ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಪ್ರಸ್ತುತ : ರಾಜ್ಯ ರಾಜಕೀಯ

ರಾಜಕೀಯ ಧ್ರುವೀಕರಣ ಇದು ಸಕಾಲ

 

ಕಿಲುಬುಗಟ್ಟಿರುವ ಕರ್ನಾಟಕದ ರಾಜಕೀಯದ ಕೊಳೆಯನ್ನು ರಾಷ್ಟ್ರಪತಿ ಆಡಳಿತ ಎಂಬ ಸೋಪು ತೊಳೆದು ಹಾಕುವುದೇ? ಈ ಪ್ರಶ್ನೆಗೆ ಉತ್ತರ ಹುಡುಕುವ ಯತ್ನವನ್ನು ಇಲ್ಲಿ ಶಶಿ ಸಂಪಳ್ಳಿ ಮಾಡಿದ್ದಾರೆ.

ಕಳೆದ ಬುಧವಾರ ಕೊನೆಗೂ ಕರ್ನಾಟಕಕ್ಕೆ ಹಿಡಿದಿದ್ದ ಭೀಕರ ರಾಜಕೀಯ ಶನಿ ಬಿಟ್ಟಿದೆ. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ರಾಜ್ಯ ವಿಧಾನಸಭೆಯನ್ನು ಅಧಿಕೃತವಾಗಿ ವಿಸರ್ಜಿಸುವ ಮೂಲಕ ಹಲವಾರು ತಿಂಗಳಿಂದ ನಡೆಯುತ್ತಿದ್ದ ಹೀನಾಯ ರಾಜಕೀಯ ನಾಟಕಕ್ಕೆ ಅಂತಿಮ ತೆರೆ ಎಳೆದಿದ್ದಾರೆ. ರಾಜ್ಯ ಈಗ ಅಧಿಕೃತವಾಗಿ ರಾಷ್ಟ್ರಪತಿ ಆಡಳಿತಕ್ಕೆ ಒಳಪಟ್ಟಿದೆ. ನೆಮ್ಮದಿಯ ವಿಷಯವೆಂದರೆ ನೂರು ದಿನಗಳಿಗಿಂತ ಹೆಚ್ಚು ಕಾಲ ಎಲ್ಲ ತತ್ವ ಸಿದ್ಧಾಂತಗಳನ್ನೂ ಗಾಳಿಗೆ ತೂರಿ ರಾಜಕೀಯ ಪ್ರಹಸನ ಮಾಡಿದ್ದ ಶಾಸಕ ಮಹಾಶಯರು ಈಗ ಮಾಜಿಗಳಾಗಿರುವುದು! ಇನ್ನೇನಿದ್ದರೂ 'ಪ್ರಜಾಪ್ರಭುತ್ವ.' ಆದರೆ, ನಮ್ಮ ಪ್ರಜಾ ಮಹಾಶಯರು ಮುಂಬರುವ ಚುನಾವಣೆಯಲ್ಲಾದರೂ ಈ ನೀತಿಗೆಟ್ಟವರಿಗೆ ಪಾಠ ಕಲಿಸಲಿದ್ದಾರೆಯೇ? ಎನ್ನುವುದು ಈಗ ಮಿಲಿಯನ್ ಡಾಲರ್ ಪ್ರಶ್ನೆ.
ಇಂತಹ ರಾಜಕೀಯ ಸಂದಿಗ್ಧದ ಸಂದರ್ಭದಲ್ಲಿ ರಾಜ್ಯದಲ್ಲಿನ ಮೂರೂ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿರುವುದು ಒಂದು ಒಳ್ಳೆಯ ಸಂಕೇತವೇ ಆಗಿದೆ. ಮುಖ್ಯವಾಗಿ ಕರ್ನಾಟಕದ ರಾಜಕೀಯದ ಬಗ್ಗೆ ಇಡೀ ದೇಶವೇ ಛಿ! ಥೂ! ಎನ್ನಲು ಕಾರಣವಾದ ಎಚ್.ಡಿ. ದೇವೇಗೌಡರ ಪಕ್ಷ ಜೆಡಿ(ಎಸ್)ನಲ್ಲಿ ಭಿನ್ನಮತದ ಅಲೆಯೆದ್ದಿದೆ. ಅದೂ, ಪರಮಾಪ್ತ, ಆಪತ್ಬಾಂಧವ ಎಂ.ಪಿ. ಪ್ರಕಾಶ್ ಅವರಿಂದಲೇ! ಜೆಡಿ(ಎಸ್)- ಬಿಜೆಪಿ ಮರುಮದುವೆ ಆಗುವ ಕೆಲವೇ ದಿನಗಳ ಮುಂಚೆ ಕೂಡ ಪ್ರಕಾಶ್ ಬಂಡಾಯದ ಕಹಳೆ ಮೊಳಗಿಸಿ ಕಾಂಗ್ರೆಸ್ ಸಖ್ಯಕ್ಕೆ ಮುಂದಾಗಿದ್ದರು. ಅದಕ್ಕೆ ದೇವೇಗೌಡರ ಆದೇಶವೇ ಕಾರಣ ಎಂದು ಪ್ರಕಾಶ್ ಈಗ ಬಾಯ್ಬಿಟ್ಟಿದ್ದಾರೆ. ಅದೇ ಪ್ರಕಾಶ್ ಈಗ ಪಕ್ಷದಲ್ಲಿನ ಗೌಡರ ನಿರಂಕುಶ ಪ್ರಭುತ್ವದ ವಿರುದ್ಧ ಸಮರ ಸಾರುವ ಧೈರ್ಯ ಮಾಡಿದ್ದಾರೆ. ಎಲ್ಲವೂ ಪ್ರಕಾಶ್ ಎಣಿಸಿಕೊಂಡಂತೆ ನಡೆದರೆ ಅಥವಾ ಬಳ್ಳಾರಿಯ ಪ್ರಕಾಶ್ ಆ ಗಂಡುಮೆಟ್ಟಿನ ನೆಲದ ನಿಜವಾದ ಛಾತಿಯನ್ನು ತೋರಿಸಿದರೆ ಜೆಡಿ(ಎಸ್) ರಾಜ್ಯದಲ್ಲಿ ಮತ್ತೆ ಹೋಳಾಗಲಿದೆ. ಇಲ್ಲವಾದಲ್ಲಿ ಈ ಹಿಂದೆ ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ಜೆ.ಎಚ್. ಪಟೇಲ್, ಸಿದ್ದರಾಮಯ್ಯ ಹಾಗೂ ಪಿ.ಜಿ.ಆರ್. ಸಿಂಧ್ಯಾ, ವೈಜನಾಥ್ ಪಾಟೀಲ್ ಅವರಂಥ ಮುಂಚೂಣಿ ನಾಯಕರನ್ನೇ ಬಲಿ ತೆಗೆದುಕೊಂಡಿದ್ದ ಗೌಡರ ಕುಟುಂಬ ವ್ಯಾಮೋಹಕ್ಕೆ ಮತ್ತೊಂದು ಬಲಿಯಾಗಿ ಪ್ರಕಾಶ್ ಇತಿಹಾಸದ ಪುಟ ಸೇರಿ ಹೋಗಬಹುದು. ಪ್ರಕಾಶ್ ನಿಜಕ್ಕೂ ಒಬ್ಬ ಬುದ್ಧಿಜೀವಿ (ಹಾಗಂತ ಕರ್ನಾಟಕದ ಬುದ್ಧಿಜೀವಿಗಳು ಆಗಾಗ ಉಲಿಯುತ್ತಾರೆ) ರಾಜಕಾರಣಿಯಾಗಿದ್ದರೆ, ಅವರಿಗೆ ಈ ರಾಜ್ಯದ ಜನತೆಯ ಹಿತವೇ ಮುಖ್ಯವಾಗಿದ್ದರೆ ಈಗಲಾದರೂ ಅವರು ಛಳಿ ಬಿಟ್ಟು ಸೆಟೆದು ನಿಲ್ಲಬೇಕು. ಕೊಳೆತು ನಾರುತ್ತಿರುವ ರಾಜ್ಯ ರಾಜಕೀಯಕ್ಕೆ ಹೊಸ ತಿರುವು ನೀಡಲು ಹೊಸದೊಂದು ರಾಜಕೀಯ ಧ್ರುವೀಕರಣ ಮಾಡುವ ಕೆಲಸಕ್ಕೆ ಅವರು ಕೈಹಾಕಬೇಕು. ಸದಾ ಹಗಲು- ರಾತ್ರಿ ರಾಜಕೀಯ ತತ್ವ-ಸಿದ್ಧಾಂತಗಳ ಬಗ್ಗೆ ಕನಸು ಕಾಣುವ, ಸಾಂಸ್ಕೃತಿಕ ನೆಲೆಯಲ್ಲಿ ನಿಂತು ಫೋಸು ನೀಡುವ 'ಸಮಾಜಮುಖಿ' ಪ್ರಕಾಶ್ ಗೌಡರ ಕಪಿಮುಷ್ಟಿಯಿಂದ ತಪ್ಪಿಸಿಕೊಂಡರೆ ಮಾತ್ರ ಅದು ಸಾಧ್ಯ. ಅದನ್ನು ಮಾಡದೇ ಪ್ರಕಾಶ್ ಮತ್ತೊಮ್ಮೆ ಹರಕೆಯ ಕುರಿಯಾದರೆ ಅದನ್ನು ಅವರ ರಾಜಕೀಯ ಜೀವನದ ಬಹುದೊಡ್ಡ ವೈಫಲ್ಯ ಅಥವಾ ಪ್ರಮಾದ ಎಂದೇ ಹೇಳಬೇಕು.
ಈ ನಡುವೆ ಬಿಜೆಪಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ಎದೆಗೇ ಚೂರಿ ಚುಚ್ಚಿದ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜೆಡಿ(ಎಸ್) ರಾಜ್ಯ ಮಟ್ಟದ ಸಭೆ ಕೂಡ ನಡೆದು ಹೋಗಿದೆ. ಮತ್ತೊಂದೆಡೆ 'ಸಾತ್ ದಿನ್ ಕಾ ಸುಲ್ತಾನ್', ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ "ರಾಜ್ಯದಲ್ಲಿ ಚುನಾವಣೆ ಘೋಷಣೆ ಆಗುವವರೆಗೆ ನಾನು ಮನೆಗೆ ಹಿಂತಿರುಗುವುದಿಲ್ಲ. ರಾಜ್ಯದೆಲ್ಲೆಡೆ ಸಂಚರಿಸುತ್ತಾ ಜನತೆಯನ್ನು ಎಚ್ಚರಿಸುವ ಮೂಲಕ ಬಿಜೆಪಿಯನ್ನು ಬಲಪಡಿಸಲು ಪ್ರಯತ್ನ ಮಾಡುತ್ತೇನೆ" ಎಂಬ ರಣಕಹಳೆ ಮೊಳಗಿಸಿದ್ದಾರೆ. ಅತ್ತ ಬಿಜೆಪಿಯ ಉನ್ನತ ಮೂಲಗಳ ಪ್ರಕಾರ ಯಡಿಯೂರಪ್ಪ 'ಆಪ್ತ'ರಾದ ಜಗದೀಶ್ ಶೆಟ್ಟರ್, ಡಿ.ಎಚ್. ಶಂಕರಮೂರ್ತಿ ಮತ್ತು ಕೆ.ಎಸ್. ಈಶ್ವರಪ್ಪ ಮಾಜಿ ಮುಖ್ಯಮಂತ್ರಿಗಳ ಸರ್ವಾಧಿಕಾರಿ ನಿಲುವಿನ ವಿರುದ್ಧ ಹೈಕಮಾಂಡ್‌ಗೆ ದೂರು ಸಲ್ಲಿಸಿದ್ದಾರೆ. ಜೊತೆ- ಜೊತೆಗೆ ರಾಷ್ಟ್ರೀಯ ನಾಯಕ ಅನಂತಕುಮಾರ್ ಕೂಡ ಇದ್ದಕ್ಕಿದ್ದಂತೆ ವಿಧಾನಸೌಧದಲ್ಲಿ ರಾರಾಜಿಸುವ ಕನಸು ಕಾಣಲಾರಂಭಿಸಿದ್ದಾರೆ. "ಹೇಗಿದ್ದರೂ ಮುಂದಿನ ಚುನಾವಣೆಯಲ್ಲಿ ಅನುಕಂಪದ ಅಲೆಯ ಮೇಲೆ ನಾವು ಗೆದ್ದು ಬಂದೇ ಬರುತ್ತೇವೆ" ಎಂಬ ಅತಿಯಾದ ಭರವಸೆಯೇ ಅನಂತಕುಮಾರ್ ಕನಸಿಗೆ ಮೂಲ. ಒಂದಂತೂ ನಿಜ, ಅನಂತಕುಮಾರ್ ಏನಾದರೂ ರಾಜ್ಯ ರಾಜಕೀಯದಲ್ಲಿ ಮೂಗು ತೂರಿಸಲು ಮುಂದಾದರೆ ಬಿಜೆಪಿಗೆ ದಕ್ಕುವುದೂ ದಕ್ಕದೇ ಹೋಗಬಹುದು. ಅದರ ಬದಲು ಜೆಡಿ(ಎಸ್)ನಿಂದ ಹಾರಲು ಸಿದ್ಧವಾಗಿರುವ ಹಕ್ಕಿಗಳಿಗೆ ಕಾಳು ಹಾಕಿ ಬಲೆಗೆ ಬೀಳಿಸಿಕೊಂಡು, ಯಡಿಯೂರಪ್ಪ ಅವರನ್ನೇ ಮುಂದಿಟ್ಟುಕೊಂಡರೆ ಕಮಲ ಅರಳಬಹುದು. ಇಲ್ಲವಾದಲ್ಲಿ ಇದೇ ರೀತಿ 'ಮುಸುಕಿನ ಗುದ್ದಾಟ' ಮುಂದುವರಿದರೆ ಕುಂಭಕರ್ಣನಂತೆ ಮಲಗಿರುವ ಕಾಂಗ್ರೆಸ್‌ಗೆ ಇನ್ನು ದಪ್ಪದ ಹಾಸಿಗೆ ಹಾಸಿ ಕೊಟ್ಟಂತಾಗುತ್ತದೆ.
ಕರ್ನಾಟಕದ ದುರಂತವೆಂದರೆ ಪ್ರತಿಪಕ್ಷವಾದ ಕಾಂಗ್ರೆಸ್ ಕುಂಭಕರ್ಣನಂತೆ ನಿದ್ರೆ ಹೋಗಿರುವುದು. ಅಲ್ಲಿ ಕೂಡ ಒಂದೆಡೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಬೆಂಬಲಿತ ಯುವಪಡೆ ಮತ್ತು ಉತ್ತರ ಕರ್ನಾಟಕದ ಇಬ್ಬರು ಮಹಾನ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ- ಧರ್ಮಸಿಂಗ್ ನಡುವೆ ಶೀತಲ ಸಮರ ನಡೆಯುತ್ತಲೇ ಇದೆ. ಕೃಷ್ಣ ಅಲ್ಲಿಂದಲೇ ಎಲ್ಲವನ್ನೂ ನಿಯಂತ್ರಿಸುವ ಪ್ರಯತ್ನ ಮುಂದುವರಿಸುತ್ತಲೇ ಇದ್ದಾರೆ. ಯಾವುದೇ ಕಾರಣಕ್ಕೆ ಕೃಷ್ಣ ಇತ್ತ ತಲೆ ಹಾಕಬಾರದು ಎಂಬ ಕಠಿಣ ನಿಲುವು ಖರ್ಗೆ ಅಂಡ್ ಕಂಪನಿಯದಾಗಿದೆ. ಈ ನಡುವೆ ಸಿದ್ದರಾಮಯ್ಯ ಅವರಂತಹ ಒಬ್ಬ ಸಮರ್ಥ ನಾಯಕ 'ಹೈಕಮಾಂಡ್ ಸಂಸ್ಕೃತಿ'ಯಲ್ಲಿ ನಲುಗಿ ಹೋಗುತ್ತಿದ್ದಾರೆ. ಕಾಂಗ್ರೆಸ್ ಕೂಡ ಸಿದ್ದರಾಮಯ್ಯ ಎಂಬ ಪ್ರಭಾವಿ ಅಸ್ತ್ರವನ್ನು ಗೌಡರ ಕುಟುಂಬ ರಾಜಕಾರಣ ಮತ್ತು ಬಿಜೆಪಿ 'ಧರ್ಮಕಾರಣ'ದ ವಿರುದ್ಧ ಸಮರ್ಥವಾಗಿ ಉಪಯೋಗಿಸಿಕೊಳ್ಳುತ್ತಿಲ್ಲ. ಅದಕ್ಕೆ ಕಾಂಗ್ರೆಸ್‌ನ 'ಸಂಪ್ರದಾಯ'ವೇ ಅಡ್ಡಿಯಾಗಿದೆ.
ಹೀಗೆ ಮೂರೂ ಪಕ್ಷಗಳು ಮೂರು ವಿಭಿನ್ನ ಘಟ್ಟದಲ್ಲಿ ನಿಂತಿರುವಾಗ ಕರ್ನಾಟಕದ ಜನತೆಗೆ ಮುಕ್ತಿ ಸಿಗಬೇಕಾದರೆ ರಾಜಕೀಯ ಧ್ರುವೀಕರಣವಾಗಿ ಒಂದು ಸಮರ್ಥ ಪ್ರಾದೇಶಿಕ ಪಕ್ಷ ಅಥವಾ ಮೇಲಿನ ಮೂರರ ಪೈಕಿ ಯಾವುದಾದರೂ ಒಂದು ಪಕ್ಷ ಗಟ್ಟಿಯಾಗಿ ಮರುಜನ್ಮ ತಳೆದು ನಿಲ್ಲಬೇಕು. ಸಿದ್ದರಾಮಯ್ಯ, ಪ್ರಕಾಶ್, ಸಿಂಧ್ಯಾ, ಸಮಾಜವಾದಿ ಪಕ್ಷದ ನಾಯಕ ಎಸ್. ಬಂಗಾರಪ್ಪ, ಜೆಡಿ(ಯು) ಮುಖಂಡ ಬಿ. ಸೋಮಶೇಖರ್ ಅವರುಗಳು ಒಂದಾಗಿ (ಅದು ಸಾಧ್ಯವೇ?) ಜೆಡಿ(ಎಸ್) ಕುಟುಂಬ ರಾಜಕೀಯದಿಂದ ಬೇಸತ್ತ ಎರಡನೇ ಹಂತದ ಮುಖಂಡರು ಮತ್ತು ಬಿಜೆಪಿ ಆಂತರಿಕ ಕಲಹದಿಂದ ಕಂಗೆಟ್ಟ ನಾಯಕರನ್ನು ಸೆಳೆದುಕೊಂಡು ತಮ್ಮ ಹಮ್ಮು- ಬಿಮ್ಮು ಮರೆತು ಕೈಜೋಡಿಸಿದರೆ ಮೊದಲ ಸಾಧ್ಯತೆ ನಿಜವಾಗಬಹುದು. ಅದು ಆಗದೇ ಹೋದಲ್ಲಿ ಕನಿಷ್ಠ ಬಿಜೆಪಿ ಮತ್ತು ಕಾಂಗ್ರೆಸ್ ಪೈಕಿ ಒಂದು ಪಕ್ಷವಾದರೂ ರಾಜಕೀಯ ಧ್ರುವೀಕರಣದ ಮೂಲಕ ಮತ್ತಷ್ಟು ಗಟ್ಟಿಯಾಗಿ ಮುಂದಿನ ಚುನಾವಣೆಯಲ್ಲಿ ಪ್ರಬಲ ಶಕ್ತಿಗಳಾಗಿ ಹೊರಹೊಮ್ಮಬೇಕು. ಆ ಮೂಲಕ ಮತದಾರರ ಮುಂದೆ ಒಂದು ಅಥವಾ ಎರಡು ಸ್ಪಷ್ಟ ಆಯ್ಕೆಗಳು ಮೂಡಿಬರುವಂತೆ ಮಾಡಬೇಕು. ಕರ್ನಾಟಕದ ಜನತೆಯ- ಮತದಾರರ ರಕ್ತ ಹೀರಿಯೇ ಮೈಬೆಳೆಸಿಕೊಂಡಿರುವ ಈ ರಾಜಕಾರಣಿಗಳಿಗೆ ರಾಜ್ಯದ ಹಿತದ ಬಗ್ಗೆ ಕಿಂಚಿತ್ತಾದರೂ ಕಾಳಜಿಯಿದ್ದರೆ ಎಲ್ಲ ತತ್ವ- ಸಿದ್ಧಾಂತ (ಯಾರಿಗಾದರೂ ಇನ್ನೂ ತತ್ವ- ಸಿದ್ಧಾಂತ ಉಳಿದಿದ್ದರೆ?)ಗಳಿಗೆ ತಿಲಾಂಜಲಿಯಿಟ್ಟು ಕನಿಷ್ಠ ರಾಜ್ಯದಲ್ಲಿ ಒಂದು ಸ್ಥಿರ ಸರ್ಕಾರ ಸ್ಥಾಪನೆಯಾಗುವ ನಿಟ್ಟಿನಲ್ಲಿ ಸಾಂಘಿಕ ಪ್ರಯತ್ನಗಳು ಈಗಿನಿಂದಲೇ ಆರಂಭವಾಗಬೇಕು. ಆ ಮೂಲಕ ಕನ್ನಡ ನಾಡಿನ ಜನತೆಯ ಋಣವನ್ನು ಈ ಖಾದಿ ಮಂದಿ ಸ್ವಲ್ಪ ಮಟ್ಟಿಗೆ ತೀರಿಸುವ ಯತ್ನ ಮಾಡಬಹುದು. ಜನ ಕೂಡ ಈ ನಿಟ್ಟಿನಲ್ಲಿ ಒಂದಿಷ್ಟು ಯೋಚನೆ ಮಾಡುವುದು ಒಳಿತು.

ಟಿಎಸ್‌ಐ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .