ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಲಂಗರು 
ಹೊಸ ಬಾಳಿಗೆ ರಹದಾರಿ: ಅಹಿಂಸಾ ಗ್ರಾಮ
 

ದೇಶದ ಅಸಂಖ್ಯಾತ ನೀರಸ ಪಟ್ಟಣಗಳಂತಲ್ಲದೆ ಭಿನ್ನ ಹಾದಿಯಲ್ಲಿ ಸಾಗುತ್ತಿರುವ ಮಧ್ಯಪ್ರದೇಶದ ರಾಟ್ಲಂ ಗ್ರಾಮಕ್ಕೆ ಭೇಟಿ ನೀಡಿದ ಅಮರ್‌ಪಾಲ್ ಮಾಲ್ಹಿ ಅಲ್ಲಿನ ವೈಶಿಷ್ಟ್ಯ ವಿವರಿಸಿದ್ದಾರೆ

ರಾಟ್ಲಂ ಮಧ್ಯ ಪ್ರದೇಶದ ಒಂದು ನೀರಸ ಮತ್ತು ಅಪರಿಚಿತ ಊರು. ಆದರೆ ವಿಚಿತ್ರವೆಂಬಂತೆ ಈ ಹೆಸರು ಬಾಲಿವುಡ್ ಮೂಲಕ ರಾಷ್ಟ್ರದ ಗಮನ ಸೆಳೆದಿದೆ! 2007ರಲ್ಲಿ ಬಾಲಿವುಡ್‌ನ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ 'ಜಬ್ ವಿ ಮೆಟ್' ಚಿತ್ರದಲ್ಲಿ ಶಾಹಿದ್ ಕಪೂರ್‌ನೊಂದಿಗೆ ಕರೀನಾ ಕಪೂರ್ ಇದೇ ರಾಟ್ಲಂ ರೈಲ್ವೇ ನಿಲ್ದಾಣದಲ್ಲಿ ಸಿಕ್ಕಿ ಹಾಕಿಕೊಂಡು ಪಾಡು ಪಡುವ ದೃಶ್ಯವಿದೆ. ಬಹುಶಃ ಈಗ ನಿಮಗೆ ರಾಟ್ಲಂ ನೆನಪಾಗಿರಬಹುದು. ಅಜ್ಞಾತ ರಾಟ್ಲಂನ ನೈಜ ಚಿತ್ರಣವನ್ನು ನೀಡುವ ಉದ್ದೇಶದಿಂದಲೇ ಈ ಸನ್ನಿವೇಶ ಚಿತ್ರಿಸಲಾಗಿದೆಯಂತೆ. ದೇಶದಲ್ಲಿರುವ ಅನೇಕಾನೇಕ ನೀರಸ ಪಟ್ಟಣಗಳಿಗಿಂತ ರಾಟ್ಲಂ ಎಷ್ಟೋ ಭಿನ್ನ. ದೇಶದ ಗಮನ ಸೆಳೆಯ ಹೊರಟಿರುವ ಮೌನ ಕ್ರಾಂತಿಯೊಂದು ಇಲ್ಲಿ ನಡೆಯುತ್ತಿದೆ. ಪರಿವರ್ತನೆಯ ಹಾದಿಯಲ್ಲಿ ಸಾಗುತ್ತಿರುವ ಈ ಚಳವಳಿ ಸುಧಾರಣೆಯ ದೃಷ್ಟಿಯಲ್ಲಿ ಒಂದು ಮಹತ್ವದ ಹೆಜ್ಜೆ. ನಗರದ ಹೊರವಲಯದಲ್ಲಿ ಹೆದ್ದಾರಿಯ ಆಚೆಗೆ ಈ ಮೌನ ಕ್ರಾಂತಿ ಶಾಂತಿಯಿಂದಲೇ ನಡೆಯುತ್ತಿದೆ. ಆ ಕ್ರಾಂತಿ ನಡೆಯುತ್ತಿರುವ ತಾಣದ ಹೆಸರು 'ಅಹಿಂಸಾ ಗ್ರಾಮ'. ಉದ್ದನೆಯ ಸಾಲುಗಳಲ್ಲಿ ಅಚ್ಚುಕಟ್ಟಾಗಿ ನಿರ್ಮಿಸಲಾಗಿರುವ ಸುಮಾರು 100 ಮನೆಗಳು ಈ ಪ್ರದೇಶದಲ್ಲಿವೆ. ಚರಂಡಿ- ನೈರ್ಮಲ್ಯ ವ್ಯವಸ್ಥೆ ಎಲ್ಲವೂ ಇಲ್ಲಿ ಅಚ್ಚುಕಟ್ಟು. ಆದರೆ ಇಲ್ಲಿ ವಾಸಿಸುತ್ತಿರುವುದು ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳು. ಗ್ರಾಮದಲ್ಲಿ ವಿವಿಧ ಜಾತಿ- ಪಂಗಡಗಳಿಗೆ ಸೇರಿದ ಸುಮಾರು 97 ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಎರಡು ವರ್ಷಗಳು ಉರುಳಿದರೂ ಇಲ್ಲಿಯವರೆಗೆ ಯಾವುದೇ ಸಮಸ್ಯೆಗಳಿಲ್ಲದೆ ಸಮಾಧಾನದ ಸಹಬಾಳ್ವೆ ನಡೆಸುತ್ತಿರುವ ಕೀರ್ತಿ ಅಹಿಂಸಾ ಗ್ರಾಮದ್ದು. ಅಹಿಂಸಾ ಗ್ರಾಮ 'ಚೈತನ್ಯ ಕಶ್ಯಪ್ ಪ್ರತಿಷ್ಠಾನ' ವತಿಯಿಂದ ನಿರ್ಮಾಣವಾದ ಒಂದು ಸಣ್ಣ ಗ್ರಾಮ. ನೆರವು ಹಾಗು ಸೂಕ್ತ ಪ್ರೋತ್ಸಾಹದ ಮೂಲಕ ಕಡುಬಡವರ ಜೀವನಕ್ಕೆ ಭರವಸೆ ಕಲ್ಪಿಸುವುದು ಈ ಸಂಸ್ಥೆಯ ಉದ್ದೇಶ. ರಾಟ್ಲಂನ ಕೋಟ್ಯಾಧೀಶ ಚೈತನ್ಯ ಕಶ್ಯಪ್ ಈ ಮೌಲ್ಯಾಧಾರಿತ ಸಂಸ್ಥೆಯ ನೇತೃತ್ವ ವಹಿಸಿದ್ದಾರೆ. ಈ ರೀತಿಯ ವಿಭಿನ್ನ ಯೋಜನೆಯ ಕಲ್ಪನೆ ಬಂದಿದ್ದಾದರೂ ಹೇಗೆ? ನಮ್ಮ ನಡುವೇ ಇರುವ ಬಡವರ ಉದ್ಧಾರ ನನ್ನ ಚಿರಕಾಲದ ಕನಸಾಗಿತ್ತು. ಆದರೆ ಕೇವಲ ಧನಸಹಾಯ ಮಾಡಿ ಅವರನ್ನು ಮತ್ತಷ್ಟು ಅವಲಂಬಿತರನ್ನಾಗಿಸುವುದು ನನಗೆ ಇಷ್ಟವಿರಲಿಲ್ಲ. ಬಡತನವನ್ನು ನಮ್ಮ ನೆಲದಿಂದ ಶಾಶ್ವತವಾಗಿ ಕಿತ್ತು ಹಾಕಬೇಕು ಎಂಬುದು ನನ್ನ ಉದ್ದೇಶ ಎನ್ನುತ್ತಾರೆ ಚೈತನ್ಯ. ಸೋಲೇ ಗೆಲುವಿನ ರಹದಾರಿ. ಕಶ್ಯಪ್ ಜೀವನದಲ್ಲೂ ಅದೇ ನಡೆಯಿತು. ಪ್ರತಿಷ್ಠಾನ ನಡೆಸುತ್ತಿರುವ ಶಾಲೆಯ ಮಕ್ಕಳಲ್ಲಿ ಸೂಕ್ತ ಬದಲಾವಣೆ ತರುವಲ್ಲಿ ಅವರು ಸಂಪೂರ್ಣವಾಗಿ ಸೋತಿದ್ದರು. ಬದಲಾವಣೆಗೆ ಅಡ್ಡಗಾಲಾಗಿರುವ ಸಮಸ್ಯೆ ಏನು ಎಂಬುದನ್ನು ಪತ್ತೆ ಹಚ್ಚಲು ಅವರು ನಿರ್ಧರಿಸಿದರು. ಹಾಗೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಈ ಬಗ್ಗೆ ಮಾತನಾಡಿದೆ. ನಾವು ವಾಸಿಸುವ ವಾತಾವರಣ ಕಳಪೆಯಾಗಿದ್ದು ಉನ್ನತ ಮಟ್ಟದ ಶಿಕ್ಷಣ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದು ಶಾಶ್ವತ ಪರಿಣಾಮವನ್ನೂ ಬೀರಲಾರದು. ನಂತರ ವಿದ್ಯಾರ್ಥಿ ನಿಲಯ ಸ್ಥಾಪಿಸಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದೆ. ಆದರೆ ಆ ಯೋಜನೆ ಪ್ರಾಯೋಗಿಕವಲ್ಲದ್ದರಿಂದ ಕೈಬಿಡಲಾಯಿತು. ಹಾಗೆ ಹಂತ ಹಂತವಾಗಿ ಸಮಸ್ಯೆಯ ಆಳಕ್ಕೆ ಇಳಿದಾಗ ಬದಲಾಗಬೇಕಾಗಿದ್ದು ಶಾಲೆಯಲ್ಲ ಊರಿನ ವಾತಾವರಣ. ಹಿಂಸೆಯಿಲ್ಲದ ಸುಂದರ ಸಮಾಜ ಸೃಷ್ಟಿಯಾಗಬೇಕು ಎಂಬುದು ತಿಳಿಯಿತು. ನೀವು ಒಬ್ಬ ವ್ಯಕ್ತಿಯ ಮೇಲೆ ಹೇಗೆ ಅರ್ಥಪೂರ್ಣ ಹಾಗೂ ಶಾಶ್ವತ ಪರಿಣಾಮ ಬೀರುವಿರಿ? ಎಂಬ ಪ್ರಶ್ನೆಯಲ್ಲೇ ಅಡಗಿದೆ ಅಹಿಂಸಾ ಗ್ರಾಮದ ಮೂಲಭೂತ ತತ್ವ. ಉತ್ತರ ಸರಳ, ಮನೆ ನಮ್ಮ ಮೂಲಭೂತ ಅವಶ್ಯಕತೆಗಳಲ್ಲೊಂದು. ಅದು ವ್ಯಕ್ತಿಯೊಬ್ಬನ ಭದ್ರತೆಗೆ ಆಧಾರವಾಗುವುದು ಮಾತ್ರವಲ್ಲ, ಆ ಮೂಲಕ ಸುಧಾರಣೆಯೂ ಸಾಧ್ಯ. ಆರೋಗ್ಯಕರ, ಸುರಕ್ಷಿತ, ಶಾಂತ ಮತ್ತು ಯೋಗ್ಯ ವಾತಾವರಣದಲ್ಲಿ ವಸತಿ ಕಲ್ಪಿಸುವುದರಿಂದ ಆ ಕುಟುಂಬ ಮತ್ತು ಅದರ ಮುಂದಿನ ತಲೆಮಾರು ದೇಶದ ಜವಾಬ್ದಾರಿಯುತ ಪ್ರಜೆಗಳಾಗುತ್ತಾರೆ ಮಾತ್ರವಲ್ಲ ಸಮಾಜದ ಸಂಪನ್ಮೂಲಗಳಾಗುತ್ತಾರೆ ಎನ್ನುತ್ತಾರೆ ಕಶ್ಯಪ್. ಹಾಗೆ ೪ ಕೋಟಿ ರೂ. ಬಂಡವಾಳ ಹೂಡಿ, 100 ನಿವಾಸಗಳನ್ನು ನಿರ್ಮಿಸಲು ಕಶ್ಯಪ್ ಮುಂದಾದರು. ಒಂದೊಂದು ಮನೆಯನ್ನೂ 250 ಚದರ ಅಡಿ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಎರಡು ಕೋಣೆ ಸೇರಿದಂತೆ, ಅಡುಗೆ ಕೋಣೆ ಹಾಗೂ ಮನೆಗೇ ಹೊಂದಿಕೊಂಡ ಶೌಚಾಲಯವನ್ನು ನಿರ್ಮಿಸಿದರು. ಬಡತನ ರೇಖೆಗಿಂತ ಕೆಳಗೆ ಜೀವನ ನಡೆಸುತ್ತಿರುವ ಬಡವರಿಗೆ ಈ ಮನೆಗಳನ್ನು 10 ವರ್ಷಗಳ ಭೋಗ್ಯಕ್ಕೆ ನೀಡಲಾಯಿತು. ರಾಟ್ಲಂನ ಸುತ್ತಮುತ್ತಲಿದ್ದ ಎಲ್ಲಾ ಬಡವರಿಗೂ ಈ ಪ್ರದೇಶದಲ್ಲಿ ಬಂದು ನೆಲೆಸಲು ಆಹ್ವಾನ ನೀಡಲಾಯಿತು. ಜಾತಿ ಹಾಗೂ ಧರ್ಮ ಭೇದವಿಲ್ಲದೆ ಯೋಜನೆಯಲ್ಲಿ ಭಾಗಿಯಾಗುವಂತೆ ಕರೆ ನೀಡಿದ ಕಶ್ಯಪ್, ಜಾತಿ ಪದ್ಧತಿಯ ಬಿಗಿ ಮುಷ್ಟಿ ಸಡಿಲಿಸುವಲ್ಲಿ ಮೊದಲ ಹೆಜ್ಜೆ ಇಟ್ಟರು. ಸಾವಿರಾರು ಮಂದಿ ಮುಂದೆ ಬಂದರೂ ಕುಟುಂಬದ ಹಿನ್ನೆಲೆಯನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ ಒಟ್ಟು 97 ಕುಟುಂಬಗಳಿಗೆ ಮನೆ ಹಂಚಲಾಯಿತು. ಈ ಸಾಮಾಜಿಕ ಅಭಿವೃದ್ಧಿಯ ಯೋಜನೆ ಫಲ ನೀಡೀತೇ ಎಂಬ ಅನುಮಾನ ನಮ್ಮನ್ನೂ ಕಾಡಿತ್ತು. ಕೆಲವು ದಿನಗಳ ಕಾಲ ಸುಮ್ಮನೆ ಪರಿಸ್ಥಿತಿಯನ್ನು ಅವಲೋಕಿಸಿದೆವು ಎನ್ನುತ್ತಾರೆ ಕಶ್ಯಪ್. ಅಹಿಂಸಾ ಗ್ರಾಮದ ಮೌನ ಕ್ರಾಂತಿಯಿಂದ ಯಶಸ್ಸು ಕಂಡ ನಂತರ 'ಚೈತನ್ಯ ಕಶ್ಯಪ್ ಪ್ರತಿಷ್ಠಾನ' ತನ್ನ ವಿಜಯ ಯಾತ್ರೆಯನ್ನು ದೇಶಕ್ಕೇ ವಿವರಿಸಿತು. ಅಹಿಂಸಾ ಗ್ರಾಮ ನಿರ್ಮಾಣವಾಗಿ ಜನರು ನೆಲೆಸಲು ಆರಂಭಿಸಿದ ಬಳಿಕ ಅಲ್ಲಿಗೆ ಭೇಟಿ ನೀಡಿದ ಮೊದಲ ಇಂಗ್ಲಿಷ್ ಪತ್ರಕರ್ತ ನಾನು. ಅಲ್ಲಿನ ಪರಿಸರ ಹಾಗೂ ಪರಿಶುದ್ಧತೆಯನ್ನು ಕಂಡು ಒಮ್ಮೆ ಬೆಚ್ಚಿಬಿದ್ದರೂ, ಆ ಪ್ರದೇಶದ ಬಗ್ಗೆ ಆಳವಾಗಿ ಹುಡುಕ ಹೊರಟರೇ ಆಶ್ಚರ್ಯ ಚಕಿತರಾಗುವುದರಲ್ಲಿ ಸಂಶಯವೇ ಇಲ್ಲ! ಅಹಿಂಸಾ ಗ್ರಾಮದ ಅಧಿಕಾರಿಗಳು ನಿರ್ಮಿಸಿದ ಅಂಗಡಿಯಲ್ಲಿರುವ ಸತೀಶ್ ಜೈನ್ ಅವರದ್ದು ಸುಂದರ ಜೀವನ. ಅವರ ಮುಖದ ಮಾಸದ ನಗುವೇ ಅದಕ್ಕೆ ಸಾಕ್ಷಿ. ಮುಂಜಾನೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸರ್ಕಾರದ ಬಿಸಿಯೂಟ ಯೋಜನೆಗೆ ಸಂಬಂಧಿಸಿದ ಕೆಲಸದಲ್ಲಿ ತೊಡಗಿಸಿಕೊಳ್ಳುವ ಸತೀಶ್ ನಂತರದ ಸಮಯವನ್ನು ಅಂಗಡಿಗಾಗಿ ಮೀಸಲಿಡುತ್ತಾರೆ. ಸತೀಶ್ ಅವರ ವರಮಾನ 2000 ರೂ. ತಾನೇನೂ ಕಡಿಮೆ ಇಲ್ಲ ಎಂಬಂತೆ ಅವರ ಪತ್ನಿಯೂ ತಿಂಗಳಿಗೆ 1000 ರೂ. ಸಂಪಾದಿಸುತ್ತಿದ್ದಾರೆ. ಒಟ್ಟಾರೆ ಸತೀಶ್ ತಿಂಗಳಿಗೆ 1500ರೂ. ಉಳಿಸುತ್ತಾರೆ! ಈ ಹಿಂದೆ ಬಿಡಿಗಾಸನ್ನೂ ಉಳಿತಾಯ ಮಾಡಲಾಗುತ್ತಿರಲಿಲ್ಲ. ತನ್ನ ಮಕ್ಕಳಿಗೆ ಕಾಲೇಜು ಹಾಗೂ ಉನ್ನತ ಶಿಕ್ಷಣ ನೀಡಬೇಕು ಎಂಬ ಬಯಕೆ ಸತೀಶ್ ಅವರದ್ದು. ಇಲ್ಲಿನ ಮಕ್ಕಳಿಗೆ ಸಂಜೆ ಹೊತ್ತಲ್ಲಿ ಶಾಲಾ ಶಿಕ್ಷಕಿಯೊಬ್ಬರು ಮನೆ ಪಾಠವನ್ನೂ ಹೇಳಿ ಕೊಡುತ್ತಿದ್ದಾರೆ! ಲಕ್ಷ್ಮಿ ಪ್ರಸಾದ್ ಒಂದು ಕಾಲದಲ್ಲಿ ರಾಟ್ಲಂನ ಅಗ್ರಹಾರದಲ್ಲಿ ನೆಲೆಸಿದ್ದವರು. ಆದರೆ ಈಗ ಜಾತಿ- ಧರ್ಮ ಭೇದವಿಲ್ಲದೆ ಅಹಿಂಸಾ ಗ್ರಾಮದ ಜನರೊಂದಿಗೆ ನೆಲೆಸಿರುವ ಲಕ್ಷ್ಮಿ ಸಾಮರಸ್ಯದ ಪ್ರತೀಕ. ಇಲ್ಲಿ ಜೀವನ ನಡೆಸುವುದೇ ಒಂದು ಅಪೂರ್ವ ಅನುಭವ. ಎಲ್ಲಾ ಹಬ್ಬಗಳನ್ನೂ ಒಗ್ಗಟ್ಟಿನಿಂದ ಆಚರಿಸುತ್ತೇವೆ. ಸಹಬಾಳ್ವೆಯ ಮೂಲಕ ನಿಜ ಜೀವನದ ಸುಖ ಅನುಭವಿಸುತ್ತಿದ್ದೇವೆ. ಇಲ್ಲಿ ಯಾರೂ ಶೋಷಿತರಲ್ಲ ಎನ್ನುತ್ತಾರೆ ಲಕ್ಷ್ಮಿ. ಎರಡೂವರೆ ವರ್ಷಗಳಲ್ಲಿ ಲಕ್ಷ್ಮಿ ಪ್ರಸಾದ್ ಅವರು ಅಲ್‌ಮೆರಾ, ಟಿವಿ, ಡಿವಿಡಿ ಪ್ಲೇಯರ್‌ಗಳನ್ನು ಖರೀದಿಸಿದ್ದು, ಡಿವಿಡಿ ಪ್ಲೇಯರ್‌ಗಳಿಗೆ ಇನ್ನು ಕ್ಯಾಸೆಟ್‌ಗಳನ್ನು ಖರೀದಿಸಬೇಕಷ್ಟೆ ಎನ್ನುತ್ತಾರೆ. ಅಹಿಂಸಾ ಗ್ರಾಮದಲ್ಲಿ ಪುರುಷರು ಮಹಿಳೆಯರು ಎಂಬ ಭೇದವಿಲ್ಲ. ಅಷ್ಟೇ ಅಲ್ಲ, ಸ್ವಾವಲಂಬನೆಯ ಮತ್ತೊಂದು ಮುಖವಾಗಿರುವ ಅಹಿಂಸಾ ಗ್ರಾಮದ ಮಹಿಳೆಯರು ಮನೆಯ ಖರ್ಚು- ವೆಚ್ಚ ಭರಿಸುವುದರಲ್ಲೂ ಹಿಂದೆಬಿದ್ದಿಲ್ಲ. ಪ್ರೇಮಲತಾ ಚೌಹಾಣ್ ಅಹಿಂಸಾ ಗ್ರಾಮದ ನಿವಾಸಿ ಮತ್ತು ಅಲ್ಲಿನ ಮಹಿಳಾ ಸಂಯೋಜಕಿ. ಅವರು ಎರಡು ಹಂತಗಳಲ್ಲಿ ಒಟ್ಟು 97 ವಿದ್ಯಾರ್ಥಿಗಳಿಗೆ ಮನೆ ಪಾಠ ಹೇಳಿಕೊಡುತ್ತಿದ್ದಾರೆ. ಮಹಿಳೆಯರಿಗೆ ಕಸೂತಿ ಕಲೆಯ ಬಗ್ಗೆಯೂ ತರಬೇತಿ ನೀಡುತ್ತಿರುವ ಅವರು, ಹಪ್ಪಳ ತಯಾರಿ ಕೆಲಸಕ್ಕೂ ಸಹಾಯ ಮಾಡುತ್ತಿದ್ದಾರೆ. ವಿವಿಧ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅಲ್ಲಿನ ಮಹಿಳೆಯರು, ಹಪ್ಪಳ ತಯಾರಿ, ಮಸಾಲೆ ಪದಾರ್ಥ, ಮೊಬೈಲ್ ಕವರ್, ನೋಟ್ ಪುಸ್ತಕಗಳನ್ನು ತಯಾರಿಸುತ್ತಾ ಹೆಚ್ಚುವರಿ ಆದಾಯಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆದಾಯವೊಂದೇ ಇಲ್ಲಿ ಮುಖ್ಯವಲ್ಲ, ಅಹಿಂಸಾ ಗ್ರಾಮ ಮತ್ತು ಅದರ ಪರಿಸರ ಇಲ್ಲಿನ ನಿವಾಸಿಗಳ ವ್ಯಕ್ತಿತ್ವವನ್ನೇ ಬದಲಿಸಿದೆ. ಆ ಬದಲಾದ ವ್ಯಕ್ತಿತ್ವವೇ ಯಶಸ್ಸಿಗೆ ದಾರಿಯಾಯಿತು. 'ಇಲ್ಲಿ ಕೆಲಸಕ್ಕೆ ಸೇರಿದ ಬಳಿಕ ಸಂಸ್ಥೆ ನಮಗೆ ಬಹಳಷ್ಟು ಸಹಾಯ ಮಾಡಿತು. ನಾವು ಪ್ರಗತಿ ಸಾಧಿಸಿದ್ದೇವೆ, ನಮ್ಮ ಜೀವನ ಶೈಲಿ ಸಂಪೂರ್ಣ ಬದಲಾಗಿದೆ. ನಾಲ್ಕೈದು ಪಾತ್ರೆಗಳನ್ನು ಹಿಡಿದು ಇಲ್ಲಿಗೆ ಬಂದಿದ್ದ ಜನ ಇಂದು ಟಿವಿ, ರೆಫ್ರಿಜರೇಟರ್, ಕೂಲರ್ ಮುಂತಾದ ಅತ್ಯಾಧುನಿಕ ಸಾಮಾಗ್ರಿಗಳನ್ನು ಖರೀದಿಸಿ ಬದುಕಿಗೆ ಹೊಸ ರೂಪ ನೀಡಿದ್ದಾರೆ! ಗ್ರಾಮದ ಪ್ರತಿಯೊಂದು ಮಗುವೂ ಶಾಲೆಗೆ ಹೋಗುತ್ತದೆ. ಕೆಲವು ಮಕ್ಕಳು ಖಾಸಗಿ ಶಾಲೆಗಳಿಗೆ ಹೋಗುತ್ತಿದ್ದಾರೆ. ಇನ್ನು ಕೆಲವರು ಮನೆ ಪಾಠ ಹೇಳಿಸಿಕೊಳ್ಳುತ್ತಿದ್ದಾರೆ. ಉಳಿತಾಯ ಮಾಡಿದ ಹಣವನ್ನು ಹೆತ್ತವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿನಿಯೋಗಿಸುತ್ತಾರೆ' ಎಂದು ಸಂತೋಷ ವ್ಯಕ್ತಪಡಿಸುತ್ತಾರೆ ಪ್ರೇಮಲತಾ. ತಿಂಗಳಲ್ಲಿ 1,200 ರೂ. ಉಳಿತಾಯ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದು, ಇನ್ನೂ ಸ್ವಲ್ಪ ಕಷ್ಟಪಟ್ಟರೆ ಸುಮಾರು 2,000ದಷ್ಟು ಹಣವನ್ನು ಉಳಿಸಬಹುದು' ಎನ್ನುತ್ತಾರೆ. ಅಹಿಂಸಾ ಗ್ರಾಮದ ವಿಜಯದ ನಂತರ ಮುಂದಿನ ಹೆಜ್ಜೆ? 'ಅಹಿಂಸಾ ಗ್ರಾಮ ರಚನೆಯಾಗಿ ಎರಡು ವರ್ಷಗಳು ಕಳೆದಿವೆ. ನಮ್ಮ ಚಿಂತನೆ ಎಲ್ಲೆಡೆ ಹರಡಿ ಪ್ರಚಾರ ಗಳಿಸುತ್ತಿದೆ. ಉಜ್ಜಯಿನಿಯ ಸಂಸದ ನಾರಾಯಣ್ ಜಾಟಿಯಾ ಹೆಚ್ಚು ಹೆಚ್ಚು ಅಹಿಂಸಾ ಗ್ರಾಮಗಳ ನಿರ್ಮಾಣಕ್ಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಅವರು ಟ್ರಸ್ಟ್ ಒಂದನ್ನು ಸ್ಥಾಪಿಸಿದ್ದಾರೆ. ಒಟ್ಟು 150 ಮನೆಗಳನ್ನು ನಿರ್ಮಿಸುವ ಯೋಜನೆ ಅವರದ್ದು. ಹಾಗೇ ರಾಜಸ್ತಾನದ 'ಮಾಡರ್ನ್ ವುಲನ್' ಉಣ್ಣೆ ಉಡುಪುಗಳ ಉದ್ಯಮ ನಡೆಸುತ್ತಿರುವ ಎಚ್.