ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಮುಖಪುಟ ಲೇಖನ : ಬಿಹಾರಿ ನ್ಯಾಯ
ಸುಗ್ಗಿಯ ಸಂಕಷ್ಟ
 ಸಿಹಿ ಹಂಚುವ ರೈತರ ಕಹಿ ಕಥೆ

ಉತ್ತರಪ್ರದೇಶದಲ್ಲಿನ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಅರೆಯುವುದು ತಡವಾಗುತ್ತಿದೆ. ಇದರ ಪರಿಣಾಮ ಗೋಧಿ ಉತ್ಪಾದನೆ ಮೇಲಾಗುತ್ತಿದ್ದು, ಒಟ್ಟಾರೆ ದೇಶದ ಆಹಾರ ಭದ್ರತಾ ವ್ಯವಸ್ಥೆ ಕುಸಿದು ಬೀಳುವ ಸಾಧ್ಯತೆ ಇದೆ. ಪರಿಸ್ಥಿತಿ ಬಿಗಡಾಯಿಸುತ್ತಿದ್ದರೂ ಕೇಂದ್ರ ಆಹಾರ- ಕೃಷಿ ಸಚಿವ ಶರದ್ ಪವಾರ್ ಮಾತ್ರ ಕ್ರಿಕೆಟ್‌ನಲ್ಲಿ ಮುಳುಗಿದ್ದಾರೆ. ಟಿಎಸ್‌ಐನ ಶರದ್ ಗುಪ್ತ ಮತ್ತು ರಂಜನ್ ಪ್ರಕಾಶ್ ಈ ಸಂದಿಗ್ಧ ಸನ್ನಿವೇಶದ ವಿಶ್ಲೇಷಣೆ ಮಾಡಿದ್ದಾರೆ

* ಭಾರತದಲ್ಲಿ ತಲಾ ಆದಾಯದ ಏರಿಕೆಯಿಂದಾಗಿ ಗೋಧಿಯ ಬಳಕೆ ಕೂಡಾ ಏರಿದೆ * ಸಕ್ಕರೆ ಕಾರ್ಖಾನೆಗಳ ಕಾರ್ಯಾರಂಭದ ವಿಳಂಬ ಮತ್ತು ಹವಾಮಾನ ವೈಪರೀತ್ಯದಿಂದ ಗೋಧಿ ಕೃಷಿಗೆ ಪೆಟ್ಟು * ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲೂ ಗೋಧಿ ದುಬಾರಿ

ಉತ್ತರ ಪ್ರದೇಶದ ಮುಜಾಫರ್ ನಗರ ಜಿಲ್ಲೆಯ ಪಗ್ವಾರ. ಸಂಜೆಯ ದಟ್ಟ ಮಂಜು ಕವಿದ ವಾತಾವರಣ. ಆಗಸದಲ್ಲಿನ ಸೂರ್ಯ ದಿನದ ತನ್ನ ಪಯಣ ಮುಗಿಸುವ ಯತ್ನ ನಡೆಸಿದ್ದ. ಈ ನಡುವೆ ಕಳೆದ ಎರಡು ದಿನಗಳಿಂದ ಒಂದು ನಿರ್ಧಾರಕ್ಕಾಗಿ ತಹತಹಿಸುತ್ತಿದ್ದ ಅತ್ತಾರ್ ಸಿಂಗ್ ಕೊನೆಗೂ ಅಂತಿಮ ನಿರ್ಣಯ ತೆಗೆದುಕೊಂಡ. ಕಳೆದ ಒಂದು ವರ್ಷದಿಂದ ತಾನು ಬೆಳೆಸಿದ್ದ, ಗದ್ದೆಯಲ್ಲಿ ಕೊಬ್ಬಿ ನಿಂತಿರುವ ಕಬ್ಬನ್ನು ಏನು ಮಾಡಬೇಕು? ಎನ್ನುವ ಅತ್ತಾರ್ ಸಿಂಗ್ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿತ್ತು. ಬೆಳೆದು ನಿಂತ ಕಬ್ಬಿನ ಗದ್ದೆಗೆ ಬೆಂಕಿ ಹಾಕುವುದು ಎಂಬ ಅತ್ತಾರ್ ಸಿಂಗ್ ಕಠಿಣ ನಿರ್ಣಯ ಕಾರ್ಯಗತವಾಯಿತು. ನೋಡ-ನೋಡುತ್ತಿದ್ದಂತೆಯೇ ಕಬ್ಬಿನ ಗದ್ದೆಯಿಂದ ಬೆಂಕಿಯ ಕೆನ್ನಾಲಗೆ ಆಗಸದೆತ್ತರಕ್ಕೆ ಚಿಮ್ಮಿತು. ಕೇವಲ ಎರಡೇ ಗಂಟೆಗಳಲ್ಲಿ ಬೆಳೆದು ನಿಂತಿದ್ದ ಕಬ್ಬಿನ ಗದ್ದೆ ಸಂಪೂರ್ಣ ಭಸ್ಮವಾಗಿ ಗದ್ದೆಯಲ್ಲಿ ಬೂದಿಯ ರಾಶಿ ಹರಡಿ ನಿಂತಿತು.
ಕಳೆದ ತಿಂಗಳಷ್ಟೆ ನಮ್ಮ ಹಳ್ಳಿಗೆ ಸಮೀಪ ಒಂದು ಹೊಸ ಸಕ್ಕರೆ ಕಾರ್ಖಾನೆ ಆರಂಭವಾಗಿತ್ತು. ಇನ್ನು ಒಂದು ತಿಂಗಳು ಕಳೆದ ನಂತರ ನಾವು ಕಬ್ಬನ್ನು ಖರೀದಿಸುತ್ತೇವೆ ಎಂದು ಕಾರ್ಖಾನೆಯವರು ಹೇಳಿದರು. ಆದರೆ ಗೋಧಿ ಬಿತ್ತನೆಯ ಋತು ಆರಂಭವಾಗಿ ಬಿಟ್ಟಿದೆ. ನಾನೇನಾದರೂ ಕಬ್ಬಿನ ಕಟಾವು ಮಾಡುವುದನ್ನು ತಡ ಮಾಡಿದರೆ ಗೋಧಿ ಬಿತ್ತನೆ ಮಾಡಲು ಆಗುವುದೇ ಇಲ್ಲ ಎನ್ನುವುದು ಅತ್ತಾರ್ ಸಿಂಗ್ ವಿವರಣೆ. ಅದಕ್ಕಾಗಿ ಬೆಳೆದು ನಿಂತ ಕಬ್ಬಿನ ಗದ್ದೆಗೆ ಬೆಂಕಿ ಹಾಕಬೇಕೇ? ಎಂಬ ಪ್ರಶ್ನೆಗೆ ಆತ ಮೌನದ ಮೂಲಕವೇ ಉತ್ತರ ನೀಡಿ ತನ್ನ ಹಳ್ಳಿಯತ್ತ ಹೆಜ್ಜೆ ಹಾಕಿದ. ಸ್ವಲ್ಪ ದೂರ ಹೋದವ ನಮ್ಮತ್ತ ತಿರುಗಿ ನಿಂತು, ದಯನೀಯವಾಗಿದ್ದ ದನಿಯಲ್ಲಿ ರೈತರ ಪಾಲಿಗೆ ಬೆಳೆದ ಬೆಳೆ ಸ್ವಂತ ಮಕ್ಕಳಂತೆ. ಏನು ಮಾಡೋದು, ನಮ್ಮ ಮಕ್ಕಳಿಗೇ ನಾವೇ ಬೆಂಕಿ ಹಾಕಿ ಅವರನ್ನು ಸಾಯಿಸುತ್ತಿದ್ದೇವೆ ಎಂದು ಅತ್ತಾರ್ ನೊಂದು ನುಡಿದು ಮುನ್ನಡೆದ. ಅವರ ಸಂಬಂಧಿ ಗಜೇಂದ್ರ ಸಿಂಗ್ ಈಗ ಅವನು ಕಬ್ಬಿನ ಗದ್ದೆಯನ್ನು ಚೊಕ್ಕ ಮಾಡದೇ ಇದ್ದಲ್ಲಿ ಗೋಧಿ ಬೆಳೆಯಲು ಸಾಧ್ಯವಾಗುವುದೇ ಇಲ್ಲ ಎಂಬ ವಿವರ ನೀಡಿದರು. ಗಜೇಂದ್ರ ಸಿಂಗ್ ಕೂಡ ಸಕ್ಕರೆ ಕಾರ್ಖಾನೆ ಕಾರ್ಯಾರಂಭ ಮಾಡುವುದಕ್ಕಾಗಿ ಕಾದು ಸಾಕಾಗಿ, ಹೆಚ್ಚಿನ ಕಬ್ಬನ್ನು ದನಕರುಗಳ ಮೇವಾಗಿ ಉಪಯೋಗಿಸಿದರಂತೆ.
ಅತ್ತಾರ್ ಅವರಂತೆಯೇ ಉತ್ತರ ಪ್ರದೇಶದ ಲಕ್ಷಾಂತರ ರೈತರು ಒಂದು ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಸಾಮಾನ್ಯವಾಗಿ ಉತ್ತರ ಪ್ರದೇಶದ ರೈತರು ಗೋಧಿ ಮತ್ತು ಕಬ್ಬನ್ನು ಪರ್ಯಾಯ ಬೆಳೆಯಾಗಿ ಬೆಳೆಯುತ್ತಾರೆ. ದೇಶದಲ್ಲಿನ ಗೋಧಿ ಉತ್ಪಾದನೆಯ ಮೂರನೇ ಒಂದರಷ್ಟನ್ನು ಉತ್ತರ ಪ್ರದೇಶ ಕೊಡುಗೆಯಾಗಿ ನೀಡುತ್ತಿದೆ. ಕೇಂದ್ರ ಸರ್ಕಾರ ಈಗ ಗೋಧಿಯ ಪ್ರತಿ ಕ್ವಿಂಟಾಲ್‌ಗೆ ರೂ.1000 ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿ ಮಾಡಿದೆ. ಆ ಹಿನ್ನೆಲೆಯಲ್ಲಿ ಗೋಧಿ ಬೆಳೆದು ಒಂದಿಷ್ಟು ನೆಮ್ಮದಿ ಪಡೆಯಬಹುದು ಎಂದುಕೊಂಡಿದ್ದ ರೈತರ ಪಾಲಿಗೆ ಈಗ ಬೆಳೆದು ನಿಂತಿರುವ ಕಬ್ಬು ಕಂಟಕವಾಗಿದೆ. ಸಕ್ಕರೆ ಕಾರ್ಖಾನೆ ಮಾಲೀಕರ ವಿಳಂಬ ನೀತಿ ಹಾಗೂ ಕೈಕೊಟ್ಟ ಮಳೆ ಎರಡೂ ಇಲ್ಲಿನ ರೈತರ ನೆಮ್ಮದಿಯನ್ನು ಕೆಡಿಸಿವೆ. ರೈತರು ಗೋಧಿಯನ್ನು ಬೆಳೆಯಲು ಮುಂದಾಗಬಾರದು ಮತ್ತು ಕೇವಲ ಕಬ್ಬನ್ನು ಮಾತ್ರ ಬೆಳೆಯಬೇಕು ಎನ್ನುವ ಹುನ್ನಾರ ಸಕ್ಕರೆ ಕಾರ್ಖಾನೆ ಮಾಲೀಕರದ್ದಾಗಿದೆ. ಅದಕ್ಕಾಗಿ ಬೇಕೆಂದೇ ಅವರು ಕಬ್ಬು ಖರೀದಿಸುವುದನ್ನು ವಿಳಂಬ ಮಾಡುತ್ತಿದ್ದಾರೆ ಎನ್ನುತ್ತಾರೆ ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘಟನೆಯ ಅಧ್ಯಕ್ಷ ವಿರೇಂದ್ರ ಮೋಹನ್ ಸಿಂಗ್.
ಇದರಿಂದ ಕೇವಲ ಉತ್ತರ ಪ್ರದೇಶದ ರೈತರ ಮೇಲೆ ಮಾತ್ರ ಪರಿಣಾಮವಾಗುತ್ತದೆ ಎಂದು ನೀವೇನಾದರೂ ಸಂಕುಚಿತವಾಗಿ ಯೋಚನೆ ಮಾಡಿದರೆ ಅದರ ಫಲವನ್ನು ನೀವೇ ಉಣ್ಣಬೇಕಾಗುತ್ತದೆ. ಏಕೆಂದರೆ ಭಾರಿ ಪ್ರಮಾಣದ ಲಾಭ ಪಡೆಯಲು ಸಕ್ಕರೆ ಕಾರ್ಖಾನೆ ಮಾಲೀಕರು ನಡೆಸಿರುವ ಈ ಹುನ್ನಾರದಿಂದ ದೇಶದ ಆಹಾರ ಭದ್ರತೆಗೆ ಧಕ್ಕೆಯಾಗುವಂತಹ ಪರಿಸ್ಥಿತಿ ಎದುರಾಗಿದೆ. ಮುಂಬರುವ ದಿನಗಳಲ್ಲಿ ಗೋಧಿ ಮತ್ತು ಗೋಧಿ ಹಿಟ್ಟಿನ ಬೆಲೆ ಗಗನಕ್ಕೆ ಚಿಮ್ಮಿದರೆ ನೀವು ಅಚ್ಚರಿ ಪಡಬೇಡಿ.
ಕಳೆದ ಸುಮಾರು ಹತ್ತು ವರ್ಷಗಳಿಂದ ನಮ್ಮ ದೇಶದಲ್ಲಿ ಪ್ರತಿ ವರ್ಷ 70 ಮಿಲಿಯನ್ ಟನ್ ಆಚೀಚೆ ಗೋಧಿಯನ್ನು ಬೆಳೆಯಲಾಗುತ್ತಿದೆ. ದೇಶದ ಜನಸಂಖ್ಯೆ ಮಾತ್ರ ಪ್ರತಿ ವರ್ಷ ಶೇಕಡಾ 1.7ರಷ್ಟು ಬೆಳೆಯುತ್ತಲೇ ಸಾಗುತ್ತಿದೆ. ಕಳೆದ ವರ್ಷ ಗೋಧಿ ಉತ್ಪಾದನೆ 74.8 ಮಿಲಿಯನ್ ಟನ್ ಆಗಿತ್ತು. ಆದರೆ ಈ ಬಾರಿ ಸಕ್ಕರೆ ಕಾರ್ಖಾನೆ ಮಾಲೀಕರ ವಿಷವರ್ತುಲದ ನಡುವೆ ದೇಶದ ಆಹಾರ ಭದ್ರತೆ ಸಿಕ್ಕಿ ಹಾಕಿಕೊಳ್ಳಲಿದೆ. ಕೇಂದ್ರ ಸರ್ಕಾರದ ಪ್ರಕಾರ ಈ ಬಾರಿಯೂ ಕಳೆದ ವರ್ಷದಷ್ಟೇ ಗೋಧಿಯ ಉತ್ಪಾದನೆ ದೇಶದಲ್ಲಿ ಆಗಲಿದೆ. ಆದರೆ ತಜ್ಞರ ಪ್ರಕಾರ ಭಾರಿ ಪ್ರಮಾಣದ ಕೊರತೆ ಈ ಬಾರಿ ದೇಶವನ್ನು ಕಾಡಲಿದೆ. ಅದರ ಪರಿಣಾಮವಾಗಿ ಅಪಾರ ಪ್ರಮಾಣದ ಗೋಧಿಯನ್ನು ನಾವು ಆಮದು ಮಾಡಿಕೊಳ್ಳಬೇಕಾಗುತ್ತದೆ. ಇದರಿಂದಾಗಿ ದೇಶದ ಮೇಲೆ ಭಾರಿ ಪ್ರಮಾಣದ ಆರ್ಥಿಕ ಹೊರೆ ಬೀಳಲಿದೆ. ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋಧಿ ಬೆಲೆ ನಮ್ಮ ದೇಶದಕ್ಕಿಂತ ಎರಡರಷ್ಟಿದೆ. ಅಮೆರಿಕದ ಕೃಷಿ ಇಲಾಖೆ (ಯುಎಸ್‌ಡಿಎ) ಮಾಡಿದ ಅಂದಾಜಿನ ಪ್ರಕಾರ ಈ ವರ್ಷ ಭಾರತಕ್ಕೆ 76 ಮಿಲಿಯನ್ ಟನ್ ಗೋಧಿಯ ಅವಶ್ಯಕತೆಯಿದೆ. ದೇಶದ ಒಟ್ಟಾರೆ ಗೋಧಿ ಉತ್ಪಾದನೆಯ ಪ್ರಮಾಣ 70 ಮಿಲಿಯನ್ ಟನ್ ಸುತ್ತಮುತ್ತ ಇದ್ದರೂ ಸುಮಾರು 6 ಮಿಲಿಯನ್ ಟನ್ ಕೊರತೆ ಉಂಟಾಗಲಿದೆ. ಕೊರತೆಯನ್ನು ನೀಗಿಸುವ 10,000 ಕೋಟಿ ರೂಪಾಯಿಗಳಷ್ಟು ಮೊತ್ತದ ಗೋಧಿಯನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ಅದೂ, ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋಧಿ ಬೆಲೆ ಈಗಿನಷ್ಟೇ ಇದ್ದಲ್ಲಿ. ಅಕಸ್ಮಾತ್ ಅಲ್ಲಿ ಬೆಲೆ ಏರಿದರೆ, ಆ ಮೊತ್ತ ಗಗನಕ್ಕೇರಿ ನಿಲ್ಲಲಿದೆ.
ಇಂತಹ ಪರಿಸ್ಥಿತಿಯ ನಡುವೆ ನಮ್ಮ ದೇಶದ ಕೃಷಿ ಸಚಿವರಾದ ಶರದ್ ಪವಾರ್ ಅವರಿಗೆ ರೈತ, ಆಹಾರ ಭದ್ರತೆ ಕುರಿತು ಯೋಚಿಸಲು ಸಮಯವೇ ಇಲ್ಲ. ಅವರು ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿ ಕೂತು ಕ್ರಿಕೆಟ್ ಎಂಬ ಕ್ರೀಡೆಯನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಹೆಸರಲ್ಲಿ ಬಿಕರಿ ಮಾಡುವುದರಲ್ಲಿ 'ಬ್ಯುಸಿ'ಯಾಗಿದ್ದಾರೆ.
ದೇಶದ ಆಹಾರ ಭದ್ರತೆ ಧಕ್ಕೆಯುಂಟು ಮಾಡುತ್ತಿರುವ ಸಕ್ಕರೆ ಕಾರ್ಖಾನೆ ಮಾಲೀಕರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ನಾನು ಕೃಷಿ ಸಚಿವ ಶರದ್ ಪವಾರ್‌ಗೆ ಹೇಳಿದೆ ಎಂದು ವಿರೇಂದ್ರ ಮೋಹನ್ ಸಿಂಗ್ ಹೇಳುತ್ತಾರೆ. ಈ ಸಂಬಂಧ ಟಿಎಸ್‌ಐ ಬಹುದಿನಗಳ ಹಿಂದೆಯೇ ಕೃಷಿ ಸಚಿವರಿಗೆ ಕೆಲವು ಪ್ರಶ್ನೆಗಳುಳ್ಳ ಪತ್ರವೊಂದನ್ನು ಫ್ಯಾಕ್ಸ್ ಮಾಡಿತ್ತು. ಅದಕ್ಕೆ ಇದುವರೆಗೆ ಉತ್ತರ ಬಂದಿಲ್ಲ. ಕೇಂದ್ರ ಹಾಗೂ ಪೂರ್ವ ಉತ್ತರ ಪ್ರದೇಶದ ಭಾಗಗಳಲ್ಲಿ ನೀರಾವರಿ ವ್ಯವಸ್ಥೆ ಉತ್ತಮವಾಗಿಲ್ಲ. ಅಲ್ಲಿನ ರೈತರು ಸಂಪೂರ್ಣವಾಗಿ ಮಳೆಯನ್ನೇ ನಂಬಿದ್ದಾರೆ. ಆದರೆ, ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಕಬ್ಬು ಕೂಡ ಅಷ್ಟೇನೂ ಪೊಗದಸ್ತಾಗಿ ಬೆಳೆದು ನಿಂತಿರಲಿಲ್ಲ. ಜೊತೆಗೆ ಸಕ್ಕರೆ ಕಾರ್ಖಾನೆ ಮಾಲೀಕರ ವಿಳಂಬ ನೀತಿ ಕೂಡ ರೈತರ ಪಾಲಿಗೆ ಶಾಪವಾಯಿತು. ಸಾಮಾನ್ಯವಾಗಿ ಅಕ್ಟೋಬರ್ ಮಧ್ಯದಲ್ಲಿ ಗೋಧಿ ಬಿತ್ತಲಾಗುತ್ತದೆ. ಅತ್ಯಂತ ತಡವಾಗಿ ಎಂದರೆ ಡಿಸೆಂಬರ್ ಕೊನೆಯೊಳಗೆ. ಉದ್ದೇಶ ಪೂರ್ವಕವಾಗಿಯೇ ನವೆಂಬರ್ ಕೊನೆಯಲ್ಲಿ ಕಬ್ಬು ಅರೆಯಲು ಆರಂಭಿಸಿದ ಸಕ್ಕರೆ ಕಾರ್ಖಾನೆಗಳು ಗೋಧಿ ಬಿತ್ತನೆಗೆ ಸ್ವಲ್ಪ ಸಮಯವೂ ಉಳಿಯದಂತೆ ನೋಡಿಕೊಂಡವು.
ತಡವಾಗಿ ಬಿತ್ತನೆ ಮಾಡುವ ಗೋಧಿ ಮಾದರಿಯನ್ನು ಹೆಚ್ಚೆಂದರೆ ಜನವರಿ 26ರೊಳಗೆ ಬಿತ್ತನೆ ಮಾಡಬಹುದು. ಆದರೆ ಒಮ್ಮೆ ತಾಪಮಾನ ಹೆಚ್ಚಿದ ಮೇಲೆ ಬಿತ್ತನೆ ಮಾಡಿದರೆ ಹುಟ್ಟುವ ಸಸಿಗಳು ಶಕ್ತಿಹೀನವಾಗಿರುತ್ತವೆ. ಕಡಿಮೆ ಟಿಸಿಲು ಒಡೆಯುತ್ತದೆ. ಗೋಧಿ ಕಾಳು ಸರಿಯಾಗಿ ತೆನೆ ಕಟ್ಟುವುದಿಲ್ಲ ಎನ್ನುವುದು ಮೀರತ್‌ನಲ್ಲಿರುವ ಚೌಧರಿ ಚರಣಸಿಂಗ್ ಕೃಷಿ ವಿಶ್ವವಿದ್ಯಾಲಯದ ತಜ್ಞ ಡಾ.ಐ.ಬಿ.ಸಿಂಗ್ ಅವರ ಅಭಿಪ್ರಾಯ. ಭೂಮಿಯನ್ನು ಹಾಗೆಯೇ ಬಿಡುವ ಬದಲು ತಡವಾಗಿಯಾದರೂ ಗೋಧಿ ಬಿತ್ತನೆ ಮಾಡುವುದು ಒಳಿತು. ಹಾಗೆ ಮಾಡುವುದರಿಂದ ದನಕರುಗಳ ಮೇವಿಗೆ ಬರ ಬರದಂತೆ ನೋಡಿಕೊಳ್ಳಲು ಸಾಧ್ಯ ಎನ್ನುವುದು ಭಾಗಪತ್‌ನ ಭೈನ್ಸಿ ಗ್ರಾಮದ ಚರಣ್ ಸಿಂಗ್ ವಾದ.
ರೈತರು ಕಬ್ಬಿನ ಬದಲು ಗೋಧಿ ಬೆಳೆಯತ್ತ ಹೆಚ್ಚಿನ ಆಸಕ್ತಿ ತೋರುವುದಕ್ಕೆ ಇನ್ನೂ ಒಂದು ಕಾರಣವಿದೆ. ಅದೇನೆಂದರೆ ಗೋಧಿಯ ಕನಿಷ್ಠ ಬೆಂಬಲ ಬೆಲೆಯನ್ನು ಏರಿಸಿರುವುದು. ಕಳೆದ ವರ್ಷ ಪ್ರತಿ ಕ್ವಿಂಟಾಲ್‌ಗೆ ರೂ.850 ನಿಗದಿ ಪಡಿಸಲಾಗಿತ್ತು. 2008ರಲ್ಲಿ ಆ ಮೊತ್ತವನ್ನು ಪ್ರತಿ ಕ್ವಿಂಟಾಲ್‌ಗೆ ರೂ.1000 ಎಂದು ನಿಗದಿ ಮಾಡಲಾಗಿದೆ. 2004ರಲ್ಲಿ ಗೋಧಿಯ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್‌ಗೆ ರೂ. 620 ಆಗಿತ್ತು. ಕಳೆದ ಹಲವಾರು ವರ್ಷಗಳಿಂದ ಗೋಧಿ ಬೆಲೆ ನಿರಂತರವಾಗಿ ಏರುತ್ತಲೇ ಇರುವುದರಿಂದ ರೈತರು ಈ ಬೆಳೆಯ ಬಗ್ಗೆ ಭರವಸೆ ಇಟ್ಟುಕೊಂಡಿದ್ದಾರೆ. ಗೋಧಿ ಹೆಚ್ಚು ಲಾಭದಾಯಕ. ಕಳೆದ ವರ್ಷ ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಗೋಧಿ ಕ್ವಿಂಟಾಲ್‌ಗೆ ರೂ.1100ರಿಂದ ರೂ.1200 ದೊರಕಿತ್ತು. ಈ ಬಾರಿ ಅದು ರೂ.1400ನ್ನೂ ದಾಟುವ ಸಾಧ್ಯತೆಯಿದೆ ಎನ್ನುತ್ತಾರೆ ಗಾಜಿಯಾಬಾದ್‌ನ ಹಿಟ್ಟಿನ ಗಿರಣಿ ಮಾಲೀಕ ರಾಜೀವ ಲೋಚನ.
ಪಾಕಿಸ್ತಾನದಂತೆ ಆಹಾರಕ್ಕಾಗಿ ಹಾಹಾಕಾರದ ಸನ್ನಿವೇಶ ಒಡಮೂಡದೇ ಇರಲಿ ಎಂದು ಎರಡು ವರ್ಷಗಳ ಮೊದಲೇ ಮುನ್ನೆಚ್ಚರಿಕೆ ವಹಿಸಿದ ಭಾರತ ಸರ್ಕಾರ ಗೋಧಿ ರಫ್ತನ್ನು ನಿಷೇಧಿಸಿದೆ. ರಾಷ್ಟ್ರೀಯ ಮಾರುಕಟ್ಟೆಯ ಮೇಲೆ ಅಂತರ್ ರಾಷ್ಟ್ರೀಯ ಪರಿಣಾಮ ಆಗದೇ ಇರಲಿ ಎನ್ನುವುದೇ ಇದರ ಹಿಂದಿನ ಉದ್ದೇಶ. ಕಳೆದ ವರ್ಷ ಗೋಧಿಗೆ ಸರ್ಕಾರ ರೂ.850 ಕನಿಷ್ಠ ಬೆಂಬಲ ಬೆಲೆ ನೀಡಿತು. ಅದಾದ ಮೇಲೆ ಕೂಡ 1.8 ಮಿಲಿಯನ್ ಟನ್ ಗೋಧಿಯನ್ನು ಆಮದು ಮಾಡಿಕೊಂಡಿತು. ಅದಕ್ಕೆ ಕೇಂದ್ರ ನೀಡಿದ ಬೆಲೆ ಪ್ರತಿ ಕ್ವಿಂಟಾಲ್‌ಗೆ 396 ಡಾಲರ್ (ರೂ.1600!). ಉತ್ತರ ಪ್ರದೇಶದಲ್ಲಿ ಒಟ್ಟು 90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಗೋಧಿ ಬೆಳೆಯಲಾಗುತ್ತಿದೆ. ಆ ಪೈಕಿ ಮೂರನೇ ಒಂದರಷ್ಟು ಪ್ರದೇಶದಲ್ಲಿ ಗೋಧಿ ಮತ್ತು ಕಬ್ಬು ಪರ್ಯಾಯ ಬೆಳೆಗಳಾಗಿವೆ. ಈ ಬಾರಿ ಆ ಪೈಕಿ ಶೇಕಡಾ 10ರಷ್ಟು ಪ್ರದೇಶದಲ್ಲಿ ಗೋಧಿ ಬೆಳೆಯಲು ಸಾಧ್ಯವಾಗದೇ ಹೋದಲ್ಲಿ 3 ದಶಕಲಕ್ಷ ಟನ್ ಗೋಧಿ ಇಳುವರಿ ಕುಸಿತಗೊಳ್ಳಲಿದೆ ಎನ್ನುತ್ತಾರೆ ಕೃಷಿ ತಜ್ಞ ಹರ್ವೀರ್ ಸಿಂಗ್.
ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ರಾಜಸ್ತಾನ ಮತ್ತು ಬಿಹಾರ ದೇಶದ ಪ್ರಮುಖ ಗೋಧಿ ಉತ್ಪಾದಕ ರಾಜ್ಯಗಳು. ಈ ರಾಜ್ಯಗಳಲ್ಲಿ ಶೇಕಡಾ 2.5ರಷ್ಟು ಜನಸಂಖ್ಯೆ ಏರುತ್ತಲೇ ಇದೆ. ಪರಿಣಾಮವಾಗಿ ಹೆಚ್ಚು ಪ್ರಮಾಣದಲ್ಲಿ ಗೋಧಿ ಉತ್ಪಾದನೆ ಮಾಡಿದರೂ, ಅದನ್ನು ರಾಷ್ಟ್ರೀಯ ವಾಹಿನಿಗೆ ನೀಡಲು ಅವುಗಳ ಕೈಯಲ್ಲಿ ಸಾಧ್ಯವಾಗುತ್ತಿಲ್ಲ. ಬೆಳೆದ ಹೆಚ್ಚಿನ ಗೋಧಿಯನ್ನು ಆಯಾ ರಾಜ್ಯಗಳೇ ಬಳಸಿಕೊಳ್ಳುತ್ತಿವೆ. ಕಳೆದ ವರ್ಷ ಸರ್ಕಾರ ಈ ರಾಜ್ಯಗಳಿಂದ 15 ಮಿಲಿಯನ್ ಟನ್ ಗೋಧಿಯನ್ನು ಸಂಗ್ರಹಿಸುವ ಗುರಿ ಇಟ್ಟುಕೊಂಡಿತ್ತು. ಆದರೆ ಕೇವಲ 11 ಮಿಲಿಯನ್ ಟನ್ ಗೋಧಿಯನ್ನು ಸಂಗ್ರಹಿಸಲು ಸಾಧ್ಯವಾಯಿತು. ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಸಿಗುವಾಗ ನಾವು ಸರ್ಕಾರಕ್ಕೆ ಕಡಿಮೆ ಬೆಲೆಗೆ ಗೋಧಿ ಮಾರುವ ಅಗತ್ಯವಾದರೂ ಏನಿದೆ? ಎನ್ನುವ ಬುಲಂದ್‌ಶಹಾರ್‌ನ ರೈತ ನೇತ್ರಪಾಲ್ ಸಿಂಗ್ ಮಾತು ಅರ್ಥವತ್ತಾಗಿಯೇ ಇದೆ.
ದೇಶದ ಕೃಷಿ ಕ್ಷೇತ್ರವನ್ನು ಸದೃಢಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಎರಡು ತಿಂಗಳ ಹಿಂದೆ ರಾಷ್ಟ್ರೀಯ ಆಹಾರ ಭದ್ರತಾ ಕಾರ್ಯಕ್ರಮಕ್ಕೆ ರೂ.4900 ಕೋಟಿ ಹಣ ಮೀಸಲಿಟ್ಟಿದೆ. ಆ ಯೋಜನೆಯ ಪ್ರಕಾರ ದೇಶದ ಗೋಧಿ ಉತ್ಪಾದನೆಯ ಪ್ರಮಾಣವನ್ನು 2020ರೊಳಗೆ 109 ಮಿಲಿಯನ್ ಟನ್‌ಗೆ ಏರಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಅಷ್ಟು ಹೊತ್ತಿಗೆ ದೇಶದ ಜನಸಂಖ್ಯೆ 140 ಕೋಟಿ ಮೀರಿ ನಿಂತಿರುತ್ತದೆ. ವಾಸ್ತವದ ನೆಲೆಗಟ್ಟಿನಲ್ಲಿ ನಿಂತು ನೋಡಿದರೆ ಗೋಧಿ ಉತ್ಪಾದನೆಯ ಆ ಗುರಿಯನ್ನು ತಲುಪುವುದು ಅಸಾಧ್ಯ ಎಂದೆನ್ನಿಸುತ್ತಿದೆ.
ಇನ್ನೊಂದೆಡೆ ಸಕ್ಕರೆ ಕಾರ್ಖಾನೆ ಮಾಲೀಕರಿಂದ ಬೆಳೆಗಾರರ ಶೋಷಣೆ ಮುಂದುರಿಯುತ್ತಲೇ ಇದೆ. ಸರ್ಕಾರ ಪ್ರತಿ ಕ್ವಿಂಟಾಲ್ ಕಬ್ಬಿಗೆ ರೂ.125 ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿದೆ. ಕೆಲವು ಸಕ್ಕರೆ ಕಾರ್ಖಾನೆಗಳು ಪ್ರತಿ ಕ್ವಿಂಟಾಲ್ ಕಬ್ಬಿಗೆ ರೂ. 110 ನೀಡುತ್ತಿವೆ. ಇನ್ನು ಹಲವು ಕಾರ್ಖಾನೆಗಳು ಬೆಲೆ ಎಷ್ಟು ಎಂದು ನಿಖರವಾಗಿ ಹೇಳುವುದೇ ಇಲ್ಲ. ಸರ್ಕಾರ ನಿಗದಿಪಡಿಸಿದ ದರದ ವಿರುದ್ಧ ನಾವು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದೇವೆ. ನ್ಯಾಯಾಲಯದ ಆದೇಶವನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎನ್ನುತ್ತಾರೆ ಬ್ರಿಜ್ನಾಥ್‌ಪುರ್ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ಆರ್.ಪಿ.ಎಸ್. ಮಲಿಕ್.
ರೈತರನ್ನು ಸಂತುಷ್ಟಗೊಳಿಸುವ ಸಲುವಾಗಿಯೇ ರಾಜ್ಯ ಸರ್ಕಾರ ಕಬ್ಬಿಗೆ ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿತು ಎನ್ನುವುದು ಸಕ್ಕರೆ ಕಾರ್ಖಾನೆ ಮಾಲೀಕರ ಅನಿಸಿಕೆ. ಕೇಂದ್ರ ಸರ್ಕಾರ ನಿಗದಿ ಮಾಡಿದ ಬೆಲೆ ಕ್ವಿಂಟಾಲ್‌ಗೆ ರೂ.85. ಹಾಗಿರುವಾಗ ಉತ್ತರ ಪ್ರದೇಶ ಸರ್ಕಾರ ಕ್ವಿಂಟಾಲ್‌ಗೆ ರೂ.125 ನಿಗದಿ ಮಾಡಿದೆ. ಇದನ್ನು ಮತಗಳಿಸುವ ತಂತ್ರ ಎನ್ನದೇ ಬೇರೇನು ಹೇಳಲು ಸಾಧ್ಯ? ಈವರೆಗೆ ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆಗೆ ಒಳ್ಳೆ ಬೆಲೆಯಿಲ್ಲ. ನಾವು ರಾಜ್ಯ ಸರ್ಕಾರ ನಿಗದಿ ಪಡಿಸಿದ ಕನಿಷ್ಠ ಬೆಂಬಲ ಬೆಲೆಯನ್ನು ನೀಡಿದರೆ ಕಾರ್ಖಾನೆ ಮುಚ್ಚಿಕೊಂಡು ಹೋಗಬೇಕು ಎನ್ನುತ್ತಾರೆ ಭಾರತೀಯ ಸಕ್ಕರೆ ಕಾರ್ಖಾನೆ ಮಾಲೀಕರ ಸಂಘದ (ಐಎಸ್‌ಎಂಎ) ಅಧ್ಯಕ್ಷ ಎಸ್.ಎಲ್.ಜೈನ್.
ಜೈನ್ ಹೇಳಿಕೆಯನ್ನು ಸಾರಸಗಟಾಗಿ ತಳ್ಳಿ ಹಾಕುವ ವಿ.ಎಂ. ಸಿಂಗ್ ಸಕ್ಕರೆ ಕಾರ್ಖಾನೆಗಳ ಮಾಲೀಕರು ಉಪ ಉತ್ಪನ್ನಗಳಿಂದ ಬರುವ ಲಾಭವನ್ನು ಏಕೆ ಲೆಕ್ಕ ಹಾಕಿ ತೋರಿಸುವುದಿಲ್ಲ? ಆಲ್ಕೋಹಾಲ್, ಎಥನಾಲ್ ಮುಂತಾದ ಉಪ ಉತ್ಪನ್ನಗಳಿಂದ ಸಕ್ಕರೆ ಕಾರ್ಖಾನೆಗಳ ಮಾಲೀಕರು ಸಾಕಷ್ಟು ಲಾಭವನ್ನು ಮಾಡುತ್ತಿದ್ದಾರೆ. ಲಾಭ ಇಲ್ಲದೇ ಹೋಗಿದ್ದರೆ ಕಳೆದ 3 ವರ್ಷಗಳ ಅವಧಿಯಲ್ಲಿ 43 ಹೊಸ ಸಕ್ಕರೆ ಕಾರ್ಖಾನೆಗಳ ಸ್ಥಾಪನೆಯಾಗಲು ಸಾಧ್ಯವಿತ್ತೇ? ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಪ್ರತಿ ಕ್ವಿಂಟಾಲ್‌ಗೆ ರೂ.180ರಿಂದ ರೂ.190 ನೀಡಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಮಾತ್ರ ರೂ.125 ಬೆಲೆ ನೀಡಲು ಹಿಂಜರಿಯುತ್ತಿದ್ದಾರೆ ಎಂದು ಟಿಎಸ್‌ಐಗೆ ತಿಳಿಸಿದರು.
ಇದು ಮಾತ್ರವಲ್ಲ. 2007ರಲ್ಲಿ ಖರೀದಿಸಿದ ಕಬ್ಬಿನ ಹಣವನ್ನು ಸಕ್ಕರೆ ಕಾರ್ಖಾನೆ ಮಾಲೀಕರು ಇದುವರೆಗೆ ರೈತರಿಗೆ ನೀಡಿಲ್ಲ. ಆ ಬಾಕಿಯೇ ರೂ.1100 ಕೋಟಿಯದ್ದಾಗಿದೆ. ಆ ಪೈಕಿ ಖಾಸಗಿ ಕಾರ್ಖಾನೆ ಮಾಲೀಕರು ರೈತರಿಗೆ ರೂ.1000 ಕೋಟಿ ನೀಡಬೇಕು. ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆಗಳು ಉಳಿದ ರೂ.100 ಕೋಟಿ ಬಾಕಿ ನೀಡಬೇಕು. ಈ ಬಾರಿ ಇಳುವರಿ ಕಡಿಮೆಯಾಗಿದ್ದು ರೈತರಿಗೆ ಪೆಟ್ಟಿನ ಮೇಲೆ ಪೆಟ್ಟು ಬೀಳುತ್ತಿದೆ. ಸಕ್ಕರೆ ಕಾರ್ಖಾನೆ ಮಾಲೀಕರು ತೋರಿಸುತ್ತಿರುವ ನಿರ್ಲಕ್ಷ್ಯದಿಂದ ಕಂಗೆಟ್ಟಿರುವ ರೈತರು ತಾವು ಬೆಳೆದ ಕಬ್ಬನ್ನು ಅರ್ಧ ಬೆಲೆಗೆ ಮೆಕಾನಿಕಲ್ ಕ್ರಷರ್‌ಗಳಿಗೆ ಮಾರುತ್ತಿದ್ದಾರೆ.
ಪ್ರತಿ ಕ್ವಿಂಟಾಲ್‌ಗೆ ರೂ.60-65 ನೀಡಿ ನಾವು ಕಬ್ಬನ್ನು ಖರೀದಿಸಿ ಬೆಲ್ಲ ಮತ್ತು ಖಂಡಸಾರಿ ಉತ್ಪಾದಿಸುತ್ತಿದ್ದೇವೆ ಎನ್ನುತ್ತಾರೆ ಬುಲಂದ್‌ಶಹಾರ್‌ನಲ್ಲಿನ ಕ್ರಷರ್ ಮಾಲೀಕ ವಿಕ್ರಾಂತ್ ಮಾತೊಲ. ಕಬ್ಬಿನ ಬೆಳೆಯ ಋತುವಿನಲ್ಲಿ ಈಗಾಗಲೇ ಅರ್ಧ ಮುಗಿದು ಹೋಗಿದೆ. ಆದರೂ, ಉತ್ತರ ಪ್ರದೇಶದಲ್ಲಿನ ಸಕ್ಕರೆ ಕಾರ್ಖಾನೆಗಳು ರೈತರಿಂದ ಇದುವರೆಗೆ ಕೇವಲ ಶೇಕಡಾ 20ರಷ್ಟು ಉತ್ಪಾದನೆಯನ್ನು ಖರೀದಿಸಿವೆ.
ಭಾರತದಲ್ಲಿ ಈಗ ಸಾಕಷ್ಟು ಪ್ರಮಾಣದಲ್ಲಿ ಕಬ್ಬು ಮತ್ತು ಗೋಧಿ ಬೆಳೆಯಲಾಗುತ್ತಿದೆ. ಆದರೂ, ಸಕ್ಕರೆ ಮತ್ತು ಹಿಟ್ಟಿನ ಅಭಾವ ಆಗುವ ಎಲ್ಲ ಸಾಧ್ಯತೆಯಿದೆ. ಇದರಿಂದ ಉತ್ಪಾದಕರು ಮತ್ತು ಗ್ರಾಹಕರಿಬ್ಬರ ಹೊಟ್ಟೆಯ ಮೇಲೂ ಹೊಡೆತ ಬೀಳಲಿದೆ. ಸದ್ಯ ಉತ್ತರ ಪ್ರದೇಶದ ರೈತರು ಮಾತ್ರ ಬೆಳೆದು ನಿಂತ ಕಬ್ಬಿನ ಗದ್ದೆಗಳಿಗೆ ಬೆಂಕಿ ಇಡುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ವಿದರ್ಭದಲ್ಲಿ ಕೂಡ ಕಬ್ಬಿನ ಗದ್ದೆಗಳಿಗೆ ಬೆಂಕಿ ಬೀಳಲಿದೆ. ನಮ್ಮ ಸರ್ಕಾರಗಳಿಗೆ ಆಹಾರ ಭದ್ರತೆ ಎಷ್ಟು ಮುಖ್ಯ ಎನ್ನುವುದರ ಸ್ಪಷ್ಟ ಅರಿವು ಇದೆಯೇ ಎಂಬ ಅನುಮಾನ ಕೂಡ ಈ ಸಂದರ್ಭದಲ್ಲಿ ಕಾಡುತ್ತಿದೆ. ಭೂಮಿ ಇರುವ, ಭೂಮಿಯುಳುವ ರೈತರ ಪರಿಸ್ಥಿತಿ ಮಾತ್ರವಲ್ಲ ಒಂದು ತುಂಡು ಭೂಮಿಯಿಲ್ಲದ ಕೋಟ್ಯಂತರ ಕೃಷಿ ಕಾರ್ಮಿಕರು ನಮ್ಮ ದೇಶದಲ್ಲಿ ಇದ್ದಾರೆ. ಅವರ ಪಾಲಿಗೆ ಒಂದು ಚೂರು ಚಪಾತಿ ಅಥವಾ ರೊಟ್ಟಿ, ಉಪ್ಪು ಮತ್ತು ಈರುಳ್ಳಿಯೇ ಆಹಾರ. ಗೋಧಿಯ ಬೆಲೆ ಗಗನಕ್ಕೇರಿದರೆ ಆ ಬಡ ಕೃಷಿ ಕಾರ್ಮಿಕರ ಕೈಗೆ ಚಪಾತಿ ಅಥವಾ ರೊಟ್ಟಿಯ ಚೂರು ಲಭ್ಯವಾಗುವ ಸಾಧ್ಯತೆ ಇದೆಯೇ?

ಟಿಎಸ್‌ಐ

ಸರ್ಕಾರ ರೈತರನ್ನು ದೇಶದಿಂದ ಹೊರಗಟ್ಟಲು ಕಟಿಬದ್ಧವಾಗಿರುವಂತಿದೆ

ನಮ್ಮ ಆಹಾರ ಭದ್ರತೆಗೆ ಧಕ್ಕೆ ಉಂಟು ಮಾಡಿದ ಸಕ್ಕರೆ ಕಾರ್ಖಾನೆಗಳ ವಿರುದ್ಧ ಸರ್ಕಾರ ದೂರು ದಾಖಲಿಸಬೇಕು ಲಾಭ ಇಲ್ಲದೇ ಹೋಗಿದ್ದರೆ ಕಳೆದ 3 ವರ್ಷಗಳ ಅವಧಿಯಲ್ಲಿ 43 ಹೊಸ ಸಕ್ಕರೆ ಕಾರ್ಖಾನೆಗಳು ಸ್ಥಾಪನೆಯಾಗಲು ಸಾಧ್ಯವಿತ್ತೇ?

ದೇವಿಂದರ್ ಶರ್ಮ, ಕೃಷಿ ತಜ್ಞ

ಈ ವರ್ಷವೂ ನಾವು ಗೋಧಿ ಕೊರತೆ ಎದುರಿಸಬೇಕಾಗಬಹುದೇ?

ಕಳೆದ ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ಮಳೆ ಬರದೇ ಇರುವುದು ಗೋಧಿ ಬೆಳೆಯ ಮೇಲೆ ನೇರ ಪರಿಣಾಮ ಬೀರಿದೆ. ಉತ್ತರ ಪ್ರದೇಶದ ಬಹುತೇಕ ಕೃಷಿ ಪ್ರದೇಶದಲ್ಲಿ ನೀರಿನ ಕ್ಷಾಮ ಉಂಟಾಗಿದ್ದು ಬೆಳೆಗಳೂ ನಾಶವಾಗಿವೆ.

ಈ ವರ್ಷ ಉತ್ತರ ಪ್ರದೇಶದ ಸಕ್ಕರೆ ಕಾರ್ಖಾನೆ ಆರಂಭ ವಿಳಂಬವಾಗಿದೆ. ಅದು ಗೋಧಿ ಉತ್ಪಾದನೆಗೆ ಹೊಡೆತ ಕೊಡಲಿದೆಯೇ?

ಈ ಬಾರಿ ಗೋಧಿ ಬಿತ್ತನೆ ವಿಳಂಬವಾದ್ದರಿಂದ ಉತ್ಪಾದನೆ ಮೇಲೆ ನೇರ ಪರಿಣಾಮ ಬೀಳಲಿದೆ. ಉತ್ತರಪ್ರದೇಶ ಗೋಧಿ ಪ್ರಮುಖ ಉತ್ಪಾದಕ ಮತ್ತು ಗ್ರಾಹಕ ರಾಜ್ಯ. ಭಾರತದಲ್ಲಿ ಕೃಷಿ ಪ್ರದೇಶ ಹೆಚ್ಚಾಗುತ್ತಿಲ್ಲ ಎಂಬುದು ಒಂದೆಡೆಯಾದರೆ, ಮತ್ತೊಂದೆಡೆ ಆಹಾರದ ಬೇಡಿಕೆ ಹೆಚ್ಚುತ್ತಿದೆ. ಸರ್ಕಾರ ಕೃಷಿ ಚಟುವಟಿಕೆಗಾಗಲಿ, ಕೃಷಿ ಉತ್ಪಾದನೆಗಾಗಲೀ ಉತ್ತೇಜನ ನೀಡುತ್ತಿಲ್ಲ. ಬದಲಾಗಿ ಕಾರ್ಪೊರೇಟ್ ಸಂಸ್ಥೆಗಳ ಹಿತ ಕಾಯುವುದರಲ್ಲೇ ಆಸಕ್ತವಾಗಿರುವ ಅದು, ಆಹಾರ ಧಾನ್ಯಗಳ ಆಮದಿಗೆ ಬೆಂಬಲ ನೀಡುತ್ತಿದೆ.

ಆದರೆ, ಗ್ರಾಹಕರ ಹಿತದೃಷ್ಟಿಯಿಂದಲೇ ಸಕ್ಕರೆ ರಫ್ತು ಮಾಡಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆಯಲ್ಲ?

ಸಕ್ಕರೆ ರಫ್ತು ಮಾಡುವುದು ಗ್ರಾಹಕರ ಹಿತಕ್ಕಾಗಿ ಅಲ್ಲ, ಬದಲಾಗಿ ಸಕ್ಕರೆ ಕಾರ್ಖಾನೆಗಳ ಹಿತಕ್ಕಾಗಿ ಎಂಬುದನ್ನು ಗಮನಿಸಬೇಕು. ಸಕ್ಕರೆ ಬೆಲೆ ಇಳಿಮುಖ ಕಾಣುತ್ತಿದೆ. ಹಾಗಾಗಿ ಅವರು ರಫ್ತು ಮಾಡುವ ಮೂಲಕ ಕೃತಕ ಕೊರತೆ ಸೃಷ್ಟಿಸುತ್ತಿದ್ದಾರೆ. ಗ್ರಾಹಕರ ಹಿತದೃಷ್ಟಿಯಿಂದಲೇ ಸರ್ಕಾರ ಯೋಚಿಸುವುದಾದರೆ, ಒಂದು ಕೆಜಿ ಸಕ್ಕರೆ ಬೆಲೆಯನ್ನು 10 ರೂ.ಗೆ ಏಕೆ ಇಳಿಸುತ್ತಿಲ್ಲ? ಕಬ್ಬು ಹಾಗೂ ಗೋಧಿ ಬೆಳೆಗೆ ಸಂಬಂಧಿಸಿದಂತೆ ನಮ್ಮಲ್ಲಿ ಪ್ರತ್ಯೇಕ ಯೋಜನೆಗಳಿವೆ ಮತ್ತು ಅವೆಲ್ಲವೂ ರೈತರ ಹಿತ ಕಾಯುವುದಾಗಿಯೇ ಹೇಳುತ್ತವೆ. ಆದರೆ ವಾಸ್ತವ ಬೇರೆಯೇ ಇದೆ. ಗ್ರಾಹಕರು ಮತ್ತು ರೈತರನ್ನು ಹೊರತುಪಡಿಸಿ ಉಳಿದೆಲ್ಲರೂ ಇಲ್ಲಿ ಲಾಭ ಗಳಿಸುತ್ತಿದ್ದಾರೆ.

ಹಾಗಾದರೆ ಸರ್ಕಾರದ ಯೋಜನೆಗಳು ನಿಮಗೆ ಸಮಾಧಾನ ನೀಡಿಲ್ಲ?

ಸರ್ಕಾರದ ಯೋಜನೆಗಳು ಹಾದಿ ತಪ್ಪದೇ ಇದ್ದಿದ್ದರೆ ಈ ಸಮಸ್ಯೆಗಳೆಲ್ಲಾ ಉದ್ಭವಿಸುತ್ತಿರಲಿಲ್ಲ. ನಮ್ಮ ಕೃಷಿ ಸಚಿವ ಶರದ್ ಪವಾರ್ ಅವರು ಅತ್ತ ಸಕ್ಕರೆ ಕಾರ್ಖಾನೆಗಳ ಸಚಿವರೂ ಅಲ್ಲ, ಇತ್ತ ಕ್ರಿಕೆಟ್ ಸಚಿವರೂ ಅಲ್ಲ ಎಂಬ ಸ್ಥಿತಿಯಲ್ಲಿದ್ದಾರೆ. ಕಳೆದ 25 ವರ್ಷಗಳಿಂದ ಸರ್ಕಾರಗಳು ದೇಶದ ರೈತರನ್ನು ಹೊರಗಟ್ಟುವ ನಿಟ್ಟಿನಲ್ಲಿ ಪರಿಣಾಮಕಾರಿ 'ಎಕ್ಸಿಟ್ ನೀತಿ' ಪಾಲಿಸುತ್ತಲೇ ಇವೆ. ಸರ್ಕಾರದ ಈ ನಡೆಯಿಂದ ರೈತರೆಲ್ಲ ಕೃಷಿ ತ್ಯಜಿಸುವಂಥ ಪರಿಸ್ಥಿತಿ ಎದುರಾಗಿದೆ!

****

'ವ್ಯತಿರಿಕ್ತ ಹವಾಮಾನ ಗೋಧಿ ಕೃಷಿ ಭೂಮಿ ಕುಸಿತಕ್ಕೆ ಕಾರಣ'

ಕಾಂತಿಲಾಲ್ ಭುರಿಯಾ ಕೇಂದ್ರ ಕೃಷಿ ಮತ್ತು ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವ

1996ರಿಂದ ಇಲ್ಲಿಯವರೆಗೆ ಗೋಧಿ ಇಳುವರಿ 70 ದಶಲಕ್ಷ ಟನ್ ಆಸುಪಾಸಿನಲ್ಲೇ ಇದೆ. ಗೋಧಿ ಇಳುವರಿ ಹೆಚ್ಚಿಸಲು ನಮ್ಮಿಂದ ಏಕೆ ಸಾಧ್ಯವಾಗುತ್ತಿಲ್ಲ?

ಆ ಕ್ಷೇತ್ರ ಜಡವಾಗಿದೆ. ಸಸಿಗಳಿಗೆ ಬೇಕಾದಂಥ ಪೋಷಕಾಂಶಗಳ ಕೊರತೆ, ಮಳೆ ಅಭಾವ, ಬೀಜ ಮೊಳಕೆಯೊಡೆಯುವ ಪ್ರಮಾಣದಲ್ಲಿನ ಕುಸಿತ, ಗೋಧಿ ಬೆಳೆ ಪ್ರಮುಖವಾಗಿರುವ ರಾಜ್ಯಗಳಲ್ಲಿನ ಮಣ್ಣಿನ ಕ್ಷಾರೀಯ ಸಮಸ್ಯೆಗಳು, ಭತ್ತ, ಗೋಧಿ ಮತ್ತು ಹತ್ತಿ- ಗೋಧಿ ಬಿತ್ತನೆ ವ್ಯವಸ್ಥೆಯ ವಿಳಂಬ, ಇಳುವರಿ ಸಮಯದಲ್ಲಿನ ವಾತಾವರಣದ ಹಠಾತ್ ತಾಪಮಾನ ಏರಿಕೆ, ಅವಧಿಗೆ ಮುನ್ನ ಬಿದ್ದ ಮಳೆ ಮುಂತಾದವು ಪ್ರಧಾನ ಪಾತ್ರ ವಹಿಸುತ್ತವೆ.

ಗೋಧಿ ಬೆಳೆಯುವ ಭೂಮಿ ಕಡಿಮೆಯಾಗುತ್ತಿದೆಯೇ? ಹೌದು ಎಂದಾದರೆ ಕಾರಣಗಳೇನು?

27.5 ದಶಲಕ್ಷ ಹೆಕ್ಟೇರ್‌ಗಳಲ್ಲಿ ಈ ವರ್ಷ ಗೋಧಿ ಬೆಳೆಯಲಾಗುತ್ತಿದೆ. 2006-07ರಲ್ಲಿ ಇದರ ಪ್ರಮಾಣ 28 ದಶಲಕ್ಷ ಹೆಕ್ಟೇರ್ ಆಗಿತ್ತು. ಬಿತ್ತನೆ ಸಮಯದಲ್ಲಿ ಹಲವು ರಾಜ್ಯಗಳು ಕಂಡ ವ್ಯತಿರಿಕ್ತ ಹವಾಮಾನವೇ ಗೋಧಿ ಕೃಷಿ ಭೂಮಿಯ ಕುಸಿತಕ್ಕೆ ಕಾರಣ.

ಸರ್ಕಾರದ ಗೋಧಿ ಇಳುವರಿ ಗುರಿ ಏಕೆ ವಿಫಲವಾಗುತ್ತಿದೆ?

2006-07ರಲ್ಲಿ 162.07 ಲಕ್ಷ ಟನ್ ಗುರಿ ಇಟ್ಟಿದ್ದೆವು, ಆದರೆ ಆ ವರ್ಷ ಸಿಕ್ಕಿದ್ದು 9.2 ಮೆಟ್ರಿಕ್ ಟನ್ ಮಾತ್ರ. 2007-08ರಲ್ಲಿ ನಾವು 151.5 ಲಕ್ಷ ಟನ್ ಇಳುವರಿಯ ಅಂದಾಜು ಮಾಡಿದ್ದೆವು ಆದರೆ 11.1 ಮೆಟ್ರ್ರಿಕ್ ಟನ್ ಉತ್ಪಾದಿಸುವುದರಲ್ಲಿ ಮಾತ್ರ ಸಫಲರಾದೆವು. ಗೋಧಿ ಮಾರುಕಟ್ಟೆ ದರದ ಹೆಚ್ಚಳ ಇದಕ್ಕೆ ಕಾರಣ.

ಈ ಕಡಿಮೆ ಇಳುವರಿಯನ್ನು ಸರ್ಕಾರ ಹೇಗೆ ನಿಭಾಯಿಸುತ್ತದೆ?

11ನೇ ಪಂಚವಾರ್ಷಿಕ ಯೋಜನೆ ಮುಗಿಯುವುದರೊಳಗಾಗಿ ಗೋಧಿ ಇಳುವರಿಯಲ್ಲಿ 8 ಮೆಟ್ರಿಕ್ ಟನ್ ಹೆಚ್ಚಳವಾಗಬೇಕೆಂಬುದು ಸರ್ಕಾರದ ಗುರಿ. ಅದಕ್ಕೆಂದೇ 4882.48 ಕೋಟಿ ಬಂಡವಾಳ ಹೂಡಿ 9 ರಾಜ್ಯಗಳ 138 ಜಿಲ್ಲೆಗಳಲ್ಲಿ 'ರಾಷ್ಟ್ರೀಯ ಆಹಾರ ಭದ್ರತಾ ಕಾರ್ಯಾಚರಣೆ' ಆರಂಭಿಸಿದೆ.

ಉತ್ತರ ಪ್ರದೇಶದ ಸಕ್ಕರೆ ಕಾರ್ಖಾನೆಗಳ ಕಾರ್ಯಾರಂಭ ವಿಳಂಬವಾಗಲು ಕಾರಣವೇನು?

ಕಳೆದ ವರ್ಷ ಕಂಡ ಅಧಿಕ ಕಬ್ಬು ಇಳುವರಿ ಮತ್ತು ಸಕ್ಕರೆ ದಾಸ್ತಾನು ಸಕ್ಕರೆಯ ಸ್ಥಳೀಯ ಮಾರುಕಟ್ಟೆ ಬೆಲೆಯ ಕುಸಿತಕ್ಕೆ ಕಾರಣವಾಯಿತು. ಹಾಗೆ ಉತ್ತರ ಪ್ರದೇಶದ ಸಕ್ಕರೆ ಕಾರ್ಖಾನೆಗಳು ರಾಜ್ಯ ಶಿಫಾರಸು ದರ ಪಾವತಿಸಲು ಸೋತವು.

ಮುಖ ಪುಟ ಲೇಖನದಲ್ಲಿ ಇನ್ನೇನಿದೆ

ಸುಗ್ಗಿಯ ಸಂಕಷ್ಟ

ಭಾರತಕ್ಕೆ ತುರ್ತಾಗಿ ಬೇಕಿದೆ ರೈತಪರ ಆಡಳಿತ ವ್ಯವಸ್ಥೆ :ಶರದ್ ಜೋಶಿ

ಅನ್ನದಾತನೇ ಹಸಿದಿರುವಾಗ ದೇಶದ ಕೃಷಿಯ ಭವಿಷ್ಯ ಇನ್ನು ಹೇಗಿದ್ದೀತು ಹೇಳಿ...? : ಪ್ರೊ. ಎಂ.ಎಸ್. ಸ್ವಾಮಿನಾಥನ್

ಸಿಹಿ ಹಂಚುವ ರೈತರ ಕಹಿ ಕಥೆ

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .