|
| ಪಾಲ್ ಕ್ರುಗ್ಮನ್ |
ಅರ್ಥಶಾಸ್ತ್ರಜ್ಞ,
’ದ ನ್ಯೂಯಾರ್ಕ್ ಟೈಮ್ಸ್’ ಅಂಕಣಕಾರ |
ಡೆಮಾಕ್ರೆಟ್ ಪಕ್ಷ ಹಾಗೂ ಶ್ವೇತಭವನ ಆರ್ಥಿಕತೆಯನ್ನು ಉತ್ತೇಜಿಸುವಂತಹ ಹೊಸ ಯೋಜನೆಗೆ ಒಡಂಬಡಿಕೆ ಮಾಡಿಕೊಂಡಿವೆ. ಆದರೆ ದುರದೃಷ್ಟವಶಾತ್ ಈ ಯೋಜನೆ ಕೂಡಾ ಹಿಂದಿನ ಯೋಜನೆಗಳಂತೆ ಜನರಿಗೆ ಆಕರ್ಷಕ ರೀತಿಯಲ್ಲಿ ತೆರಿಗೆ ಕಡಿತ ನೀಡುವಂಥದ್ದೇ ಆಗಿದೆ.
ವಿಶೇಷವಾಗಿ ಇಲ್ಲಿ ಡೆಮಾಕ್ರೆಟ್ ಪಕ್ಷದವರು ಬುಷ್ ಆಡಳಿತದ ಸೈದ್ಧಾಂತಿಕ ಕಾಠಿಣ್ಯಕ್ಕೆ ಸಿಲುಕಿ, ಈಗ ಅತ್ಯಂತ ಅಗತ್ಯವಿರುವವರಿಗೆ ತುರ್ತಾಗಿ ನೆರವು ನೀಡಬೇಕಾದ ಅಂಶಗಳಿಗೆ ಸಲ್ಲಿಸಬೇಕಾಗಿದ್ದ ಬೇಡಿಕೆಗಳನ್ನು ಕೈಬಿಟ್ಟಂತಿದೆ. ಆದರೆ, ಈಗ ಇವರು ಕೈಬಿಟ್ಟಿರುವ ಯೋಜನೆಗಳೇ ನಿಜವಾಗಿ ಆರ್ಥಿಕತೆಯನ್ನು ಉತ್ತೇಜಿಸಲು ಸಹಕಾರಿಯಾಗುತ್ತಿದ್ದವು.
ಇವೆಲ್ಲಾ ತುಂಬಾ ಕಠಿಣ ಪದಗಳು. ಆದ್ದರಿಂದ ಅಲ್ಲಿನ ವಾಸ್ತವವನ್ನು ಮಾತ್ರ ಹೇಳುತ್ತೇನೆ.
ಉದ್ಯಮಗಳ ತೆರಿಗೆ ಕಡಿತದ ವಿಷಯ ಅತ್ತ ಇರಲಿ. ಅದು ಮತ್ತೊಂದು ಅಂಕಣಕ್ಕಾಗುವ ಬೇಸರದ ವಿಷಯ. ಈ ಹೊಸ ಯೋಜನೆ 75,000 ಡಾಲರ್‌ಗಿಂತ ಕಡಿಮೆ ಆದಾಯವಿರುವ ವ್ಯಕ್ತಿಗೆ 300 ಡಾಲರ್‌ನ ಚೆಕ್ ಕೊಡುಗೆ ನೀಡುತ್ತದೆ. ಅಲ್ಲದೆ ದೊಡ್ಡ ಮೊತ್ತದ ಆದಾಯ ತೆರಿಗೆ ಭರಿಸುವವರಿಗೆ ಹೆಚ್ಚುವರಿ ಧನಸಹಾಯ ನೀಡುತ್ತದೆ. ಇದರ ಅರ್ಥ ದೊಡ್ಡ ಮೊತ್ತದ ಹಣ, ಈಗಾಗಲೇ ಆರ್ಥಿಕವಾಗಿ ಸಾಕಷ್ಟು ಅನುಕೂಲವಾಗಿರುವ ವರ್ಗಕ್ಕೇ ಸೇರುತ್ತದೆ. ಈ ಯೋಜನೆಯ ಸಂಪೂರ್ಣ ಉದ್ದೇಶವನ್ನು ಹಾಳುಗೆಡವುತ್ತಿರುವುದು ಈ ಅಂಶವೇ.
ಆರ್ಥಿಕ ಕುಸಿತವನ್ನು ತಪ್ಪಿಸುವ ಅಥವಾ ನಿಯಂತ್ರಿಸುವ ನಿಟ್ಟಿನಲ್ಲಿ, ಆರ್ಥಿಕ ಉತ್ತೇಜಕ ಯೋಜನೆ ಸಮಗ್ರ ವೆಚ್ಚಕ್ಕೆ ಬೆಂಬಲವಾಗಿರಬೇಕು. ಅದನ್ನು ಬಿಟ್ಟು, ಈ ಉದ್ದೇಶಕ್ಕಾಗಿ ಸರ್ಕಾರ ಒದಗಿಸುವ ಹಣ ವೆಚ್ಚವಾಗದೆ, ಸುಮ್ಮನೆ ಜನರ ಬ್ಯಾಂಕ್ ಖಾತೆಗೆ ಜಮಾ ಆದರೆ ಅಥವಾ ಅವರ ಸಾಲ ತೀರಿಸುವ ಕಾರ್ಯಕ್ಕೆ ಬಳಕೆಯಾದರೆ ಈ ಯೋಜನೆ ಸಂಪೂರ್ಣವಾಗಿ ವಿಫಲವಾಗುತ್ತದೆ.
ಇನ್ನು ಆರ್ಥಿಕವಾಗಿ ಅನುಕೂಲಸ್ಥರಾಗಿರುವ ಜನರಿಗೆ ಚೆಕ್‌ಗಳನ್ನು ಕಳುಹಿಸಿದರೆ, ಅದರಿಂದ ಸಮಗ್ರ ವೆಚ್ಚಕ್ಕೆ ನೀಡಲಾಗುವ ಕೊಡುಗೆ ಅತ್ಯಲ್ಪ ಅಥವಾ ಸಂಪೂರ್ಣ ಶೂನ್ಯ. ಜನರ ಕೊಳ್ಳುವ ನಿರ್ಧಾರ ಅವರ ದೀರ್ಘಕಾಲದ ಆದಾಯ, ಉತ್ತಮ ಸಾಲ ಸೌಲಭ್ಯ ಹಾಗೂ ಉದ್ಯೋಗ ಭದ್ರತೆಯನ್ನು ಅವಲಂಬಿಸಿರುತ್ತದೆಯೇ ಹೊರತು ಸರ್ಕಾರ ನೀಡುವ ನೂತನ ಚೆಕ್‌ಗಳನ್ನಲ್ಲ. ಅಂತಹ ಮನಸ್ಥಿತಿಯಿರುವ ಜನರಿಗೆ ಕೆಲವು ಹೆಚ್ಚುವರಿ ಡಾಲರ್‌ಗಳನ್ನು ನೀಡಿದರೆ, ಅವರದನ್ನು ಹಾಗೆಯೇ ಬ್ಯಾಂಕ್‌ಗೆ ಜಮಾ ಮಾಡುತ್ತಾರೆ.
ನಿಜವಾಗಿ ಹೇಳುವುದಾದರೆ, 2001ರಲ್ಲಾದ ಆರ್ಥಿಕ ಕುಸಿತದ ಸಂದರ್ಭದಲ್ಲಿ ಅಮೆರಿಕದ ಸಿರಿವಂತ ವರ್ಗಕ್ಕೆ ಹಿಂತಿರುಗಿಸಿದ್ದ ತೆರಿಗೆಗೂ ಇದೇ ಗತಿಯಾಗಿತ್ತು ಎನಿಸುತ್ತದೆ.
ಆದರೆ ಇನ್ನೊಂದೆಡೆ, ಆರ್ಥಿಕವಾಗಿ ಅಷ್ಟೇನೂ ಅನುಕೂಲರಲ್ಲದ ಜನರಿಗೆ ನೀಡಲಾಗುವ ಧನಸಹಾಯ ಎರಡು ರೀತಿಯ ಕೆಲಸ ಮಾಡುತ್ತದೆ: ಅದು ಅವರ ಕಠಿಣ ಪರಿಶ್ರಮವನ್ನು ತಗ್ಗಿಸುತ್ತದೆ ಹಾಗೂ ಗ್ರಾಹಕರಾಗಿ ಅವರ ಕೊಳ್ಳುವ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ.
ಈ ಕಾರಣದಿಂದಲೇ ಕೆಲವು ದಿನಗಳಿಂದ ನಮ್ಮ ಗಮನಕ್ಕೆ ಬರುತ್ತಿರುವ ಆರ್ಥಿಕ ಉತ್ತೇಜಕ ಯೋಜನೆಗಳು, ಅದರಲ್ಲೂ ವಿಶೇಷವಾಗಿ ನಿರುದ್ಯೋಗಿ ವಿಮೆ, ಪೌಷ್ಟಿಕ ಆಹಾರ ಯೋಜನೆಗಳು, ಆರ್ಥಿಕವಾಗಿ ಸಬಲರಲ್ಲದವರಿಗೆ ನೆರವಾಗುವತ್ತ ಕೇಂದ್ರೀಕೃತವಾಗಿತ್ತು. ಈ ಉತ್ತೇಜಕ ಯೋಜನೆಗಳೇ ಇತ್ತೀಚೆಗೆ ಪಕ್ಷಾತೀತ 'ಸಂಸದೀಯ ಬಜೆಟ್ ಕಚೇರಿ' ನಡೆಸಿದ ಸಮೀಕ್ಷೆಯಲ್ಲಿ ಅತಿ ಹೆಚ್ಚು ಶ್ರೇಯಾಂಕ ಪಡೆದಿದ್ದವು.
ಈ ನಡುವೆ, ದುರ್ಬಲ ಆರ್ಥಿಕತೆಯಿಂದಾಗಿ ಹೊಡೆತ ತಿಂದಿರುವ ರಾಜ್ಯ ಹಾಗೂ ಸ್ಥಳೀಯ ಸರ್ಕಾರಗಳಿಗೆ ತಾತ್ಕಾಲಿಕ ನೆರವು ಒದಗಿಸುವ ಕುರಿತೂ ಡೆಮಾಕ್ರೆಟ್‌ಗಳು ಚಿಂತನೆ ನಡೆಸಿದ್ದರು. ನಿರುದ್ಯೋಗಿಗಳಿಗೆ ಸಹಾಯ ಒದಗಿಸುವ ಯೋಜನೆ, ಬಡತನ ನಿರ್ಮೂಲನೆ ಹಾಗೂ ಆರ್ಥಿಕ ಕುಸಿತವನ್ನು ಮತ್ತಷ್ಟು ಹೆಚ್ಚಿಸುವ ವೆಚ್ಚ ಕಡಿತಗೊಳಿಸುವ ಯೋಜನೆಗಳ ಮೂಲಕ ನೆರವು ನೀಡಲು ಉದ್ದೇಶಿಸಲಾಗಿತ್ತು.
ಆದರೆ, ಬುಷ್ ಆಡಳಿತ ಖರ್ಚು ಮಾಡಲು ಹಿಂಜರಿಯುವ ಅಥವಾ ಸಹಾಯಧನವನ್ನು ಸೂಕ್ತವಾಗಿ ವಿನಿಯೋಗಿಸಲು ಇಚ್ಛಿಸದ ವರ್ಗಕ್ಕೆ ನೆರವು ನೀಡುವ ಭರದಲ್ಲಿ ಈ ಪ್ರಯೋಜನಕಾರಿ ಯೋಜನೆಗಳನ್ನು ಸಂಪೂರ್ಣವಾಗಿ ಮರೆತುಬಿಟ್ಟಂತಿದೆ.
ಆಡಳಿತ ಯಂತ್ರ ಯಾಕೆ ಈ ರೀತಿ ವರ್ತಿಸುತ್ತಿದೆ? ಆರ್ಥಿಕ ಸಬಲತೆ ವೃದ್ಧಿಸಲು ಅದು ಮಾಡಬೇಕಾಗಿರುವುದೇನೂ ಇಲ್ಲ: ನಾನು ತಿಳಿದುಕೊಂಡಿರುವ ಯಾವ ಆರ್ಥಿಕ ಸಿದ್ಧಾಂತ ಅಥವಾ ಉದಾಹರಣೆಗಳೂ ಮೇಲ್ಮಧ್ಯಮ ವರ್ಗ, ತೆರಿಗೆ ಕಡಿತ ಚೆಕ್ ಮೊತ್ತವನ್ನು ನಿರುದ್ಯೋಗಿ ಅಥವಾ ಬಡವರಿಗಿಂತ ಹೆಚ್ಚಾಗಿ ಖರ್ಚು ಮಾಡುತ್ತದೆ ಎಂದು ಹೇಳುವುದಿಲ್ಲ. ಇದಕ್ಕೆ ಬದಲಾಗಿ, ಈಗ ನಡೆಯುತ್ತಿರುವುದನ್ನು ಗಮನಿಸಿದರೆ, ಬುಷ್ ಆಡಳಿತ 'ತೆರಿಗೆ ಕಡಿತ' ಎನ್ನುವುದೊಂದು ಬಿಟ್ಟರೆ ಇನ್ನಾವುದೇ ಯೋಜನೆಗಳಿಗೆ ಸಮ್ಮತಿ ಸೂಚಿಸದೇ ಇರಲು ನಿರ್ಧರಿಸಿರುವಂತೆ ಕಾಣುತ್ತದೆ.
ಈ ಅಸಮ್ಮತಿಗಳ ಹಿಂದೆ ಶ್ರೀಮಂತ ವರ್ಗಕ್ಕೆ ತೆರಿಗೆ ಕಡಿತ ಮಾಡಿ, ನಿಜವಾಗಿಯೂ ತೊಂದರೆಯಲ್ಲಿರುವ ಕುಟುಂಬಗಳಿಗೆ ದೊರಕಬೇಕಾದ ನೆರವನ್ನು ತಡೆಹಿಡಿಯುವಲ್ಲಿ ಆಡಳಿತ ಯಂತ್ರ ಹೊಂದಿರುವ ನಿಷ್ಠೆಯನ್ನು ಕಾಣಬಹುದು. ಇದರ ಪರಿಣಾಮವಾಗಿಯೇ, ತುಂಬಾ ಅಗತ್ಯವಿರುವವರಿಗೆ ನೆರವು ನೀಡುವ ಯೋಜನೆ ಸೋಲುತ್ತದೆ. ಅಷ್ಟೇ ಅಲ್ಲದೆ, ಆರ್ಥಿಕ ಲೆಕ್ಕಾಚಾರದ ದೃಷ್ಟಿಯಿಂದ ಆ ಯೋಜನೆ ವಿಫಲವಾಗುತ್ತದೆ.
ಈ ಸಂದರ್ಭದಲ್ಲಿ ಫ್ರಾಂಕ್ಲಿನ್ ಡಿಲಾನೋ ರೂಸ್‌ವೆಲ್ಟ್ ಹೇಳಿದ, ನಿರ್ಲಕ್ಷ್ಯದಿಂದ ಕೂಡಿದ ಸ್ವ-ಹಿತಾಸಕ್ತಿ ಎಂದರೆ ಕೆಟ್ಟ ನಡತೆ ಎಂದೇ ತಿಳಿದಿದ್ದೆವು; ಆದರೆ ಈಗ ಅದು ಕೆಟ್ಟ ಆರ್ಥಿಕತೆ ಎಂಬುದು ಅರಿವಾಗಿದೆ ಎಂಬ ಮಾತುಗಳು ನೆನಪಿಗೆ ಬರುತ್ತದೆ.
ಇವೆಲ್ಲಕ್ಕಿಂತಲೂ ಅಧೋಗತಿಯ ವಿಷಯವೆಂದರೆ, ಯಾವಾಗಲೂ ಅತ್ಯಂತ ದೃಢವಾಗಿರಬೇಕಾಗಿದ್ದ ಡೆಮಾಕ್ರೆಟ್‌ಗಳು ಈಗ ಸಂಪೂರ್ಣವಾಗಿ ಕುಸಿದಿರುವಂತೆ ಕಂಡುಬರುತ್ತಿದ್ದಾರೆ. ಈಗ ನಮ್ಮ ಮುಂದಿರುವ ಪ್ರಶ್ನೆಯೆಂದರೆ, ನಿಜವಾಗಿಯೂ ಈ ಆಡಳಿತ ತಮ್ಮ ಆರ್ಥಿಕ ನೀತಿಯ ಬಗ್ಗೆ ಇನ್ನೂ ನಂಬಿಕೆ ಉಳಿಸಿಕೊಂಡಿದೆಯೆ?
ಹೌದು, ಅವರು ಕೆಲವೊಂದು ರಿಯಾಯಿತಿಗಳನ್ನು ಕಂಡುಕೊಂಡು, ಕಡಿಮೆ ಆದಾಯವಿರುವ ವರ್ಗಕ್ಕೆ ಕಡಿತಗಳನ್ನು ನೀಡಿ, ಶ್ರೀಮಂತ ವರ್ಗಕ್ಕೆ ನೀಡುವ ಸೌಲಭ್ಯಗಳಲ್ಲಿ ರಾಜಿ ಮಾಡಿಕೊಂಡಿದ್ದಾರೆ. ಆದರೆ, ಮೂಲಭೂತವಾಗಿ ಅವರು ತಮ್ಮನ್ನು ತಾವೇ ಬುಷ್ ಆಡಳಿತ ನೀತಿಗೆ ಒಗ್ಗಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ. ಇದೇ ಅತ್ಯಂತ ಕೆಟ್ಟ ಪರಿಣಾಮಕ್ಕೆ ಕಾರಣವಾಗಬಹುದು.
ಮುಂದೆ ಒದಗಬಹುದಾದ ಆರ್ಥಿಕ ಕುಸಿತ ಎಷ್ಟು ಆಳವಾಗಿರುತ್ತದೆ ಎಂಬುದು ನಮಗೆ ತಿಳಿದಿಲ್ಲ. ಅಲ್ಲದೆ ಆರ್ಥಿಕ ಕುಸಿತದ ಸೈದ್ಧಾಂತಿಕ ತತ್ವಗಳೊಡನೆ ಅದು ಹೊಂದಿಕೆಯಾಗುತ್ತದೆಯೇ? ಎಂಬುದೂ ಅರಿವಿಲ್ಲ. ಆದರೆ ಅದೊಂದು ಬಹುದೊಡ್ಡ ಕುಸಿತವಾಗಿರುವ ಸಾಧ್ಯತೆ ನಿಚ್ಚಳ. ಅಷ್ಟೇ ಅಲ್ಲದೆ, ತೆರಿಗೆ ಕಡಿತದಿಂದ ದೊರೆಯುವ ಪರಿಹಾರವೊಂದರಿಂದಲೇ ಮತ್ತೆ ಆರ್ಥಿಕತೆಯನ್ನು ಸಂಪೂರ್ಣವಾಗಿ ಸುಸ್ಥಿತಿಗೆ ತರಲು ಸಾಧ್ಯವಿಲ್ಲ ಎಂಬುದಂತೂ ಸ್ಪಷ್ಟ.
ಒಂದು ವೇಳೆ ಈ ರೀತಿ ಆದರೆ, ಬುಷ್ ಆಡಳಿತ ನಂಬಿಕೆ ಇರಿಸಿದ್ದ ಹಾಗೂ ಡೆಮಾಕ್ರೆಟ್‌ಗಳು ಅಳವಡಿಸಿಕೊಂಡಿದ್ದ ಆರ್ಥಿಕ ಉತ್ತೇಜಕ ಯೋಜನೆಗಳಿಂದ ಯಾವುದೇ ಪರಿಹಾರ ದೊರೆಯಲು ಸಾಧ್ಯವಿಲ್ಲ ಎಂಬ ಸತ್ಯ ಅರಿತುಕೊಂಡು ಅದಕ್ಕಾಗಿ ತುಂಬಾ ಪಶ್ಚಾತ್ತಾಪ ಪಡಬೇಕಾಗುತ್ತದೆ.
ಟಿಎಸ್‌ಐ |