ಎಸ್. ರಾಕಾ ಅವರು ಕೂಡ ಅಹಿಂಸಾ ಗ್ರಾಮದಿಂದ ಪ್ರೇರಿತರಾಗಿದ್ದಾರೆ. ಚಿತ್ತೂರಿನ ಬಳಿ ಇವರೂ 150 ಮನೆಗಳ ಅಹಿಂಸಾ ಗ್ರಾಮ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾರೆ. ಕಾಮಗಾರಿ ಕೆಲಸಗಳು ಈ ವರ್ಷವೇ ಆರಂಭವಾಗಲಿದೆ. ಹಾಗೆ ಅಹಿಂಸಾ ಗ್ರಾಮ ಎಂಬ ನಮ್ಮ ಕಲ್ಪನೆಯ ಕೂಸು ಸ್ಫೂರ್ತಿಯ ಚಿಲುಮೆಯಾಯಿತು. ಸರ್ಕಾರ ತನ್ನ ಅಭಿವೃದ್ಧಿ ಯೋಜನೆಗಳಲ್ಲಿ ಇನ್ನೂ ಭದ್ರವಾಗಬೇಕು ಎನ್ನುವ ಆಶಯ ನಮ್ಮದು. ವಸತಿ ಯೋಜನೆ, ಭೂ ಹಂಚಿಕೆ, ಉದ್ಯೋಗ ಇಂಥ ಯಾವುದೇ ಯೋಜನೆಗಳಿರಲಿ ಸರ್ಕಾರ ಸಮಗ್ರ ದೃಷ್ಟಿಕೋನ ಹೊಂದಿರಬೇಕು. ಎಲ್ಲದರ ಮೂಲ ಗುರಿ ಬಡತನ ನಿರ್ಮೂಲನೆಯೇ ಆಗಿರಬೇಕು. ಈಗ ಸರ್ಕಾರವೂ ಕಾರ್ಯಪ್ರವೃತವಾಗಿದೆ. ಸರ್ಕಾರದ 'ಜವಹರಲಾಲ್ ನೆಹರು ನಗರ ನವೀಕರಣ ಯೋಜನೆ' ಯಲ್ಲಿ ನಿರ್ಮಾಣವಾಗುವ ಎಲ್ಲಾ ಮನೆಗಳು ಕನಿಷ್ಠ 250 ಚದರ ಅಡಿ ವಿಸ್ತೀರ್ಣ ಹೊಂದಿರಬೇಕು. ಅಡುಗೆಮನೆ, ಮನೆಗೇ ಹೊಂದಿರುವ ಶೌಚಾಲಯ ಸೌಲಭ್ಯವೂ ಇರಬೇಕು, ಜೊತೆಗೆ ಮನೆಗಳು ಅಕ್ಕಪಕ್ಕ ಇರಬೇಕು ಹಾಗೂ ಉತ್ತಮ ಚರಂಡಿ ವ್ಯವಸ್ಥೆ ಇರುವ ನಿರ್ಮಲ ಸಮಾಜ ಸೃಷ್ಟಿಯಾಗಬೇಕು ಎಂದಿದೆ. 'ಅಹಿಂಸಾ ಗ್ರಾಮದಿಂದ ಸರ್ಕಾರವೂ ಪ್ರೇರಿತವಾಗಿದೆ ಎನ್ನುವ ನಂಬಿಕೆ ನನ್ನದು. ನಮ್ಮ ಕೆಲಸ ಇಡೀ ದೇಶಕ್ಕೇ ಸ್ಫೂರ್ತಿಯಾದಾಗ ಮಾತ್ರ ನಮ್ಮ ನೆಲದಿಂದ ಬಡತನದ ಸಂಪೂರ್ಣ ನಿರ್ಮೂಲನೆ ಸಾಧ್ಯ ಎನ್ನುತ್ತಾರೆ ಕಶ್ಯಪ್. ಹಾಗೆಯೇ ಆಗಲಿ ಎಂಬ ಹಾರೈಕೆ ನಮ್ಮದು.

ಟಿಎಸ್‌ಐ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .