|
ಬಾಲಿವುಡ್‌ನ ಫೀನಿಕ್ಸ್ ನೀವು. ವರುಷಗಳ ಸಂಘರ್ಷದ ಹೊರತಾಗಿಯೂ ಪಟ್ಟು ಬಿಡದ ಛಲಗಾರ. ವೈಫಲ್ಯಗಳ ನಡುವೆಯೂ ಅಭಿನಯವನ್ನೇ ನಂಬಿ ಮುಂದುವರಿಯಲು ಪ್ರೇರಣೆ ಏನು?
ಈ ಬಗ್ಗೆ ನಾನೇ ಕೊಂಚ ದಿಗ್ಭ್ರಮೆಯಲ್ಲಿರುವೆ. ಯಾವುದೇ ವಿಚಾರವಿರಲಿ, ಹಿಂದೆ ಬಿದ್ದು ಹೋಗುವ ಜಾಯಮಾನ ನನ್ನಲ್ಲಿಲ್ಲ. ಸೋಮಾರಿತನದಿಂದಾಗಿ ಶ್ರೇಷ್ಠತೆಯನ್ನು ಸ್ಪರ್ಶಿಸುವ ಬಯಕೆ ನನ್ನಲ್ಲಿ ಬೆಳೆಯಲೇ ಇಲ್ಲ. ಹೀಗಾಗಿ ಹೆಚ್ಚಿನ ಶ್ರಮವನ್ನೂ ಹಾಕಲಿಲ್ಲ. ಆದರೂ ಅದೃಷ್ಟ ನನ್ನ ಪರವಾಗಿತ್ತು. ಮುಂದಿನ ತಲೆಮಾರಿನ ನಟರಾದ ಅಭಿಷೇಕ್ ಬಚ್ಚನ್ ಮತ್ತು ಫರ್ದೀನ್ ಜೊತೆ ಅಭಿನಯಿಸಲಾರಂಭಿಸಿದಾಗ ಪರಿಸ್ಥಿತಿ ಬದಲಾಯಿತು. ನಾನು ಅವರೆಲ್ಲರನ್ನು ಮೀರಿಸಿದ ನಟನಾಗಿ ಬೆಳೆಯಬೇಕಿತ್ತು ಎನ್ನುವ ಅರಿವಾಯಿತು.
ಇದಕ್ಕೆಲ್ಲಾ ಕಾರಣ? ನಿಮ್ಮ ಕುಟುಂಬಕ್ಕೆ ಇದ್ದ ತಾರಾ ಮೌಲ್ಯವೆ?
ಇಲ್ಲ, ಹಾಗೇನಿಲ್ಲ. ಚಿತ್ರೋದ್ಯಮದಲ್ಲಿ ಕುಟುಂಬದ ವರ್ಚಸ್ಸು ಕೆಲಸ ಮಾಡುತ್ತದೆ ಎನ್ನುವ ಕಲ್ಪನೆಯನ್ನೇ ಬಿಟ್ಟುಬಿಡಿ. 'ದಿಲ್ಲಗಿ' ಚಿತ್ರದ ಸಾಧಾರಣ ಯಶಸ್ಸಿನಿಂದ ನನ್ನ ಯಶಸ್ಸಿನ ಸರಾಸರಿ ಕೊಂಚ ಏರಿತ್ತು. ಇದರ ಜೊತೆ ಜೊತೆಗೆ ಆಗಾಗ ನಾನು ನಟಿಸಿದ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸಾಮಾನ್ಯ ಗೆಲುವನ್ನು ದಾಖಲಿಸಿತು. ಚಿತ್ರೋದ್ಯಮದಲ್ಲಿ ಕೆಲಸ ಸಿಗಲು ಈ ಯಶಸ್ಸು ಸಾಕು. ಆದರೆ ಜನಪ್ರಿಯ ತಾರೆಯಾಗಲು ಇಷ್ಟು ಸಾಲದು. ಅಂತಿಮವಾಗಿ 'ಹಮ್ ತುಮ್' ಚಿತ್ರದಿಂದ ನಾನು ನಿರೀಕ್ಷಿಸಿದ್ದ ಪ್ರಸಿದ್ಧಿ ದೊರೆಯಿತು.
'ಪ್ರಪ್ರಥಮ ಬಾರಿ ಕ್ಯಾಮರಾ ಎದುರಿಸಿದ ಅನುಭವ?
ನಾನೇನು ಮಾಡುತ್ತಿದ್ದೇನೆ ಎಂಬ ಅರಿವೂ ನನಗಿರಲಿಲ್ಲ. ಹೇಗೆ ಕಾಣಿಸುತ್ತಿದ್ದೇನೆ ಎಂದು ನೋಡಲು 'ಮಾನಿಟರ್'ಗಳೂ ಇರಲಿಲ್ಲ. ದಿಗಿಲೂ ಆಗಿರಲಿಲ್ಲ. ಶುದ್ಧ ಅವಿವೇಕಿಯಂತೆ ವರ್ತಿಸಿದ್ದೆ.
ಒಂದು ಪಾತ್ರದ ನಿಜ ವ್ಯಕ್ತಿತ್ವವನ್ನು ಹೊರ ತರುವ ನಟನೆ ನೀಡಲು ನೀವು ಬಹಳ ಶ್ರಮ ಪಡುತ್ತೀರಿ ಎಂದು ಕೇಳಿರುವೆ. ಒಂದು ಪಾತ್ರಕ್ಕೆ ಜೀವ ನೀಡುವ ನಿಟ್ಟಿನಲ್ಲಿ ಎಷ್ಟರ ಮಟ್ಟಿಗೆ ಪ್ರಯತ್ನಿಸಬಲ್ಲಿರಿ?
ಪಾತ್ರದ ಸ್ವರೂಪವನ್ನು ಅನುಸರಿಸಿ ಸಾಕಷ್ಟು ಶ್ರಮ ಪಡುವೆ. 20 ಕಿಲೋ ತೂಕ ಕಳೆದುಕೊಳ್ಳಬೇಕು ಅಥವಾ ಪಡೆಯಬೇಕು ಎಂದು ಬಯಸಿದಲ್ಲಿ ಏನು ಮಾಡುವೆನೋ ಗೊತ್ತಿಲ್ಲ. ಅದನ್ನುಳಿದರೆ ಮತ್ತೆಲ್ಲಾ ಪ್ರಯತ್ನಗಳನ್ನು ಹಾಕಲು ನಾನು ಸದಾ ಸಿದ್ಧ.
'ದಿಲ್ ಚಾಹ್‌ತಾ ಹೈ' ಚಿತ್ರಕ್ಕಾಗಿ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿ ಪಡೆದಿದ್ದೀರಿ. ಈ ಚಿತ್ರದಲ್ಲಿ ನಿಮ್ಮದು ಸಹಜಾಭಿನಯ. ಈ ಪಾತ್ರ ನಿಮ್ಮ ನಿಜ ವ್ಯಕ್ತಿತ್ವದ ಪ್ರತಿರೂಪವಾಗಿತ್ತೆ?
'ದಿಲ್ ಚಾಹ್‌ತಾ ಹೈ' ಚಿತ್ರದ ಪಾತ್ರದ ಕೆಲ ಅಂಶಗಳನ್ನು ಗಮನಿಸಿದಲ್ಲಿ ನನ್ನ ವ್ಯಕ್ತಿತ್ವದ ಹೋಲಿಕೆ ಕಂಡು ಬರುತ್ತಿದ್ದದ್ದೇನೋ ನಿಜವೆ. ನಾನು ನಟಿಸಿದ ಚಿತ್ರಗಳಲ್ಲಿನ ಪಾತ್ರಗಳ ವ್ಯಕ್ತಿತ್ವದ ಕೆಲ ಅಂಶಗಳು ಸಾಮಾನ್ಯ ಎಲ್ಲರಲ್ಲೂ ಇದ್ದೇ ಇರುತ್ತವೆ. ಆದರೆ ಅದನ್ನು ಸಮರ್ಥವಾಗಿ ಹೊರ ತೆಗೆಯುವುದು ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆ. ನಾನು ಈವರೆಗೆ ನಟಿಸಿದ ಪಾತ್ರಗಳನ್ನೆಲ್ಲಾ ನೆನಪಿಸಿಕೊಳ್ಳಬಹುದಾದಲ್ಲಿ ಅದು 'ಹಮ್‌ತುಮ್' ಚಿತ್ರದ ಪಾತ್ರ. ಗಾಢವಾಗಿ ಪರಿಶೀಲಿಸಿದಲ್ಲಿ 'ಹಮ್‌ತುಮ್' ಚಿತ್ರದ ಪಾತ್ರಕ್ಕೂ ನನಗೂ ಹತ್ತಿರದ ಹೋಲಿಕೆ ಇದೆ ಎಂದನ್ನಿಸುತ್ತದೆ.
ಮೊದಲಿಗೆ 'ಲವರ್‌ಬಾಯ್' ಆಗಿ ವೃತ್ತಿಜೀವನ ಆರಂಭಿಸಿದ್ದೀರಿ. ಆ ನಂತರ ಹಾಸ್ಯ ಚಿತ್ರಗಳು. ಈಗ ಗಂಭೀರ ಪಾತ್ರಗಳಾದ 'ಓಂಕಾರ' ಮತ್ತು 'ಪರಿಣೀತಾ'... ಇವುಗಳಲ್ಲಿ ಯಾವ ನಟನೆ ಸರಳ?
'ಓಂಕಾರ'ದ ಪಾತ್ರ. ಅಚ್ಚರಿ ಎಂದರೆ ಅತೀ ಕ್ಲಿಷ್ಟವೆಂದು ತೋರುವ ಅಂತಹ ಪಾತ್ರವನ್ನು ಸರಳವಾಗಿ ಅಭಿನಯಿಸಬಹುದು. ಒಬ್ಬ ನಟ ಅಭಿನಯವನ್ನು ಕಷ್ಟ ಎನ್ನುತ್ತಾನೆ ಎಂದಾದಲ್ಲಿ ಅವನು ತನಗೆ ಸರಿ ಹೊಂದದ ಪಾತ್ರವನ್ನು ಒಪ್ಪಿಕೊಂಡಿದ್ದಾನೆ ಎಂದೇ ಅರ್ಥ. ನಾನು ನನ್ನ ಚಿತ್ರಗಳ ಮೂಲಕ ಯಾವುದೇ ಸಂದೇಶ ನೀಡುವುದಿಲ್ಲ. ಸಂಪೂರ್ಣ ಮನರಂಜನೆಯತ್ತಲೇ ದೃಷ್ಟಿ ಹರಿಸುತ್ತಿದ್ದೇನೆ ಎನ್ನುತ್ತಾರೆ ಶಾರುಖ್. ಕೆಲ ನಟರು ಪ್ರೇಕ್ಷಕರಿಗೆ ಸಂದೇಶ ನೀಡಬಹುದಾದಂತಹ ಚಿತ್ರಗಳಲ್ಲೇ ನಟಿಸ ಬಯಸುತ್ತಾರೆ. ನಿಮ್ಮ ಹಾದಿ ಯಾವುದು?
ನಾನೂ ಆಗಾಗ ಉತ್ತಮ ಸಂದೇಶವಿರುವ ಚಿತ್ರಗಳನ್ನೇ ಆರಿಸುತ್ತೇನೆ. ಆದರೆ ಅಂತಹ ಚಿತ್ರಗಳು ಬದಲಾವಣೆ ತರಬಲ್ಲವು ಎಂಬ ನಂಬಿಕೆ ಮಾತ್ರ ನನಗಿಲ್ಲ. ಚಲನಚಿತ್ರ ಎಂದರೆ ಮನೋರಂಜನೆ. ಅಂದರೆ ಕೆಲ ಕಾಲದ ಮಟ್ಟಿಗೆ ನಿಮ್ಮ ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವ ಮಾಧ್ಯಮ. ಇದು ನಿಮ್ಮ ಸಮಸ್ಯೆಗಳನ್ನು ಪ್ರತಿನಿಧಿಸುವ ವೇದಿಕೆಯಾಗಿರಬಹುದು. ಆದರೆ ಇದನ್ನು ಹಾಗೆ ಬಳಸಿಕೊಳ್ಳುವುದು ತರವಲ್ಲ. ನನ್ನ ಚಿತ್ರಗಳ ಮಟ್ಟಿಗಾದರೂ ಇದು ನಿಜವಾಗಲಿ. ನೀವು ಹೆಣ್ಣು ಶಿಶು ಹತ್ಯೆ ಕುರಿತು ಒಂದು ಚಿತ್ರ ನಿರ್ಮಿಸಿದಲ್ಲಿ ಪರಿಣಾಮಕಾರಿ ಎನಿಸಬಹುದು. ಆ ಚಿತ್ರ ಜನರಲ್ಲಿ ಜಾಗೃತಿ ಮೂಡಿಸಬಹುದು. ಅವರ ಚಿಂತನಾ ಸರಣಿ ಬದಲಾಗಬಹುದು. ಆದರೆ ಅದನ್ನು ಅಷ್ಟೇ ಬುದ್ಧಿವಂತಿಕೆಯಿಂದ ಮತ್ತು ಮನೋರಂಜನೆ ದೃಷ್ಟಿಯಲ್ಲಿ ಮಾಡಿದಲ್ಲಿ ಮಾತ್ರ ಒಪ್ಪಿಕೊಳ್ಳಬಹುದು. ಆದರೆ ನೇರವಾಗಿ ಹೇಳಬೇಕೆಂದರೆ ನನಗೆ ಅದರಲ್ಲಿ ಖಂಡಿತ ನಂಬಿಕೆ ಇಲ್ಲ.
ನಿಮ್ಮ ಖಾಸಗಿ ಬದುಕು ಹಲವಾರು ವಿವಾದಗಳಿಗೆ ಆಹಾರವಾಗಿದೆ. ನೀವು ನಿಮ್ಮ ಮನಸ್ಸಾಕ್ಷಿ ಹೇಳಿದ್ದನ್ನೇ ಮಾಡುವ ವ್ಯಕ್ತಿಯೆ? (ಚಿತ್ರಗಳ ಆಯ್ಕೆಯಲ್ಲೂ ಇದೇ ಪ್ರವೃತ್ತಿಯನ್ನು ತೋರುವಿರೆ?)
ಪ್ರತಿಯೊಬ್ಬರೂ ಹಾಗೇ ಅಲ್ಲವೆ? ಚಿತ್ರಗಳ ಆಯ್ಕೆ ಬಗ್ಗೆ ಹೇಳಬೇಕೆಂದರೆ, ನಾನು ಸಾಧಿಸಬಹುದು ಎಂದು ಯೋಚಿಸಿದ್ದಕ್ಕಿಂತಲೂ ಹೆಚ್ಚಿನ ಕೆಲಸಗಳನ್ನು ನಾನು ಮಾಡಿರುವೆ.
ನಿಮ್ಮ ತಂದೆ ಒಬ್ಬ ಕ್ರಿಕೆಟಿಗ. ತಾಯಿ ಚಿತ್ರ ನಟಿ. ನಿಮ್ಮ ಕನಸು ಏನಾಗಿತ್ತು? ಚಿತ್ರೋದ್ಯಮದಿಂದ ನಿವೃತ್ತರಾದ ಮೇಲೆ ಪಟೌಡಿ ಅವರ ಜವಾಬ್ದಾರಿಯನ್ನು ಹೊರಬೇಕೆಂದಿರುವಿರೆ?
ಮೊದಲಿಗೆ ನಾನು ಕ್ರಿಕೆಟಿಗನಾಗಬೇಕು ಎಂದೇ ಬಯಸಿದ್ದೆ. ಆದರೆ ಅದೆಲ್ಲಾ ಸ್ಪಷ್ಟವಾಗಿ ನೆನಪಿಲ್ಲ. ಪಟೌಡಿ ಅವರ ಜವಾಬ್ದಾರಿಗಳು ಏನು ಎಂಬ ಬಗ್ಗೆಯೂ ನನಗೆ ಸಂಪೂರ್ಣ ಅರಿವಿಲ್ಲ. ಅಂತಿಮವಾಗಿ ಅದನ್ನೆಲ್ಲಾ ಹೆಗಲಿಗೇರಿಸಿಕೊಳ್ಳುವ ಯೋಜನೆಯಿದೆ.
ಗಾಡ್‌ಫಾದರ್‌ಗಳಿಲ್ಲದೆ ನಟರು ಉದ್ಯಮದಲ್ಲಿ ಬೆಳೆಯುವುದು ಸಾಧ್ಯವೆ? ನಿಮ್ಮ ಕೌಟುಂಬಿಕ ಹಿನ್ನೆಲೆ ನಿಮಗೆಷ್ಟು ನೆರವಾಗಿದೆ?
ಪ್ರತಿಭಾವಂತರು ಖಂಡಿತಾ ನೆಲೆಯೂರಬಹುದು. ನಿಜ ಹೇಳಬೇಕೆಂದರೆ ಚಿತ್ರರಂಗದಲ್ಲಿ ನನಗೆ ಯಾರೂ ಗಾಡ್‌ಫಾದರ್‌ಗಳಿಲ್ಲ.
ವಿಶ್ವ ವಿಖ್ಯಾತ ಕ್ರಿಕೆಟಿಗ ನವಾಬ್ ಮನ್ಸೂರ್ ಅಲಿ ಖಾನ್ ಪಟೌಡಿ ಮತ್ತು ಮಹಾನ್ ಚಿತ್ರನಟಿ ಶರ್ಮಿಳಾ ಟಾಗೋರ್ ಅವರ ಮಗನೆಂಬ ಹೆಮ್ಮೆಯಲ್ಲಿ ಯುವ ದಿನಗಳು ಹೇಗೆ ಕಳೆದಿದ್ದವು?
ಹೌದು, ಚೆನ್ನಾಗೇ ಇತ್ತು. ತೃಪ್ತ ಮತ್ತು ಸಂತಸದಿಂದ ಕಳೆದ ಕಾಲವದು. ನಿಜ ಹೇಳಬೇಕೆಂದರೆ, ಜೀವನ ಹೇಗಿತ್ತು ಎಂದು ನೆನಪಿಸಿಕೊಳ್ಳಬೇಕೆಂದರೂ, ಕ್ಷಮಿಸಿ ನೆನಪಾಗಲೊಲ್ಲದು. ಆದರೆ ನನಗೆ ನೆನಪಿರಬೇಕಿತ್ತು... ಆದರೆ ಅದು ಬಹಳ ಹಿಂದಿನ ಕಥೆ.
ನೀವು ಇಬ್ಬರು ಸಹೋದರಿಯರ ನಡುವೆ ಬೆಳೆದವರು. ಸಹೋದರಿಯರಿಬ್ಬರು ನಿಮ್ಮನ್ನು ಕಾಡಿಸಿದ್ದಿದೆಯೆ (ಒಬ್ಬನೇ ಸಹೋದರ)? ಅಂತಹ ಹುಡುಗಾಟದ ಹುಡುಗಿಯರ ಆಟಪಾಠದಲ್ಲಿ ನೀವು ಸೇರಿಕೊಳ್ಳುತ್ತಿದ್ದದ್ದು ಇದೆಯೆ?
ಆಗ ಅವರಿಗೆ 8- 16ರ ವಯಸ್ಸು. ಅವರೇನಾದರೂ ನನ್ನ ತಂಟೆಗೆ ಬಂದರೆ ಬಾತ್‌ರೂಂನಲ್ಲಿ ಹಾಕಿ ಬೀಗ ಜಡಿಯುತ್ತಿದ್ದೆ. ಭೋಪಾಲ್‌ನಲ್ಲಿ ನಾನು ನನ್ನ ಸಹೋದರಿಯರ ಜೊತೆ ಮಣ್ಣಿನ ಕುಡಿಕೆ ತಯಾರಿಸಿದ್ದು ಮಾತ್ರ ನೆನಪಿದೆ. ಸುಮ್ಮಸುಮ್ಮನೆ ಮಣ್ಣಿನ ಒಲೆ ನಿರ್ಮಿಸಿ ಆಟವಾಡಿದ್ದೆವು. ಇದೆಲ್ಲವನ್ನು ನೆನಪಿಸಿಕೊಂಡರೆ ಬೇಜಾರಾಗುತ್ತದೆ.
ನಾವು ನಿಮ್ಮ ತಂದೆಯ ಜೊತೆ ಮಾತನಾಡಿದ್ದೆವು. ನಿಮ್ಮನ್ನು ಎಳೆಯ ವಯಸ್ಸಿನಲ್ಲೇ ವಿದೇಶಕ್ಕೆ ವ್ಯಾಸಂಗಕ್ಕೆ ಕಳುಹಿಸಿದ್ದಕ್ಕಾಗಿ ಅವರು ಪರಿತಪಿಸಿದ್ದರು. ನಿಮ್ಮ ಮಕ್ಕಳನ್ನು ವ್ಯಾಸಂಗಕ್ಕಾಗಿ ವಿದೇಶಕ್ಕೆ ಕಳುಹಿಸುವ ಬಗ್ಗೆ ಮತ್ತು ಅಂತಹ ಪೋಷಕರ ಬಗ್ಗೆ ನಿಮ್ಮ ಅಭಿಪ್ರಾಯ?
ಅದಕ್ಕಾಗಿ ಯಾರೂ ಪರಿತಪಿಸಲೇ ಬಾರದು. ನನ್ನ ಜೀವನದಲ್ಲಿ ನಡೆದ ಅತ್ಯುತ್ತಮ ಬೆಳವಣಿಗೆ ಅದು. ಆ ಶಿಕ್ಷಣ ಮತ್ತು ವಿದೇಶದ ವಾತಾವರಣವನ್ನು ಅರಿಯುವ ಅವಕಾಶ ಸಿಕ್ಕಿದ್ದಕ್ಕಾಗಿ ನಾನು ಅವರಿಗೆ ಆಭಾರಿಯಾಗಿರುವೆ. ಆದರೆ ನಾನು ಹೋಗಿದ್ದರೂ, ನನ್ನ ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲೇ ಬೋರ್ಡಿಂಗ್ ಶಾಲೆಗಳಿಗೆ ಕಳುಹಿಸುವ ಬಗ್ಗೆ ನನಗೆ ಆಸಕ್ತಿ ಇಲ್ಲ. ಅಂತಹ ಪರಿಪಾಠ ಒಳ್ಳೆಯದಲ್ಲ.
2008ರಲ್ಲಿ ಬಿಡುಗಡೆಯಾಗುವ ನಿಮ್ಮ ಚಿತ್ರಗಳು?
ಕುಣಾಲ್ ಕೊಹ್ಲಿ ಅವರ ಮುಂದಿನ ಚಿತ್ರ 'ಟ್ಯೂಷನ್'. ನಂತರ 'ರೇಸ್' ಮತ್ತು 'ರೋಡ್ ಸೈಡ್ ರೋಮಿಯೋ'. ಇನ್ನೂ ಹೆಸರಿಡದ ಇಮ್ತಿಯಾಜ್ ಅಲಿ ಅವರ ಚಿತ್ರವನ್ನು ನಾನೇ ನಿರ್ಮಿಸುತ್ತಿರುವೆ. ಪ್ರೊಡಕ್ಷನ್ ಸಂಸ್ಥೆಯ ಹೆಸರು 'ಇಲ್ಯುಮಿನಟಿ'.
ಟಿಎಸ್‌ಐ |