ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಕ್ರಿಕೆಟಾಯಣ
ಕ್ರಿಕೆಟ್ ಲೋಕದ ಮಹಾಯುದ್ಧ
 

ಸುಭಾಷ್ ಚಂದ್ರ ಹಾಗೂ ಅವರ ಐಸಿಎಲ್ ಬಿಸಿಸಿಐ ಮುಂದೆ ಪ್ರಭುತ್ವ ಸಾಧಿಸುವುದೇ?


ನೀವೇನಾದರೂ ನಿಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದೀರಾ? ಹಾಗಿದ್ದರೆ ನೀವು ಖಂಡಿತ ಚಂಡೀಗಢದಲ್ಲಿ ನಡೆದ ಆ 'ಉತ್ಸವ'ದಲ್ಲಿ ಭಾಗಿಯಾಗಿರಬೇಕಿತ್ತು. ಫಳ-ಫಳ ಹೊಳೆಯುತ್ತಿದ್ದ ಉಡುಗೆ-ತೊಡುಗೆ ತೊಟ್ಟ ಕರೀನಾ ಕಪೂರ್ ನೃತ್ಯ. ಜೊತೆಗೆ ಜೆಕ್ ಮೂಲದ ಐಟಂ ಗರ್ಲ್ ಯಾನಾ ಗುಪ್ತಾ ಥಳುಕು-ಬಳುಕು. ಅಲ್ಲೇ ಇದ್ದರು ಹರಿಯಾಣದ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ. ಪಕ್ಕದಲ್ಲಿಯೇ ಭಾರತ ಕ್ರಿಕೆಟ್ ಲೋಕದ 'ಪಾಜಿ', ದೇಶಕ್ಕೆ ಪ್ರಪ್ರಥಮ ವಿಶ್ವಕಪ್ ತಂದುಕೊಟ್ಟ ನಾಯಕ ಕಪಿಲ್ ದೇವ್! ಇದಕ್ಕೆಲ್ಲ ಕಳಶವಿಟ್ಟಂತೆ ಎಲ್ಲೇ ಇದ್ದರೂ ಸದಾ ತನ್ನತನ ತೋರಿಸುವ ಕೇಂದ್ರ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ 'ಜೋಕ್'ಗಳ ಮಳೆ ಸುರಿಸುತ್ತಿದ್ದರು.
ಇವೆರೆಲ್ಲ ನೆರೆದದ್ದು ಝೀ ನೆಟ್‌ವರ್ಕ್‌ನ ಮಾಲೀಕ ಸುಭಾಷ್ ಚಂದ್ರ ಅವರಿಗೆ 'ಹುಟ್ಟು ಹಬ್ಬ'ದ ಶುಭಾಶಯ ಹೇಳಲು. ಇಂಡಿಯನ್ ಕ್ರಿಕೆಟ್ ಲೀಗ್ (ಐಸಿಎಲ್) ಹೆಸರಲ್ಲಿ ಪರ್ಯಾಯ ಶಕ್ತಿಯೊಂದನ್ನು ಹುಟ್ಟು ಹಾಕಿರುವ ವ್ಯಕ್ತಿ ಸುಭಾಷ್ ಚಂದ್ರ. ಐಸಿಎಲ್‌ನ ಪ್ರಪ್ರಥಮ ಟ್ವೆಂಟಿ-೨೦ ಕ್ರಿಕೆಟ್ ಲೀಗ್‌ನ ಹುಟ್ಟು ಹಬ್ಬದ ಸಮಾರಂಭ ಅದು. ಈ ಮೂಲಕ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅಧ್ಯಕ್ಷರಾಗಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ಐಸಿಎಲ್ ಸಮರ ಆರಂಭವಾಗಿಯೇ ಬಿಟ್ಟಿತು. ದಕ್ಷಿಣ ಏಷ್ಯಾದ ರೂಪರ್ಟ್ ಮರ್ಡೋಕ್ ಎಂಬ ಖ್ಯಾತಿಗೆ ಒಳಗಾಗಿರುವ ಸುಭಾಷ್ ಚಂದ್ರ, ಏಕದಿನ ಪಂದ್ಯಗಳ ಜನಕ ಆಸ್ಟ್ರೇಲಿಯಾದ ಕೆರಿ ಪ್ಯಾಕರ್ ಅಪರಾವತಾರವಾಗಲು ಹೊರಟಿದ್ದಾರೆ.
ಬಿಸಿಸಿಐ ಮತ್ತು ಐಸಿಎಲ್ ನಡುವಿನ ಈ ಮಹಾಯುದ್ಧ ಟ್ವೆಂಟಿ-20 ಕ್ರಿಕೆಟ್ ಪಂದ್ಯಗಳಷ್ಟೇ ರೋಮಾಂಚಕ. ಮೈದಾನದಲ್ಲಿ ಬೌಲರ್‌ನ ಪ್ರತಿಯೊಂದು ಎಸೆತವನ್ನೂ ಬೌಂಡರಿಗೆ ಚಚ್ಚಲು ಬ್ಯಾಟ್ಸ್‌ಮನ್ ಹಪಹಪಿಸುತ್ತಿದ್ದರೆ, ಆದಷ್ಟು ಬೇಗ ಬ್ಯಾಟ್ಸ್‌ಮನ್‌ಗೆ ಪೆವಿಲಿಯನ್ ಹಾದಿ ತೋರಿಸಲು ಬೌಲರ್ ಕಾಯುತ್ತಿರುತ್ತಾನೆ. ಆದರಿಲ್ಲಿ ಬ್ಯಾಟ್-ಬಾಲ್ ನಡುವೆ ಕದನ ನಡೆಯುತ್ತಿಲ್ಲ. ಬದಲಾಗಿ ಎರಡು ಶಕ್ತಿಶಾಲಿ ಹಣಕಾಸು ಸಂಸ್ಥೆಗಳ ನಡುವೆ ಮಹಾಯುದ್ಧ! ಸದ್ಯ ಕ್ರಿಕೆಟ್‌ನ ಮೆಕ್ಕಾ ಎಂದೇ ಖ್ಯಾತಿ ಪಡೆದಿರುವ ಭಾರತದಲ್ಲಿ ಈಗ ಎರಡು ಗುಂಪುಗಳ ನಡುವಿನ ಒಣಪ್ರತಿಷ್ಠೆಯ ಪ್ರತೀಕವಾಗಿದೆ ಈ ಯುದ್ಧ. ಭಾರತದಲ್ಲಿ ತನ್ನ ಪ್ರಭುತ್ವ ಸಾಧಿಸಲು ಐಸಿಎಲ್ ಮುನ್ನುಗ್ಗಿ ಸಾಗುತ್ತಿದ್ದರೆ, ಅವರನ್ನು ಬೇರಿನಿಂದಲೇ ಕಿತ್ತೊಗೆಯಲು ಬಿಸಿಸಿಐ ತನ್ನೆಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.
"ನಾವಿಲ್ಲಿಗೆ ಬಂದಿರುವುದು ಐಸಿಎಲ್‌ಗೆ ಬೆಂಬಲ ನೀಡಲು. ಬಿಸಿಸಿಐ ವಿರೋಧಿಸಲಲ್ಲ" ಎನ್ನುವುದು ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ಅವರ ಅಂಬೋಣ. ಇದಕ್ಕೆ ತದ್ವಿರುದ್ಧವಾಗಿ, ಕೋಲ್ಕತ್ತಾದಲ್ಲಿ ಭಾರತ-ಪಾಕಿಸ್ತಾನ ಟೆಸ್ಟ್ ಪಂದ್ಯ ವೀಕ್ಷಿಸುತ್ತ ಕೂತಿದ್ದ ಬಿಸಿಸಿಐ ಕಾರ್ಯದರ್ಶಿ ನಿರಂಜನ್ ಷಾ, "ಐಸಿಎಲ್ ಒಂದು ಭ್ರಮೆಯಷ್ಟೆ. ಅದು ಏನೂ ಅಲ್ಲ. ನಾವು ನಿಜವಾದ ಭಾರತೀಯ ಕ್ರಿಕೆಟ್‌ನ ಮೇಲ್ವಿಚಾರಕರು. ನಾವು ಅಧಿಕೃತ.
ಆ ಕಾರಣದಿಂದಾಗಿಯೇ ನಾವು ಅವರನ್ನು ಕಡೆಗಣಿಸುತ್ತಿದ್ದೇವೆ" ಎಂದು ಹೇಳಿದರು.
ಒಂದು ಕಾಲದಲ್ಲಿ ಅತ್ಯಂತ ಆತ್ಮೀಯರಾಗಿದ್ದ ಸುಭಾಷ್ ಚಂದ್ರ ಮತ್ತು ಶರದ್ ಪವಾರ್ ಈಗ ಕ್ರಿಕೆಟ್‌ನ ಹೆಸರಲ್ಲಿ ಒಬ್ಬರ ಮೇಲೊಬ್ಬರು ಕತ್ತಿ ಮಸೆಯುತ್ತಿರುವುದು ಏಕೆ? ಈ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ ಹಿಂದಣ ಹೆಜ್ಜೆಯಿಡಬೇಕು.
ಅದು ಜಗಮೋಹನ್ ದಾಲ್ಮಿಯ ಬಿಸಿಸಿಐನ ಅತ್ಯಂತ ಬಲಿಷ್ಠ ಅಧ್ಯಕ್ಷರಾಗಿದ್ದ ಕಾಲ. ಸುಭಾಷ್ ಚಂದ್ರ ಬಲಿಷ್ಠವಾದ ಒಂದು ಝೀ ಕ್ರೀಡಾ ಚಾನೆಲ್ ಸ್ಥಾಪನೆ ಮಾಡುವ ಇಚ್ಛೆ ವ್ಯಕ್ತಪಡಿಸಿದರು. ಭಾರತದಲ್ಲಿ ಕ್ರೀಡೆ ಎಂದರೆ ಕ್ರಿಕೆಟ್ ಮಾತ್ರ. ಇಲ್ಲಿ ಕ್ರಿಕೆಟ್ ಅನ್ನು ದೇವರಂತೆ ಪೂಜಿಸಲಾಗುತ್ತದೆ. ವರ್ಷಂಪ್ರತಿ ಕ್ರಿಕೆಟ್ ಪ್ರಸಾರ ಮಾಡಿದರಷ್ಟೇ ಇಲ್ಲಿ ಕ್ರೀಡಾ ಚಾನೆಲ್ ಒಂದು ಬದುಕಿ ಉಳಿಯಲು ಸಾಧ್ಯ. ಆ ಹಿನ್ನೆಲೆಯಲ್ಲಿ ಸುಭಾಷ್ ಚಂದ್ರ ಭಾರತೀಯ ಕ್ರಿಕೆಟ್‌ನ ಮೇಲೆ ತಮ್ಮ ಕಬಂಧಬಾಹು ಚಾಚಲು ಪ್ರಯತ್ನ ಮಾಡಿದರು. ಆದರೆ, ರೂಪರ್ಟ್ ಮರ್ಡೋಕ್ ಮಾಲೀಕರಾಗಿರುವ ಇಎಸ್‌ಪಿಎನ್- ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಅವರ ಪಾಲಿಗೆ ಅಡ್ಡಿಯಾಯಿತು. ತತ್‌ಕ್ಷಣ ಸುಭಾಷ್ ಚಂದ್ರ ಝೀ ಸ್ಪೋರ್ಟ್ಸ್ ಚಾನೆಲ್ ಸ್ಥಾಪನೆ ಮಾಡಿ, ಅತಿ ಹೆಚ್ಚು ಹರಾಜು ಮೊತ್ತ ನೀಡಿ ತಮ್ಮ ಕನಸು ನನಸಾಗಿಸಿಕೊಳ್ಳುವ ಯತ್ನ ಮಾಡಿದರು. ತಾಂತ್ರಿಕವಾಗಿ ಝೀ ಹರಾಜಿನಲ್ಲಿ ಜಯ ಸಾಧಿಸಿತು. ಆದರೆ, ಬಿಸಿಸಿಐ ಆ ಹರಾಜನ್ನು ರದ್ದು ಮಾಡಿ ಮತ್ತೆ ಹರಾಜು ಕೂಗುವಂತೆ ಹೇಳಿತು. ಬಿಸಿಸಿಐನ ಈ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ ಚಂದ್ರ ಅಲ್ಲಿ ಸೋಲನುಭವಿಸಿದರು. ಆ ಮೂಲಕ ಬಿಸಿಸಿಐ ಮತ್ತು ಝೀ ಸ್ಪೋರ್ಟ್ಸ್ ಕದನ ಆರಂಭವಾಯಿತು. ಯಾವುದೇ ಕಾರಣಕ್ಕೆ ಬಿಸಿಸಿಐ ಝೀ ಸ್ಪೋರ್ಟ್ಸ್‌ಗೆ ಮಣೆ ಹಾಕುವುದಿಲ್ಲ ಎಂದು ಖಚಿತವಾದ ಕೂಡಲೇ ಚಂದ್ರ ಒಂದು ನಿರ್ಧಾರಕ್ಕೆ ಬಂದರು. ತಾವೇ ಸ್ವತಃ ಒಂದು ಪರ್ಯಾಯ ಲೀಗ್ ಹುಟ್ಟು ಹಾಕಲು ಮುಂದಾದರು.
ಇಂತಹ ಒಂದು ರೋಮಾಂಚಕಾರಿ ಸನ್ನಿವೇಶದ ನಡುವೆಯೇ ಚಂದ್ರ ಭಾರತ ಕ್ರಿಕೆಟ್ ಲೋಕದ ಜೀವಂತ ದಂತಕಥೆ, ಕಪಿಲ್ ದೇವ್ ಅವರನ್ನು ಬಲೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾದರು. ಈ ನಡುವೆ ಬಿಸಿಸಿಐನಲ್ಲಿ ಜಗಮೋಹನ್ ದಾಲ್ಮಿಯ ಯುಗ ಅಂತ್ಯವಾಗಿ ಪವಾರ್ ಯುಗ ಆರಂಭವಾಗಿತ್ತು. ಶರದ್ ಪವಾರ್ ನೆರಳಲ್ಲಿಯೇ ಕಪಿಲ್ ಅವರನ್ನು ತಮ್ಮ ತೆಕ್ಕೆಗೆ ಸೆಳೆದುಕೊಂಡ ಚಂದ್ರ, ಅವರನ್ನು ಐಸಿಎಲ್ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿಯೇ ಬಿಟ್ಟರು. ಆ ಹಂತದವರೆಗೂ ಬಿಸಿಸಿಐ, ಈ ವಿರೋಧಿ ಕ್ರಿಕೆಟ್ ಲೀಗ್ ಎಂದೂ ಅಸ್ತಿತ್ವಕ್ಕೆ ಬರಲಾರದು ಎಂಬ ಗಾಳಿ ಸುದ್ದಿ ಹರಡಿಸುತ್ತಲೇ ತೃಪ್ತಿ ಪಟ್ಟುಕೊಂಡಿತ್ತು. ಆದರೆ, ಐಸಿಎಲ್‌ಗೆ ಒಮ್ಮೆ ಕಪಿಲ್ ರಂಗ ಪ್ರವೇಶವಾದ ಕೂಡಲೇ ಚಿತ್ರವೇ ಬದಲಾಗಿ ಬಿಟ್ಟಿತು. ಆಗ ಬಿಸಿಸಿಐಗೆ, ಮುಂದಿರುವುದು ಮಹಾಯುದ್ಧ ಎಂಬ ಅರಿವಾಯಿತು. ಕೂಡಲೇ ಐಸಿಎಲ್ ಮಣ್ಣು ಮುಕ್ಕಿಸುವ ಎಲ್ಲ ತಂತ್ರಗಳನ್ನು ಬಿಸಿಸಿಐ ಆರಂಭಿಸಿಯೇ ಬಿಟ್ಟಿತು. ಹಾಗೆಯೇ ಇಬ್ಬರ ನಡುವೆ ಮಾತಿನ ಚಕಮಕಿಗಳೂ ಆರಂಭವಾದವು. ಯಾವುದೇ ಕಾರಣಕ್ಕೆ ಐಸಿಎಲ್‌ಗೆ ಮೂಲಸೌಲಭ್ಯಗಳನ್ನು ಬಳಸಲು ಅವಕಾಶ ಮಾಡಿಕೊಡಬೇಡಿ ಎಂದು ಬಿಸಿಸಿಐ ಅದರ ನೆರಳಡಿಯಲ್ಲಿ ಬರುವ ಎಲ್ಲ ಕ್ರಿಕೆಟ್ ಸಂಸ್ಥೆಗಳಿಗೆ ತಾಕೀತು ಮಾಡಿತು. ಐಸಿಎಲ್‌ನಲ್ಲಿ ಆಡುವ ಕ್ರಿಕೆಟ್ ಆಟಗಾರರು ಬಿಸಿಸಿಐ ಸರಣಿಗಳಲ್ಲಿ ಆಡುವ ಅರ್ಹತೆ ಕಳೆದುಕೊಳ್ಳುತ್ತಾರೆ ಎಂಬ ಬೆದರಿಕೆಯನ್ನು ಹಾಕಿತು. ಅದಕ್ಕಿಂತ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಬಿಸಿಸಿಐ ಒಎನ್‌ಜಿಸಿ ಅಂತಹ ಸಂಸ್ಥೆಗಳಿಗೆ "ನಿಮ್ಮಲ್ಲಿ ಕೆಲಸ ಮಾಡುವ ಆಟಗಾರರಿಗೆ ಐಸಿಎಲ್ ಜೊತೆ ಹೋಗಬೇಡಿ ಎಂದು ಹೇಳಿ" ಎಂಬ ಒತ್ತಡ ಕೂಡ ಹೇರಿತು.
"ಐಸಿಎಲ್ ಟೂರ್ನಿ ನಡೆಯುವ ಸಂದರ್ಭದಲ್ಲಿ ಪ್ರದರ್ಶಿಸುವ ಸಲುವಾಗಿ ಒಂದು ಜಾಹೀರಾತಿನ ಚಿತ್ರೀಕರಣಕ್ಕೆ ಸಿದ್ಧತೆ ನಡೆದಿತ್ತು. ಮೂಲ ಯೋಜನೆಯ ಪ್ರಕಾರ ಆ ಜಾಹೀರಾತನ್ನು ಬಿಸಿಸಿಐ ಸುಪರ್ದಿಗೆ ಬರುವ ಒಂದು ಕ್ರೀಡಾಂಗಣದಲ್ಲಿ ಚಿತ್ರೀಕರಿಸಲು ಯೋಚಿಸಲಾಗಿತ್ತು. ಒಮ್ಮೆ ಈ ಜಾಹೀರಾತು ಐಸಿಎಲ್‌ಗಾಗಿ ಎಂದು ಅರಿವಾದ ಕೂಡಲೇ ಬಿಸಿಸಿಐ ಚಿತ್ರೀಕರಣಕ್ಕೇ ಅವಕಾಶ ನೀಡಲಿಲ್ಲ" ಎಂದು ಝೀ ಟೆಲಿವಿಷನ್ ಉಪಾಧ್ಯಕ್ಷ ಆಶೀಶ್ ಶುಕ್ಲಾ ವಿವರ ನೀಡಿದರು. ಶುಕ್ಲಾ ಈ ಮಹಾಯುದ್ಧದ ಮಹಾ ದಂಡನಾಯಕರಲ್ಲಿ ಒಬ್ಬರು. ಐಸಿಎಲ್ ಉದ್ಘಾಟನೆ ನಂತರ ಎಂದಿನಂತೆಯೇ ತಮ್ಮ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಿರುವ ಚಂದ್ರ, "ಐಸಿಎಲ್‌ಗೆ ಪುಕ್ಕಟೆ ಪ್ರಚಾರ ಒದಗುವಂತೆ ಮಾಡಿದ ಬಿಸಿಸಿಐಗೆ ನನ್ನ ಕೃತಜ್ಞತೆಗಳು. ಐಸಿಎಲ್ ಪ್ರಚಾರಕ್ಕಾಗಿ ನಾವು ಹೆಚ್ಚು ಹಣ ಖರ್ಚು ಮಾಡಲೇ ಇಲ್ಲ!" ಎಂದು ಮಾತುಗಳ ಮೂಲಕ ಚುಚ್ಚಿದ್ದಾರೆ. ಬಿಸಿಸಿಐನ ಉಳಿದ ಪದಾಧಿಕಾರಿಗಳು ಐಸಿಎಲ್ ಮೇಲೆ ಟೀಕೆಯ ಮಳೆ ಸುರಿಯುತ್ತಿದ್ದರೆ, ಅಧ್ಯಕ್ಷ ಶರದ್ ಪವಾರ್ ಮಾತ್ರ ಎದುರಾಳಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ತಂತ್ರ ಬಳಸಲಾರಂಭಿಸಿದ್ದಾರೆ.
ಅಂತೂ ಮಹಾಯುದ್ಧ ಆರಂಭವಾಗಿದೆ. ಈ ಯುದ್ಧದಲ್ಲಿ ಗೆಲುವು ಯಾರದ್ದಾಗಲಿದೆ? ಐಸಿಎಲ್‌ಗೆ ಭವಿಷ್ಯ ಇದೆಯೇ? ಚಂದ್ರ ಕ್ರಿಕೆಟ್ ಲೋಕದ ಮೇಲೆ ಬಿಸಿಸಿಐ ಹೊಂದಿರುವ ಹಿಡಿತವನ್ನು ಸಡಿಲಿಸಲು ಯಶಸ್ವಿಯಾಗುವರೇ? ಭಾರತೀಯ ಕ್ರಿಕೆಟ್ ಲೋಕದಲ್ಲಿ ಐಸಿಎಲ್ ಕ್ರಾಂತಿ ಎಬ್ಬಿಸುವ ಬಗ್ಗೆ ವಿಭಿನ್ನ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಭಾರತ ಕ್ರಿಕೆಟ್ ತಂಡದ ಮಾಜಿ ಬೌಲರ್ ಜಾವಗಲ್ ಶ್ರೀನಾಥ್, "ಆಟಗಾರರು ಕೇವಲ ಹಣ ಮಾಡುವ ದೃಷ್ಟಿಯಿಂದ ಕ್ರಿಕೆಟ್ ಆಡುವುದಿಲ್ಲ. ದೇಶವನ್ನು ಪ್ರತಿನಿಧಿಸಬೇಕು ಎಂಬ ಉದ್ದೇಶವೂ ಇರುತ್ತದೆ. ಆ ಹಿನ್ನೆಲೆಯಲ್ಲಿ ಹೇಳುವುದಾದರೆ ಐಸಿಎಲ್ ಭವಿಷ್ಯ ಅಷ್ಟೇನೂ ಪ್ರಖರವಾಗಿ ಕಾಣುವುದಿಲ್ಲ" ಎನ್ನುತ್ತಾರೆ.
ಆದರೂ, ಮುಂಬರುವ ದಿನಗಳಲ್ಲಿ ಐಸಿಎಲ್, ಬಿಸಿಸಿಐ ಬಾಸ್‌ಗಳ ನಿದ್ದೆ ಕೆಡಿಸಲಿದೆ. ಆದರೆ ಟಿಎಸ್‌ಐ ಮಾತ್ರ ಇದನ್ನು ಸ್ವಾಗತಿಸುತ್ತದೆ. ಏಕೆಂದರೆ ಪೈಪೋಟಿಯಿದ್ದರೆ ಮಾತ್ರ ಉತ್ತಮ ಪ್ರದರ್ಶನ ವ್ಯಕ್ತವಾಗಲು ಸಾಧ್ಯ. ಉತ್ತಮ ಗುಣಮಟ್ಟ ಒಡಮೂಡಲು ಸಾಧ್ಯ.

ಟಿಎಸ್‌ಐ

ಟಿಎಸ್‌ಐ ಬ್ಯೂರೋ

"ನಾವು ದೇಶವನ್ನು ಪ್ರತಿನಿಧಿಸಲಿದ್ದೇವೆ"
ಐಸಿಎಲ್ ಅಧ್ಯಕ್ಷ, ಕಪಿಲ್ ದೇವ್ ಅವರೊಂದಿಗೆ ಮಾಯಾಂಕ್ ಸಿಂಗ್ ಮಾತುಕತೆ

ಚಂಡೀಗಢದ ಪಂಚಕುಲಾದಲ್ಲಿ ಐಸಿಎಲ್ ಟೂರ್ನಿ ಆರಂಭವಾಗಿರುವ ಕುರಿತು...?

ಚಂಡೀಗಢಕ್ಕೆ ಮತ್ತೆ ಮರಳುವ ಅವಕಾಶ ಸಿಕ್ಕಿತಲ್ಲಾ ಎಂದು ನನಗೆ ತುಂಬಾ ಸಂತೋಷವಾಗಿದೆ. ಇಂತಹ ಶ್ರೇಷ್ಠ ಮಟ್ಟದ ಕ್ರಿಕೆಟ್ ಟೂರ್ನಿಯನ್ನು ನಾನೇ ಮುಂದಾಗಿ ನಿಂತು ನಡೆಸಿಕೊಡುತ್ತೇನೆ, ಅದೂ ಚಂಡೀಗಢದಲ್ಲಿ ಎಂದು ಕನಸಲ್ಲಿಯೂ ಎಣಿಸಿರಲಿಲ್ಲ.

ಐಸಿಎಲ್‌ನ ಯುವ ಆಟಗಾರರ ಮುಂದಿನ ಭವಿಷ್ಯ?

ನನ್ನೆಲ್ಲ ಪ್ರತಿಭೆಯನ್ನು ಅವರಿಗಾಗಿ ಧಾರೆಯೆರೆ ಯಲಿದ್ದೇನೆ. ಅವರು ಕ್ರಿಕೆಟ್ ಲೋಕದಲ್ಲಿ ಬೆಳೆದು ನಿಲ್ಲುವಂತೆ ಮಾಡುವುದು ನನ್ನ ಉದ್ದೇಶ.

ಐಸಿಎಲ್ ಅಧ್ಯಕ್ಷರಾಗಿ ನಿಮ್ಮ ಕರ್ತವ್ಯ ಏನು?

ಐಸಿಎಲ್ ಅಧ್ಯಕ್ಷನಾಗಿ ನಾನು ಟೂರ್ನಿಯನ್ನು ಅತ್ಯಂತ ವೃತ್ತಿಪರವಾಗಿ ನಡೆಸಿಕೊಂಡು ಹೋಗಬೇಕು. ಅದು ನನ್ನ ಮುಖ್ಯ ಜವಾಬ್ದಾರಿ. ಜೊತೆಗೆ ಆಟಗಾರರಿಗೆ ಇನ್ನೂ ಹೆಚ್ಚಿನ ಅವಕಾಶಗಳನ್ನು ಸೃಷ್ಟಿ ಮಾಡಿಕೊಡಬೇಕು.

ಐಸಿಎಲ್ ಸೇರಲು ಬಿಸಿಸಿಐ ಅನುಮತಿ ಕೇಳಿದ್ದಿರಾ?

ಬಿಸಿಸಿಐ ನನಗೆ ಯಾವ ಹುದ್ದೆಯನ್ನೂ ನೀಡಿಲ್ಲ. ಆ ಹಿನ್ನೆಲೆಯಲ್ಲಿ ಅವರ ಅನುಮತಿ ಕೇಳುವ ಅಗತ್ಯವೂ ಇರಲಿಲ್ಲ.

ಬಿಸಿಸಿಐ ಮೇಲೆ ಐಸಿಎಲ್ ಯಾವ ರೀತಿಯ ಪ್ರಭಾವ ಬೀರಲಿದೆ?

ಕ್ರಿಕೆಟ್‌ನ ಅಭಿವೃದ್ಧಿಯ ನಿಟ್ಟಿನಲ್ಲಿ ಬಿಸಿಸಿಐ ಎಂದೂ ಬೇರು ಮಟ್ಟದಲ್ಲಿ ಕೆಲಸ ಮಾಡಿಲ್ಲ. ಈಗ ಐಸಿಎಲ್ ಅದರ ಕಣ್ಣು ತೆರೆಸಿದೆ. ನಾವು ಕ್ರಿಕೆಟ್‌ನ ಅಭಿವೃದ್ಧಿಯ ನಿಟ್ಟಿನಲ್ಲಿ ಬೇರು ಮಟ್ಟದಲ್ಲಿ ಪ್ರಾಮಾಣಿಕ ಕೆಲಸ ಆರಂಭಿಸಿದ್ದೇವೆ.

ಸಾರ್ವಜನಿಕರ ಮೇಲೆ ಐಸಿಎಲ್ ಯಾವ ಪರಿಣಾಮ ಬೀರಲಿದೆ?

ಮೊದಲು ಕ್ರಿಕೆಟ್‌ಗಾಗಿ ನಿಮ್ಮ ಸಮಯ ವ್ಯಯ ಮಾಡಬೇಡಿ ಎಂದು ಪೋಷಕರು ಮಕ್ಕಳಿಗೆ ಎಚ್ಚರಿಕೆ ನೀಡುತ್ತಿದ್ದರು. ಆದರೀಗ ನಾವು ಕ್ರಿಕೆಟ್‌ಗೆ ಒಂದು ವೃತ್ತಿಪರ ರೂಪ ನೀಡಿದ್ದೇವೆ.

ಒಬ್ಬ ಆಟಗಾರನಿಗೆ ನೀವು ನೀಡುವ ವಿಶೇಷ ಉಡುಗೊರೆ ಏನು?

ಕ್ರಿಕೆಟ್ ಆಟಗಾರನಾದ ಪ್ರತಿಯೊಬ್ಬನೂ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆ ಪ್ರದರ್ಶಿಸಲು ಸಾಧ್ಯ ವಾಗುವುದಿಲ್ಲ. ಆದರೆ, ಆತ ಒಬ್ಬ ಉತ್ತಮ ಕ್ರಿಕೆಟಿಗನಾಗಲು ಸಾಧ್ಯ. ಅಂತಹ ಆಟಗಾರರಿಗೆ ನಾವು ಒಂದು ಉತ್ತಮ ಅವಕಾಶ ನೀಡುತ್ತಿದ್ದೇವೆ.

ಭಾರತದ ಹೆಸರಲ್ಲಿ ಒಂದು ದಿನ ಐಸಿಎಲ್ ತಂಡ ಆಡಲಿದೆ ಎಂಬ ನಂಬಿಕೆ ನಿಮಗಿದೆಯೇ?

ಖಂಡಿತ. ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ನಾವು ಒಂದು ದಿನ ದೇಶವನ್ನು ಪ್ರತಿನಿಧಿಸುವುದು ನೂರಕ್ಕೆ ನೂರು ಖಚಿತ.

 

"ಐಸಿಎಲ್ ಎಂಬುದು ಭ್ರಮೆ"
ಬಿಸಿಸಿಐ ಕಾರ್ಯದರ್ಶಿ ನಿರಂಜನ್ ಷಾ ಅವರು ಮಾಯಾಂಕ್ ಸಿಂಗ್ ಅವರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ

ಕ್ರಿಕೆಟ್‌ನ ಅಭಿವೃದ್ಧಿಗಾಗಿ ಬಿಸಿಸಿಐ ಭವಿಷ್ಯದಲ್ಲಿ ಯಾವ್ಯಾವ ಯೋಜನೆ ಹಾಕಿಕೊಳ್ಳಲಿದೆ?

ನಾವು ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಿದ್ದೇವೆ. ಆಟಗಾರರ ಕಲ್ಯಾಣ ಯೋಜನೆ ನಿಟ್ಟಿನಲ್ಲಿ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ. ಜೊತೆಗೆ ಕ್ರಿಕೆಟ್‌ನ ಒಟ್ಟಾರೆ ಅಭಿವೃದ್ಧಿಯ ನಿಟ್ಟಿನಲ್ಲಿ ಬಿಸಿಸಿಐ ಹಲವು ಯೋಜನೆಗಳನ್ನು ಸಿದ್ಧಪಡಿಸಿದೆ. ಅದರ ವಿವರಗಳನ್ನು ನೀಡಲು ಇದು ಸಕಾಲವಲ್ಲ.

ಐಸಿಎಲ್ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಐಸಿಎಲ್ ಏನೂ ಅಲ್ಲ. ಹಾಗಿರುವಾಗ ಅದರ ಬಗ್ಗೆ ನಾನು ಏನನ್ನು ಹೇಳಲು ಸಾಧ್ಯ? ಸುಮ್ಮನೇ ಅದನ್ನು ಕಡೆಗಣಿಸುವುದು ಒಳಿತು.

ಐಸಿಎಲ್ ಹಣದ ಹೊಳೆಯನ್ನೇ ಹರಿಸುತ್ತಿದೆ. ಈ ಸವಾಲನ್ನು ಬಿಸಿಸಿಐ ಹೇಗೆ ಎದುರಿಸಲಿದೆ?

ಪ್ರತಿಯೊಂದನ್ನೂ ಹಣದಿಂದಲೇ ಅಳೆಯಲಾಗುವುದಿಲ್ಲ. ಐಸಿಎಲ್ ಎನ್ನುವುದು ಒಂದು ಭ್ರಮೆಯಷ್ಟೆ. ನಾವು ಆ ಭ್ರಮೆಯ ನಿಜ ರೂಪ. ಕ್ರಿಕೆಟ್‌ನ ಮಟ್ಟಿಗೆ ಹೇಳುವುದಾದರೆ ಬಿಸಿಸಿಐ ಒಂದು ಅಧಿಕೃತ ಮಂಡಳಿ. ಕೇವಲ ಹಣ ಬಲದಿಂದಲೇ ಎಲ್ಲವನ್ನೂ ಬದಲಾಯಿಸಲು ಸಾಧ್ಯವಾಗುವುದಿಲ್ಲ.

ಐಸಿಎಲ್‌ಗಿಂತ ಐಪಿಎಲ್ ಟೂರ್ನಿಯನ್ನು ಇನ್ನೂ ಆಕರ್ಷಕವಾಗಿ ಮಾಡಲು ಬಿಸಿಸಿಐ ಯಾವ ತಯಾರಿ ನಡೆಸಿದೆ?

ನೋಡಿ, ಐಸಿಎಲ್‌ನಲ್ಲಿ ಆಡುತ್ತಿರುವವರು ಎಲ್ಲ ನಿವೃತ್ತ ಹಾಗೂ ನಿವೃತ್ತಿಯ ಅಂಚಿನಲ್ಲಿರುವ ಆಟಗಾರರು. ಐಪಿಎಲ್‌ನಲ್ಲಿ ಸದ್ಯ ಅಂತರ್ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಅಪ್ಪಟ ಪ್ರತಿಭೆಗಳು ಆಡಲಿವೆ.

ಮುಂಬರುವ ಟ್ವೆಂಟಿ-20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಮೂಲಸೌಲಭ್ಯಗಳ ಅಭಿವೃದ್ಧಿಗಾಗಿ ಯಾವುದಾದರೂ ಯೋಜನೆ ಹಾಕಿಕೊಳ್ಳಲಿದೆಯೇ?

ಮೊದಲೇ ಹೇಳಿದಂತೆ ಬಿಸಿಸಿಐ ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲು ಸಿದ್ಧವಾಗಿದೆ. ಭಾರತದಲ್ಲಿರುವ ಯುವ ಪ್ರತಿಭೆಗಳನ್ನು ಕ್ರಿಕೆಟ್ ಜಗತ್ತಿಗೆ ಪರಿಚಯಿಸಲು ಬಿಸಿಸಿಐ ಗಂಭೀರ ಪ್ರಯತ್ನಗಳನ್ನು ಮಾಡಲಿದೆ.

ಯಾವುದಾದರೂ ಐಸಿಎಲ್ ಆಟಗಾರ ಅದನ್ನು ಬಿಟ್ಟು ಬಂದರೆ, ಅವನಿಗೆ ಐಪಿಎಲ್‌ನಲ್ಲಿ ಆಡಲು ಅವಕಾಶ ನೀಡಲಾಗುವುದೇ?

(ಹ್ಹ..ಹ್ಹ...ಹ್ಹ...) ನನ್ನ ಜೊತೆ ಮಾತನಾಡಿದ್ದಕ್ಕೆ ಧನ್ಯವಾದಗಳು.


"ಐಸಿಎಲ್ ಜೊತೆ ಯಾವುದೇ ಸ್ಪರ್ಧೆ ಇಲ್ಲ"
ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಟಿಎಸ್‌ಐನ ರಾಜನ್ ಪ್ರಕಾಶ್‌ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಸದ್ಯ ಕೋಚ್ ಇಲ್ಲದ ಭಾರತ ತಂಡ ಉತ್ತಮ ಪ್ರದರ್ಶನವನ್ನೇ ನೀಡುತ್ತಿದೆ. ತಂಡದ ಹಿರಿಯ ಆಟಗಾರರು ಕೋಚ್‌ಗಿಂತ ನಾಯಕನ ಸ್ಥಾನವೇ ಪ್ರಮುಖವಾದದ್ದು ಎಂದು ಹೇಳುತ್ತಿದ್ದಾರೆ. ಹಾಗಿರುವಾಗ ಬಿಸಿಸಿಐ ಕೋಚ್ ನೇಮಕ ಮಾಡಿದ್ದೇಕೆ?
ಭಾರತ ಕ್ರಿಕೆಟ್ ತಂಡ ಕೋಚ್ ಇಲ್ಲದೇ ಆಡುತ್ತಿದೆ ಎಂಬ ವಾದವನ್ನು ನಾನು ಒಪ್ಪುವುದಿಲ್ಲ. ಲಾಲ್‌ಚಂದ್ ರಜಪೂತ್ ತಂಡದ ಸಹಾಯಕ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಬಿನ್ ಸಿಂಗ್ ಮತ್ತು ಬಿ.ಕೆ.ವೆಂಕಟೇಶ್ ಪ್ರಸಾದ್ ತಂಡದ ಫೀಲ್ಡಿಂಗ್ ಮತ್ತು ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲ ಕೋಚಿಂಗ್ ವಿಭಾಗದ ಮೇಲ್ವಿಚಾರಣೆ ಹೊತ್ತಿದ್ದಾರೆ. ಈಗ ನಾವು ನೇಮಕ ಮಾಡಿರುವುದು ತಂಡದ ಮುಖ್ಯ ಕೋಚ್‌ನನ್ನು. ಆತ ಒಟ್ಟಾರೆ ಪ್ರದರ್ಶನ ಉತ್ತಮವಾಗುವ ನಿಟ್ಟಿನಲ್ಲಿ ಅನುಭವವನ್ನು ಧಾರೆಯೆರೆಯಲಿದ್ದಾನೆ.
ವಿದೇಶಿ ಕೋಚ್ ಅಗತ್ಯವೇನು?
ಪ್ರತಿ ಸಂದರ್ಭದಲ್ಲಿಯೂ ಈ ವಿಷಯವನ್ನು ಅನಗತ್ಯವಾಗಿ ದಾರಿ ತಪ್ಪಿಸಲಾಗುತ್ತಿದೆ. ಒಬ್ಬ ಕೋಚ್ ನೇಮಕ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಆತ ಕರಿಯನೋ ಅಥವಾ ಬಿಳಿಯನೋ, ದೇಶದವನೋ ಅಥವಾ ಪರದೇಶದವನೋ ಎನ್ನುವುದು ಮುಖ್ಯವಾಗುವುದಿಲ್ಲ. ಆತನ ಪ್ರತಿಭೆ ಮುಖ್ಯವಾಗುತ್ತದೆ. ಇನ್ನು ದೇಶಿ ಮತ್ತು ವಿದೇಶಿ ವಿಷಯವನ್ನು ಅಗತ್ಯಕ್ಕಿಂತ ದೊಡ್ಡದಾಗಿ ಮಾಡಿದ್ದು ಗ್ರೆಗ್ ಚಾಪೆಲ್ ಅವರನ್ನು ಭಾರತ ತಂಡದ ಕೋಚ್ ಆಗಿ ನೇಮಕ ಮಾಡಿದ ನಂತರ. ಆರಂಭದ ದಿನಗಳಲ್ಲಿ ಚಾಪೆಲ್ ಬಗ್ಗೆ ಎಲ್ಲರೂ ಒಳ್ಳೆಯ ಮಾತುಗಳನ್ನೇ ಹೇಳುತ್ತಿದ್ದರು. ಅವರ ನೇತೃತ್ವದಲ್ಲಿಯೇ ಭಾರತ ತಂಡ ಪಾಕಿಸ್ತಾನದಲ್ಲಿ ಆ ತಂಡದ ವಿರುದ್ಧ ಸರಣಿ ಗೆದ್ದಿತು. ಆನಂತರ ಆದ ಘಟನೆಗಳು ಮಾತ್ರ ವಿಷಾದನೀಯ.
ಭಾರತದಲ್ಲಿ ಕ್ರಿಕೆಟ್ ಈಗ ಒಂದು ಕ್ರೀಡೆಯಾಗಿ ಉಳಿದಿಲ್ಲ. ಬದಲಾಗಿ ಅದೊಂದು ಧರ್ಮವಾಗಿ ಪರಿವರ್ತನೆಗೊಂಡಿದೆ. ಇಂತಹ ಸೂಕ್ಷ್ಮ ಸನ್ನಿವೇಶದಲ್ಲಿ ಒಬ್ಬ ಭಾರತೀಯ ಕೋಚ್ ಹುಡುಕಲು ಆಗುತ್ತಿರಲಿಲ್ಲವೇ?
ಬಿಸಿಸಿಐ ಈ ನಿಟ್ಟಿನಲ್ಲಿ ಆಸಕ್ತಿ ಹೊಂದಿಲ್ಲ ಎಂದು ಯಾರು ಹೇಳಿದರು? ನಮಗೆ ಕೂಡ ಸಮರ್ಥ ಭಾರತೀಯ ಮೂಲದ ಕೋಚ್ ನೇಮಕ ಮಾಡುವ ಹಂಬಲ ಇದೆ. ಉದಾಹರಣೆಗೆ ರವಿ ಶಾಸ್ತ್ರಿ ಅಥವಾ ಸುನಿಲ್ ಗಾವಸ್ಕರ್ ಅವರಂತಹ ಸಮರ್ಥರು. ನಾವು ಭಾರತ ತಂಡದ ಕೋಚ್ ಆಗಿ ಎಂದು ರವಿ ಶಾಸ್ತ್ರಿ ಅವರನ್ನು ಕೇಳಿಕೊಂಡಿದ್ದೆವು. ಆದರೆ, ಬೇರೆ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ಜವಾಬ್ದಾರಿ ಹೊರಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.
ಭಾರತೀಯ ಕ್ರಿಕೆಟ್ ರಾಜಕಾರಣದಿಂದ ಪ್ರತಿಯೊಬ್ಬರೂ ದೂರ ಇರಲು ಬಯಸುತ್ತಿದ್ದಾರಲ್ಲಾ? ಒಬ್ಬ ವಿದೇಶಿ ಕೋಚ್ ನೇಮಕ ಮಾಡಿದರೆ ತಂಡದೊಳಗಿನ ರಾಜಕೀಯ ಮಟ್ಟ ಹಾಕಬಹುದು ಎಂಬ ಯೋಚನೆ ಬಿಸಿಸಿಐದ್ದಲ್ಲವೇ?
ಅದು ಹಾಗಲ್ಲ. ಯಾವುದೇ ಒಬ್ಬ ವಿದೇಶಿ ಆಟಗಾರನಿಗೆ ಕೋಚ್ ಸ್ಥಾನ ನೀಡುವ ಮೊದಲು ಅವರು ಆ ಜವಾಬ್ದಾರಿ ಹೊರಲು ಅರ್ಹರೇ? ಎಂದು ನಾವು ಗಂಭೀರವಾಗಿ ಯೋಚಿಸಿ ನಿರ್ಧಾರಕ್ಕೆ ಬಂದಿರುತ್ತೇವೆ. ಆಧುನಿಕ ಕೋಚಿಂಗ್ ತಂತ್ರಗಳ ಪರಿಜ್ಞಾನ ಇರುವ ಕೋಚ್‌ಗಳನ್ನು ಮಾತ್ರ ನಾವು ಆಯ್ಕೆಗೆ ಪರಿಗಣಿಸುತ್ತೇವೆ. ಕ್ರಿಕೆಟ್‌ನ ಪರಿಕಲ್ಪನೆ ಮತ್ತು ತಂತ್ರದಲ್ಲಿ ಈಗ ಸಾಕಷ್ಟು ನೂತನ ಬದಲಾವಣೆಗಳು ಆಗಿವೆ. ಅದನ್ನು ಕೋಚ್ ಆಗುವ ವ್ಯಕ್ತಿ ಸಂಪೂರ್ಣವಾಗಿ ಅರಿತುಕೊಂಡಿರಬೇಕು. ಮಾತ್ರವಲ್ಲ ಇಂದಿನ ವೇಗದ ಬದುಕಿನಲ್ಲಿ ಪರಿಸ್ಥಿತಿಗೆ ತತ್‌ಕ್ಷಣ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಆತ ಹೊಂದಿರಬೇಕು.
ಹಾಗಿದ್ದರೆ ಅನುಭವ?
ಅದು ಅತ್ಯಂತ ಪ್ರಮುಖವಾದ ವಿಷಯ. ನನಗೆ ಗೊತ್ತಿರುವ ಪ್ರಕಾರ ಅನುಭವ ಇಲ್ಲದ ಯಾರೂ ಭಾರತ ತಂಡದ ಕೋಚ್ ಆಗಲು ಪ್ರಯತ್ನ ಮಾಡಿಲ್ಲ. ಬಿಸಿಸಿಐ ಅಂತಹವರನ್ನು ಪರಿಗಣಿಸಿಲ್ಲ.
ಹಾಗಿದ್ದರೆ ಗ್ಯಾರಿ ಕರ್ಸ್ಟನ್‌ಗೆ ಯಾವ ಅನುಭವ ಇದೆ?
ಒಬ್ಬ ಆಟಗಾರನಾಗಿ ಅವರಿಗೆ ಭಾರಿ ಪ್ರಮಾಣದ ಅನುಭವ ಇದೆ. ಇನ್ನು ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ತಂಡಗಳ ತರಬೇತುದಾರರಾಗಿ ಕೂಡ ಅವರು ಕಾರ್ಯ ನಿರ್ವಹಿಸಿದ್ದಾರೆ.
ಆದರೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಯಾವುದೇ ಅನುಭವ ಇಲ್ಲವಲ್ಲಾ?
ಅವರಲ್ಲಿನ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಟೂರ್ನಿಗಳು ನಮ್ಮ ಗುರಂಗಾವ್ ಕ್ರಿಕೆಟ್ ಕ್ಲಬ್ ಟೂರ್ನಿಗಳಂತೆ ಇರುವುದಿಲ್ಲ. ಅವು ಅಂತರ್ ರಾಷ್ಟ್ರೀಯ ಮಟ್ಟದಷ್ಟೇ ಗಂಭೀರ ಟೂರ್ನಿಗಳಾಗಿರುತ್ತವೆ. ಅವುಗಳ ಗುಣಮಟ್ಟ ಅತ್ಯುತ್ತಮವಾಗಿರುತ್ತವೆ. ಜಾನ್ ರೈಟ್ ಅವರು ಭಾರತ ತಂಡದ ಕೋಚ್ ಆಗಿ ಆಯ್ಕೆಯಾದ ಸಂದರ್ಭದಲ್ಲಿ ಕೂಡ ಅವರಿಗೆ ಯಾವುದೇ ಅಂತರ್ ರಾಷ್ಟ್ರೀಯ ಅನುಭವ ಇರಲಿಲ್ಲ. ಆದರೆ, ಅವರ ಅವಧಿಯಲ್ಲಿಯೇ ಭಾರತ ತಂಡ ಮಹತ್ತರ ಸಾಧನೆಗಳನ್ನು ಮಾಡಿತು.
ಇನ್ನು ಭಾರತ ತಂಡದ ಆಟಗಾರರ ಬಗ್ಗೆ. ಆಟಗಾರರ ಪ್ರಾಯೋಜಕತ್ವ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಸಾಕಷ್ಟು ಟೀಕೆ ಮಾಡಲಾಗುತ್ತದೆ. ಆದರೆ, ಬಿಡುವಿಲ್ಲದ ವೇಳಾಪಟ್ಟಿಯ ಬಗ್ಗೆ ಯಾರೂ ಮಾತನಾಡುವುದಿಲ್ಲ ಎಂಬ ಟೀಕೆಯಿದೆಯಲ್ಲಾ?
ಹೌದು. ಬಿಡುವಿಲ್ಲದ ವೇಳಾಪಟ್ಟಿ ಆಟಗಾರರ ಪಾಲಿಗೆ ಮಾರಕವಾಗುತ್ತಿದೆ. ಆದರೆ ನಾವು ಅಂತರ್ ರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಐಸಿಸಿ)ಯ ನೀತಿ-ನಿಯಮಗಳಿಗೆ ಬದ್ಧವಾಗಿರಬೇಕು. ಈಗ ಆ ಸಮಸ್ಯೆಗೆ ಒಂದು ಪರಿಹಾರ ಹುಡುಕುವ ಯತ್ನ ನಡೆಯುತ್ತಿದೆ. ಬಿಸಿಸಿಐ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ೩೫ ಆಟಗಾರರ ಪಟ್ಟಿಯನ್ನು ಸದಾ ತನ್ನ ಬಳಿ ಇಟ್ಟುಕೊಂಡಿರುತ್ತದೆ. ಯಾವುದೇ ಒಬ್ಬ ಆಟಗಾರ ವೈಯಕ್ತಿಕ ಕಾರಣ ಅಥವಾ ಗಾಯಾಳುವಾಗಿ ಹೊರ ಹೋದಲ್ಲಿ ತಕ್ಷಣ ಬದಲಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುವುದು. ತಂಡವನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ನಾವು ಈ ವಿಷಯವನ್ನು ಸದಾ ಗಮನದಲ್ಲಿ ಇಟ್ಟುಕೊಂಡಿರುತ್ತೇವೆ.
ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ದಿಲೀಪ್ ವೆಂಗ್‌ಸರ್ಕಾರ್ ಪತ್ರಿಕೆಗಳಲ್ಲಿ ಅಂಕಣ ಬರೆದ ಬಗ್ಗೆ ಅಷ್ಟೆಲ್ಲ ಏಕೆ ಗಲಾಟೆ ನಡೆಯಿತು? ನ್ಯಾಯ ಮಾರ್ಗದಲ್ಲಿ ಅವರು ಅಂಕಣ ಬರೆದು ಹಣ ಗಳಿಸುವುದು ತಪ್ಪೇ?
ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ-ಸದಸ್ಯರು ಮತ್ತು ಆಟಗಾರರ ಮಟ್ಟಿಗೆ ಅದು ಅಷ್ಟು ಸರಳ ವಿಷಯವಲ್ಲ. ಒಬ್ಬ ಆಯ್ಕೆ ಸಮಿತಿ ಸದಸ್ಯ ಅಂಕಣ ಬರೆಯುತ್ತಾನೆ ಎಂದಾದ ಕೂಡಲೇ ಆತ ಅನಿವಾರ್ಯವಾಗಿ ಕೆಲವು ವಿಷಯಗಳನ್ನು ಬಹಿರಂಗ ಪಡಿಸಲೇಬೇಕಾಗುತ್ತದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಸಂಬಂಧಿಸಿದವರು ಅಂಕಣ ಬರೆಯುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಈ ಹಿಂದೆ ಯಾವುದೇ ಒಬ್ಬ ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಪತ್ರಿಕೆಗೆ ಅಂಕಣ ಬರೆದ ಉದಾಹರಣೆ ಇಲ್ಲ. ಅಧ್ಯಕ್ಷರೇ ಬಹಿರಂಗವಾಗಿ ತಂಡ ಮತ್ತು ತಂಡದ ಒಳಗಿನ ವಿಷಯಗಳ ಬಗ್ಗೆ ಟೀಕೆ-ಟಿಪ್ಪಣಿ ಮಾಡುವುದು ಅರ್ಥವಿಲ್ಲದ್ದು. ನಿಜ. ಈವರೆಗೆ ನಾವು ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರಿಗೆ ಯಾವುದೇ ಸಂಬಳ ನೀಡುತ್ತಿರಲಿಲ್ಲ. ಮುಂಬರುವ ಸೆಪ್ಟೆಂಬರ್‌ನಿಂದ ಅವರಿಗೆ ಕೂಡ ಸಂಬಳ ನೀಡುತ್ತೇವೆ. ಆನಂತರ ಯಾವುದೇ ಆಯ್ಕೆ ಸಮಿತಿ ಸದಸ್ಯ ಹಣಕಾಸಿನ ಮುಗ್ಗಟ್ಟು ಎದುರಿಸಬೇಕಾದ ಅಗತ್ಯವಿರುವುದಿಲ್ಲ. ವೆಂಗ್‌ಸರ್ಕಾರ್ ವಿಷಯದಲ್ಲಿ ಕೂಡ ನಾವು ಪರಿಹಾರ ಕೊಡಲು ಸಿದ್ಧರಿದ್ದೇವೆ ಎಂದು ತಿಳಿಸಿಯಾಗಿತ್ತು. ಆನಂತರ ಕೂಡ ಅವರು ಅಗತ್ಯಕ್ಕಿಂತ ದೊಡ್ಡ ವಿವಾದ ಸೃಷ್ಟಿಸಿದರು.
ಹಾಗಿದ್ದರೆ ಬಿಸಿಸಿಐ ವೆಂಗ್‌ಸರ್ಕಾರ್‌ಗೆ ಕೊಕ್ ನೀಡಲಿದೆ?
ನೀವು ರಾಜೀನಾಮೆ ನೀಡಿ ಎಂದು ನಾವು ಯಾವತ್ತೂ ಹೇಳಿಲ್ಲ. ನೀತಿ-ನಿಯಮಗಳಿಗೆ ಬದ್ಧರಾಗಿದ್ದು ಅವರು ಅವರ ಸ್ಥಾನದಲ್ಲಿ ಮುಂದುವರಿಯಬಹುದು.
ಐಸಿಎಲ್ ಸೇರಿದ ಆಟಗಾರರ ಪಾಲಿಗೆ ಬಿಸಿಸಿಐ ಬಾಗಿಲು ಸಂಪೂರ್ಣ ಮುಚ್ಚಿ ಹೋಗಿಲ್ಲ ಎಂದು ನೀವು ಹೇಳಿದ್ದಿರಿ. ಅದು ಬಿಸಿಸಿಐನ ಸಾಮಾನ್ಯ ನಿಲುವಿಗೆ ವಿರುದ್ಧವಾದ ನಿಮ್ಮ ವೈಯಕ್ತಿಕ ನಿಲುವಂತೆ ಕಂಡು ಬಂದಿತ್ತು. ಈಗ ಕೂಡ ನಿಮ್ಮ ನಿಲುವಿಗೆ ಬೇರೆಯವರಿಂದ ಬೆಂಬಲ ಇದೆಯೇ?
ಅದು ಬ್ರಯಾನ್ ಲಾರಾ ಅವರಿಗೆ ಸಂಬಂಧಿಸಿದಂತೆ ಮಾತ್ರ ನಾನು ನೀಡಿದ ಹೇಳಿಕೆಯಾಗಿತ್ತು. ಅವರು ಮರಳಿ ಬರುವ ಬಯಕೆ ವ್ಯಕ್ತ ಪಡಿಸಿದಲ್ಲಿ ಐಸಿಸಿ ಆ ಬಗ್ಗೆ ಗಂಭೀರ ಚಿಂತನೆ ಮಾಡಲೇಬೇಕಾಗುತ್ತದೆ. ಈ ಕುರಿತು ಬಿಸಿಸಿಐನಲ್ಲಿ ಯಾವುದೇ ಒಮ್ಮತದ ನಿರ್ಣಯ ಇದುವರೆಗೆ ಮೂಡಿಲ್ಲ. ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆ ನಡೆಸಬೇಕು ಎಂದು ಹಲವರು ಹೇಳುತ್ತಿದ್ದಾರೆ.
ಬಿಸಿಸಿಐ ಮತ್ತು ಐಸಿಎಲ್ ನಡುವೆ ಒಂದು ಆರೋಗ್ಯಕರ ಸ್ಪರ್ಧೆ ಏರ್ಪಡಿಸಲು ಸಾಧ್ಯವಿಲ್ಲವೇ?
ಬಿಸಿಸಿಐ ಮತ್ತು ಐಸಿಎಲ್ ನಡುವೆ ಯಾವುದೇ ಸ್ಪರ್ಧೆಯಿಲ್ಲ. ಏನಿದ್ದರೂ ಅವರು ಅವರ ಕೆಲಸ ಮಾಡುತ್ತಾರೆ. ನಾವು ನಮ್ಮ ಕೆಲಸ ಮಾಡುತ್ತೇವೆ. ಈ ದೇಶದ ಕ್ರಿಕೆಟ್ ಪ್ರೇಮಿಗಳಿಗೆ ಯಾರ ಕೆಲಸದ ಬಗ್ಗೆ ತೃಪ್ತಿಯಾಗುತ್ತದೋ ಅವರು ಮುಂದುವರಿಯುತ್ತಾರೆ.
ರಾಜಕಾರಣಿಗಳ ರಂಗ ಪ್ರವೇಶದಿಂದ ಕ್ರೀಡೆಗೆ ಯಾವುದಾದರೂ ಒಳಿತಾಗುವುದೇ?
ರಾಜಕಾರಣಿ ಅಥವಾ ರಾಜಕಾರಣಿಯಲ್ಲದವ ಎನ್ನುವುದು ಮುಖ್ಯವಲ್ಲ. ಯಾರಿಗೆ ಈ ಕ್ರೀಡೆಯ ಬಗ್ಗೆ ಎಷ್ಟು ಕಾಳಜಿ ಇದೆ ಎನ್ನುವುದು ಮುಖ್ಯವಾದ ವಿಷಯ. ಬೇರೆ, ಬೇರೆ ಕ್ಷೇತ್ರದಲ್ಲಿ ಕಾರ್ಯ ನಿರತರಾಗಿರುವ ವ್ಯಕ್ತಿಗಳಿಗೆ ಈ ಕ್ರೀಡೆಯ ಬಗ್ಗೆ ಆಸಕ್ತಿ ಮತ್ತು ಕಾಳಜಿ ಇದ್ದು ಅವರು ಇಲ್ಲಿಗೆ ಬಂದರೆ ಅದರಿಂದ ಕ್ರಿಕೆಟ್‌ಗೆ ಲಾಭವೇ ಆಗುತ್ತದೆ. ಆ ನಿಟ್ಟಿನಲ್ಲಿ ಬಿಸಿಸಿಐ ಬೇರೆ, ಬೇರೆ ಕ್ಷೇತ್ರದಿಂದ ಸಾಕಷ್ಟು ಲಾಭವನ್ನೇ ಮಾಡಿಕೊಂಡಿದೆ. ಜಗಮೋಹನ್ ದಾಲ್ಮಿಯ ಒಬ್ಬ ಉದ್ಯಮಿಯಾಗಿದ್ದರು. ಎನ್.ಕೆ.ಪಿ.ಸಾಳ್ವೆ ಮತ್ತು ಶರದ್ ಪವಾರ್ ರಾಜಕೀಯ ಲೋಕಕ್ಕೆ ಸೇರಿದವರು. ಐ.ಎಸ್.ಬಿಂದ್ರಾ ಆಡಳಿತಶಾಹಿ ವಲಯಕ್ಕೆ ಸೇರಿದವರು. ನನ್ನ ಬಗ್ಗೆ ನೀವು ಏನು ಯೋಚಿಸುತ್ತೀದ್ದೀರಿ? ಇವನು ರಾಜಕಾರಣಿಯೇ ಅಥವಾ ಪತ್ರಕರ್ತನೇ? ಅಂತಾ ಅಲ್ಲವಾ? ನಾವೆಲ್ಲ ಕ್ರಿಕೆಟ್‌ನ ಒಳಿತಿಗಾಗಿ ಶ್ರಮಿಸುತ್ತಿದ್ದೇವೆ. ಹೀಗೆ ಬೇರೆ ಎಲ್ಲ ಕ್ಷೇತ್ರಗಳಿಂದ ಕ್ರೀಡಾಳಿತ ಕ್ಷೇತ್ರಕ್ಕೆ ಜನರು ಬರಬೇಕು ಎನ್ನುವುದೇ ನನ್ನ ಬಯಕೆ. ನೀವು ಎಲ್ಲಿಂದ ಬಂದಿರಿ ಎನ್ನುವುದು ಇಲ್ಲಿ ಮುಖ್ಯವಾಗುವುದಿಲ್ಲ. ಬದಲಾಗಿ ನೀವು ಎಷ್ಟು ಬದ್ಧತೆಯನ್ನು ಹೊಂದಿದ್ದೀರಿ ಎನ್ನುವುದು ಮುಖ್ಯ. ಇದಕ್ಕೊಂದು ತದ್ವಿರುದ್ಧ ಉದಾಹರಣೆ ಕೊಡುತ್ತೇನೆ. ಕೆ.ಪಿ.ಎಸ್.ಗಿಲ್ ಅವರು ಮೂಲತಃ ರಾಜಕಾರಣಿ ಅಲ್ಲ. ಆದರೂ, ಅವರು ನಮ್ಮ ದೇಶದಲ್ಲಿ ಹಾಕಿಯನ್ನು ನಿರ್ನಾಮ ಮಾಡಿಲ್ಲವೇ? ಕೇವಲ ಮಾಜಿ ಆಟಗಾರರು ಆಯಾ ಕ್ರೀಡಾಳಿತದ ಹೊಣೆ ಹೊತ್ತು ಕೊಳ್ಳಬೇಕು ಎಂಬುದು ಅರ್ಥವಿಲ್ಲದ ಮಾತು.
ವಲಯಾಧರಿತ ಆಯ್ಕೆ ಪ್ರಕ್ರಿಯೆ ಬಗ್ಗೆ ಚಿಂತನೆ ಮಾಡಲು ಇದು ಸಕಾಲ ಎಂದೆನ್ನಿಸುತ್ತಿಲ್ಲವೇ?
ಇದು ಚರ್ಚೆಯಾಗಬೇಕಾದ ವಿಷಯ. ಕೆಲವರು ಇದು ಒಳ್ಳೆಯ ಪ್ರಕ್ರಿಯೆ ಎನ್ನುತ್ತಾರೆ. ಇನ್ನು ಕೆಲವರು ಇದು ಸರಿಯಲ್ಲ ಎನ್ನುತ್ತಾರೆ. ದೇಶದ ಉದ್ದಗಲದಲ್ಲಿ ಇರುವ ಅರ್ಹ ಪ್ರತಿಭಾವಂತ ಯುವ ಆಟಗಾರನನ್ನು ಹುಡುಕಿ ತೆಗೆಯುವುದು ಅಷ್ಟು ಸುಲಭದ ಕೆಲಸವಲ್ಲ. ಬಿಸಿಸಿಐ ಕೂಡ ಈ ಬಗ್ಗೆ ಗಂಭೀರ ಚಿಂತನೆ ಮಾಡುತ್ತಿದೆ.
ಭಾರತದ ಮಟ್ಟಿಗೆ ಹೇಳುವುದಾದರೆ ಕ್ರಿಕೆಟ್ ಒಂದು ದೊಡ್ಡ ಯಶಸ್ಸು. ಆದರೆ, ಮಹಿಳಾ ಕ್ರಿಕೆಟ್ ದುಸ್ಥಿತಿ ಬಗ್ಗೆ?
ಈಗ ಬಿಸಿಸಿಐ ಮಹಿಳಾ ಕ್ರಿಕೆಟ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆ ಕ್ಷೇತ್ರದಲ್ಲೂ ಅಗತ್ಯವಾದ ಬದಲಾವಣೆಗಳನ್ನು ಮಾಡಲಾಗುವುದು. ಎಲ್ಲ ರಾಜ್ಯಗಳ ಕ್ರಿಕೆಟ್ ಆಯೋಗಕ್ಕೆ ಮಹಿಳಾ ಕ್ರಿಕೆಟ್ ಮೇಲೆ ಹದ್ದಿನಗಣ್ಣು ಹಾಕಿ ಎಂದು ಹೇಳಲಾಗಿದೆ. ಆಯ್ಕೆ ಪ್ರಕ್ರಿಯೆ ಮತ್ತು ಟೂರ್ನಿಗಳನ್ನು ವ್ಯವಸ್ಥೆ ಮಾಡುವಲ್ಲಿ ಸಾಕಷ್ಟು ಸುಧಾರಣೆ ಮಾಡಬೇಕು ಎಂದು ಆದೇಶಿಸಲಾಗಿದೆ. ಮಹಿಳಾ ಕ್ರಿಕೆಟ್‌ನ ಅಭಿವೃದ್ಧಿಗೆ ಬಿಸಿಸಿಐ ಸೂಕ್ತ ಕ್ರಮ ಕೈಗೊಳ್ಳಲಿದೆ. ಸದ್ಯದಲ್ಲಿಯೇ ಮಹಿಳಾ ಕ್ರಿಕೆಟ್ ಕೂಡ ಯಶಸ್ಸಿನ ಹಾದಿಯಲ್ಲಿ ಮುನ್ನುಗ್ಗಲಿದೆ.

ಟಿಎಸ್‌ಐ

 

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .