ್ಷಗಳಷ್ಟು ದೀರ್ಘ ಅವಧಿಯವರೆಗೆ ವೈದ್ಯರ ತಂಡವೊಂದು ನಿರಂತರವಾಗಿ ಈ ವೈದ್ಯಕೀಯ ಕ್ರೌರ್ಯವನ್ನು ನಡೆಸಿತು ಎನ್ನುವುದೇ ಅಚ್ಚರಿ ಹುಟ್ಟಿಸುವಂತಹ ವಿಷಯ. ಈಗ ಬೆಳಕಿಗೆ ಬಂದಿರುವ ಅಂಶಗಳ ಪ್ರಕಾರ ಈ ಹಗರಣದ ಪ್ರಮುಖ ರೂವಾರಿ ವೈದ್ಯನೇ ಅಲ್ಲ. ಅದೂ ದೇಶದ ರಾಜಧಾನಿಯಿಂದ ಕೆಲವೇ ಕೆಲವು ಕಿಲೋ ಮೀಟರ್ ದೂರದಲ್ಲಿನ ಗುರಗಾಂವ್‌ನಲ್ಲಿ ಯಾವ ಕಾನೂನಿನ ಹಿಡಿತಕ್ಕೂ ಸಿಕ್ಕದೆ, ಯಾರ ಕಣ್ಣಿಗೂ ಬೀಳದೇ ಈ ಕುಕೃತ್ಯ ನಡೆಸಲಾಗಿದೆ. ಸುಮಾರು 500ರಿಂದ 600 ಬಡ ಜನರು ಅವರ ಮೂತ್ರಪಿಂಡಗಳನ್ನು ಅಕ್ರಮವಾಗಿ ಕಳೆದುಕೊಳ್ಳುವವರೆಗೆ ಈ ಪ್ರಕರಣದ ಒಂದಿನಿತು ಸುಳಿವು ಕೂಡ ಯಾರಿಗೂ ಸಿಕ್ಕಿಲ್ಲ. ಈ ನಡುವೆ ಪೊಲೀಸರ ಪ್ರಕಾರ ಈ ಪ್ರಕರಣದ 'ಮಾಸ್ಟರ್ ಮೈಂಡ್' ಡಾ. ಅಮಿತ್ ಅಕ್ರಮ ಮೂತ್ರಪಿಂಡ ಕಸಿ ಹಗರಣದಲ್ಲಿ ಈಗಾಗಲೇ ಅತ್ಯಂತ ಪಳಗಿದ ಕೈ. 1993ರಲ್ಲಿ ಮುಂಬೈ ಮಹಾನಗರಿಯಲ್ಲಿ ನಡೆದ ಇಂತಹುದೇ ಹಗರಣದ ರೂವಾರಿ ಕೂಡ ಆತನೇ ಇರಬೇಕು ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಆತನನ್ನು ಇಂತಹುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಬಾರಿ ಪೊಲೀಸರು ಬಂಧಿಸಿದ್ದರಂತೆ. ಎರಡು ಬಾರಿ ಮುಂಬೈನಲ್ಲಿ ಮತ್ತು ತಲಾ ಒಂದು ಬಾರಿ ಗುಂಟೂರು ಮತ್ತು ದೆಹಲಿಯಲ್ಲಿ ಈತ ಬಂಧಿತನಾಗಿದ್ದರೂ, ಅಕ್ರಮ ವ್ಯವಹಾರವನ್ನು ನಿರಂತರವಾಗಿ ನಡೆಸುವಲ್ಲಿ ಯಶಸ್ವಿಯಾದ. 'ಸರಿಯಾದ ಜಾಗದಲ್ಲಿ ಸರಿಯಾದ ಸಂಪರ್ಕ ಇಟ್ಟುಕೊಂಡಿದ್ದರಿಂದಲೇ' ನಾಲ್ಕು ಬಾರಿ ಬಂಧಿತನಾದ ಸಂದರ್ಭದಲ್ಲೂ ಆತ ಹೊರಬರುವುದಕ್ಕೆ ಆಯಿತಂತೆ. ಆತನ ಹಿಂದೆ ಬಲಾಢ್ಯ ಕೈಗಳು ಕೂಡ ಇವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಭಾರತದ ಮಟ್ಟಿಗೆ ಹೇಳುವುದಾದರೆ ಅಮಾನವೀಯ ಅಕ್ರಮ ಮೂತ್ರಪಿಂಡ ಕಸಿ ಮತ್ತು ಮಾರಾಟ ಜಾಲ ಹೊಸದೇನೂ ಅಲ್ಲ. ಸ್ವಲ್ಪ ಕಠಿಣವೆನಿಸಿದರೂ, ಕಳೆದ ಹಲವಾರು ವರ್ಷಗಳಲ್ಲಿ ಬೆಳಕಿಗೆ ಬಂದ ಇಂತಹ ಅಕ್ರಮ ಅಂಗಾಂಗ ಮಾರಾಟ ಜಾಲದ ಪ್ರಮಾಣವನ್ನು ಗಮನಿಸಿದಾಗ, ನಾವು ಯಶಸ್ವಿಯಾಗಿ ಒಂದು 'ಸಣ್ಣ ಪ್ರಮಾಣದ ಅಂಗಾಂಗ ಮಾರುಕಟ್ಟೆ ಉದ್ಯಮ'ವನ್ನೇ ಸೃಷ್ಟಿಸಿದ್ದೇವೆ ಎಂದು ಹೇಳಬಹುದು. ಈ ಉದ್ಯಮ ಕ್ಷೇತ್ರದಲ್ಲಿ ಈಗ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತಿದೆ. ಉದಾಹರಣೆಗೆ ಅಮೃತಸರವೊಂದರಲ್ಲಿಯೇ ಪ್ರತಿ ವರ್ಷ 100 ಕೋಟಿ ರೂಪಾಯಿಗಳಷ್ಟು ಮೌಲ್ಯದ ಅಕ್ರಮ ಮೂತ್ರಪಿಂಡ ಮಾರಾಟ ನಡೆಯುತ್ತದಂತೆ. ನಮ್ಮ ದೇಶದಲ್ಲಿ ಇಷ್ಟು ಬೃಹತ್ ಪ್ರಮಾಣದ ಅಕ್ರಮ ಮಾನವ ಅಂಗಾಂಗ ಮಾರಾಟ ಜಾಲ ಹರಡಿದ್ದರೂ, ಅದರ ಬಗ್ಗೆ ಯಾರಿಗೂ ಆಶ್ಚರ್ಯವಾಗುತ್ತಿಲ್ಲ. ಅದು ಕೂಡ ಸಹಜವೇ ಎನ್ನಿ. ಏಕೆಂದರೆ ಅಂತಹ ಒಂದು ಅಕ್ರಮ ವ್ಯವಹಾರ ನಡೆಯಲು ಅನುಕೂಲಕರವಾದ ವಾತಾವರಣ ನಮ್ಮಲ್ಲಿದೆ. ಅವುಗಳೇನೆಂದರೆ ಸಾಕಷ್ಟು ಏನೂ ಅರಿಯದ ಮುಗ್ಧ ಬಡ ಜನರು, ಯಾವುದೇ ನೈತಿಕ ಸಿದ್ಧಾಂತಗಳನ್ನು ಇಟ್ಟುಕೊಳ್ಳದೇ ವೃತ್ತಿ ಗೌರವವನ್ನು ಮರೆತ ವೈದ್ಯರು, ಹಲ್ಲಿಲ್ಲದ ನ್ಯಾಯಾಂಗ ವ್ಯವಸ್ಥೆ ಮತ್ತು ಮೂತ್ರಪಿಂಡದಂತ ಅಂಗಾಂಗಗಳನ್ನು ಅಕ್ರಮವಾಗಿ ಖರೀದಿಸಲು ಹಾತೊರೆಯುವ ಸಮಾಜದ ಶ್ರೀಮಂತರು. ಈ ಹಿಂದೆ ಇದೇ ರೀತಿಯ ಅಕ್ರಮ ಹಗರಣ ನಡೆದ ಚೆನ್ನೈ, ಬೆಂಗಳೂರು, ದೆಹಲಿ ಮತ್ತು ಜೈಪುರದಂತೆಯೇ ಗುರಗಾಂವ್ ಪ್ರಕರಣದಲ್ಲಿ ಕೂಡ ಮೇಲಿನ ಅಂಶಗಳೇ ಮೇಳೈಸಿ ನಿಂತಿವೆ. ಇಲ್ಲಿ ಕೂಡ ಹೆಚ್ಚಿನೆಲ್ಲ ಪ್ರಕರಣಗಳಲ್ಲಿ ಮೋಸಕ್ಕೆ ಬಲಿಯಾದವರು ಉತ್ತರ ಪ್ರದೇಶ ಮತ್ತು ಹರಿಯಾಣದಿಂದ ಇಲ್ಲಿಗೆ ಬಂದು ನೆಲೆಸಿದ್ದ ಬಡ ಕಾರ್ಮಿಕರು ಅಥವಾ ರಿಕ್ಷಾ ಎಳೆಯುವ ಕಾಯಕದಲ್ಲಿ ನಿರತರಾಗಿದ್ದವರು ಅಥವಾ ಬಡ ರೈತರು. ಮಧ್ಯವರ್ತಿಗಳ ಆಮಿಷಕ್ಕೆ ಒಳಗಾಗಿ, ಇಲ್ಲವಾದಲ್ಲಿ ಬಂದೂಕಿನ ನಳಿಗೆಗೆ ತಲೆಗೊಟ್ಟು ಬೆದರಿ ತಮ್ಮ ಮೂತ್ರ ಪಿಂಡ ಕಳೆದುಕೊಂಡಿದ್ದಾರೆ. ಇಲ್ಲಿ ನಡೆದ ಹೆಚ್ಚಿನೆಲ್ಲ ಪ್ರಕರಣಗಳಲ್ಲಿ ಅತಿ ಕಡಿಮೆ ಮೊತ್ತದ ಆಮಿಷಕ್ಕೆ ಬಲಿ ಬಿದ್ದು ಬಡವರು ತಮ್ಮ ಮೂತ್ರಪಿಂಡಗಳನ್ನು ಮಾರಿದ್ದಾರೆ. ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಅಗತ್ಯವಾದ ಹಣದ ಆಸೆಗಾಗಿ ತಮ್ಮ ಜೀವಗಳನ್ನೇ ಇವರು ಒತ್ತೆ ಇಟ್ಟು ಮೋಸಕ್ಕೆ ಒಳಗಾಗಿದ್ದಾರೆ. ಕುಟುಂಬದ ಮತ್ತೊಬ್ಬ ಸದಸ್ಯನ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಒಂದಿಷ್ಟು ಹಣ ಸಂಗ್ರಹಿಸಲು ಇವರು ತಮ್ಮ ಮೂತ್ರಪಿಂಡಗಳನ್ನು ಬಿಕರಿ ಮಾಡಿದ್ದಾರೆ. ಈ ವಿಷಯಗಳನ್ನು ಮರೆತು ಬಿಡೋಣ. ಇನ್ನು ಮಾನವ ಅಂಗಾಂಗ ಮಾರಾಟದ ಬಗೆಗಿರುವ ಕಾನೂನನ್ನೇ ತೆಗೆದುಕೊಂಡರೂ ಅವು ಅಕ್ರಮ ವ್ಯವಹಾರ ಮಾಡುವವರ ಪಾಲಿಗೆ ಅಡ್ಡಗೋಡೆಯಾಗೇನೂ ಇಲ್ಲ. ಬದಲಾಗಿ ಅವರಿಗೆ ರಕ್ಷಣಾ ಕವಚಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ದೇಶದ ಬೃಹತ್ ಪ್ರಮಾಣದ 'ಕಿಡ್ನಿ ಹಗರಣ' ಬಯಲಿಗೆ ಬಂದಿದ್ದು 1995ರಲ್ಲಿ. ಬೆಂಗಳೂರಿನಲ್ಲಿ ನಡೆದ ಆ ಹಗರಣದಲ್ಲಿ ಸುಮಾರು 1000 ಅಮಾಯಕರು ಅಕ್ರಮವಾಗಿ ಮೂತ್ರಪಿಂಡಗಳನ್ನು ಕಳೆದುಕೊಂಡಿದ್ದರು. ಈ ಪ್ರಕರಣ ಬಯಲಾದ ನಂತರ ಎದ್ದ ಸಾರ್ವಜನಿಕರ ಅಸಮಾಧಾನದ ಫಲವಾಗಿ ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಕಿಡ್ನಿ ದಾನದ ವ್ಯವಹಾರವನ್ನೇ ನಿಷೇಧಿಸುವಂತಹ ಕಾನೂನನ್ನು ಜಾರಿಗೆ ತಂದಿತು. ಆದರೆ, ಭಾರತದ ಉಳಿದ ಕಾನೂನುಗಳಂತೆಯೇ ಆ ಹೊಸ ಕಾನೂನು ಕೂಡಾ ಹಲ್ಲಿಲ್ಲದ ಹಾವಾಗಿ ಭುಸುಗುಟ್ಟಿತು. ವಿದೇಶಗಳಲ್ಲಾದರೆ ಒಬ್ಬ ಸಂಬಂಧಿ ಮಾತ್ರ ಮತ್ತೊಬ್ಬ ಸಂಬಂಧಿಗೆ ತನ್ನ ಅಂಗಾಂಗಗಳನ್ನು ದಾನ ಮಾಡಬಹುದು. ಇನ್ನು ಕೆಲವು ವಿಶೇಷ ಪ್ರಕರಣಗಳಲ್ಲಿ ಅಪಘಾತಕ್ಕೆ ಬಲಿಯಾದ ವ್ಯಕ್ತಿಗಳ ದೇಹದಿಂದ ಅಂಗಾಂಗಗಳನ್ನು ಪಡೆಯುವ ಕಟ್ಟು ನಿಟ್ಟಿನ ವ್ಯವಸ್ಥೆಯಿದೆ. ಅಂತಹ ಕಠಿಣ ಕಾನೂನಿನಿಂದಾಗಿ ವಿದೇಶಗಳಲ್ಲಿ ಇಷ್ಟು ಸುಲಭವಾಗಿ ಮಾನವ ಅಂಗಾಂಗಗಳ ಮಾರಾಟ ಉದ್ಯಮ ನಡೆಯುವುದಿಲ್ಲ. ಆ ಕಾರಣದಿಂದಾಗಿಯೇ ಶ್ರೀಮಂತ ವಿದೇಶಿಯರು ಮತ್ತು ಅನಿವಾಸಿ ಭಾರತೀಯರ ಪಾಲಿಗೆ ಭಾರತ ಸ್ವರ್ಗವಾಗಿ ಕಾಣುತ್ತಿರುವುದು. ಇಲ್ಲಿ ಹಣವೊಂದಿದ್ದರೆ ಸುಲಭವಾಗಿ ಮಾನವ ಅಂಗಾಂಗಗಳನ್ನು ಯಶಸ್ವಿಯಾಗಿ ಬೇಟೆಯಾಡಬಹುದಲ್ಲ! ಗುರಗಾಂವ್ ಪ್ರಕರಣವನ್ನೇ ತೆಗೆದುಕೊಂಡರೆ ಇಲ್ಲಿ ಅಂಗಾಂಗ ಪಡೆದ ಗಿರಾಕಿಗಳ ಜಾಲ ೪೮ ದೇಶಗಳಲ್ಲಿ ಹಬ್ಬಿದೆ. ಅಮೆರಿಕ, ರಷ್ಯಾ, ಕೆನಡಾ... ಹೀಗೆ ಪ್ರಪಂಚದ ಮೂಲೆ-ಮೂಲೆಯಿಂದ ಶ್ರೀಮಂತರು ಇಲ್ಲಿಗೆ ಬಂದು ಹಣ ಚೆಲ್ಲಿ ಮರುಜೀವ ಪಡೆದುಕೊಂಡು ಹೋಗಿದ್ದಾರೆ. ಈ ಜಾಲದ ಅಡಕತ್ತರಿಯಲ್ಲಿ ಸಿಲುಕಿದ ಭಾರತದಲ್ಲಿನ ಬಡವರು ಮಾತ್ರ ವೈದ್ಯಕೀಯ ಕ್ರೌರ್ಯಕ್ಕೆ ಬಲಿಪಶುವಾಗಿದ್ದಾರೆ. ಮಾರುಕಟ್ಟೆಯಲ್ಲಿ ಬೇಡಿಕೆಯನ್ನೇ ಅವಕಾಶ ಮಾಡಿಕೊಂಡು, ಕೇವಲ ಸ್ವಾರ್ಥಕ್ಕಾಗಿಯೇ ವೈದ್ಯಕೀಯ ವೃತ್ತಿಯಂತ ಶ್ರೇಷ್ಠ ಸೇವಾ ವೃತ್ತಿಗೆ ರಾಕ್ಷಸರ ಮುಖವಾಡ ತೊಡಿಸಿದ್ದಾರೆ ಈ ಹಗರಣದಲ್ಲಿ ಭಾಗಿಯಾದ ವೈದ್ಯರು. ಮೂಲತಃ ಅಪ್ಪಟ ಅಪರಾಧಿಗಳಾಗಿರುವ ಈ ವೈದ್ಯರಲ್ಲಿ ನೈತಿಕತೆ ಮತ್ತು ವೃತ್ತಿಧರ್ಮದ ಲವಲೇಷವೂ ಇಲ್ಲ. ನಮ್ಮ ದೇಶದಲ್ಲಿನ ಕಾನೂನು ವ್ಯವಸ್ಥೆಯ ಬಗ್ಗೆ ಮತ್ತು ಅಂಗಾಂಗ ದಾನದ ಕುರಿತಾದ ಕಾನೂನಿನ ಬಗ್ಗೆ ಸೂಕ್ತ ಅರಿವು ಮೂಡಿಸಬೇಕು. ಅದರೊಂದಿಗೆ ಆ ಕಾನೂನನ್ನು ಯಾವುದೇ ಒತ್ತಡಗಳಿಗೆ ಒಳಗಾಗದಂತೆ ಕಟ್ಟು ನಿಟ್ಟಿನಿಂದ ಜಾರಿಗೆ ತರಬೇಕು. ಹಾಗಾದಲ್ಲಿ ಮಾತ್ರ ಇಂತಹ ಅಮಾನವೀಯ ಅಪರಾಧಗಳಿಗೆ ಕಡಿವಾಣ ಹಾಕಲು ಸಾಧ್ಯ.

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .